|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದ ರೇಷ್ಮೆ ಬೆಳೆಗಾರರ ಆದಾಯ ದುಪ್ಪಟ್ಟು ಮಾಡುವ ಉದ್ದೇಶದಿಂದ ರೇಷ್ಮೆ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ ಇ-ಪಾವತಿ ಮತ್ತು ಇ- ತೂಕ ವ್ಯವಸ್ಥೆಗೆ ಕಾನೂನಿನ ಬಲ ತುಂಬಲು ಸರ್ಕಾರ ಮುಂದಾಗಿದೆ. ರಾಜ್ಯದ 35 ರೇಷ್ಮೆ ಮಾರುಕಟ್ಟೆಗಳಲ್ಲಿ ಬೆಳೆಗಾರರಿಗೆ ತೂಕ ಮತ್ತು ಹಣ ಪಾವತಿಯಲ್ಲಿ ಆಗುತ್ತಿದ್ದ ಮೋಸ, ಕಿರುಕುಳ ತಪ್ಪಿಸಲು ಇ-ವೈಮೆಂಟ್ ಮತ್ತು ಇ- ಪೇಮೆಂಟ್ ಪದ್ಧತಿಯನ್ನು ಈಗಾಗಲೆ ಜಾರಿಗೆ ತಂದಿದೆ. ಅದಕ್ಕೆ ಕಾನೂನಿನ ಬಲ ತುಂಬಿ ರೈತರಿಗೆ ಇನ್ನಷ್ಟು ಶಕ್ತಿ ನೀಡಲು ಸರ್ಕಾರ ಕಾರ್ಯೋನ್ಮುಖವಾಗಿದೆ. ದೇಶದ ಒಟ್ಟಾರೆ ರೇಷ್ಮೆಯ ಶೇ.45 ಅಂದರೆ ವರ್ಷಕ್ಕೆ 11,191 ಮೆಟ್ರಿಕ್ ಟನ್ ರೇಷ್ಮೆ ಗೂಡು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿದೆ. ಮಾರುಕಟ್ಟೆಗಳಲ್ಲಿ ಜಾರಿಗೆ ಬಂದಿರುವ ವ್ಯವಸ್ಥೆಯನ್ನು ಕರ್ನಾಟಕ ರೇಷ್ಮೆ ಹುಳುವಿನ ಬಿತ್ತನೆ, ಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ಹಂಚಿಕೆ ಮತ್ತು ಮಾರಾಟ ನಿಯಂತ್ರಣ) ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗುತ್ತದೆ.
ಕಾನೂನು ಬಲ ಏಕೆ?:ರಾಜ್ಯ ಸರ್ಕಾರ 2014-15ನೇ ಆಯವ್ಯಯದಲ್ಲಿ ರೇಷ್ಮೆ ಮಾರುಕಟ್ಟೆಗಳಲ್ಲಿ ಇ-ಹರಾಜು ವ್ಯವಸ್ಥೆ ಜಾರಿಗೆ ತರುವುದಾಗಿ ಘೋಷಣೆ ಮಾಡಿತ್ತು. ಆಗಿನ ಘೋಷಣೆ ಈಗ ಜಾರಿಗೆ ಬಂದಿದೆ. ಹರಾಜು ಜತೆಗೆ ಪಾವತಿಗೂ ವಿದ್ಯುನ್ಮಾನ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ ಸರ್ಕಾರ ತಂದಿರುವ ವ್ಯವಸ್ಥೆಯ ವಿರುದ್ಧ ಯಾರಾದರೂ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಸಹ ಕಾನೂನಿನ ಬಲ ಇರಬೇಕು. ರೈತರಿಗೆ ತೊಂದರೆ ಆಗಬಾರದೆಂದು ಎಂಬ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇ-ಹರಾಜು ನಡೆದು ಪಾವತಿ ನೇರವಾಗಿ ಬೆಳೆಗಾರರ ಖಾತೆಗೆ ಪಾವತಿ ಮಾಡಬೇಕು ಎಂಬ ಅಂಶವನ್ನು ತಿದ್ದುಪಡಿ ಕಾಯ್ದೆಯಲ್ಲಿ ಸೇರಿಸಲಾಗುತ್ತಿದೆ.
ನೂತನ ಪದ್ಧತಿ ತಂದಿದ್ದು ಏಕೆ?:ಇ-ವೈಮೆಂಟ್ ಮತ್ತು ಇ-ಪೇಮೆಂಟ್ ತರಲು ಪ್ರಮುಖ ಕಾರಣವೇ ಮಾರುಕಟ್ಟೆಗಳಲ್ಲಿ ಆಗುತ್ತಿದ್ದ ಕಿರುಕುಳ ತಡೆಯುವ ಉದ್ದೇಶ ಹೊಂದಿದೆ. ಅಲ್ಲಿರುವ ರೀಲರ್​ಗಳು ಬಹಳ ಹಳಬರು, ಏಕಸ್ವಾಮ್ಯ ಸ್ಥಾಪಿಸಿಕೊಂಡಿದ್ದರು. ಒಬ್ಬ ರೈತ 100 ಕೆಜಿ ರೇಷ್ಮೆ ಗೂಡು ತಂದರೆ ಕನಿಷ್ಠ 4 ರಿಂದ 5 ತೂಕದಲ್ಲಿ ಮೋಸ ಆಗುತ್ತಿತ್ತು. ಹಣ ಪಾವತಿಯಲ್ಲಿಯೂ ಮೋಸ ನಡೆಯುತ್ತಿತ್ತು. ಆದ್ದರಿಂದ ಇ-ತೂಕ ಮತ್ತು ಇ-ಪಾವತಿ ವ್ಯವಸ್ಥೆಯಿಂದ ಅದೆಲ್ಲವನ್ನೂ ತಪ್ಪಿಸಲಾಗುತ್ತಿದೆ. ರೈತರು ನೆಮ್ಮದಿಯಾಗಿ ಹಣವನ್ನು ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಜಾರಿಗೆ ತರಲಾಗಿದೆ. ರಾಮನಗರ ಮಾರುಕಟ್ಟೆಯಲ್ಲಿ ನಿತ್ಯ 35 ರಿಂದ 60 ಟನ್, ಶಿಡ್ಲಘಟ್ಟದಲ್ಲಿ 15 ರಿಂದ 25 ಟನ್, ಕೊಳ್ಳೇಗಾಲದಲ್ಲಿ 17 ರಿಂದ 20 ಟನ್ ವಹಿವಾಟು ನಡೆಯುತ್ತದೆ. ಅದೇ ರೀತಿ ಬಿಳಿ ದೇವಾಲಯ, ಚನ್ನಪಟ್ಟಣ, ಮದ್ದೂರುಗಳ ಮಾರುಕಟ್ಟೆ ಹೆಚ್ಚಿನ ವಹಿವಾಟು ನಡೆಯುತ್ತದೆ. ಪ್ರತಿ ನಿತ್ಯ 90 ಮೆಟ್ರಿಕ್ ಟನ್ ಕನಿಷ್ಠ ಮಾರಾಟವಾಗುತ್ತದೆ. ನಿತ್ಯ 4 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ವಹಿವಾಟು ನಡೆಯುತ್ತದೆ.
ಬ್ಯಾಂಕ್ ಟೈಅಪ್:ರೀಲರ್​ಗಳು ಆಯಾ ದಿನ ಎಷ್ಟು ಕೆಜಿ ಖರೀದಿ ಮಾಡುತ್ತೇವೆ ಎಂಬುದಕ್ಕೆ ತಕ್ಕಂತೆ ಬ್ಯಾಂಕ್​ಗೆ ಹಣ ಪಾವತಿ ಮಾಡಿದ ನಂತರವೇ ಹರಾಜಿನಲ್ಲಿ ಭಾಗವಹಿಸಬೇಕು. ಹರಾಜು ಆದ ಕೂಡಲೇ ಅವರ ಖಾತೆಯಿಂದ ಸಂಬಂಧಿಸಿದ ಬೆಳೆಗಾರರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಆ ರೀತಿಯಲ್ಲಿ ಪ್ರತಿ ಮಾರುಕಟ್ಟೆಯಲ್ಲಿಯೂ ಬ್ಯಾಂಕ್ ಟೈಅಪ್ ಮಾಡಲಾಗಿದೆ. ಅದೆಲ್ಲದಕ್ಕೂ ಬೇಕಾಗುವ ರೀತಿಯಲ್ಲಿ ಕಾನೂನು ತರಲಾಗುತ್ತಿದೆ.
ಗಣಕೀಕರಣ:ರೇಷ್ಮೆ ಇಲಾಖೆಯನ್ನು ಸಂಪೂರ್ಣ ಗಣಕೀಕರಣ ಮಾಡುವ ಕಾರ್ಯ ಆರಂಭವಾಗಿದೆ. ಇಲಾಖೆಯಲ್ಲಿ ಪಾರದರ್ಶ ಕತೆ ತರುವ ಉದ್ದೇಶದಿಂದ ಈ ವ್ಯವಸ್ಥೆ ಬರುತ್ತಿದೆ. ಇದಕ್ಕಾಗಿ 15 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಾಜ್ಯ ರೇಷ್ಮೆ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ತಾಂತ್ರಿಕ ನೆರವು ನೀಡುತ್ತಿದೆ.
ಲಾಭ ಮಾಡಿರುವ ಕೆಎಸ್​ಐಸಿ:ರೇಷ್ಮೆ ಇಲಾಖೆ ರೇಷ್ಮೆ ಕೈಗಾರಿಕಾ ಸಂಸ್ಥೆ ಮೊದಲ ಬಾರಿಗೆ 32 ಕೋಟಿ ರೂ.ಗಳ ಲಾಭ ಮಾಡಿದೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿನ ಮಳಿಗೆ ಒಂದು ವರ್ಷಕ್ಕೆ ಒಂದು ಕೋಟಿ ರೂ.ಗಳ ವಹಿವಾಟು ನಡೆಸಿ ಗಮನ ಸೆಳೆದಿದೆ. ಇನ್ನಷ್ಟು ಮಳಿಗೆ ಆರಂಭಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಇಲಾಖೆ ಮೂಲಗಳು ಹೇಳುತ್ತವೆ.
ಕರ್ನಾಟಕವೇ ಮೊದಲು:ತೂಕ ಮತ್ತು ಪಾವತಿ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿರುವಲ್ಲಿ ಕರ್ನಾಟಕವೇ ಮೊದಲನೆಯದಾಗಿದೆ. ಕೇಂದ್ರ ಸರ್ಕಾರ ಸಹ ಈ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ತಮಿಳುನಾಡು, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶದಲ್ಲಿ ರೇಷ್ಮೆ ಬೆಳೆದರೂ ಸಹ ಕರ್ನಾಟಕದ ರೇಷ್ಮೆ ಗುಣಮಟ್ಟದಲ್ಲಿ ಮುಂದಿದೆ.
ರೇಷ್ಮೆ ಬೆಳೆಗಾರರು ಮತ್ತು ವರ್ತಕರ ಹಿತಕಾಯಲು ನಮ್ಮ ಸರ್ಕಾರ ದೇಶದಲ್ಲಿಯೇ ಮಾದರಿಯಾದ ಡಿಜಿಟಲ್ ವ್ಯವಸ್ಥೆಯನ್ನು ರೇಷ್ಮೆ ಮಾರುಕಟ್ಟೆಯಲ್ಲಿ ಜಾರಿಗೆ ತಂದಿದೆ. ಇ-ಪೇಮೆಂಟ್, ಇ-ವೇಯ್ಮೆಂಟ್ ಮೂಲಕ ರೈತರಿಗೆ ನಿಖರವಾದ ತೂಕ ಮತ್ತು ಬೆಲೆ ನೀಡುತ್ತಿದೆ. ಒಂದು ವರ್ಷದೊಳಗೆ ಕರ್ನಾಟಕದ ಎಲ್ಲ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಇ-ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + nineteen =
Remember me
