ಇಂದು ಧೂಮಪಾನ ನಿಷೇಧ ದಿನ (ನೋ ಸ್ಮೋಕಿಂಗ್ ಡೇ). ಭಾರತದಲ್ಲಿ ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಬುಧವಾರ ಈ ದಿನ ಆಚರಿಸಲಾಗುತ್ತದೆ. ಧೂಮಪಾನವನ್ನು ತ್ಯಜಿಸಲು ಬಯಸುವವರಿಗೆ ಸಹಾಯ ಮಾಡಲು ಮತ್ತು ಧೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಧೂಮಪಾನ ನಿಷೇಧ ದಿನವನ್ನು ಆಚರಿಸಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್​ಗೆ ಪ್ರಮುಖ ಕಾರಣ ಧೂಮಪಾನ. ಆಶ್ಚರ್ಯದ ಸಂಗತಿ ಎಂದರೆ ಪ್ರತಿ ವರ್ಷ ಮಹಿಳೆಯರು ಸ್ತನ ಕ್ಯಾನ್ಸರ್​ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾಸಕೋಶದ ಕ್ಯಾನ್ಸರ್​ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತದೆ ಅಮೆರಿಕದ ಅಂಕಿ-ಅಂಶ. ಧೂಮ್ರ ಸೇವನೆಯ ದುಶ್ಚಟವನ್ನು ಬಿಡೋದು ಹೇಗೆ ಎಂಬ ಪ್ರಶ್ನೆ ಎಲ್ಲ ಧೂಮಪಾನಿಗಳದ್ದು. ಈ ಬಗ್ಗೆ ನುರಿತ ವೈದ್ಯರು ಹೇಳೋದೇನು? ವಿವರ ಇಲ್ಲಿದೆ.
ಮನಸು ಮಾಡಿ, ದಾರಿ ಸಿಗುತ್ತೆಧೂಮಪಾನ ತ್ಯಜಿಸುವುದು ಎಂದಾದರೆ ವ್ಯಸನಿಗಳು ಸ್ವತಃ ಮನಸ್ಸು ಮಾಡಬೇಕು. ಅದರ ಹೊರತಾಗಿ ಬೇರೆ ಮಾರ್ಗವಿಲ್ಲ. ಬೀಡಿ, ಸಿಗರೇಟು ಬಿಡಿಸಲು ನಮ್ಮಲ್ಲಿ ಬಹಳಷ್ಟು ಡಿ-ಅಡಿಕ್ಷನ್ ಸೆಂಟರ್​ಗಳು ಕಾರ್ಯನಿರ್ವಹಿಸುತ್ತಿವೆ. ಯಾರು ಬಿಡಬೇಕು ಎಂದು ನಿರ್ಧರಿಸುತ್ತಾರೋ ಅಂತಹವರು ಅಲ್ಲಿಗೆ ದಾಖಲಾಗಬಹುದು. ಏಕೆಂದರೆ ಧೂಮಪಾನ ದೇಹದ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನೂ ಕುಗ್ಗಿಸುತ್ತದೆ. ಹೀಗಾಗಿ ಕೆಲವರು ಬಿಡಲು ಮುಂದಾದಾಗ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಮನೋರೋಗ ತಜ್ಞರು, ಜನರಲ್ ಫಿಜಿಷಿಯನ್ ಸಲಹೆ ಅಗತ್ಯವೂ ಇರುತ್ತದೆ. ಧೂಮಪಾನ ಅಭ್ಯಾಸ ಮಾಡಿ ಕೆಲವೇ ಸಮಯದಲ್ಲಿ ಬಿಡಲು ಬಯಸಿದರೆ ಸ್ವತಃ ಅವರೇ ಬಿಡಬಹುದು. ಆದರೆ, ಬಹಳ ವರ್ಷಗಳ ಕಾಲ ಅಭ್ಯಾಸ ಇರುವವರು ಡಿ-ಅಡಿಕ್ಷನ್ ಸೆಂಟರ್​ನಲ್ಲಿ ಸೇರಿದರೆ ಒಳ್ಳೆಯದು. ನನ್ನಲ್ಲಿ ಚಿಕಿತ್ಸೆಗೆ ಬರುವ ಕ್ಯಾನ್ಸರ್ ರೋಗಿಗಳಲ್ಲಿ ಕೆಲವರು ಒಮ್ಮೆಗೆ ಬಿಟ್ಟುಬಿಡುತ್ತಾರೆ. ಆದರೆ ಶೇಕಡ 90ಕ್ಕೂ ಅಧಿಕ ಮಂದಿ ಕ್ಯಾನ್ಸರ್ 2-3 ಬಾರಿ ಮರುಕಳಿಸುತ್ತಿದ್ದರೂ ಬಿಡುವುದಿಲ್ಲ. ಆದರೆ, ಪ್ರಿವೆನ್ಷನ್ ಈಸ್ ಬೆಟರ್ ದೆನ್ ಕ್ಯೂರ್ ಎಂಬ ಮಾತಿನಂತೆ ಇಂತಹ ದುರಭ್ಯಾಸಗಳನ್ನು ಕ್ಯಾನ್ಸರ್ ಬರುವ ಮೊದಲೇ ತ್ಯಜಿಸಿದರೆ ಉತ್ತಮ.
| ಡಾ. ಅರವಿಂದ್ ಸರ್ಜಿಕಲ್ ಆಂಕಾಲಜಿಸ್ಟ್, ಎಂ.ಎಸ್. ರಾಮಯ್ಯ ಆಸ್ಪತ್ರೆ
ವಿದ್ಯಾವಂತರಲ್ಲೇ ಹೆಚ್ಚುಬೀಡಿ, ಸಿಗರೇಟ್ ಸೇರಿ ತಂಬಾಕು ಬಳಕೆ ವಿದ್ಯಾವಂತರಲ್ಲೇ ಹೆಚ್ಚಾಗಿದೆ. ಹೀಗಾಗಿ ಅರಿವಿನ ಜತೆಗೆ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣ ಕ್ರಮ ಕಟ್ಟುನಿಟ್ಟಾಗಿ ಪಾಲನೆ ಆಗಬೇಕಿದೆ. ನಮಲ್ಲಿ ತಂಬಾಕು ಉತ್ಪನ್ನಗಳ ನಿಯಂತ್ರಣ ಸಂಬಂಧ ಕಾಯ್ದೆಗಳು ಇದ್ದು, ಆವು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈಗಲೂ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮುಂದುವರಿದಿದೆ. ನೇರ ಹಾಗೂ ಪರೋಕ್ಷ ಜಾಹೀರಾತು ಮಾಡಲಾಗುತ್ತಿದೆ. ಉದಾಹರಣೆಗೆ ಚಲನಚಿತ್ರಗಳಲ್ಲಿ ಚಿತ್ರದ ನಾಯಕರು ಸಿಗರೇಟ್ ಸೇದುವ ದೃಶ್ಯ. ಇದು ಜನರನ್ನು ಧೂಮಪಾನ ಮಾಡುವಂತೆ ಪ್ರೇರೇಪಿಸುತ್ತದೆ. ಅಂಗಡಿಗಳ ಮೂಲಕ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರವಹಿಸುವ ಅಗತ್ಯವಿದೆ. ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ, ಜನರು ಉಪಯೋಗಿಸುತ್ತಿದ್ದಾರೆ. ಸದ್ಯ ಸರ್ಕಾರ ಹುಕ್ಕಾ ನಿಷೇಧಕ್ಕೆ ಕ್ರಮ ಕೈಗೊಂಡಿರುವಂತೆಯೇ ತಂಬಾಕು ಉತ್ಪನ್ನಗಳ ನಿಷೇಧವನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸಿದಲ್ಲಿ ಬಹಳಷ್ಟು ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದಾಗಿದೆ.
| ಡಾ. ಮಹಾಂತೇಶ್, ಕ್ಯಾನ್ಸರ್ ತಜ್ಞ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ
ಕಾಯಿಲೆ ಬರುವವರೆಗೆ ಕಾಯಬೇಡಿಬೀಡಿ-ಸಿಗರೇಟು ಸೇರಿ ತಂಬಾಕು ಬಳಕೆಯಿಂದ ತಲೆಯಿಂದ ಪಾದದವರೆಗೂ ಚರ್ಮ ಸೇರಿ ಎಲ್ಲ ಅಂಗಾಂಗಗಳಿಗೂ ಹಾನಿ ಕಟ್ಟಿಟ್ಟದ್ದು. ಹೀಗಾಗಿ ಅದನ್ನು ಬಿಡಲು ವ್ಯಸನಿಗಳಿಗೆ ಮನೋಸ್ಪೂರ್ತಿಯ ಅಗತ್ಯವಿದೆ. ಬಹಳಷ್ಟು ಮಂದಿ ಅಂದರೆ ಶೇಕಡ 80 ಮಂದಿ ಕಾಯಿಲೆ ಬರುವವರೆಗೂ ಎಚ್ಚೆತ್ತುಕೊಳ್ಳುವುದೇ ಇಲ್ಲ. ಇನ್ನು ಕೆಲವರು ಕುಟುಂಬದ ಒತ್ತಡದಿಂದ ಬಿಡಲು ಮನಸ್ಸು ಮಾಡುತ್ತಾರೆ. ಯಾರೇ ಆಗಲಿ ವ್ಯಸನದಿಂದ ಮುಕ್ತರಾಗಲು ಸ್ವತಃ ಮನಸ್ಸು ಮಾಡಬೇಕು. ಅಂತಹವರಿಗೆ ನಿಕೋಟಿನ್ ಅಡಿಕ್ಷನ್ ಇರುವುದರಿಂದ ಬಿಹೇವಿಯರಲ್ ಇಂಟರ್​ವೆನ್ಷನ್ (ನಡವಳಿಕೆಯ ಹಸ್ತಕ್ಷೇಪ) ಹಾಗೂ ನಿಕೋಟಿನ್ ರಿಪ್ಲೇಸ್​ವೆುಂಟ್ ಟ್ರೀಟ್​ವೆುಂಟ್ ನೀಡಲಾಗುತ್ತದೆ. ಇಂತಹ ವ್ಯಸನಿಗಳಿಗೆ ಕೆಲ ಆರೋಗ್ಯ ಸಮಸ್ಯೆಗಳೂ ಇರುತ್ತವೆ. ಅದನ್ನು ಪರೀಕ್ಷಿಸಿ ಕೆಲ ಔಷಧಗಳನ್ನು ಕೊಡಲಾಗುತ್ತದೆ. ಈ ಮೂರು ಸಂಯೋಜನೆಯೊಂದಿಗೆ ಕನಿಷ್ಠ ಮೂರು ತಿಂಗಳು ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯ ಇರುವವರಿಗೆ 6 ತಿಂಗಳು ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆ ವೇಳೆ ಕುಟುಂಬದವರ ಸಹಕಾರ ಅತ್ಯಗತ್ಯ. ಚಿಕಿತ್ಸೆಯ ನಂತರವೂ ಇವರ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಕೆಲವರು ಯಾವುದೇ ಚಿಕಿತ್ಸೆ , ಔಷಧ ಇಲ್ಲದೆಯೇ ಬಿಡುತ್ತಾರೆ. ಚಿಕಿತ್ಸೆ ಪಡೆಯಲು ಇಲ್ಲವೆ ಹಾಗೇ ಬಿಡಲು ಧೂಮಪಾನಿಗಳ ಮೇಲೆ ಕುಟುಂಬದವರು ಗಮನ ಹರಿಸಬೇಕಾಗುತ್ತದೆ. ಏಕೆಂದರೆ ಕೆಲವರು ಆರು ತಿಂಗಳು ಇಲ್ಲವೆ ಒಂದು ವರ್ಷದ ನಂತರ ಯಾವುದಾದರೂ ಕಾರಣ ನೀಡಿ ಮತ್ತೆ ಆರಂಭಿಸಿರುತ್ತಾರೆ.
| ಡಾ. ಮಲ್ಲಿಕಾರ್ಜುನ್ ಇಂಟರ್ ವೆನ್ಷನ್,  ಆಂಕೋ ಪಲ್ಮನಾಲಜಿಸ್ಟ್, ಎಚ್​ಸಿಜಿ ಕ್ಯಾನ್ಸರ್ ಆಸ್ಪತ್ರೆ
ಇನ್ನಷ್ಟು ಜಾಗೃತಿ ಅವಶ್ಯಬೀಡಿ, ಸಿಗರೇಟ್ ಮಾತ್ರವೇ ಅಲ್ಲ, ಜಗಿಯುವ ತಂಬಾಕಿನಿಂದಲೂ ಕ್ಯಾನ್ಸರ್ ಬರುತ್ತದೆ. ಹೀಗಾಗಿ ಎಲ್ಲ ರೀತಿಯ ತಂಬಾಕು ಬಳಕೆಯನ್ನು ತ್ಯಜಿಸಬೇಕು. ಧೂಮಪಾನದಿಂದ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಿದ್ದರೆ, ತಂಬಾಕು ಜಗಿಯುವುದರಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಸಿಗರೇಟ್ ಪ್ಯಾಕ್ ಮೇಲೆ ಕ್ಯಾನ್ಸರ್ ಭೀಕರತೆಯ ಚಿತ್ರಗಳನ್ನು ಪ್ರಕಟಿಸಲಾಗುತ್ತಿದೆ. ಆದಾಗಿಯೂ ಜನರು ಬಳಕೆ ಮಾಡುತ್ತಾರೆ. ಜಗಿಯುವ ತಂಬಾಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಹೀಗಾಗಿ ಮಹಿಳೆಯರು ಎಲೆಯಡಿಕೆ ಜತೆಗೆ ತಂಬಾಕು ಬಳಕೆ ಮಾಡುತ್ತಿದ್ದು, ಬಾಯಿ ಕ್ಯಾನ್ಸರ್​ಗೆ ಒಳಗಾಗುತ್ತಿದ್ದಾರೆ. ಯುವ ಜನರಾದರೂ ಈ ಬಗ್ಗೆ ಜಾಗೃತರಾಗಬೇಕು. ಪಾಲಕರು ಸಹ ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿಹೇಳಬೇಕು. ಬೀಡಿ, ಸಿಗರೇಟ್ ಸೇದುವವರು ಮಾತ್ರವಲ್ಲ, ಅದರಿಂದ ಹೊರಹೊಮ್ಮುವ ಹೊಗೆಯನ್ನು ಸೇವಿಸುವವರೂ ಕ್ಯಾನ್ಸರ್​ಗೆ ಒಳಗಾಗುವ ಸಾಧ್ಯತೆ ಇದೆ. ಇದನ್ನು ‘ಸೆಕೆಂಡ್ ಹ್ಯಾಂಡ್ ಸ್ಮೋಕ್’ ಎಂದು ಕರೆಯಲಾಗುತ್ತದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಆದರೂ ಕೆಲವೆಡೆ ಬಳಕೆ ಮಾಡುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಸರ್ಕಾರ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
| ಡಾ. ಸಿ. ರಾಮಚಂದ್ರ, ಕ್ಯಾನ್ಸರ್ ರೋಗ ತಜ್ಞ
ಮುಂಬರುವ ಟಿ-20 ವಿಶ್ವಕಪ್​ನಿಂದ ವಿರಾಟ್​ ಕೊಹ್ಲಿಗೆ ಕೊಕ್​; ಕಾರಣ ಹೀಗಿದೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
