ಬೆಂಗಳೂರು:ರಾಜಧಾನಿಯಲ್ಲಿ ಕೆರೆ, ರಾಜಕಾಲುವೆ ಹಾಗೂ ಸರ್ಕಾರಿ ಜಮೀನು ಒತ್ತುವರಿ ವಿಚಾರ ವಿಧಾನಸಭೆಯಲ್ಲಿ ಸೋಮವಾರ ಕಾವೇರಿದ ಚರ್ಚೆಗೆ ಗ್ರಾಸವಾಯಿತು. ಅದರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೆರೆಗಳು ಬತ್ತಿವೆ ಎಂಬ ಕಾರಣ ನೀಡಿ ನಕ್ಷೆಯಿಂದ ತೆಗೆಯುವ ಪ್ರಯತ್ನವೂ ನಡೆದಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ನೇರ ದಾಳಿ ನಡೆಸಿದ್ದು ಕಾಂಗ್ರೆಸ್ ನಾಯಕರನ್ನು ಪೇಚಿಗೆ ಸಿಲುಕಿಸಿತು. ಕಂದಾಯ ಸಚಿವ ಆರ್. ಅಶೋಕ್ ಪ್ರವಾಹದ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಮಾತು ಮಾತಿಗೂ ಪ್ರತಿಪಕ್ಷದ ಸದಸ್ಯರಿಗೆ ಟಾಂಗ್ ನೀಡಿದರು. ಇನ್ನೊಂದೆಡೆ ಕೆರೆ, ರಾಜಕಾಲುವೆ, ಸರ್ಕಾರಿ ಜಮೀನು ಒತ್ತುವರಿ ವಿಚಾರ ಕೈಗೆತ್ತಿಕೊಂಡು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಸಿಎಂ ಬೊಮ್ಮಾಯಿ, ಒತ್ತುವರಿ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಘೋಷಿಸಿದರು.
ವಿಧಾನಸಭೆಯಲ್ಲಿ ಅತಿವೃಷ್ಟಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಕಂದಾಯ ಸಚಿವ ಆರ್. ಅಶೋಕ್ ಉತ್ತರ ನೀಡುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಕೆರೆಗಳು ಕಬಳಿಕೆಯಾಗಿರುವುದು ಸತ್ಯ. ಯಾವ ಕಾಲದಲ್ಲಿ, ಯಾರು ಈ ಕಬಳಿಕೆ ನಡೆಸಿದ್ದಾರೆ? ಯಾವ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದರು.
ಕೆರೆ ಒತ್ತುವರಿಯ ಜತೆಗೆ ರಾಜಕಾಲುವೆ ಒತ್ತುವರಿ, ರಾಜಕಾಲುವೆ ಮೇಲೆ ಬೇನಾಮಿ ಹೆಸರಿನಲ್ಲಿ ರಾಜಕಾರಣಿಗಳು ಅಥವಾ ಬೇರೆಯವರು ಕಟ್ಟಡಗಳನ್ನು ನಿರ್ವಿುಸಿರುವುದು, 2007 ರ ಹಸಿರು ನ್ಯಾಯ ಮಂಡಳಿ ಆದೇಶದ ನಂತರ ಬಫರ್ ಜೋನ್​ನಲ್ಲಿ ಆಗಿರುವ ಒತ್ತುವರಿ ಎಲ್ಲದರ ಬಗ್ಗೆಯೂ ತನಿಖೆ ನಡೆಸುತ್ತೇವೆ. ಕೆರೆ, ರಾಜಕಾಲುವೆ ಒತ್ತುವರಿಯ ತನಿಖೆಯ ಸ್ವರೂಪ ಯಾವ ರೀತಿ ಇರಬೇಕು ಎನ್ನುವುದನ್ನು ಮುಂದಿನ ದಿನಗಳಲ್ಲಿ ವಿವರವಾಗಿ ತಿಳಿಸುತ್ತೇನೆ ಎಂದು ಹೇಳಿದರು. ಒತ್ತುವರಿ ತೆರವು ಸಂದರ್ಭದಲ್ಲೂ ಕೆಲವರು ಇದು ಬಡವರದ್ದು, ಇದು ಶ್ರೀಮಂತರದ್ದು ತೆರವು ಬೇಡ ಎಂಬ ಒತ್ತಡಗಳು ಬಂದಿವೆ. ನಾವು ಯಾರ ರಕ್ಷಣೆಗೂ ಇಲ್ಲ. ಒತ್ತುವರಿಗಳನ್ನು ತೆರವು ಮಾಡೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ನನ್ನನ್ನು ಟ್ರೋಲ್ ಮಾಡುವುದೇಕೆ?:ನೀವು ತನಿಖೆ ಮಾಡಿಸುವುದನ್ನು ನಾನು ಸ್ವಾಗತಿಸುತ್ತೇನೆ. ನಾನು ಯಾವ ಕೆರೆ ಒತ್ತುವರಿ ಮಾಡಿದ್ದೇನೆ ಹೇಳಿ? ನಿಮ್ಮವರು ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಿ ಎಂದು ಕಾಂಗ್ರೆಸ್​ನ ಕೆ.ಜೆ.ಜಾರ್ಜ್ ಆಗ್ರಹಿಸಿದರು. ಜಾರ್ಜ್ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಈ ವಿಚಾರವನ್ನು ನೀವು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇಲ್ಲದ್ದನ್ನು ನಿಮ್ಮ ಮೈಮೇಲೆ ಹಾಕಿಕೊಳ್ಳುತ್ತೀರಿ. ಹಿಂದೆಯೂ ಹೀಗೇ ಮಾಡಿದ್ದೀರಿ. ಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿಕೊಳ್ಳುತ್ತೀರಿ ಎಂದು ಟಾಂಗ್ ಕೊಟ್ಟರು.
ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ತನಿಖೆ ಮಾಡಿಸಿ, ಅದನ್ನು ನಾನೂ ಸ್ವಾಗತಿಸುತ್ತೇನೆ. ಅದರೆ, ಅಸ್ತಿತ್ವದಲ್ಲಿ ಇಲ್ಲದ ಕೆರೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿತ್ತು. ಅದು ಕಾರ್ಯಗತವಾಗಿಲ್ಲ’ ಎಂದರು. ಆಗ ಸಿಎಂ ಬೊಮ್ಮಾಯಿ, ಕರೆಗಳು ಎಂದೂ ತನ್ನ ಲಕ್ಷಣ ಕಳೆದುಕೊಳ್ಳುವುದಿಲ್ಲ ಎಂದು ಟಾಂಗ್ ಕೊಟ್ಟರು. ಅದಕ್ಕೆ ಸಿದ್ದರಾಮಯ್ಯ, ಮೆಜೆಸ್ಟಿಕ್ ಕೆರೆ ಮುಚ್ಚಿಯೇ ಕಟ್ಟಿದ್ದು. ಅದಕ್ಕೆ ಕೆರೆಯ ಲಕ್ಷಣ ಇದೆಯೆ? ಆ ಬಸ್ ಸ್ಟಾ್ಯಂಡ್ ನಾನು ಮಾಡಿದ್ದಾ?, ನಮ್ಮ ಸರ್ಕಾರ ಮಾಡಿತ್ತಾ? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ನಿಮ್ಮದು ಕರೆ ನುಂಗುವ ಕೆಲಸ’ ಎಂದು ತಿರುಗೇಟು ನೀಡಿದರು. ಆಗ ಸದನದಲ್ಲಿ ಗದ್ದಲ ಉಂಟಾಯಿತು.
ನೀವೇಕೆ ಗಾಬರಿಯಾಗುತ್ತೀರಿ?:ಜಾರ್ಜ್ ರಾಜೀನಾಮೆ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, ಖಂಡಿತ ತನಿಖೆ ಮಾಡಿಸುತ್ತೇನೆ. ಯಾರ ಕಾಲದಲ್ಲಿ ಏನಾಗಿತ್ತು ಗೊತ್ತಾಗುತ್ತದೆ. ನೀವು ಏನೂ ಮಾಡಿಲ್ಲ ಎಂದರೆ ಏಕೆ ಗಾಬರಿ ಆಗಬೇಕು ಎಂದರು. ಆಗ ಜಾರ್ಜ್, ನೀವೇಕೆ ಗಾಬರಿ ಬೀಳಿಸುತ್ತೀರಿ ಎಂದು ಕೇಳಿದರು. ಅದಕ್ಕೆ ಸಿಎಂ ಈ ವಿಚಾರಲ್ಲಿ ನೀವೊಬ್ಬರೇ ಮಾತನಾಡಿದರೆ ಏನರ್ಥವಾಗುತ್ತದೆ ಎಂದು ಕೆಣಕಿದರು. ಆಗ ಸಿಎಂ ಮತ್ತು ಜಾರ್ಜ್ ನಡುವೆ ವಾಕ್ಸಮರ ನಡೆಯಿತು. ಮಧ್ಯ ಪ್ರವೇಶಿಸಿದ ಬಿಜೆಪಿಯ ಸಿ.ಟಿ.ರವಿ, ಕರೆ ತನ್ನಷ್ಟಕ್ಕೆ ತಾನೇ ಸ್ವರೂಪ ಕಳೆದುಕೊಳ್ಳುವುದಿಲ್ಲ. ಲ್ಯಾಂಡ್ ಮಾಫಿಯಾ ಕಾರಣವಾಗಿರುತ್ತದೆ. ಬ್ರ್ಯಾಂಡ್ ಬೆಂಗಳೂರು ನೆಪದಲ್ಲಿ ಕೆರೆ ನುಂಗುವುದಾ ಎಂದು ವ್ಯಂಗ್ಯವಾಡಿದರು.
ಆಗ ಕಾಂಗ್ರೆಸ್​ನ ಕೃಷ್ಣ ಬೈರೇಗೌಡ ಮತ್ತಿತರರು ಸರ್ಕಾರದ ವಿರುದ್ಧ ವಾಗ್ದಾಳಿಗಿಳಿದರು. ಇದಕ್ಕೆ ಬಿಜೆಪಿ ಸದಸ್ಯರು ಕೂಡ ಏರು ದನಿಯಲ್ಲಿ ತಿರುಗೇಟು ನೀಡಿದರು. ಇದರಿಂದ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿತ್ತು. ಪರಿಸ್ಥಿತಿ ತೀವ್ರ ಸ್ವರೂಪ ಪಡೆಯುವುದನ್ನು ಮನಗಂಡ ಸ್ಪೀಕರ್ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್…:ಕೆರೆ ಒತ್ತುವರಿ ವಿಚಾರದಲ್ಲಿ ನಾನು ವೈಯಕ್ತಿಕವಾಗಿ ಯಾರ ಮೇಲೂ ಆಪಾದನೆ ಮಾಡಿಲ್ಲ, ಇಲ್ಲಿ ಜಾರ್ಜ್ ಅವರದ್ದು ಇಲ್ಲ ಬಿಡಿ ಎಂದು ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದರು. ಜಾರ್ಜ್ ಅವರನ್ನು ಉದ್ದೇಶಿಸಿ ನಿಮಗೆ ವಿರೋಧಿಗಳು ಜಾಸ್ತಿ ಇದ್ದಾರೆ. ನಿಮ್ಮಲ್ಲೂ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮೀಸ್, ನೋ ಸ್ಟ್ರಾಂಗ್, ನೋ ಎನಿಮೀಸ್ ಎಂದರೆ, ಅಶೋಕ್, ಹೌದೌದು, ಮೋರ್ ಮನಿ, ಮೋರ್ ಪ್ರಾಬ್ಲಂ, ಲೆಸ್ ಮನಿ, ಲೆಸ್ ಪ್ರಾಬ್ಲಂ ಎಂದರು.
ಕೆರೆ ಬತ್ತಿರುವ ನೆಪ:ಬೆಂಗಳೂರಿನಲ್ಲಿ ಈ ಹಿಂದೆ ಕೆರೆಗಳು ಬತ್ತಿವೆ ಎಂದು ಅವುಗಳನ್ನು ನಕ್ಷೆಯಿಂದ ತೆಗೆಯುವ ಪ್ರಯತ್ನವೂ ನಡೆದಿತ್ತು, ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಆ ಪ್ರಯತ್ನವನ್ನು ಕೈ ಬಿಡಲಾಯಿತು ಎಂದು ಸಿಎಂ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಈ ಹಂತದಲ್ಲಿ ಕಾಂಗ್ರೆಸ್​ನ ಕೆ.ಜೆ. ಜಾರ್ಜ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಈ ರೀತಿ ಕೆರೆಗಳನ್ನು ಕೈ ಬಿಡುವ ಬಗ್ಗೆ ಹಿಂದಿನ ಸರ್ಕಾರ ಯಾವುದೇ ತೀರ್ಮಾನ ಮಾಡಿರಲಿಲ್ಲ. ದಾಖಲೆಗಳನ್ನು ಕೊಡಿ ಎಂದು ಒತ್ತಾಯಿಸಿದಾಗ ಮುಖ್ಯಮಂತ್ರಿಗಳು 2018ರಲ್ಲಿ ಸಚಿವ ಸಂಪುಟದ ಟಿಪ್ಪಣಿಯನ್ನು ಓದಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಿಗೆ ಬಿಸಿ ಮುಟ್ಟಿಸಿದರು. ‘ನಾನು ಸರ್ಕಾರ ತೀರ್ವನಿಸಿತ್ತು ಎಂದು ಎಲ್ಲೂ ಹೇಳಿಲ್ಲ. ಅಂತಹ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದೇನೆ. ಒಟ್ಟಿನಲ್ಲಿ ಎಲ್ಲದರ ಬಗ್ಗೆಯೂ ತನಿಖೆ ನಡೆಸುತ್ತೇನೆ’ ಎಂದು ತಿಳಿಸಿದರು. ‘ಅಸ್ತಿತ್ವದಲ್ಲಿ ಇಲ್ಲದ ಕೆರೆಗಳನ್ನು ನಕಾಶೆಯಿಂದ ಕೈ ಬಿಡುವ ಪ್ರಯತ್ನ ನಡೆದಿತ್ತು. ಇದರಲ್ಲಿ ಎರಡು ಮಾತಿಲ್ಲ’ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್​ಗೆ ಸಚಿವ ಅಶೋಕ್ ಟಾಂಗ್:ಭಾರಿ ಮಳೆಯಿಂದ ಬೆಳೆ, ಆಸ್ತಿ-ಪಾಸ್ತಿ, ಜೀವ ಹಾನಿ ಬಗ್ಗೆ ಉತ್ತರ ನೀಡುತ್ತಲೇ ಹಿಂದಿನ ಸರ್ಕಾರದ ಲೋಪಗಳನ್ನು ಎತ್ತಿ ಹಿಡಿದು ಪ್ರತಿಪಕ್ಷ ಕಾಂಗ್ರೆಸ್​ಗೆ ತಮ್ಮ ಮಾತಿನುದ್ದಕ್ಕೂ ಅಂಕಿ-ಅಂಶಗಳ ಸಮೇತ ಅಶೋಕ್ ಚಾಟಿ ಬೀಸಿದರು. ಬೆಂಗಳೂರಿನಲ್ಲಿ ನೆರೆಯಾಗಿದ್ದಕ್ಕೆ ಹಿಂದೆ ಸರ್ಕಾರ ಇದ್ದವರು ಒಂದು ವಿಷನ್ ಕೊಡಬೇಕಿತ್ತು. ಮೋದಿ ಸರ್ಕಾರ 11,630 ಕೋಟಿ ರೂ. ನೆರವು ನೀಡಿದೆ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ನಮಗೆ 3,330 ಕೋಟಿ ರೂ. ಬಂದಿತ್ತು ಎಂದರು.
ಬೆಂಗಳೂರು ಕೆರೆಗಳ ಮಾರ್ಪಾಡು ಪಟ್ಟಿ:ಕೆಂಪೇಗೌಡರು ಕೆರೆ ಕಟ್ಟಿದ ಮೇಲೆ ನಾವು ಒಂದೇ ಒಂದು ಕರೆ ಕಟ್ಟಿಲ್ಲ. 42 ಕೆರೆಗಳು ಬೆಂಗಳೂರಲ್ಲಿ ಹಾಳಾಗಿವೆ. ಬಿಡಿಎ 28 ಕೆರೆ ನುಂಗಿದೆ. ಬಿಬಿಎಂಪಿ 5 ಕೆರೆ, ಬಿಡಿಎ ಅನುಮೋದಿತ ಒಂದು ಕೆರೆ, ಖಾಸಗಿಯವರು 7 ಕೆರೆ ಒತ್ತುವರಿ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿತ್ತು ಎಂದು ಅಶೋಕ್ ಹರಿಹಾಯ್ದರು.
ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ..
ನಾಲಿಗೆಯೇ ಹೇಳುತ್ತೆ ಕರುಳಿನ ಆರೋಗ್ಯ!: ಹೇಗೆ? ಇಲ್ಲಿದೆ ಮಾಹಿತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
