ಬೆಂಗಳೂರು:ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ ನೀಡುವ ಹಾಗೂ ಅನ್ಯ ಭಾಷೆಯ ದಾಳಿಯನ್ನು ಸಮರ್ಥವಾಗಿ ಎದುರಿಸಲು ಅವಕಾಶ ಮಾಡಿಕೊಡುವ ಕಾನೂನು ತರುವ ಪ್ರಯತ್ನ ಕೊನೆಯ ಹಂತ ತಲುಪಿದೆ. ಕಾನೂನು ಆಯೋಗದಿಂದ ‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ- 2022’ ಕರಡು ಸಿದ್ಧವಾಗಿದ್ದು, ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಕಾನೂನು ಇಲಾಖೆಯ ವಿಮರ್ಶೆ ಗೊಳಪಡಿಸುವ ಪ್ರಕ್ರಿಯೆ ನಡೆದಿದೆ. ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ, ಈ ಕಾನೂನು ತರುವ ಅನಿ ವಾರ್ಯತೆಯನ್ನು ಆರಂಭದಲ್ಲಿ ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ನಿರೀಕ್ಷೆಯಂತೆ ಪ್ರಕ್ರಿಯೆ ಮುಂದುವರಿದರೆ ಆಗಸ್ಟ್​ನಲ್ಲಿ ನಡೆಯುವ ವಿಧಾನ ಮಂಡಲದ ಮಳೆಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.
ಪ್ರಸ್ತಾವಿತ ಕಾನೂನಿನ ಸಾರಾಂಶ:ಕನ್ನಡ ಅಧಿಕೃತ ಭಾಷೆಯನ್ನು ಜಾರಿಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವನ್ನು ಅಧಿಕೃತ ಜಾರಿ ನಿರ್ದೇಶನಾಲಯವಾಗಿ ಪರಿ ಗಣಿಸಲಾಗುತ್ತದೆ. ಈ ಮೂಲಕ ಇಲಾಖೆಗಳ ನಡುವಿನ ಗೊಂದಲಕ್ಕೆ ತೆರೆ ಎಳೆಯಲಾಗುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸರ್ಕಾರ ಮುಖ್ಯಕಾರ್ಯದರ್ಶಿ, ಡಿಪಿಎಆರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯನ್ನೊಳಗೊಂಡ ರಾಜ್ಯಮಟ್ಟದ ಸಮಿತಿ ರಚನೆಯಾಗಲಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ನೇತೃತ್ವದ ಸಮಿತಿ ರೂಪುಗೊಳ್ಳಲಿದೆ. ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವ ಕುರಿತು ಪರಿಶೀಲನೆ ನಡೆಸಲು ಮತ್ತು ವರದಿ ಮಾಡಲು ಓರ್ವ ಅಧಿಕಾರಿಯನ್ನು ಸಂದರ್ಭಕ್ಕಾನುಸಾರವಾಗಿ ನೇಮಿಸಿಕೊಳ್ಳಬಹುದೆಂದು ಪ್ರಸ್ತಾವನೆ ಮಾಡಲಾಗಿದೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿಗಳು, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಇಂತಹ ಅಧಿಕಾರಿಯನ್ನು ನೇಮಿಸಲು ಅಧಿಕಾರ ನೀಡಲಾಗುತ್ತದೆ. ಜಾರಿ ಅಧಿಕಾರಿ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕೆಂಬುದನ್ನೂ ಕರಡಿನಲ್ಲಿ ವಿವರಣಾತ್ಮಕವಾಗಿ ನೀಡಲಾಗಿದೆ.
ಅನಿವಾರ್ಯತೆ ಏನಿತ್ತು?:ಸಂವಿಧಾನದ ಅನುಚ್ಚೇದ 345ರಂತೆ ರಾಜ್ಯದಲ್ಲಿ ಯಾವುದಾದರೂ ಒಂದು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಂತೆಯೇ ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆಯಾಗಿದೆ. ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕರ್ನಾಟಕ ರಾಜಭಾಷಾ ಅಧಿನಿಯಮ, 1963 ಮತ್ತು ಸ್ಥಳೀಯ ಪ್ರಾಧಿಕಾರಿಗಳು (ಅಧಿಕೃತ ಭಾಷೆ) ಅಧಿನಿಯಮ-1981 ಜಾರಿಗೆ ತಂದಿವೆ. ಎಲ್ಲ ಹಂತಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-1994 ರೂಪಿಸಲಾಗಿದೆ. ಕನ್ನಡವನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಒಂದು ಭಾಷೆಯನ್ನಾಗಿ ಕಲಿಸಲು 2015ರ ಕನ್ನಡ ಭಾಷಾ ಕಲಿಕಾ ಅಧಿನಿಯಮವಿದೆ.
ಅನುಷ್ಠಾನದಲ್ಲಿ ನಿರ್ಲಕ್ಷ್ಯ:ಹಲವು ಅಧಿನಿಯಮಗಳ ಬಳಿಕವೂ ಕನ್ನಡ ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಸಮನ್ವಯ ಕೊರತೆಯಿಂದ ಕಚೇರಿಗಳಲ್ಲಿ, ಉದ್ಯಮಗಳಲ್ಲಿ, ಅಂಗಡಿಗಳಲ್ಲಿ, ಸಂಸ್ಥೆಗಳಲ್ಲಿ ಹಾಗೂ ಇತರೆ ಸಂಸ್ಥಾಪನೆಗಳಲ್ಲಿ ಕನ್ನಡ ಭಾಷೆಯ ಬಳಕೆಯು ಸರಿಯಾಗಿ ಅನುಷ್ಠಾಗೊಂಡಿಲ್ಲ.
ಕನ್ನಡವನ್ನು ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸಲು ಸಮಗ್ರ ಕಾರ್ಯವ್ಯವಸ್ಥೆ ಇಲ್ಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಾಸನಬದ್ಧ ನಿಕಾಯವಾಗಿದ್ದರೂ ಅದಕ್ಕೆ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಎಲ್ಲ ಹಂತಗಳಲ್ಲಿ ಅನುಷ್ಠಾನ ಮಾಡುವುದನ್ನು ಖಚಿತಡಿಸಿಕೊಳ್ಳುವ ಅಧಿಕಾರವಿಲ್ಲ.
ಹೀಗಾಗಿ ರಾಜ್ಯದಲ್ಲಿ ಜಮೀನು, ತೆರಿಗೆ ವಿನಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯುತ್ತಿರುವ ಎಲ್ಲಾ ಕೈಗಾರಿಕೆಗಳು ಮತ್ತು ಇತರೆ ಕಾರ್ಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಒದಗಿಸುವುದಕ್ಕಾಗಿ ಮತ್ತು ಅಧಿನಿಯಮದ ಅನುಷ್ಠಾನದ ಮೇಲ್ವಿಚಾರಣೆ ಮಾಡಲು, ತನಿಖಾ ಅಧಿಕಾರ ಸಹಿತವಾದ ಕಾರ್ಯತಂತ್ರವೊಂದನ್ನು ಒದಗಿಸಬೇಕಾದ ಅನಿವಾರ್ಯ ಮನಗಂಡು ಕಾನೂನು ತರಲು ಪ್ರಸ್ತಾಪಿಸಲಾಗಿದೆ.
ತಯಾರಿಯಲ್ಲಿ ಪಾಲ್ಗೊಂಡವರು:ಕಾನೂನು ಆಯೋಗವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಅಪರ ಮುಖ್ಯಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ, ನಿರ್ದೇಶಕ ಪ್ರಕಾಶ ಜಿ. ನಿಟ್ಟಳ್ಳಿ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀಧರ, ವಾಣಿಜ್ಯ ಕೈಗಾರಿಕೆ ಇಲಾಖೆ ನಿರ್ದೇಶಕ ರಮೇಶ್, ಕೆಐಎಲ್​ಪಿಎಆರ್ ನಿರ್ದೇಶಕ ದ್ವಾರಕಾನಾಥ ಬಾಬು ಅವರೊಂದಿಗೆ ಸಮಾಲೋಚನೆ ನಡೆಸಿದೆ.
ಯಾವುದೇ ಖಾಸಗಿ ಉದ್ಯಮ ಅಥವಾ ಸಂಸ್ಥೆಯು ಕೈಗಾರಿಕಾ ನೀತಿ ಪ್ರಕಾರ ನಿಗದಿ ಪಡಿಸಿದ ಶೇಕಡಾವಾರು ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡದಿದ್ದರೆ ಭೂಮಿ ರಿಯಾಯಿತಿ, ತೆರಿಗೆ ವಿನಾಯಿತಿ ಅಥವಾ ತೆರಿಗೆ ಮುಂದೂಡಿಕೆ, ಸಹಾಯಧನ ಹಾಗೂ ಇತರೆ ಸೌಲಭ್ಯ ಪಡೆಯಲು ಅರ್ಹರಾಗುವುದಿಲ್ಲ ಎಂದು ಕರಡಿನಲ್ಲಿ ಉಲ್ಲೇಖಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ರಾಜ್ಯದಿಂದ ಪ್ರೋತ್ಸಾಹ ಅಥವಾ ರಿಯಾಯಿತಿಗಳನ್ನು ಪಡೆದಿರುವ ಸಂಸ್ಥೆಗಳ ವಿವರಗಳು, ಕೈಗಾರಿಕಾ ನೀತಿಯ ಪ್ರಕಾರ ಕನ್ನಡಿಗರಿಗೆ ಒದಗಿಸಲಾದ ಉದ್ಯೋಗದ ವಿವರಗಳನ್ನು ಇಲಾಖಾ ಜಾಲತಾಣದಲ್ಲಿ ನೀಡಬೇಕಾಗುತ್ತದೆ. ಅಧಿಕೃತ ಭಾಷೆಯನ್ನು ಜಾರಿಗೊಳಿಸುವ ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿಯು ಈ ಅಧಿನಿಯಮ ನಿಬಂಧನೆಗಳನ್ನು ಅನುಪಾಲನೆ ಮಾಡುವಲ್ಲಿ ವಿಫಲನಾದರೆ ಅದು ಅವನ ಕರ್ತವ್ಯ ಲೋಪ ಎಂದು ಪರಿಗಣನೆ ಮಾಡಿ, ಶಿಸ್ತು ಪ್ರಾಧಿಕಾರ ನಿರ್ಧರಿಸಬಹುದಾದ ಕ್ರಮಕ್ಕೆ ಒಳಗಾಗಬೇಕಾಗುತ್ತದೆ.
ಯಾವುದೇ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು, ಅದರ ಉಸ್ತುವಾರಿಗಳು ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾರಣ ಕೇಳಿ ನೋಟಿಸ್ ನೀಡಿದ ಏಳು ದಿನಗಳ ನಂತರ ಅಪರಾಧ ಎಂದು ಪರಿಗಣಿಸಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲನೇ ಅಪರಾಧಕ್ಕೆ 5 ಸಾವಿರ ರೂ. ವರೆಗೆ, ಎರಡನೇ ಅಪರಾಧಕ್ಕೆ 10 ಸಾವಿರ ರೂ., ನಂತರದ ಪ್ರತಿ ಅಪರಾಧಕ್ಕೆ 20 ಸಾವಿರ ರೂ ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಬಹುದು, ಪರವಾನಗಿಯನ್ನು ಸಹ ರದ್ದು ಮಾಡಲು ತೀರ್ಮಾನ ಮಾಡುವಂತಹ ಕಠಿಣ ಅಸ್ತ್ರವನ್ನು ಈ ಪ್ರಸ್ತಾವಿತ ಕಾನೂನಲ್ಲಿ ಅಡಕಗೊಳಿಸಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 12 =
Remember me
