ಬೆಂಗಳೂರು:ಬರ ಬಾಧಿತ 223 ತಾಲೂಕುಗಳಲ್ಲಿ ಕುಡಿಯುವ ನೀರು, ಮೇವು ಪೂರೈಕೆಯಂತಹ ತುರ್ತು ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸಂಭಾವ್ಯ 7,082 ಹಳ್ಳಿಗಳು, ನಗರ-ಪಟ್ಟಣಗಳ 1,193 ವಾರ್ಡ್​ಗಳನ್ನು ಸಮಸ್ಯಾತ್ಮಕವೆಂದು ಗುರುತಿಸಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.
ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಐದು ವರ್ಷಗಳ ಅಂಕಿ-ಅಂಶಗಳನ್ನು ಆಧರಿಸಿ ಸಂಭಾವ್ಯ ಹಳ್ಳಿಗಳು ಮತ್ತು ವಾರ್ಡ್​ಗಳನ್ನು ಪಟ್ಟಿ ಮಾಡಿದ್ದು, ಜೂನ್​ವರೆಗೂ ಸಂಭವನೀಯ ಸಂಕಷ್ಟ ನಿಭಾಯಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸಮಸ್ಯಾತ್ಮಕ ಹಳ್ಳಿಗಳು, ವಾರ್ಡ್​ಗಳಲ್ಲಿ ನೀರು ಸಾಗಣೆಗೆ ಟ್ಯಾಂಕರ್​ಗಳ ವ್ಯವಸ್ಥೆಗಾಗಿ ತಾಲೂಕು ಮಟ್ಟದಲ್ಲಿ ಟೆಂಡರ್ ಕರೆದು ಬಾಡಿಗೆ ಪಡೆಯಲಾಗುತ್ತಿದೆ. ಈಗಾಗಲೆ ಕೆಲ ತಾಲೂಕುಗಳಲ್ಲಿ ಟೆಂಡರ್ ಪೂರ್ಣಗೊಂಡಿದೆ. 2,654 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಒಪ್ಪಂದಕ್ಕೆ ಗುರುತಿಸಲಾಗಿದೆ. ಕೆಲವು ಕಡೆ ಒಪ್ಪಂದ ಏರ್ಪಟ್ಟಿದೆ. ಎಸ್​ಡಿಆರ್​ಎಫ್​ನಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲು ಅವಕಾಶ ಇಲ್ಲದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆಗೆ ಸೂಚಿಸಲಾಗಿದೆ. ಮೇವಿನ ಕೊರತೆ ನೀಗಿಸಲು ಕಳೆದ ನವೆಂಬರ್​ನಲ್ಲಿ ಏಳು ಲಕ್ಷ ಮೇವು ಬೀಜದ ಕಿಟ್​ಗಳನ್ನು ವಿತರಿಸಲಾಗಿತ್ತು. ಈಗ ಮೇವು ಬೆಳೆ ಕೈಗೆ ಬರುತ್ತಿದ್ದು, ಎರಡನೇ ಕಂತಿನಲ್ಲಿ ಮತ್ತೆ ಏಳು ಲಕ್ಷ ಕಿಟ್​ಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ ಎಂದರು.
870 ಕೋಟಿ ರೂ. ಬಿಡುಗಡೆ:ಸದ್ಯಕ್ಕೆ ತಲೆದೋರಿದ ಅಭಾವ ಪರಿಸ್ಥಿತಿ ತುರ್ತು ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್​ಗೆ ಒಟ್ಟು 870 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಕುಡಿಯುವ ನೀರು, ಮೇವು ಮತ್ತಿತರ ಅವಶ್ಯಕತೆಗಳನ್ನು ಒದಗಿಸಲು ಸೂಚಿಸಲಾಗಿದೆ. ನೀರಿನ ಕೊರತೆ ಕಂಡು ಬಂದಿರುವ 202 ಹಳ್ಳಿಗಳ ಪೈಕಿ 156 ಹಳ್ಳಿಗಳಲ್ಲಿ 183 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ. ಜಲಮೂಲವಿಲ್ಲದ 46 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಒದಗಿಸಲಾಗುತ್ತಿದೆ. ನಗರ-ಪಟ್ಟಣ 46 ವಾರ್ಡ್​ಗಳಿಗೆ ನೀರು ಪೂರೈಸಲು 12 ಟ್ಯಾಂಕರ್​ಗಳ ವ್ಯವಸ್ಥೆಯಾಗಿದ್ದು, ಮೂರು ಗೋಶಾಲೆಗಳನ್ನು ತೆರೆದು, ಅಗತ್ಯ ಮೇವು ದಾಸ್ತಾನಿರಿಸಲಾಗಿದೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದರು.
628 ಕೋಟಿ ರೂ. ಪಾವತಿ:ಬರ ನಿರ್ವಹಣೆಗೆ ಮೊದಲ ಕಂತಾಗಿ ತಲಾ ಎರಡು ಸಾವಿರ ರೂ.ಗಳಂತೆ 628 ಕೋಟಿ ರೂ.ಗಳನ್ನು 33 ಲಕ್ಷ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಮಸ್ಯೆ ಆದಷ್ಟು ಬೇಗ ಇತ್ಯರ್ಥಪಡಿಸಿ ಉಳಿದ 1.60 ಲಕ್ಷ ರೈತರಿಗೂ ಪಾವತಿಸಲಾಗುತ್ತದೆ ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು. ಪರಿಹಾರ ಪಟ್ಟಿಯಿಂದ ಬಿಟ್ಟ ಅರ್ಹ ರೈತರನ್ನು ಸೇರಿಸಿಕೊಳ್ಳಲಾಗುವುದು. ಗ್ರಾಮ ಆಡಳಿತಾಧಿಕಾರಿ ಅಥವಾ ನಾಡ ಕಚೇರಿಗೆ ಸಂರ್ಪಸಿ ಸೂಕ್ತ ದಾಖಲೆಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವೆಗೆ ಸವಾಲು:ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್​ಡಿಆರ್​ಎಫ್)ಯಡಿ ಹಣ ಬಿಡುಗಡೆಯಾಗಿದ್ದರೆ, ಇದೇ ನಿಧಿಯಡಿ ನೆರವು ಕೋರಿ ರಾಜ್ಯ ಸರ್ಕಾರದ ಮನವಿ ತಿರಸ್ಕರಿಸಲಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಕೃಷ್ಣಬೈರೇಗೌಡ ಸವಾಲು ಹಾಕಿದರು. ನಿಯಮದಂತೆ ಎನ್​ಡಿಆರ್​ಎಫ್ ಅಡಿ 18,172 ಕೋಟಿ ರೂ.ನೆರವಿಗೆ ಮನವಿ ಸಲ್ಲಿಸಿ ನಾಲ್ಕೂವರೆ ತಿಂಗಳಾದರೂ ಹಣ ಬಿಡುಗಡೆ ಮಾಡಿಲ್ಲ ಎಂದರು. ಪರಿಹಾರ ಬಿಡುಗಡೆಗೆ ವಿಳಂಬದ ಕಾರಣಗಳನ್ನು ವಿಶ್ಲೇಷಿಸುವುದಿಲ್ಲ. ಮಿತಿಮೀರಿದ ವಿಳಂಬದಿಂದ ಅಸಮಾಧಾನವಾಗಿದ್ದು, ರಾಜ್ಯದ ಬಗ್ಗೆ ಕೇಂದ್ರಕ್ಕೆ ಏಕಿಷ್ಟು ದ್ವೇಷ ತಿಳಿಯದು ಎಂದು ಕುಟುಕಿದರು.
ದುರುಪಯೋಗ ತನಿಖೆ:ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಹಣ ದುರ್ಬಳಕೆಗೆ ಸಂಬಂಧಿಸಿದ ತನಿಖೆ ಪ್ರಗತಿಯಲ್ಲಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು. ಅನರ್ಹರು, ಖುಷ್ಕಿ ಬೆಳೆ ನಷ್ಟವಾಗಿದ್ದರೆ ನೀರಾವರಿ ಬೆಳೆ ನಷ್ಟವೆಂದು ತೋರಿಸಿ ಪರಿಹಾರ ವಿತರಿಸಿದ ದೂರುಗಳು ಹಿಂದಿನ ಸರ್ಕಾರದ ಗಮನಕ್ಕೆ ಬಂದರೂ ತಡೆದಿಲ್ಲ. ಯಾವುದೇ ಅಧಿಕಾರಿ ವಿರುದ್ಧ ಕ್ರಮಕೈಗೊಂಡಿಲ್ಲ. ಕಡೂರು ತಾಲೂಕೊಂದರಲ್ಲೇ 6 ಕೋಟಿ ರೂ. ದುರ್ಬಳಕೆಯಾಗಿದೆ ಎಂದು ಉದಾಹರಿಸಿದರು. ಈ ಬಾರಿ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಯಾವೆಲ್ಲ ರೈತರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎಂಬ ವಿವರವನ್ನು ಗ್ರಾಪಂ ಕಚೇರಿಗಳಲ್ಲಿ ಪ್ರಕಟಿಸಲು ಸೂಚಿಸಲಾಗಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eight =
Remember me
