| ಶ್ರೀಕಾಂತ್ ಶೇಷಾದ್ರಿ/ ಮೃತ್ಯುಂಜಯ ಕಪಗಲ್ ಬೆಂಗಳೂರು
‘ಸಿದ್ದರಾಮಯ್ಯ ಬಲಿಷ್ಠ ಸಿಎಂ ಎಂದು ಹೇಳಲಾಗುತ್ತಿತ್ತು. ಆದರೆ ಎರಡು ಹಗರಣಗಳಲ್ಲಿ ಭಾಗಿಯಾದ ನಂತರ ಅವರ ಬಗ್ಗೆ ಇದ್ದ ಆಡಳಿತ ಪಕ್ಷದ ಶಾಸಕರ ವಿಶ್ವಾಸ ಕುಂದಿದೆ. ಎಲ್ಲೋ ಒಂದು ಕಡೆ ಸಿದ್ದರಾಮಯ್ಯನವರ ನಿದ್ದೆಗೆಡಿಸಿದೆ. ಹೀಗಾಗಿಯೇ ಅವರು ಹೈಕಮಾಂಡ್ ಆಶ್ರಯ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಮೇಲೆ ಎಷ್ಟೇ ಕೇಸ್ ಹಾಕಿದರೂ ಸರಿಯೇ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ..’ ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ನೀಡಿರುವ ಸ್ಪಷ್ಟ ಸಂದೇಶ. ಮುಡಾ ಹಗರಣ, ವಾಲ್ಮೀಕಿ ನಿಗಮದ ಅಕ್ರಮ ಸೇರಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ದೋಸ್ತಿ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ನಡುವೆಯೇ ವಿಜಯೇಂದ್ರ ವಿಜಯವಾಣಿಗೆ ಸಂದರ್ಶನ ನೀಡಿದ್ದಾರೆ. ನಾವು ಬಹಿರಂಗ ಸವಾಲು ಸ್ವೀಕರಿಸಿದ್ದೇವೆ, ನಮ್ಮ ಮೇಲೆ 20-30 ಕೇಸ್ ಹಾಕುತ್ತೀರೋ ಹಾಕಿ. ನಿಮ್ಮ ಈ ಬೆದರಿಕೆ ತಂತ್ರದಿಂದ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಧ್ಯವಿಲ್ಲ. ನಮ್ಮನ್ನು ತಡೆಯುವ ಶಕ್ತಿ ರಾಜ್ಯ ಸರ್ಕಾರಕ್ಕಿಲ್ಲ ಎಂದು ಗುಡುಗಿದರು.
ಖುಷಿಪಡಿಸುವ ಧಾವಂತ:ಸಿಎಂ ಕುರ್ಚಿ ಅಲ್ಲಾಡುತ್ತಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಖುಷಿಪಡಿಸುವುದು ರಾಜ್ಯದ ಸಿಎಂ ಆದ್ಯತೆ. ವಯನಾಡಲ್ಲಿ 100 ಮನೆ ಕಟ್ಟಿಸಿಕೊಡುತ್ತೇವೆಂದು ಸಿಎಂ ಹೇಳುತ್ತಾರೆ, ಇಲ್ಲಿ ಸಂತ್ರಸ್ತರಿಗೆ ಆ ದಾಖಲೆ ಕೊಡಿ ಈ ದಾಖಲೆ ತನ್ನಿ ಎಂದು ತೊಂದರೆ ಕೊಡುತ್ತಿದ್ದಾರೆ. ಸರ್ಕಾರ ಬದುಕಿಲ್ಲವೇ? ಎಂದು ಚಾಟಿ ಬೀಸಿದರು.
ಭಂಡತನ…:ಅಧಿವೇಶನದಲ್ಲಿ ಸಿಎಂ ಮುಡಾ ಹಗರಣದ ಬಗ್ಗೆ ಉತ್ತರಿಸಿದ್ದರೆ ಪಾದಯಾತ್ರೆ ನಡೆಯುತ್ತಿರಲಿಲ್ಲ. ಆದರೆ ಸಿಎಂ ಪಲಾಯನ ಮಾಡಿದ್ದರಿಂದ ಹಗರಣದಲ್ಲಿ ಅವರು ಸಂಪೂರ್ಣವಾಗಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಿದೆ. ನಾಲ್ಕರಿಂದ ಐದು ಸಾವಿರ ಕೋಟಿ ರೂ. ಗೂ ಹೆಚ್ಚು ಮೌಲ್ಯದ ನಿವೇಶನಗಳನ್ನು ಲೂಟಿ ಮಾಡಿದ್ದಾರೆ. ಏನೇ ಭಂಡತನ ಮೆರೆದರೂ ಎಲ್ಲದಕ್ಕೂ ಉತ್ತರ ಕೊಡಲೇಬೇಕಾಗುತ್ತದೆ ಎಂದು ವಿಜಯೇಂದ್ರ ಹೇಳಿದರು.
ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಜನಸಮೂಹ ನೋಡಿದರೆ ನಮ್ಮ ಹೋರಾಟಕ್ಕೆ ಸ್ಪಂದನೆ ಹೇಗಿದೆ ಎಂದು ಅರ್ಥವಾಗುತ್ತದೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ, ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಜನಸಾಮಾನ್ಯರಿಗೆ ಅನಿಸಿದೆ. ಅದರ ಪರಿಣಾಮವೇ ನಮ್ಮ ಪಾದಯಾತ್ರೆ ಯಶಸ್ಸಿನ ಗುಟ್ಟು ಎನ್ನುತ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಬೆಂಗಳೂರಿಗೆ ಬಂದು ಸಿಎಂ ಪರ ಗಟ್ಟಿಯಾಗಿ ನಿಲ್ಲುವಂತೆ ಆಡಳಿತ ಪಕ್ಷದ ಶಾಸಕರಿಗೇನೇ ಬುದ್ಧಿವಾದ ಹೇಳಿದ್ದಾರೆ. ಅಂದ ಮೇಲೆ ಸಿಎಂ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂದು ಇದರ ಮೇಲೆಯೇ ಗೊತ್ತಾಗುತ್ತದೆ ಎಂದು ವಿಜಯವಾಣಿ ಸಂದರ್ಶನದಲ್ಲಿ ಪಾದಯಾತ್ರೆ ಸಾಗುತ್ತಿರುವ ಹಾದಿ ಬಗ್ಗೆ ಬೆಳಕು ಚೆಲ್ಲಿದ್ದಾರೆ.
* ‘ಮೈಸೂರು ಚಲೋ’ಗೆ ವರಿಷ್ಠರ ಪೂರ್ವ ಸೂಚನೆಯಿತ್ತೆ ಅಥವಾ ಹೋರಾಟ ರ್ತಾಕ ಅಂತ್ಯದ ಭಾಗವಾಗಿ ರೂಪುಗೊಂಡಿತೆ?
ವಿಧಾನಸಭೆಯಲ್ಲಿ ಮುಡಾ ಹಗರಣದ ಕುರಿತು ಸಿಎಂ ಸಿದ್ದರಾಮಯ್ಯ ಉತ್ತರಿಸಿದ್ದರೆ ಈ ಪಾದಯಾತ್ರೆ ಮಾಡುವಂತಹ ಪರಿಸ್ಥಿತಿ ಬರುತ್ತಿದ್ದಿಲ್ಲ. ಆದರೆ, ಸದನದಲ್ಲಿ ಉತ್ತರ ಕೊಡದೆ ಸುದ್ದಿಗೋಷ್ಠಿ ನಡೆಸಿ ಅವರ ಮೂಗಿನ ನೇರಕ್ಕೆ ಕೆಲವು ವಿಚಾರಗಳನ್ನು ಹೇಳುವಂತಹ ಪ್ರಯತ್ನ ಮಾಡಿ ಪಲಾಯನವಾದ ಮಾಡಿದರೋ ಅದರಲ್ಲೇ ಗೊತ್ತಾಯಿತು, ಹಗರಣದಲ್ಲಿ ಅವರು ಸಂಪೂರ್ಣವಾಗಿ ಭಾಗಿಯಾಗಿದ್ದಾರೆಂದು. ಸಿದ್ದರಾಮಯ್ಯ ಸಿಎಂ ಆದ ಬಳಿಕ ನಾಲ್ಕರಿಂದ ಐದು ಸಾವಿರ ಕೋಟಿ ರೂ. ಹೆಚ್ಚು ಬೆಲೆ ಬಾಳುವ ನಿವೇಶನಗಳು ಲೂಟಿಯಾಗಿವೆ. ಇದರಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಹಾಗಾಗಿ ಸಿಎಂ ಏನೇ ಭಂಡತನ ಮೆರೆದರೂ ಎಲ್ಲದಕ್ಕೂ ಉತ್ತರ ಕೊಡಲೇಬೇಕಾಗುತ್ತದೆ.
* ನಿಮ್ಮ ಯಾತ್ರೆಯಿಂದ ಸಿದ್ದರಾಮಯ್ಯ ಸೇರಿ ಪ್ರಮುಖ ಕಾಂಗ್ರೆಸಿಗರು ಮೆತ್ತಗಾಗಿದ್ದಾರೆ ಎನಿಸುತ್ತದೆಯೆ?
ಸಿದ್ದರಾಮಯ್ಯ ಅವರ ಹಾವಭಾವ ನಿನ್ನೆ-ಮೊನ್ನೆಯದಲ್ಲ, ಯಾವಾಗ ಮುಡಾ ಪ್ರಕರಣವನ್ನು ಬಿಜೆಪಿ, ಜೆಡಿಎಸ್​ನವರು ತೆಗೆದುಕೊಳ್ಳುತ್ತಾರೆ ಎಂದು ಗೊತ್ತಾಯಿತೋ ಆವಾಗ ಅವರು ಸ್ವಲ್ಪ ಗಾಬರಿಯಾದರು. ಸಿಎಂ ಬಗ್ಗೆ ಶಾಸಕರಿಗೆ ವಿಶ್ವಾಸ ಕಡಿಮೆಯಾಗಿದೆ. ಇದು ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ಹಾಗಾಗಿ ಹೈಕಮಾಂಡ್ ಆಶ್ರಯ ಪಡೆಯುವಂತಹ ಪ್ರಯತ್ನ ಮಾಡುತ್ತಿದ್ದಾರೆ.
* ಪಾದಯಾತ್ರ್ರೆ ಆರಂಭಕ್ಕೆ ಮುನ್ನ ಅನುಮಾನ, ಅಪಸ್ವರ ಕೇಳಿಬಂದಿದ್ದೇಕೆ?
ಪಾದಯಾತ್ರೆ ಮಾಡಬೇಕೆಂದು ಹೇಳಿದಾಗ ಮಳೆ ಇದೆ, ಬಿಸಿಲಿದೆ ಎಂದು ಕಾದು ಕುಳಿತರೆ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಹೋರಾಟ ಸ್ವಾರ್ಥ ಏನಿಲ್ಲ. ಬಡವರು, ರೈತರು ಸಂಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರದಿಂದ ಸಿಡಿದೇಳುವುದು ಪ್ರತಿಪಕ್ಷದ ಕರ್ತವ್ಯ. ಈ ಕೆಲಸ ನಿರ್ವಹಿಸುತ್ತಿದ್ದೇವೆ. ರಾಹುಲ್ ಗಾಂಧಿ ಪ್ರತಿನಿಧಿಸಿದ್ದ ವಯನಾಡಿನಲ್ಲಿ 100 ಮನೆ ಕಟ್ಟಿಸಿಕೊಡುತ್ತೇವೆಂದು ಸಿಎಂ ಹೇಳುತ್ತಾರೆ, ಇದನ್ನು ನಾನು ತಪು್ಪ ಎನ್ನಲ್ಲ. ಆದರೆ ಉತ್ತರ ಕನ್ನಡದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಆ ದಾಖಲೆ ಕೊಡಿ, ಈ ದಾಖಲೆ ತನ್ನಿ ಎಂದು ತೊಂದರೆ ಕೊಡುತ್ತಿದ್ದಾರೆ. ಸರ್ಕಾರ ಸತ್ತು ಹೋಗಿದೆಯೇ? ಎಲ್ಲೋ ಒಂದು ಕಡೆ ಆ ಒಂದು ಗಾಂಧಿ ಕುಟುಂಬಕ್ಕೆ ಖುಷಿಪಡಿಸಲು ವಿಚಾರದಲ್ಲಿ ರಾಜ್ಯದ ಜನರಿಗೆ ತೊಂದರೆ ಆದರೂ ಪರವಾಗಿಲ್ಲ, ರಾಹುಲ್ ಗಾಂಧಿ ಖುಷಿಪಡಿಸುವುದು ರಾಜ್ಯದ ಮುಖ್ಯಮಂತ್ರಿಯ ಆದ್ಯತೆ. ಇದು ರಾಜ್ಯದ ದುರಂತ.
* ರಾಜಕಾರಣದಲ್ಲಿ ಇತ್ತೀಚೆಗೆ ‘ಅಡ್ಜೆಸ್ಟ್ ಮೆಂಟ್’ ಪದ ಸದ್ದುಮಾಡುತ್ತಿದೆ. ಈ ಪಾದಯಾತ್ರೆ ಏನಾದರೂ ಮೆಸೇಜ್ ಕೊಡುತ್ತಾ?
ರಾಜ್ಯದಲ್ಲಿ ಹೋರಾಟ ಎಂದರೆ ಯಡಿಯೂರಪ್ಪ ಎಂದು ಜನ ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಅವರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಒಂದಂತೂ ಸತ್ಯ, ಯಡಿಯೂರಪ್ಪ, ವಿಜಯೇಂದ್ರ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಎಲ್ಲ ಚೆನ್ನಾಗಿದ್ದಾರೆ ಎಂಬ ಪ್ರಶ್ನೆಯೇ ಇಲ್ಲ. ರಾಜ್ಯದ ಜನರಿಗೆ ಅನ್ಯಾಯ ಆಗಿದೆ ಎಂದರೆ ಯಾರೇ ಇದ್ದರೂ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಪಾದಯಾತ್ರೆ ಹಿಂದೆ ಯಾವುದೇ ದುರುದ್ದೇಶ ಇಲ್ಲ, ರಾಜಕಾರಣವೂ ಇಲ್ಲ.
* ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿಯವರಿಗೇ ನಿಮ್ಮ ಪ್ರಮುಖ ಪ್ರಶ್ನೆ ಏನು?
ರಾಜಕೀಯ ಜನ್ಮಕೊಟ್ಟ ಮೈಸೂರಿನಲ್ಲಿ 1.05 ಲಕ್ಷ ಜನ ನಿವೇಶನಕ್ಕಾಗಿ ಅಲೆಯುತ್ತಿರುವಾಗ, ತಮ್ಮ ಧರ್ಮ ಪತ್ನಿಗೆ 14 ನಿವೇಶನ ಪಡೆಯಬೇಕೆನಿಸುತ್ತದೆ. ನಿರ್ಗತಿಕರು, ಬಡವರಿಗೆ ನಿವೇಶನ ಕೊಡಬೇಕೆಂದು ಅನಿಸಲಿಲ್ಲವೇ? ಇದು ಈ ನಾಡಿನ ದುರಂತ. 14 ನಿವೇಶನ ಕೊಡಬೇಕು, 62 ಕೋಟಿ ರೂ. ಬರಬೇಕಾಗಿತ್ತು, ನನಗೆ ಅನ್ಯಾಯ ಆಗಿದೆ ಎಂದು ಮುಖ್ಯಮಂತ್ರಿಯಾಗಿ ಹೇಳುತ್ತೀರಿ ಅಂತಾದರೆ ನಿಜವಾಗಿ ಅನುಭವಿ ಮುಖ್ಯಮಂತ್ರಿಗೆ ಇದು ಶೋಭೆ ತರುವುದಿಲ್ಲ. ಭಂಡತನ ಬದಿಗಿಟ್ಟು ಸಿಬಿಐ ತನಿಖೆಗೆ ಕೊಡಿ.
* ವಿವಿಧ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿಯ ಕೆಲವು ನಾಯಕರನ್ನು ಬಂಧಿಸಲು ತಯಾರಿ ನಡೆದಿದೆ. ಕಾಂಗ್ರೆಸ್ ಆಂತರಿಕವಾಗಿ ಪ್ಲಾನ್ ಮಾಡಿದೆ ಎಂಬ ಮಾತು ಕೇಳಿಬರುತ್ತಿದೆಯಲ್ಲ.
ನಮ್ಮ ಕರ್ನಾಟಕ ರಾಜಕಾರಣ ಆ ಮಟ್ಟಕ್ಕೆ ಹೋಗಿರಲಿಲ್ಲ. ಈಗ ಬಹಿರಂಗವಾಗಿಯೇ ವಿರೋಧ ಪಕ್ಷಗಳನ್ನು ಬೆದರಿಸುವ ಕುತಂತ್ರ ನಡೆಯುತ್ತಿದೆ. ನಾವು ಕೂಡ ಸವಾಲು ಸ್ವೀಕರಿಸಿದ್ದೇವೆ. 20-30 ಕೇಸ್ ಹಾಕುತ್ತೀರೋ ಹಾಕಿ. ನಿಮ್ಮ ಈ ಬೆದರಿಕೆ ತಂತ್ರದಿಂದ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಧ್ಯವಿಲ್ಲ. ನಮ್ಮನ್ನು ತಡೆಯುವ ಶಕ್ತಿ ರಾಜ್ಯ ಸರ್ಕಾರಕ್ಕಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆ, ಧ್ವನಿ ಎತ್ತುತ್ತೇವೆ.
* ಬಿಜೆಪಿ ರಾಜ್ಯಾಧ್ಯಕ್ಷರು ಒಂದು ಹೆಜ್ಜೆ ಮುಂದಿಟ್ಟರೆ ಪಕ್ಷದ ಅತೃಪ್ತ ನಾಯಕರು ಒಂಬತ್ತು ಹೆಜ್ಜೆ ಹಿಂದಿಡುತ್ತಿದ್ದಾರೆ. ಹೀಗೇಕೆ ಆಗುತ್ತಿದೆ?
ಇವತ್ತಿನ ಎಲ್ಲ ನಾಯಕರೂ ಒಗ್ಗಟ್ಟಾಗಿ ಈ ಒಂದು ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೆಜ್ಜೆ ಹಾಕುತ್ತಿದ್ದೇವೆ. ಎಲ್ಲವೂ ಸರಿ ಇರುತ್ತದೆ ಎಂದು ಹೇಳಲ್ಲ. ಸಣ್ಣಪುಟ್ಟ ಗೊಂದಲ ಇದ್ದೇ ಇರುತ್ತದೆ. ಬರುವ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ.
* ದೂರಗಾಮಿ ಲೆಕ್ಕಾಚಾರದಲ್ಲಿ ಜೆಡಿಎಸ್ ನಿಮ್ಮ ಪಕ್ಷಕ್ಕೆ ವರವೋ, ಹೊರೆಯೋ ಎಂಬ ಕುರಿತು ಜನಸಾಮಾನ್ಯರ ನಡುವೆ ಚರ್ಚೆಗಳು ಸಾಕಷ್ಟಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಲಾಭ ಆಗಿದೆಯೋ ಅದಕ್ಕಿಂತ ಹೆಚ್ಚು ಲಾಭ ಜೆಡಿಎಸ್​ಗಾಗಿದೆ. ಅದರ ಬಗ್ಗೆ ನಮಗೆ ಹಾಗೂ ಜೆಡಿಎಸ್​ಗೆ ಹೆಮ್ಮೆಯೂ ಇದೆ, ಸಂತೋಷವೂ ಇದೆ. ನಮ್ಮ ಮುಂದಿರುವ ಸದ್ಯದ ಗುರಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವುದು. ಹಾಗಾಗಿ ಮುಂದೆ ಏನಾಗುತ್ತದೆ ಎಂದು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ನಾವೀಗ ಒಗ್ಗಟ್ಟಾಗಿ ಹೋಗುತ್ತಿದ್ದೇವೆ. ರಾಜ್ಯದ ಜನರೂ ಕೂಡ ನಮ್ಮ ಒಡಂಬಡಿಕೆಯನ್ನು ಒಪ್ಪಿಕೊಂಡಿದ್ದಾರೆ.
* ಪಾದಯಾತ್ರೆ ಹೊಸ ಅನುಭವ. ಇಲ್ಲಿವರೆಗೆ ಕಲಿಸಿದ ಪಾಠವೇನು?
ಹೋರಾಟಕ್ಕೆ ಜಾತಿ ಇಲ್ಲ. ಸಮಾಜದ ಎಲ್ಲ ವರ್ಗದ ಜನ ಸಂತೋಷದಿಂದ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದೇವೆ, ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದೇವೆ, ಒಡನಾಡುತ್ತಿದ್ದಾರೆ. ಒಂದು ರೀತಿ ಹಬ್ಬದ ವಾತಾವರಣ ಇದೆ. ಹೋರಾಟ ಹೊಸ ಕಿಚ್ಚನ್ನು ರೂಢಿಸುತ್ತಿದೆ. ಹೊಸ ಹುರುಪು ನಮ್ಮ ಕಾರ್ಯಕರ್ತರಿಗೆ ತಂದುಕೊಟ್ಟಿದೆ.
* ಸಿದ್ದರಾಮಯ್ಯ ವಿರುದ್ಧ ದೀರ್ಘಾವಧಿ ಹೋರಾಟ ಮಾಡುತ್ತಿದ್ದೀರಿ, ಮಣಿಯದಿದ್ದರೆ ನಿಮ್ಮ ಮುಂದಿನ ಕಾರ್ಯತಂತ್ರವೇನು?
ಇವರು ಭಂಡರಿದ್ದಾರೆ. ನಮ್ಮ ಹೋರಾಟಕ್ಕೆ ಮಣಿದು ಬಿಡುತ್ತಾರೆ ಅನಿಸಲ್ಲ. ಆದರೆ, ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆಗಲ್ಲ. ಕಾನೂನು ಹೋರಾಟ ಇದ್ದೇ ಇದೆ.
* ನಿಮ್ಮ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಸಭೆ ಕೈಗೊಂಡಿದೆ. ಏನಿರಬಹುದು ಇದರ ಉದ್ದೇಶ?
ಇದೊಂದು ಹಾಸ್ಯಾಸ್ಪದ. ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿಯಿರುತ್ತದೆಯೋ ಪ್ರತಿಪಕ್ಷಕ್ಕೂ ಅಷ್ಟೇ ಜವಾಬ್ದಾರಿಯಿರುತ್ತದೆ. ಪ್ರತಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರವನ್ನೇ ನೀಡದ ಮುಖ್ಯಮಂತ್ರಿ ವಿರೋಧ ಪಕ್ಷಗಳನ್ನೇ ಪ್ರಶ್ನೆ ಮಾಡುತ್ತಿರುವುದು ಬಹುಶಃ ಇದೇ ಮೊಟ್ಟ ಮೊದಲ ಬಾರಿ. ಮುಖ್ಯಮಂತ್ರಿ ಆತಂಕದಲ್ಲಿದ್ದಾರೆ. ಏನಪ್ಪಾ ಇಷ್ಟು ಬೇಗ ನಮ್ಮ ಸರ್ಕಾರದ ಜನಪ್ರಿಯತೆ, ಮುಖವಾಡ ಕಳಚಿಬಿದ್ದು ಹೋಗಿದೆಯಲ್ಲ ಅನ್ನುವ ಭಯವೂ ಅವರಿಗೆ ಕಾಡುತ್ತಿದೆ.
ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​​ಗೆ ತಲುಪಿದ ವಿನೇಶ್ ಫೋಗಟ್: ಕೇಂದ್ರಕ್ಕೆ ಟಾಂಗ್ ಕೊಟ್ಟ ಸಾಕ್ಷಿ, ಬಜರಂಗ್‌ ಪೂನಿಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eight =
Remember me
