ಬೆಂಗಳೂರು:ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಜಗಳ ಭಾನುವಾರ ಬೀದಿಗೆ ಬಂದಿದೆ. ಖಾಸಗಿ ವಿಚಾರ, ಕರ್ತವ್ಯಲೋಪ, ಭ್ರಷ್ಟಾಚಾರ ಆರೋಪದಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೇಲೆ ಪೋಸ್ಟ್ ಹಾಕಿ ರೋಹಿಣಿ ಸಿಂಧೂರಿ ವಿರುದ್ಧ ಡಿ. ರೂಪಾ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಡಿ.ರೂಪಾ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವ ಮೂಲಕ ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದಾರೆ. ಐಎಎಸ್-ಐಪಿಎಸ್‌ನಂತಹ ಅತ್ಯುನ್ನತ ಹುದ್ದೆ ಅಲಂಕರಿಸಿರುವ ಇವರಿಬ್ಬರ ಬಹಿರಂಗ ಕಿತ್ತಾಟ ನೋಡಿದ ಸಾರ್ವಜನಿಕರು ತರಹೇವಾರಿಯಾಗಿ ಟೀಕೆ ವ್ಯಕ್ತಪಡಿಸಿದ್ದಾರೆ.
ಶಾಸಕ ಸಾ.ರಾ.ಮಹೇಶ್ ಅವರ ಬಳಿ ರೋಹಿಣಿ ಸಿಂಧೂರಿ ಸಂಧಾನಕ್ಕೆ ಹೋಗಿದ್ದರು ಎಂಬ ಸುದ್ದಿಯನ್ನು ಆಧರಿಸಿ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಸಿಂಧೂರಿಗೆ ಡಿ.ರೂಪಾ ತರಾಟೆ ತೆಗೆದುಕೊಂಡಿದ್ದಾರೆ. ಒಟ್ಟು 19 ಆರೋಪಗಳನ್ನು ರೋಹಿಣಿ ಸಿಂಧೂರಿ ಮುಂದೆ ಇಟ್ಟಿದ್ದಾರೆ. ಇದರ ಜತೆಗೆ ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಇದಕ್ಕೆ ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸುಳ್ಳು ಆರೋಪ ಮಾಡಿರುವ ರೂಪಾ ವಿರುಧ್ಧ ಐಪಿಸಿ ಸೆಕ್ಷನ್‌ಗಳಡಿ ದೂರು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಧ್ಯೆ ದಿ.ಡಿ.ಕೆ.ರವಿ ಅವರ ಪತ್ನಿ ಕುಸುಮಾ ಟ್ವೀಟ್ ಮಾಡಿ ಸಿಂಧೂರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
1. ಡಿ.ಕೆ ರವಿ ಐಎಎಸ್, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್‌ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ ಲಿಮಿಟ್ ಕ್ರಾಸ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ ಈಕೆ (ರೋಹಿಣಿ ಸಿಂಧೂರಿ). ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ.2. ಮುಂದೆ ಮಂಡ್ಯ ಸಿಇಒ ಆದಾಗ ಈಕೆ ಕಟ್ಟಿಸಿದ ಟಾಯ್ಲಟ್‌ಗಿಂತ ಹೆಚ್ಚು ತೋರಿಸಿ ಫಿಗರ್ಸ್​ ಫಡ್ಜ್​ ಮಾಡಿ ಕೇಂದ್ರ ಸರ್ಕಾರದ ಪ್ರಶಸ್ತಿ ತೆಗೆದುಕೊಂಡರು ಎಂಬ ಆರೋಪ ಕೇಳಿ ಬಂತು. ಅದರ ತನಿಖೆಯೇ ಆಗಲಿಲ್ಲ.3. ಚಾಮರಾಜನಗರಲ್ಲಿ 24 ಜನರು ಆಕ್ಸಿಜನ್ ಇಲ್ಲದೇ ಸತ್ತಾಗ, ಆಪಾದನೆಗಳು ಇವರ ಮೇಲೇ ನೇರವಾಗಿ ಬಂತು. ಅದರಿಂದ ಹೇಗೋ ಪಾರಾದರು.4. ಕನ್ನಡದ ಹುಡುಗಿ ಶಿಲ್ಪಾ ನಾಗ್ ಐಎಎಸ್, ಅವರ ಜತೆ ಜಗಳ, ರಂಪ. ಏತಕ್ಕಾಗಿ? ಅಲ್ಲಿ ಯಾವುದೇ ಮೌಲ್ಯಾಧಾರಿತ ವಸ್ತು ವಿಷಯ ಇರಲಿಲ್ಲ. ಕೋಳಿ ಜಗಳ. ಶಿಲ್ಪಾಗೆ ಹೆಚ್ಚು ಕೆಲಸ ಮಾಡಿದ್ದು, ಹೆಚ್ಚು ಅವರ ಬಗ್ಗೆ ಪಾಸಿಟಿವ್ ಆಗಿ ಬರೆಯಲಾಯಿತು. ಅದನ್ನು ಸಹಿಸಿಕೊಳ್ಳಲಾಗದೆ ಶಿಲ್ಪಾಗೆ ಹರಾಸ್‌ಮೆಂಟ್ ಮಾಡಿದರು ಎಂದು ಕೆಲವರು ಹೇಳಿದರು. ಕಡೆಗೆ ಮೈಸೂರಲ್ಲಿ ಗೌಡ ಜನರ್ಲಿಸ್ಟ್ ಶಿಲ್ಪ ನಾಗ್ ಅವರಿಗೆ ಜಾತಿ ಬೆಂಬಲ ನೀಡುತ್ತಿದ್ದಾರೆ ಎಂಬ ಮಟ್ಟಿಗೆ ಸ್ವತಃ ಇಲ್ಲದ ಜಾತೀಯತೆ ಮೈಸೂರಿನ ಜರ್ನಲಿಸ್ಟ್ ಗಳಲ್ಲಿ ಬಿತ್ತಿದರು ಈಕೆ ಎಂದು ಅನೇಕರು ಹೇಳುತ್ತಾರೆ.5. ಹರ್ಷ ಗುಪ್ತ ಐಎಎಸ್, ಅತ್ಯಂತ ಪ್ರಾಮಾಣಿಕ ಅಧಿಕಾರಿ. ಅವರ ಜತೆ ಜಗಳ. ಎಲ್ಲಾ ಐಎಎಸ್ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದೆ.6. ಮಣಿವಣ್ಣನ್ ಐಎಎಸ್ ಜತೆ ಕಾರ್ಮಿಕ ಇಲಾಖೆಯಲ್ಲಿ ಇದ್ದಾಗ ಜಗಳ ಮಾಡಿದ್ದು ಜಗಜನಿತ. ಮಣಿವಣ್ಣನ್ ಒಂದು ರೀತಿ ಅಜಾತಶತ್ರು. ಅಂಥದರಲ್ಲಿ ಅವರ ಜತೆ ಜಗಳ.7. ಡಿಕೆ ರವಿ ತೀರಿದ ಕೆಲ ತಿಂಗಳು ಮುಂಚೆ ಕನ್ನಡದ ಹುಡುಗ, ಎನ್. ಹರೀಶ್ ಐಪಿಎಸ್, ಈಕೆಯ ಬ್ಯಾಚ್‌ಮೆಟ್. ಮದ್ವೆ ಆಗಿರಲಿಲ್ಲ, ಆತ, ಈಕೆಗೆ ಕಾದು ಕಾದು ಆತ ಆತ್ಮಹತ್ಯೆ ಮಾಡಿಕೊಂಡದ್ದು ಎಂದು ಹಲವರು ಹೇಳಿದರೂ, ನಾನು ಅದನ್ನು ನಂಬಲಿಲ್ಲ, ಈಗೂ ನಂಬಿಲ್ಲ.8. ಸಾ ರಾ ಮಹೇಶ್, ಎಂಎಲ್ಎ ಅವರ ಮೇಲೆ ಅನೇಕ ಆಪಾದನೆಗಳನ್ನು ಮಾಡಿದ ಈಕೆ ಒಂದನೂ ಪ್ರೂವ್ ಮಾಡಲಿಲ್ಲ. ಅದಕ್ಕೇ ಸಂಧಾನಕ್ಕೆ ಹೋದರಾ?9. ಮೈಸೂರು ಎಂಪಿ ಪ್ರತಾಪ್ ಸಿಂಹ ಮೇಲೆ ಕೂಡ ಅನೇಕರ ಬಳಿ ಈಕೆ ಮಾಡಲಾರದ ಅಲಿಗೇಷನ್ ಮಾಡಿದರು. ಅಂದರೆ, ಪ್ರತಾಪ್ ಸಿಂಹ ಅವರು ಪ್ರೈವೇಟ್ ಕ್ಲಿನಿಕ್‌ಗೆ ಆಕ್ಸಿಜನ್ ಕೇಳುತ್ತಾ ತಮ್ಮ ಸ್ವಂತ ಲಾಭಕ್ಕೆ ನಿಂತಿದ್ದಾರೆ ಎಂಬ ನಿರಾಧಾರ ಆರೋಪ ಮಾಡಿದರು. ನಿಜ ಇದ್ದಿದ್ದೇ ಆದರೆ ಅದನ್ನು ಪ್ರೂವ್ ಯಾಕೆ ಮಾಡಲಿಲ್ಲ.10. ಹಾಸನದಲ್ಲಿ ತನ್ನನ್ನು ಒಂದು ವರ್ಷದ ಒಳಗೆ ಎತ್ತಂಗಡಿ ಮಾಡಿದ ಸರ್ಕಾರದ ವಿರುದ್ಧ ಸೆಂಟರ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್‌ನಲ್ಲಿ (ಸಿಎಟಿ) ದಾವೆ ಹೂಡಿದರು. ಆ ದಾವೆಗೆ ಅಪ್ಲಿಕೇಷನ್ ಬರೆದು ಕೊಟ್ಟಿದ್ದೇ ನನ್ನ ಪತಿ, ಮನೀಶ್ ಮೌದ್ಗಿಲ್ ಐಎಎಸ್. ನನ್ನೆದುರಿಗೆ ಬರೆದು ಆಕೆಗೆ, ಆಕೆಯ ತಂದೆಗೆ, ಲಾಯರ್‌ಗೆ ಕಳಿಸಿದ್ದರು. ಆದರೆ ಈಕೆ, ಮೈಸೂರು ಡಿಸಿ ಆಗಿ ಹೋದದ್ದು ಹೇಗೆ? ತನಗಿಂತ ಕೇವಲ 29 ದಿನ ಮುಂಚೆ ಮೈಸೂರಿಗೆ ಡಿಸಿ ಎಂದು ವರ್ಗಾವಣೆ ಆಗಿದ್ದ ಕನ್ನಡ ಹುಡುಗ ಶರತ್ ಅವರನ್ನು ಒಕ್ಕಲೆಬ್ಬಿಸಿದ್ದು ನ್ಯಾಯವೇ? ತನ್ನಂತೆ ಪರರು ಎಂಬ ಭಾವನೆ ಇಲ್ಲವೇಕೆ? 29 ದಿನದಲ್ಲಿ ಯಾವುದೇ ಕಳಂಕ, ಆರೋಪ ಇಲ್ಲದ ಶರತ್ ಅವರನ್ನು ರಿಪ್ಲೆಸ್ ಮಾಡಿದ್ದು ಈಕೆ ಯಾವ ಹೈಲೆವೆಲ್ ಇನ್‌ಫ್ಲುಯೆನ್ಸ್​ನಿಂದ?11. ಡಾ.ರವಿಶಂಕರ್ ಐಎಎಸ್ ಈಕೆಯ ಮೇಲೆ ಪ್ರಿಲಿಮಿನರಿ ವಿಚಾರಣೆಯಲ್ಲಿ ತಪ್ಪುಮಾಡಿರುವುದು ಸಾಬೀತಾಗಿದೆ. ಮೈಸೂರಿನ ಡಿಸಿ ಮನೆ, ಹೆರಿಟೇಜ್ ಬಿಲ್ಡಿಂಗ್ ಅಂತಾ ಇದ್ದರೂ ಅಲ್ಲಿ ಟೈಲ್ಸ್ ಹಾಕಿದ್ದು, ಸ್ವಿಮ್ಮಿಂಗ್ ಪೂಲ್ ಮಾಡಿದ್ದು. ಮನುಷ್ಯತ್ವ ಇರೋರು ಕೋವಿಡ್ ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರ? ರೋಮ್‌ನಲ್ಲಿ ಮೇರಿ ಆಂಟೋನಿಯಟ್ ಎಂಬ ರಾಣಿ , ಜನರು ಬ್ರೆಡ್ ಇಲ್ಲದೆ ಸಾಯ್ತ್ತಿದ್ದಾರೆ ಅಂತ ಕೇಳಿಸಿಕೊಂಡಾಗ , ಬ್ರೆಡ್ ಇಲ್ಲದೆ ಇದ್ದರೆ ಏನು, ಜನರು ಕೇಕ್ ತಿನ್ನಲಿ ಅಂದಳಂತೆ. ಆ ರಾಣಿಯ ನೆನಪಾಯ್ತು.12. ಹಿಂದೆ ನನಗೆ ಒಬ್ಬರು ವಾಟ್ಸ್‌ಆ್ಯಪ್ ಮೆಸೇಜ್ ಮಾಡಿ ತಾವು ಇವರ ಪರವಾಗಿ ನಡೆಸುವ ಸೋಶಿಯಲ್ ಮೀಡಿಯಾ ಹ್ಯಾಂಡಲಿಂಗ್ ಏಜೆನ್ಸಿ ಒಂದರಲ್ಲಿ ಕೆಲಸ ಮಾಡಿದ್ದು, ಈಗ ಆ ಕೆಲಸ ಬಿಟ್ಟಿದ್ದೇನೆ ಎಂದು ಹೇಳುತ್ತ , ಹೇಗೆ ಅಲ್ಲಿ ಈಕೆಯ ಪರವಾಗಿ ಸುದ್ದಿ, ೆಟೋಸ್, ವಿಡೀಯೋಸ್, ಕ್ರಿಯೇಟ್ ಮಾಡುತ್ತಾರೆ, ಹೇಗೆ ಈಕೆಯ ವಿರುದ್ಧ ಇರುವವರ ಟ್ರೋಲ್ ಮಾಡುವ ಕಂಟೆಂಟ್ ಹಾಗೂ ಹ್ಯಾಂಡಲ್ ಗಳು ತಯಾರಾಗುತ್ತವೆ ಎಂಬುದು ಹೇಳಿದ್ದರು. ನಾನು ಅದನ್ನು ಫೇಸ್‌ಬುಕ್‌ನಲ್ಲಿಯೂ ಹಾಕಿದ್ದೆ.13. ಈಕೆಯ ಮೇಲೆ ಅಗ್ಗದ ಬ್ಯಾಗ್‌ಗಳನ್ನೂ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ಕಂಪ್ಲೈಂಟ್ ಲೋಕಾಯುಕ್ತದಲ್ಲಿ ರಿಜಿಸ್ಟರ್ ಆಗಿದ್ದು , ಅದರ ತನಿಖೆ ಕೈಗೆತ್ತಿಕೊಳ್ಳಲು ಲೋಕಾಯುಕ್ತ ಈಗಾಗಲೇ ಸರ್ಕಾರಕ್ಕೆ ಬರೆದಿದ್ದರೂ ಸರ್ಕಾರ ಮಟ್ಟದಲ್ಲಿ ಕಾರಣ ಕೊಡದೆ ಆಕೆಯನ್ನು ತನಿಖೆಗೆ ಒಳಪಡಿಸಲು ಅನುಮತಿ ನಿರಾಕರಣೆ ಮಾಡಲಾಗಿದೆ. ಅದರ ಪ್ರತಿ ನನ್ನ ಬಳಿ ಇದೆ. ಸಾಮಾನ್ಯವಾಗಿ ಅಧಿಕಾರಿಗಳಿಗೆ ಈ ರೀತಿಯ ಸಪೋರ್ಟ್ ಇರುತ್ತದೆಯೇ?14. ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ , ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ ನಾಟ್ ಸೋ ಡಿಸೆಂಟ್ ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಪಿಕ್ಸ್‌ಗಳು ನನಗೆ ಸಿಕ್ಕಿವೆ. ಇದು ಖಾಸಗಿ ವಿಷಯ ಆಗುವುದಿಲ್ಲ.ಆಲ್ ಇಂಡಿಯಾ ಸವಿರ್ಸ್ ಕಂಡೆಕ್ಟ್ ರೂಲ್ಸ್ ಪ್ರಕಾರ ಹಿರಿಯ ಅಧಿಕಾರಿಗಳು ಈ ರೀತಿಯ ಪಿಕ್ಸ್ , ಸಂಭಾಷಣೆ ಮಾಡುವುದು ಅಪರಾಧ. ಈ ಆಪಾದನೆಗಳನ್ನು ಸರ್ಕಾರ ತನಿಖೆ ಮಾಡುವುದೇ ನೋಡಬೇಕಿದೆ. ಏಕೆಂದರೆ ಸತ್ಯಾ ಸತ್ಯತೆ ಹೊರ ಬರಬೇಕಿದೆ.15. ಮೊನ್ನೆ ಇವರ ಭಾವ ಮಧುಸೂಧನ್ ರೆಡ್ಡಿ ಅವರು ಲಕ್ಕಿ ಅಲಿ ಎಂಬ ಗಾಯಕರ ಜಾಗಕ್ಕೆ 20 30 ಜನ ಕರೆದುಕೊಂಡು ಹೋಗಿ ರೌಡಿಸಂ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಂತು. ಈಕೆಯು ತನ್ನ ಐಎಎಸ್ ಪ್ರಭಾವ ಬಳಸಿ ದುರುಪಯೋಗ ಮಾಡಿಕೊಂಡು ಇರುವುದಾಗಿ ಅಲಿ ಆರೋಪ ಮಾಡಿದರು. ವ್ಯಾಜ್ಯದ ಜಮೀನಿಗೆ 20-30 ಜನ ಕರೆದುಕೊಂಡು ಹೋಗಿ ಕಾನೂನು ಕೈಗೆ ತೆಗೆದುಕೊಳ್ಳಬಹುದು? ಈ ರೀತಿಯ ಭಂಡ ಧೈರ್ಯ ಎಲ್ಲಿಂದ ಬರುತ್ತದೆ? ಐಎಎಸ್ ಅಧಿಕಾರದಿಂದ?16. ಇವರ ಗಂಡ ಹಾಗೂ ಇವರ ಮಾವನವರು (ಈಗ ತೀರಿ ಹೋಗಿದ್ದಾರಂತೆ) ರಿಯಲ್ ಎಸ್ಟೇಟ್ ಬಿಜಿನೆಸ್ ನಡೆಸುತ್ತಾರೆ. ಅನೇಕ ಬಾರಿ ಸರ್ವೇ ಹಾಗೂ ಭೂ ದಾಖಲೆ ಕಚೇರಿಯ ಮೂಲಕ ತನ್ನ ಫ್ಯಾಮಿಲಿ ಬಿಜಿನೆಸ್‌ಗೆ ಅಗತ್ಯ ಇರುವ ಅನೇಕ ಲ್ಯಾಂಡ್ ರಿಲೇಟೆಡ್ ಮಾಹಿತಿ, ಅಂದರೆ, ಒಂದು ಭೂಮಿಯ ಫೋಡಿ, ಇನ್ನೊಂದರ ಬಗ್ಗೆ ಅದು ವ್ಯಾಜ್ಯ ಇರುವ ಭೂಮಿಯೇ ಅಥವಾ ಖರೀದಿಸಲು ಯೋಗ್ಯವೇ ಎಂಬಂತಹ ಮಾಹಿತಿಗಳನ್ನು ತಮ್ಮ ಐಎಎಸ್ ಸ್ಥಾನ ಅಧಿಕಾರದಿಂದ ಪಡೆದು ಕೊಂಡಿರುವ ಮಾಹಿತಿ ದಾಖಲೆ ಸಮೇತ ಇದ್ದು, ಇದರ ಮೇಲೆ ಕ್ರಮ ಆಗುತ್ತದೆಯೇ? ನೋಡಬೇಕು.ಅನೇಕ ಬಾರಿ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದಾಗ ಆ ಜಾಗದಲ್ಲಿ ಇದ್ದವರು ಸಿಎಟಿ/ ಕೋರ್ಟ್‌ಗೆ ಹೋಗುವುದು ಸಹಜ. ನಾನು 3 ವರ್ಷ ದೂರದ ಯಾದಗಿರಿಯಲ್ಲಿ ಕೆಲಸ ಮಾಡಿ, (ಸೀನಿಯರ್ ಮೋಸ್ಟ್ ಎಸ್‌ಪಿ ಇನ್ ದಿ ಸ್ಟೇಟ್, 2013 ರಲ್ಲಿ ನಾನು) ಬೆಂಗಳೂರಿಗೆ ನನಗೆ ವರ್ಗವಾದಾಗ, ಆ ಜಾಗದಲ್ಲಿ ಇದ್ದ ಅಧಿಕಾರಿ, ಪವಾರ್, ನನ್ನ ವರ್ಗಾವಣೆ ಪ್ರಶ್ನಿಸಿ ಸಿಎಟಿಗೆ ಹೋದರು. ಆದರೆ, ರೋಹಿಣಿ ಸಿಂಧೂರಿಗೆ ಸಾಕ್ಷಾತ್ ಅಡ್ವೊಕೇಟ್ ಜನರಲ್ ಅವರೇ ಬಂದು ವಾದ ಮಾಡಿದರಲ್ಲ, ಮೈಸೂರು ಡಿಸಿ ವರ್ಗಾವಣೆ ವಿಷಯದಲ್ಲಿ, ಆ ಸೌಲಭ್ಯ ನನಗೇಕೆ ಸಿಗಲಿಲ್ಲ? ನನ್ನಂತಹ ಕನ್ನಡಿಗ ಅಧಿಕಾರಿಗಳು, ಹೇಗೆ ನಡೆಸಿಕೊಂಡರೂ ಸುಮ್ಮನೆ ಇರ್ತಾರೆ ಅಂತಲೇ? ಸ್ವತಃ ಅಡ್ವೊಕೇಟ್ ಜನರಲ್ ಹಾಜರಾಗಿ ವಾದ ಮಾಡಿದ್ದು ಈಕೆಗಲ್ಲದೆ ಮತ್ಯಾವ ಅಧಿಕಾರಿಗೂ ಈ ಸೌಲಭ್ಯ ಸಿಕ್ಕಿಲ್ಲ. ಯಾಕೆ ಈ ಮಲತಾಯಿ ಧೋರಣೆ?18. ಈಕೆ ಪ್ರೊಬೇಷನರಿ ಅಂತ ಇದ್ದಾಗ, ಅಲ್ಲಿಯ ಡಿಸಿ ಹಾಗೂ ಅವರ ಪತ್ನಿ ನೆರೆಯ ಜಿಲ್ಲೆಯ ಡಿಸಿ, ಇವರಿಬ್ಬರ ಸಂಸಾರದಲ್ಲಿ ಹುಳಿ ಬಿದ್ದು ಅವರು ಬೇರ್ಪಟ್ಟಿದ್ದಾರೀಗ ಹಾಗೂ ಇದು ಈಕೆಯ ದೆಸೆಯಿಂದ ಎಂಬ ಮಾತು ಅನೇಕರ ಬಾಯಲ್ಲಿ ಕೇಳಿದ್ದೇನೆ.19. ಜಾಲಹಳ್ಳಿಯಲ್ಲಿ ಈಕೆಯ (ಪತಿಯದ್ದು ಇದ್ದರೂ ಈಕೆಯದೂ ಆಗುತ್ತದೆ) ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ ಇಮ್ಮೂವೆಬಲ್ ಪಾಪರ್ಟಿ ರಿಟರ್ನ್ಸ್​ನಲ್ಲಿ ಈ ಮನೆಯ ಉಲ್ಲೇಖ ಇರದೆ, ಬೇರೆಲ್ಲಾ ಲಂಗು ಲೊಟ್ಟು ಪ್ರಾಪರ್ಟಿ ಬಗ್ಗೆ ವರದಿ ಕೊಟ್ಟಿದ್ದಾರೆ. ಆ ಮನೆಗೆ ಕೋಟಿಗಟ್ಟಲೆ ಇಟಲಿ ಫರ್ನೀಚರ್, 26 ಲಕ್ಷದ ಜರ್ಮನ್ ಅಪ್ಲೆಯನ್ಸ್ (ಅದನ್ನು ಡ್ಯೂಟಿ ಫ್ರೀ ಮಾಡಿಸಿಕೊಳ್ಳುವ ಬಗ್ಗೆ ಚರ್ಚೆ ಇರುವ , 6 ಲಕ್ಷ ರೂ. ಕೇವಲ ಬಾಗಿಲಿನ ಹ್ಯಾಗಿಂನ್ಸ್​ಗೆ ಖರ್ಚು ಮಾಡಿರುವ ಬಗ್ಗೆ ಈಕೆ ಮಾಡಿರುವ ಚಾಟ್‌ಗಳ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಇದರ ಮೇಲೆ ಕೂಲಂಕಷ ತನಿಖೆ ಆಗುವುದೇ ನೋಡಬೇಕಿದೆ.20. ಇಷ್ಟೆಲ್ಲಾ ಆದರೂ, ಯಾರು ಪ್ರತಿ ಬಾರಿ ಈಕೆಯನ್ನು ತನಿಖೆಗೂ ಒಳಪಡಿಸದೇ ಬಚಾವ್ ಮಾಡುತ್ತಾ ಇರುವುದು. ಈಕೆ ಕೆಮ್ಮಿದ್ದೂ ಕ್ಯಾಕರಿಸಿದ್ದೂ ತಮ್ಮ ಟಿಆರ್‌ಪಿಗೋಸ್ಕರ ಹಾಕುವ ಮೀಡಿಯಾಗಳೇ ಈಕೆಯನ್ನು ಹೀರೋ/ಹೀರೋಯಿನ್ ಮಾಡುವ ಮೂಲಕ ಈಕೆ ಯಾವುದೇ ಶಿಕ್ಷೆಯಿಲ್ಲದೆ ಪ್ರತಿ ಬಾರಿ ಬಚಾವ್ ಆಗಿರುವುದೇ? ಅಥವಾ ಕಿಂದರಿ ಜೋಗಿ ಮಾದರಿಯ ರೀತಿಯಲ್ಲಿ ಸರ್ಕಾರದಲ್ಲಿ ಇರುವ ಪ್ರಭಾವಿಗಳು ಕಿಂದರಿ ಜೋಗಿಯ ಪಾಶಕ್ಕೆ ಸಿಲುಕಿದರೆ? ಎಂದು ಪ್ರಶ್ನಿಸಿದ್ದಾರೆ.
– ಡಿ.ರೂಪ ಮೌದ್ಗಿಲ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನನ್ನ ಮೇಲೆ ವೈಯಕ್ತಿಕ ಹಗೆಯನ್ನು ಸಾಧಿಸಲು ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡಿರುವವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ.– ಐಪಿಎಸ್ ರೂಪಾ ಅವರಿಗೆ ಇದೊಂದು ಅಭ್ಯಾಸವಾಗಿ ಬಿಟ್ಟದೆ, ಅವರು ಇತ್ತೀಚಿಗೆ ಇದ್ದ ಎಲ್ಲಾ ಹುದ್ದೆಗಳಲ್ಲಿಯೂ ಇದೇ ರೀತಿಯ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆಯುವ ಹಾಗೂ ತಾವು ದ್ವೇಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕವಾಗಿ ಹಗೆತನ ಸಾಧಿಸಲು ಕೀಳು ಮಟ್ಟದ ಪ್ರವೃತ್ತಿನ್ನ ಪ್ರದರ್ಶಿಸುತ್ತಿದ್ದಾರೆ. ಅವರು ಯಾವಾಗಲೂ ಸುದ್ದಿಯಲ್ಲಿರಬೇಕು ಎನ್ನುವುದನ್ನು ಬಯಸುತ್ತಾರೆ. ಜತೆಗೆ ಅದಕ್ಕೆ ಬೇಕಾದಂತಹ ಪೋಸ್ಟ್‌ಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಪುಟಗಳಲ್ಲಿ ಹಾಕುವ ಮೂಲಕ ಸುದ್ದಿಯ ಕೇಂದ್ರ ಬಿಂದುವಾಗಲು ಯತ್ನಿಸುತ್ತಿದ್ದಾರೆ.– ಜವಾಬ್ದಾರಿಯುತ ಸ್ಥಾನದಲ್ಲದ್ದು ಒಳ್ಳೆಯ ಕೆಲಸಗಳ ಕಡೆ ಗಮನ ಹರಿಸುವುದನ್ನು ಬಿಟ್ಟು ಒಬ್ಬ ವ್ಯಕ್ತಿ ಅಥವಾ ಇನ್ನೊಬ್ಬರನ್ನು ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡುವುದು ಅವರ ಪ್ರಾಥಮಿಕ ಕೆಲಸ ಎಂದು ತೋರುತ್ತದೆ. ಅದರಲ್ಲೂ ನನ್ನ ವಿರುದ್ಧ ಯಾವುದೋ ವೈಯಕ್ತಿಕ ಹಗೆಯನ್ನಿಟ್ಟುಕೊಂಡು ಸುಳ್ಳು, ವೈಯಕ್ತಿಕ ನಿಂದನೆಯ ಅಭಿಯಾನವನ್ನು ನಡೆಸುತ್ತಿದ್ದಾರೆ.– ಸಾಮಾಜಿಕ ಮಾಧ್ಯಮಗಳಿಂದ ಹಾಗೂ ವಾಟ್ಸ್‌ಆಪ್ ಸ್ಟೇಟಸ್‌ಗಳಿಂದ ಸ್ಕ್ರೀನ್ ಶಾಟ್‌ಗಳ ಮೂಲಕ ಸಂಗ್ರಹಿಸಿರುವ ಫೋಟೋಗಳನ್ನು ನನ್ನ ತೆಜೋವಧೆ ಮಾಡಲು ರೂಪಾ ಅವರು ಬಳಸಿದ್ದಾರೆ. ಈ ಫೋಟೋಗಳನ್ನು ನಾನು ಕೆಲ ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎನ್ನುವ ಸುಳ್ಳು ಆರೋಪ ಮಾಡಿರುವ ಅವರು, ಆ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸುತ್ತೇನೆ.– ನನ್ನ ವಿರುದ್ಧ ರೂಪ ಮಾಡಿರುವ ಸೇವಾ ನಡತೆ ನಿಯಮಗಳ ಉಲ್ಲಂಘನೆಗಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ನಾನು ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸಿದ್ದೇನೆ. ಹಾಗೂ ಭಾರತಿಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರೂಪ ಅವರ ಮೇಲೆ ಎಲ್ಲಾ ರೀತಿಯ ಕಾನೂನಿನ ಕ್ರಮಗಳನ್ನ ಕೈಗೊಳ್ಳುತ್ತೇನೆ. ಇಂತಹ ಆಧಾರರಹಿತ ಆರೋಪಗಳಿಂದ ನಾನು ಸ್ವಲ್ಪವೂ ವಿಚಲಿತಳಾಗದೆ, ಸರ್ಕಾರಿ ಅಧಿಕಾರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮುಂದುವರಿಸುತ್ತೇನೆ ಎಂಬ ಅಂಶವನ್ನು ಇಂತಹ ಕ್ಷುಲ್ಲಕ ವ್ಯಕ್ತಿಗಳ ಗಮನಕ್ಕೆ ತರಬಯಸುತ್ತೇವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 9 =
Remember me
