|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರೈತರಿಗೊಂದು ಸಿಹಿ ಸುದ್ದಿ ಇಲ್ಲಿದೆ. ಕೈಗಾರಿಕೆ ಅಥವಾ ಮೂಲಸೌಕರ್ಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಅಂತಿಮ ಅಧಿಸೂಚನೆ ಹಾಗೂ ಪರಿಹಾರ ವಿತರಣೆ ವಿಳಂಬವಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರ ಮತ್ತೊಂದು ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಬರುವವರಿಗೆ ಸುಲಭವಾಗಿ ಭೂಮಿ ಸಿಗುವಂತಾಗಬೇಕು ಎಂಬ ಉದ್ದೇಶದಿಂದಲೇ ಭೂಸ್ವಾಧೀನಕ್ಕಿರುವ ತೊಡಕುಗಳ ನಿವಾರಣೆಗೆ ಸಜ್ಜಾಗಿದೆ. ಉದ್ಯಮಿಗಳನ್ನು ಸೆಳೆಯಲು ನೆರೆಯ ರಾಜ್ಯಗಳು ತುದಿಗಾಲಲ್ಲಿ ನಿಂತು ಸಾಕಷ್ಟು ಆಸೆ-ಆಮಿಷ ತೋರಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಭೂಮಿ ಪಡೆಯುವುದು ಕಿರಿಕಿರಿ ಸಂಗತಿ ಎಂಬ ಅಭಿಪ್ರಾಯ ದೂರ ಮಾಡಲೇಬೇಕಾಗಿದೆ.
ಕೈಗಾರಿಕೆ ಮಾತ್ರವಲ್ಲದೇ ಮೂಲಸೌಕರ್ಯ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ನೀರಾವರಿ ಯೋಜನೆಗಳು, ವಿದ್ಯುತ್, ವಸತಿ, ಕುಡಿಯುವ ನೀರಿನ ಯೋಜನೆಗಳು, ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಯೋಜನೆಗಳಿಗೂ ಸರ್ಕಾರ ಭೂಮಿ ಸ್ವಾಧೀನ ಮಾಡಿಕೊಳ್ಳುತ್ತದೆ. ರೈತರಿಂದ ಸ್ವಾಧೀನ ಮಾಡಿಕೊಳ್ಳುವ ಭೂಮಿಗೆ ಪರಿಹಾರ ವಿತರಣೆ ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದೆ. ಎಲ್ಲ ದಾಖಲೆಗಳು ಸರಿ ಇದ್ದರೂ ಪರಿಹಾರ ಸಿಗುತ್ತಿಲ್ಲ. ಮಿತಿಮೀರಿದ ಭ್ರಷ್ಟಾಚಾರದ ಕಾರಣಕ್ಕೇ ರೈತರಿಗೆ ಸಕಾಲದಲ್ಲಿ ಪರಿಹಾರ ಸಿಗುತ್ತಿಲ್ಲ.
ಕೆಲವು ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಸಹಜವಾಗಿಯೇ ತಡವಾಗುತ್ತದೆ. ಆದರೆ, ದಾಖಲೆಗಳು ಸರಿ ಇರುವ ಪ್ರಕರಣಗಳಲ್ಲಿ ಅಂತಿಮ ಅಧಿಸೂಚನೆ ಹೊರಟ 90 ದಿನದೊಳಗೆ ಪೂರ್ಣ ಮೊತ್ತ ರೈತರಿಗೆ ಲಭ್ಯವಾಗಿರಬೇಕು ಎಂಬ ನಿರ್ಧಾರ ಸರ್ಕಾರ ಕೈಗೊಂಡಿದೆ. ರೈತರು ಪರಿಹಾರಕ್ಕಾಗಿ ಕಚೇರಿ ಬಾಗಿಲಿಗೆ ಅಲೆಯುವಂತಾಗಬಾರದು ಎಂದು ಎಲ್ಲ ಭೂಸ್ವಾಧೀನಾಧಿಕಾರಿಗಳಿಗೂ ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಂತಿಮ ಅಧಿಸೂಚನೆಗೂ ಗಡುವು:ಭೂಮಿ ಸ್ವಾಧೀನ ಮಾಡಿಕೊಂಡು ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಅಧಿಕಾರಿಗಳು ಅಂತಿಮ ಅಧಿಸೂಚನೆಗೆ ತಡ ಮಾಡುತ್ತಾರೆ. ಇದು ಭ್ರಷ್ಟಾಚಾರ ಹೆಚ್ಚಲು ಕಾರಣವಾಗಿದೆ. ಹೀಗಾಗಿ ಅಂತಿಮ ಅಧಿಸೂಚನೆಗೆ ಎರಡು ತಿಂಗಳ ಗಡುವು ವಿಧಿಸಲು ಸರ್ಕಾರ ಮುಂದಾಗಿದೆ. ಅಂತಿಮ ಅಧಿಸೂಚನೆ ವಿಳಂಬವಾಗುವುದರಿಂದ ಒಂದೆಡೆ ರೈತರಿಗೆ ತೊಂದರೆಯಾದರೆ, ಸರ್ಕಾರಕ್ಕೂ ಹೊರೆಯಾಗುತ್ತದೆ. ಇಂತಹ ಪ್ರಕರಣಗಳೇ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಜಾಸ್ತಿಯಾಗಿದೆ. ಆದ್ದರಿಂದಲೇ ಗಡುವು ವಿಧಿಸುವ ತೀರ್ವನಕ್ಕೆ ಸರ್ಕಾರ ಬಂದಿದೆ.
ನಡೆದಿದೆ ಆಡಿಟ್:ಸ್ವಾಧೀನ ಮಾಡಿಕೊಂಡು ಉದ್ಯಮಿಗಳಿಗೆ ನೀಡಿರುವ ಭೂಮಿಯ ಬಳಕೆಯ ಬಗ್ಗೆ ಆಡಿಟ್ ನಡೆದಿದೆ. ಈ ವೇಳೆಗೆ ಬರಬೇಕಾಗಿದ್ದ ವರದಿ ತಡವಾಗಿದೆ. ಸರ್ಕಾರ ಇದುವರೆಗೂ 1 ಲಕ್ಷ ಎಕರೆಗೂ ಹೆಚ್ಚಿನ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿದೆ. ಆದರೆ, ಅಷ್ಟು ಭೂಮಿ ಸೂಕ್ತ ಉದ್ದೇಶಕ್ಕೆ ಬಳಕೆಯಾಗಿಲ್ಲ ಎಂಬ ದೂರುಗಳಿವೆ. ಆದ್ದರಿಂದಲೇ ಬಳಕೆಯ ಬಗ್ಗೆ ಆಡಿಟ್ ಮಾಡಲಾಗುತ್ತಿದೆ. ಇದುವರೆಗೂ 500 ಎಕರೆಯನ್ನು ಮರು ಸ್ವಾಧೀನ ಸಹ ಮಾಡಲಾಗಿದೆ.
ಕಡತ ತರಬೇಡಿ:ಕೈಗಾರಿಕಾ ಇಲಾಖೆಯ ಕ್ಷೇತ್ರ ಕಚೇರಿಗಳ ಅಧಿಕಾರಿಗಳು ಯಾವುದೇ ಭೌತಿಕ ಕಡತಗಳೊಂದಿಗೆ ಕೇಂದ್ರ ಕಚೇರಿಗೆ ಬರುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಎಲ್ಲ ಕಡತಗಳನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ಕಳುಹಿಸಿ ಒಪ್ಪಿಗೆ ಪಡೆಯಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರಿಂದ ಕಡತ ವಿಲೇವಾರಿಗೆ ವೇಗ ಸಿಗಲಿದೆ. ಉದ್ಯಮಿಗಳಿಗೂ ನೆರವಾಗುತ್ತದೆ.
ಆಕರ್ಷಣೆಯಲ್ಲಿ ರಾಜ್ಯ ಮುಂದು:ವಿದೇಶಿ ಹೂಡಿಕೆಯ ಆಕರ್ಷಣೆಯಲ್ಲಿ ರಾಜ್ಯ ಮುಂದಿದೆ. ದೇಶಕ್ಕೆ ಬಂದ ನೇರ ವಿದೇಶಿ ಹೂಡಿಕೆಯಲ್ಲಿ ಶೇ.53ರಷ್ಟು ಕರ್ನಾಟಕ್ಕೆ ಬಂದಿದೆ. ಇದಲ್ಲದೆ, ಮುಖ್ಯಮಂತ್ರಿ ಮೆಗಾ ಕೈಗಾರಿಕಾ ಟೌನ್​ಶಿಪ್​ನಲ್ಲಿ 10 ಸಾವಿರ ಕೋಟಿ ರೂ.ಗಳ ಹಾಗೂ 5 ಲಕ್ಷ ಉದ್ಯೋಗದ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಅದೇ ರೀತಿಯಲ್ಲಿ ನವೆಂಬರ್​ನಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶದಲ್ಲಿ 5 ಲಕ್ಷ ಕೋಟಿ ರೂ.ಗಳ ಹೂಡಿಕೆಯ ಗುರಿ ಹೊಂದಿದೆ.
ಭೂಸ್ವಾಧೀನದ ಹೆಸರಿನಲ್ಲಿ ರೈತರಿಗೆ ಕಿರುಕುಳ ತಪ್ಪಬೇಕು. ಆದ್ದರಿಂದ ಪರಿಹಾರ ವಿತರಣೆ ತಡ ಮಾಡದಂತೆ ಸೂಚನೆ ನೀಡಿದ್ದೇವೆ. ಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೂ ಗಡುವು ವಿಧಿಸಲಾಗಿದೆ. ಇದರಿಂದ ರೈತರು ಹಾಗೂ ಉದ್ಯಮಿಗಳಿಗೂ ನೆರವಾಗುತ್ತದೆ.
|ಮುರುಗೇಶ ಆರ್ ನಿರಾಣಿಬೃಹತ್ ಕೈಗಾರಿಕಾ ಸಚಿವ
ಮತ್ತೆ ಎಷ್ಟು ಭೂಮಿ ಸ್ವಾಧೀನ?:ಸರ್ಕಾರ ಹಿಂದೆ ಭೂ ಬ್ಯಾಂಕ್ ಸ್ಥಾಪನೆ ಮಾಡಿದಾಗ 1,21,304 ಎಕರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಅಂದಾಜು 80 ಸಾವಿರ ಎಕರೆ ಸ್ವಾಧೀನವಾಗಿದೆ. ಮುಂದಿನ ಹೂಡಿಕೆ ಸಮಾವೇಶದ ವೇಳೆಗೆ ಇನ್ನೂ 50 ಸಾವಿರ ಎಕರೆ ಸ್ವಾಧೀನ ಮಾಡುವ ಉದ್ದೇಶ ಸರ್ಕಾರಕ್ಕೆ ಇದೆ.
ಉದ್ದೇಶವೇನು?:‘ಉದ್ಯಮಿಯಾಗು ಉದ್ಯೋಗ ನೀಡು’ ಎಂಬ ಯೋಜನೆಯ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಯುವ ಸಮುದಾಯಕ್ಕೆ ಒತ್ತು ನೀಡಲು ಮುಂದಾಗಿದೆ. ಅದರೊಂದಿಗೆ ಇಂದಿಗೂ ವಿದೇಶಿ ಬಂಡವಾಳ ಆಕರ್ಷಿಸುವಲ್ಲಿ ರಾಜ್ಯ ಸರ್ಕಾರ ಮುಂದಿದೆ. ಇದೇ ನವೆಂಬರ್​ಗೆ ಹೂಡಿಕೆದಾರರ ಸಮಾವೇಶ ನಡೆಸಲಿದೆ. ಇಂತಹ ಸಂದರ್ಭದಲ್ಲಿ ಭೂಮಿ ಬ್ಯಾಂಕ್ ಸಿದ್ಧಪಡಿಸಿಟ್ಟುಕೊಂಡು ಉದ್ಯಮಿಗಳಿಗೆ ನೆರವಾಗುವುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದಲೇ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆ ನಿವಾರಣೆಯ ಉದ್ದೇಶವನ್ನಿಟ್ಟುಕೊಂಡು ಈ ಎರಡು ಗಟ್ಟಿ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
