| ಶಿವಾನಂದ ತಗಡೂರು, ಬೆಂಗಳೂರು
ಬೆಂಗಳೂರು- ಮಂಗಳೂರು ಹೆದ್ದಾರಿಯ ಪ್ರಮುಖ ಘಟ್ಟ ಶಿರಾಡಿ ಘಾಟ್ ರಸ್ತೆ ಭಾರಿ ಮಳೆಗೆ ಸಂಪೂರ್ಣ ಹದಗೆಟ್ಟಿರುವ ಪರಿಣಾಮ ವಾಹನ ಸಂಚಾರ ನರಕಯಾತನೆ ಆಗಿದೆ. ಎತ್ತಿನಹೊಳೆ ಯೋಜನೆ ಒಂದು ಕಡೆ ಪಶ್ಚಿಮಘಟ್ಟಕ್ಕೆ ಆಪತ್ತು ತಂದಿದ್ದರೆ, ಇನ್ನೊಂದೆಡೆ ವೈಜ್ಞಾನಿಕ ಕ್ರಮ ಅನುಸರಿಸದೆ, ಚತುಷ್ಪಥ ರಸ್ತೆ ನಿರ್ವಣಕ್ಕೆ ಮುಂದಾಗಿರುವುದು ಪರಿಸರ ವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅದೇ ರೀತಿ ಸುರಂಗ ಮಾರ್ಗದ ಕಾಮಗಾರಿ ಕೂಡ ವಿಳಂಬವಾಗುವುದು ನಿಚ್ಚಳವಾಗಿದೆ.
ಸಕಲೇಶಪುರದಿಂದ ಗುಂಡ್ಯ ಮಾರ್ಗವಾಗಿ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರು ಜೀವ ಕೈನಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆ ವಿಸ್ತರಿಸುವ ಭರದಲ್ಲಿ ಗುಡ್ಡಗಳನ್ನು ಕತ್ತರಿಸಲಾಗಿದೆ. ಆದರೆ ಅದಕ್ಕೆ ಸರಿಯಾದ ತಡೆಗೋಡೆ ನಿರ್ವಿುಸದೇ ಇರುವುದು ಭೂ ಕುಸಿತಕ್ಕೆ ಕಾರಣವಾಗಿದೆ ಎನ್ನುವುದು ಸ್ಥಳೀಯರ ಆಕ್ಷೇಪ. ವೇಗದಲ್ಲಿ ಕಾಮಗಾರಿ ಮಾಡಿ ಮುಗಿಸುವ ಧಾವಂತದಲ್ಲಿ ಗುಡ್ಡ ಕುಸಿತದ ಬಗ್ಗೆ ಸರಿಯಾದ ಸುರಕ್ಷತಾ ಕ್ರಮ ಕೈಗೊಳ್ಳದೇ ಇರುವುದು ಇಂದಿನ ದುಸ್ಥಿತಿಗೆ ಕಾರಣವಾಗಿದೆ.
ಸುರಂಗ ಇನ್ನಷ್ಟು ವಿಳಂಬ:ಶಿರಾಡಿಯಲ್ಲಿನ ಭೂ ಕುಸಿತ ಆತಂಕ ತಂದಿರುವ ಹಿನ್ನೆಲೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಪಶ್ಚಿಮಘಟ್ಟದಲ್ಲಿ ಸರಿಯಾದ ವೈಜ್ಞಾನಿಕ ಅಧ್ಯಯನ ಇಲ್ಲದೆ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡರೂ ಅದು ಭವಿಷ್ಯದಲ್ಲಿ ಭೂ ಕುಸಿದಂತ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಸ್ಪಷ್ಟ ಸೂಚನೆಗಳು ಆಗಿಂದಾಗ್ಗೆ ಗೋಚರವಾಗುತ್ತಿರುವ ಹಿನ್ನೆಲೆಯಲ್ಲಿ ಇರುವ ರಸ್ತೆಯನ್ನೇ ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೂ ಚಿಂತನೆಗಳು ಗರಿಗೆದರಿವೆ. ಮತ್ತೊಂದೆಡೆ ಕಾಡು ಉಳಿಸಿಕೊಳ್ಳುವ ಸಲುವಾಗಿ ರಸ್ತೆ ಅಗಲೀಕರಣ ಬದಲು ಶಿರಾಡಿ ಘಾಟನಲ್ಲಿ ಸುರಂಗ ನಿರ್ಮಾಣ ಮಾಡಲು ಹೊರಟಿದ್ದ ಸರ್ಕಾರದ ಪ್ರಯತ್ನಕ್ಕೆ ಕೇಂದ್ರದ ಸ್ಪಂದನೆ ಸಿಗದೆ ಇರುವುದರಿಂದ ಸುರಂಗ ಮಾರ್ಗ ಯೋಜನೆ ಜಾರಿಗೆ ಬರುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಎರಡು ಲಕ್ಷ ಮರಗಳಿಗೆ ಕುತ್ತು:ಬೆಂಗಳೂರಿನಿಂದ ಸಕಲೇಶಪುರ ತನಕ ಚತುಷ್ಪಥ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. ಸಕಲೇಶಪುರದಿಂದ ಮಂಗಳೂರು ತನಕ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ. ಸಕಲೇಶಪುರದಿಂದ ಗುಂಡ್ಯ ತನಕ ಚತುಷ್ಪಥ ರಸ್ತೆಯನ್ನಾಗಿ ಮಾಡಲು ನಾನಾ ಸವಾಲುಗಳು ಎದುರಾಗಿವೆ. ರಸ್ತೆ ಅಗಲೀಕರಣದಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಗಿಡ ಮರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಮುಂದೆ ಭಾರಿ ಅನಾವುತವೇ ಆಗಲಿದೆ ಎನ್ನುವ ಕಾರಣಕ್ಕೆ ಸುರಂಗ ಯೋಜನೆ ಉತ್ತಮ ಎನ್ನುವ ತೀರ್ವನಕ್ಕೆ ಬಂದಿದ್ದರಿಂದ ಯೋಜನೆ ರೂಪುಗೊಂಡಿತ್ತು.
ರಸ್ತೆ ಸಂಪೂರ್ಣ ಹಾಳು:ಮಂಗಳೂರಿನಿಂದ ಸಕಲೇಶಪುರಕ್ಕೆ ರಸ್ತೆ ಪೂರ್ಣ ಹಾಳಾಗಿ ಹೋಗಿದ್ದು, ನಿತ್ಯ ಪ್ರಯಾಣ ಪ್ರಯಾಣಿಕರಿಗೆ ನರಕ ಯಾತನೆಯಾಗಿದೆ. ಮಳೆಗಾಲ ಶುರುವಾದ ಮೇಲೆ ರಸ್ತೆ ಪರಿಸ್ಥಿತಿ ಇನ್ನೂ ಹೆಚ್ಚಾಗಿ ಹದಗೆಟ್ಟಿದೆ. ಮಂಗಳೂರಿನಿಂದ ಸಕಲೇಶಪುರಕ್ಕೆ 2 ಗಂಟೆಯ ಪ್ರಯಾಣಕ್ಕೆ ಐದಾರು ಗಂಟೆಗಳ ಕಾಲ ವ್ಯರ್ಥವಾಗುತ್ತಿದೆ.
14 ಸಾವಿರ ಕೋಟಿ ರೂ. ಅಂದಾಜು:ಜಪಾನ್​ನ ಜೈಕಾ ಕಂಪನಿ ಮೂಲಕ ಈ ಸುರಂಗ ಮಾರ್ಗ ನಿರ್ಮಾಣ ಮಾಡಲು ಮುಂದಾಗಿದ್ದು ಮೊದಲು ಸರ್ವೆ ಪ್ರಕಾರ ಡಿಪಿಆರ್ ಮಾಡಿಸಿದಾಗ ಅದಕ್ಕೆ ಸುಮಾರು 3 ಸಾವಿರ ಕೋಟಿ ರೂ ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗ ಖರ್ಚಿನ ವೆಚ್ಚ ನಾಲ್ಕು ಪಟ್ಟು ಹೆಚ್ಚಾಗಿದ್ದು, ಕನಿಷ್ಠ 14,000 ಕೋಟಿ ರೂ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಎಲ್ಲಿಂದ ಎಲ್ಲಿಗೆ ಸುರಂಗ?:ರಾಷ್ಟ್ರೀಯ ಹೆದ್ದಾರಿ 75 ರಲ್ಲಿ (ಎನ್​ಎಚ್ 48) 237 ಕಿ.ಮೀ.ನಿಂದ 263 ಕಿ.ಮೀ.ತನಕ (ಮಾರನಹಳ್ಳಿಯಿಂದ ಅಡ್ಡಹೊಳೆ ತನಕ) ರಸ್ತೆ ಸಂಪರ್ಕಕ್ಕೆ 10 ಕಿ.ಮೀ.ಸುರಂಗ ನಿರ್ವಣದ ಅಗತ್ಯವಿದೆ. 13 ಕಡೆ ಪ್ಲೇ ಔವರಗಳು ನಿರ್ಮಾಣ ಆಗಬೇಕಾಗಿದೆ. ಇದಕ್ಕೆ ದುಬಾರಿ ವೆಚ್ಚವಾಗುವುದರಿಂದ ಇದನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿದೆ. ಸುರಂಗ ನಿರ್ಮಾಣ ಮಾಡುವುದರಿಂದ ಭೂ ಸ್ವಾಧೀನ ಉಸಾಬರಿಯ ಹೊರೆ ರಾಜ್ಯ ಸರ್ಕಾರಕ್ಕೆ ತಪ್ಪಲಿದೆ.
ಕೇಂದ್ರಕ್ಕೆ ಸಿಎಂ ಮನವಿ:ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜೂನ್ 28ಕ್ಕೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿರಾಡಿ ಘಾಟ್ ಸುರಂಗ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಬೇಕು ಎಂದು ಮನವಿ ಮಾಡಿದ್ದರು. ಈ ಸುರಂಗ ಯೋಜನೆ ಸಲುವಾಗಿಯೇ ಹಲವಾರು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಸೂಕ್ತ ಸ್ಪಂಧನೆ ವ್ಯಕ್ತವಾಗಿಲ್ಲ.
ಸುರಂಗ ಮಾರ್ಗವೂ ಅಪಾಯಕಾರಿ:ಪಶ್ಚಿಮಘಟ್ಟದಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಜೀವ ವೈವಿಧ್ಯತೆ ಮೇಲೆ ಮಾರಕ ಪರಿಣಾಮ ಬೀರಬಹುದು ಎನ್ನುವುದು ಪರಿಸರವಾದಿಗಳ ಆತಂಕ. ರಸ್ತೆ ಅಗಲೀಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೆ, ಸುರಂಗ ಮಾರ್ಗ ಸ್ವಲ್ಪ ಮಟ್ಟಿಗೆ ಕಡಿಮೆ ಹಾನಿ ಮಾಡಬಹುದು ಎಂದು ಸರ್ಕಾರ ಬಿಂಬಿಸುತ್ತಿದ್ದರೂ ಪರಿಸರವಾದಿಗಳು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಸುರಂಗ ಯೋಜನೆಯ ಪರ ಮತ್ತು ವಿರುದ್ದವಾಗಿಯೂ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಕೊಡಗಿನ ಎಫೆಕ್ಟ್:ಕೊಡಗಿನ ಅತಿವೃಷ್ಟಿ ಅವಘಡಗಳ ಬಳಿಕ ಎಚ್ಚೆತ್ತುಕೊಂಡಿರುವ ಮಲೆನಾಡಿನ ಜನ ಶಿರಾಡಿ ಘಾಟ್​ನಲ್ಲಿ ಚತುಸ್ಪಥ ರಸ್ತೆ ನಿರ್ವಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೊಡಗಿನಲ್ಲಿ ಮಳೆರಾಯನ ಆರ್ಭಟಕ್ಕೆ ಗುಡ್ಡಗಳೇ ಕುಸಿದು ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದನ್ನು ನೋಡಿರುವ ಜನ, ಮುಂದೊಂದು ದಿನ ಶಿರಾಡಿ ಘಾಟ್​ನಲ್ಲಿಯೂ ನಡೆಯಬಹುದು ಎನ್ನುವ ಆತಂಕ ಎದುರಿಸುತ್ತಿದ್ದಾರೆ.
ಏನೇನಾಗಬಹುದು?:ಶಿರಾಡಿ ಘಾಟ್​ನಲ್ಲಿ ಮಾರನಹಳ್ಳಿಯಿಂದ ಮುಂದಕ್ಕೆ ತೀವ್ರವಾದ ತಿರುವು ಮತ್ತು ಗುಡ್ಡಗಳಿವೆ. ಹೊಸದಾಗಿ ಇನ್ನು ಎರಡು ಪಥದ ರಸ್ತೆಯನ್ನು ನಿರ್ಮಾಣ ಮಾಡಬೇಕಾಗಿರುವುದರಿಂದ ಕನಿಷ್ಠ 100 ರಿಂದ 200 ಅಡಿಯಷ್ಟು ಅಗಲವಾಗಿ ಗುಡ್ಡವನ್ನು ಕತ್ತರಿಸಿ ತೆಗೆಯಬೇಕಾಗಿದೆ. ಗುಡ್ಡಗಳನ್ನು ಕತ್ತರಿಸುವುದರಿಂದ ಮುಂದೆ ಕೊಡಗಿನಂತೆಯೇ ಭಾರಿ ಭೂ ಕುಸಿತವಾಗಬಹುದು ಎನ್ನುವುದು ಈಗ ಕಾಡುತ್ತಿರುವ ಮತ್ತೊಂದು ಸವಾಲು.
ಪಶ್ಚಿಮಘಟ್ಟದಲ್ಲಿ ರಸ್ತೆ ಅಗಲೀಕರಣ ಮಡುವುದಾಗಲಿ, ಸುರಂಗ ಮಾರ್ಗ ನಿರ್ಮಾಣ ಮಾಡುವುದಾಗಲಿ ಎರಡೂ ಪರಿಸರಕ್ಕೆ ಹಾನಿ ಮಾಡುವಂತ ಕ್ರಮಗಳೇ ಆಗಿವೆ. ಆತುರಾತುರದಲ್ಲಿ ಸುರಂಗ ನಿರ್ಮಾಣ ಪ್ರಯತ್ನ ಸರಿಯಲ್ಲ. ಈ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಿ ಪರಿಸರ ಪ್ರಿಯರ ಜೊತೆಗೆ ಸಮಾಲೋಚಿಸಿ ಕ್ರಮ ವಹಿಸುವುದು ಸೂಕ್ತ.
-ಕೇಸರಿ ಹರವೂ, ಪರಿಸರವಾದಿ
ಶಿರಾಡಿಯಲ್ಲಿ ಹಲವೆಡೆ ಭೂ ಕುಸಿತ ಸಂಭವಿಸಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಚತುಸ್ಪಥ ರಸ್ತೆಗಾಗಿ ಹಲವು ಗುಡ್ಡಗಳನ್ನು ಕತ್ತರಿಸಿ ರಸ್ತೆ ವಿಸ್ತರಿಸಬೇಕಾಗುವುದರಿಂದ 2 ಲಕ್ಷಕ್ಕೂ ಹೆಚ್ಚು ಮರ ಗಿಡಗಳಿಗೆ ಹಾನಿಯಾಗಲಿದೆ. ಈ ನಿಟ್ಟಿನಲ್ಲಿ ಆತುರ ತೋರುವುದು ಸರಿಯಲ್ಲ.
| ಕಿಶೋರ್ ಕುಮಾರ್ ಅಧ್ಯಕ್ಷರು, ಮಲೆನಾಡು ಜನಪರ ಹೋರಾಟ ಸಮಿತಿ
ಜೈಲಿನಿಂದ ನ್ಯಾಯಾಧೀಶರಿಗೆ ನಟ ದರ್ಶನ್ ಮನವಿ; ಪತ್ರದಲ್ಲಿ ಏನೇನಿದೆ..?

ಹೈಕಮಾಂಡ್‌ಗೆ ಮುಡಾ, ವಾಲ್ಮೀಕಿ ಹಗರಣದ ವರದಿ ನೀಡಿದ ಸಿಎಂ, ಡಿಸಿಎಂ: ಸಭೆಯಲ್ಲಿ ಏನೇನು ಚರ್ಚೆ? ಇಲ್ಲಿದೆ ವಿವರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + nine =
Remember me
