ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತ ಪ್ರಕರಣ ರಾಜ್ಯಕ್ಕೆ ಎಚ್ಚರಿಕೆ ಗಂಟೆಯಾಗಿರುವ ನಡುವೆಯೇ ರಾಜ್ಯದ ಕೆಲ ಭಾಗಗಳಲ್ಲೂ ಭೂಕುಸಿತ ಉಂಟಾಗಿರುವುದು ಆತಂಕ ಮೂಡಿಸಿದೆ. ಅಲ್ಲದೆ ಕೃಷ್ಣಾ, ತುಂಗಾಭದ್ರಾ, ಕಾವೇರಿ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವುದು ಸಂಕಷ್ಟ ತಂದೊಡ್ಡಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ-75ರಲ್ಲಿರುವ ಬುಧವಾರವೂ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ನಾಲ್ಕು ವಾಹನಗಳು ಮಣ್ಣಿನಡಿ ಸಿಲುಕಿವೆ. ಸಚಿವ ಕೃಷ್ಣಬೈರೇಗೌಡ ನೆರೆಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ ಕೆಲವೇ ಗಂಟೆಯಲ್ಲಿ ಭೂಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಕುಸಿದ ಭಾರಿ ಪ್ರಮಾಣದ ಮಣ್ಣು ಸುಮಾರು 200 ಅಡಿ ಆಳದಲ್ಲಿ ಹಾದು ಹೋಗಿರುವ ಸಕಲೇಶಪುರ-ಮಂಗಳೂರು ರೈಲು ಮಾರ್ಗದ ಮೇಲೂ ಬಿದ್ದಿದೆ. ಶಿರಾಡಿ ಬಳಿ ರೈಲು ಹಳಿ ದುರಸ್ತಿ ಕಾಮಗಾರಿ ಸ್ಥಳಕ್ಕೆ ಸಾಮಗ್ರಿ ಸಾಗಣೆಗೆ ಅಡ್ಡಿಯುಂಟಾಗಿದೆ. ಈಗಾಗಲೇ ಯಡಕುಮರಿ-ಕಡಗರವಳ್ಳಿ ರೈಲು ನಿಲ್ದಾಣಗಳ ನಡುವೆ ಶನಿವಾರ ಗುಡ್ಡ ಕುಸಿತದಿಂದ ಈಗಾಗಲೆ ಸಕಲೇಶಪುರ- ಮಂಗಳೂರು ರೈಲ್ವೆ ಮಾರ್ಗ ಬಂದ್ ಆಗಿದೆ.
ನೆರೆ ಆತಂಕ ಯಥಾಸ್ಥಿತಿ: ಬೆಳಗಾವಿ ಜಿಲ್ಲಾದ್ಯಂತ ವಾರದಿಂದ ಸುರಿಯುತ್ತಿದ್ದ ಮಳೆ ಪ್ರಮಾಣ ಬುಧವಾರ ತಗ್ಗಿದೆ. ಆದರೂ, ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನೆರೆ ಆತಂಕ ಮುಂದುವರಿದಿದೆ. ಮತ್ತೊಂದೆಡೆ ಮಹಾರಾಷ್ಟ್ರ ಡ್ಯಾಮ್ಳಿಂದ ಕೃಷ್ಣಾ ನದಿಗೆ 2.95 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ದೂಧಗಂಗಾ ನದಿಗಳೆಲ್ಲವೂ ಮೈದುಂಬಿ ಹರಿಯುತ್ತಿವೆ. ಗ್ರಾಮಗಳು, ಸೇತುವೆಗಳು, ಕೃಷಿ ಬೆಳೆಗಳು ಜಲಾವೃತ ಸ್ಥಿತಿಯಲ್ಲಿಯೇ ಇವೆ.

ತುಂಗಭದ್ರಾ ಅಪಾಯದ ಮಟ್ಟ:ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮತ್ತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬುಧವಾರ 33 ಗೇಟ್​ಗಳಿಂದ 1.57 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಯುವ ತುಂಗಭದ್ರಾ ನದಿ ನೀರು ಅಪಾಯದ ಮಟ್ಟವನ್ನು ಸಮೀಪಿಸುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ. ಹರಿಹರ ತಾಲೂಕಿನ ಫತ್ಯಾಪುರ-ಉಕ್ಕಡಗಾತ್ರಿ ಹಾಗೂ ತುಮ್ಮಿನಕಟ್ಟೆ-ಉಕ್ಕಡಗಾತ್ರಿ ರಸ್ತೆಗಳ ಸಂಪರ್ಕ ಕಡಿತವಾಗಿದೆ. ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ದೇವಾಲಯವನ್ನು ನದಿ ನೀರು ಸುತ್ತುವರಿದಿದೆ. ಅಲ್ಲಿನ ಜವಳ ಮಂದಿರ ಹಾಗೂ ಸ್ನಾನ ಘಟ್ಟಗಳು ಸಂಪೂರ್ಣ ಮುಳುಗಡೆಯಾಗಿವೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3.32 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ಲಿಂಗಸುಗೂರು ತಾಲೂಕಿನಲ್ಲಿ ನದಿ ತೀರದ ಜಮೀನುಗಳು ಜಲಾವೃತಗೊಂಡಿವೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ಸೇರಿ ಹಲವು ದೇವಸ್ಥಾನಗಳು ಜಲಾವೃತವಾಗಿವೆ.
ಕರಾವಳಿಯಲ್ಲಿ ಇಳಿಮುಖ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 2 ದಿನ ಸುರಿದ ಮಳೆ ಜಿಲ್ಲೆಯ ಜನತೆಯನ್ನು ತತ್ತರಿಸುವಂತೆ ಮಾಡಿದೆ. ಬುಧವಾರ ಮಧ್ಯಾಹ್ನವರೆಗೆ ಮಳೆ ತೀವ್ರತೆ ಕೊಂಚ ಕಡಿಮೆಯಿದ್ದರೂ, ಮಧ್ಯಾಹ್ನ ಬಳಿಕ ಬಿರುಸು ಪಡೆದಿದೆ. ಹವಾಮಾನ ಇಲಾಖೆ ಪ್ರಕಾರ ಗುರುವಾರ ಮಳೆ ಅಬ್ಬರ ಮತ್ತಷ್ಟು ಬಿರುಸುಗೊಳ್ಳಲಿದ್ದು, ಹವಾಮಾನ ಇಲಾಖೆ ಗುರುವಾರ ರೆಡ್ ಅಲರ್ಟ್ ಘೊಷಿಸಿದೆ.
ಮಡಿಕೇರಿ:ರಾಜ್ಯದಲ್ಲಿ ಈ ವರ್ಷ ಸಿಡಿಲು ಬಡಿದು 8, ಮರ ಬಿದ್ದು 6, ಮನೆ ಕುಸಿತದಿಂದ 14, ನೀರಿಗೆ ಇಳಿದು 12, ಭೂಕುಸಿತದಿಂದ 8 ಸೇರಿ 48 ಜನರು ಪ್ರಾಕೃತಿಕ ವಿಕೋಪ ಸಂಬಂಧಿ ಘಟನೆಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ರಾಜ್ಯದಲ್ಲಿ ಎಲ್ಲೆಲ್ಲಿ ಭೂಕುಸಿತ ಸಂಭವಿಸಬಹುದು ಎಂಬ ಮಾಹಿತಿ ನೀಡಿ ದ್ದಾರೆ. ಅದನ್ನು ಸಂಬಂಧಿಸಿದ ಡಿಸಿಗಳಿಗೆ ಕಳುಹಿಸಿ, ಅವರಿಂದ ಪ್ರಸ್ತಾವ ತರಿಸಿಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಬೃಂದಾವನಕ್ಕೆ ಜಲಸಂಕಟ:ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಅಣೆಕಟ್ಟೆಗೆ 1,40,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಬುಧವಾರ ಅಣೆಕಟ್ಟೆಯಿಂದ 1,70,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾರಂಗಿ, ಲಕ್ಷ್ಮಣತೀರ್ಥ ಹಾಗೂ ಹೇಮಾವತಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೆಆರ್​ಎಸ್ ಭರ್ತಿಯಾಗಿದ್ದು, ನದಿಗೆ ನೀರು ಬಿಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಬೃಂದಾವನ ಸಮೀಪದ ನಾರ್ತ್ ಬ್ಯಾಂಕ್ ಗ್ರಾಮದ ಬಳಿ ಬಲಮುರಿ ಸೇರಿ ನದಿ ಪಾತ್ರದಲ್ಲಿದ್ದ ಗದ್ದೆಗಳು ಜಲಾವೃತಗೊಂಡಿದೆ.
ಕೊಡಗಲ್ಲಿ ಮಳೆ ಚುರುಕು:ಕೊಡಗಿನಲ್ಲಿ ಮಳೆ ಚುರುಕಾಗಿದೆ. ಗುರುವಾರ ಬೆಳಗ್ಗೆ 8.30ರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಹಾರಂಗಿ ಅಣೆಕಟ್ಟೆಗೆ 9,098 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 19,250 ಕ್ಯೂಸೆಕ್ ಮತ್ತು ನಾಲೆಗೆ 125 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ನಿಲ್ಲದ ಕೃಷ್ಣೆಯ ಅಬ್ಬರ:ಕೃಷ್ಣಾ ನದಿ ಉಗಮ ಸ್ಥಾನವಾದ ಮಹಾಬಳೇಶ್ವರ ಸೇರಿ ಮಹಾರಾಷ್ಟ್ರದ ಜಲಾನಯನ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣೆಯ ಅಬ್ಬರ ಮುಂದುವರಿದಿದೆ.ಗರಿಷ್ಠ 519.60 ಮೀಟರ್ ಎತ್ತರ, 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಬುಧವಾರ ಸಂಜೆ 6ಕ್ಕೆ 515.45 ಮೀಟರ್​ವರೆಗೆ 67.375 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು 3,41,944 ಕ್ಯೂಸೆಕ್ ಇದ್ದರೆ, 3.50 ಲಕ್ಷ ಕ್ಯೂಸೆಕ್ ಹೊರ ಹರಿವು ಇದೆ.
ಹಲವೆಡೆ ಮನೆ ಜಲಾವೃತ:ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ಮೈಸೂರು ಜಿಲ್ಲೆ ನಂಜನಗೂರು ತಾಲೂಕಿನ ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಮಲ್ಲನಮೂಲೆ ಮಠದ ಬಳಿ ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಆವರಿಸಿಕೊಂಡಿದ್ದರಿಂದ ಬುಧವಾರ ದಿನವಿಡೀ ಸಂಚಾರ ಅಸ್ತವ್ಯಸ್ತಗೊಂಡಿತು. ಇದರಿಂದ ತಮಿಳುನಾಡು, ಕೇರಳ ಕಡೆ ತೆರಳುವ ಪ್ರಯಾಣಿಕರಿಗಂತೂ ಸಂಚಾರ ಬಿಸಿ ತಟ್ಟಿತು.

ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಸ್ಪಷ್ಟೀಕರಣ ನೀಡಲು ದೆಹಲಿಗೆ ಹೋಗಿರುವ ಸಿಎಂ ದೆಹಲಿ ಪ್ರವಾಸ ಕೈಬಿಟ್ಟು ಪರಿಹಾರ ಕಾರ್ಯ ಪರಿಶೀಲಿಸಬೇಕು. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಟಾಸ್ಕ್​ಫೋರ್ಸ್ ರಚಿಸಿ 5 ಕೋಟಿ ರೂ. ಬಿಡುಗಡೆ ಮಾಡಬೇಕು. ಬಿಜೆಪಿಯಿಂದ ತಂಡ ರಚಿಸಿ ಪ್ರವಾಸ ಕೈಗೊಂಡು ನೆರೆಯಿಂದ ಜನರಿಗೆ ಆಗಿರುವ ನಷ್ಟದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು.
| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
