ಬೆಂಗಳೂರು: ವಿಶ್ವಾದ್ಯಂತ ವೇಗವಾಗಿ ವ್ಯಾಪಿಸಿ, ಈವರೆಗೆ ಹತ್ತು ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಕರೊನಾ ವೈರಸ್ ನಿಯಂತ್ರಿಸುವ ಸಂಕಲ್ಪದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಭಾನುವಾರ ಇಡೀ ದೇಶ ಸ್ತಬ್ಧವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 9ರ ವರೆಗೆ ಮನೆಯಲ್ಲೇ ಇರುವ ಮೂಲಕ ಕರೊನಾ ವಿರುದ್ಧದ ಸಮರಕ್ಕೆ ಸಹಕಾರ ನೀಡುವುದು ನಾಗರಿಕರ ಜವಾಬ್ದಾರಿ ಕೂಡ ಹೌದು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆ ಸ್ಥಗಿತವಾಗಲಿದೆ.
ಭಾರತದಲ್ಲಿ ಸದ್ಯ 2ನೇ ಹಂತದಲ್ಲಿರುವ ಕರೊನಾ ವೈರಸ್ 3ನೇ ಹಂತ ತಲುಪಿದರೆ ಸಾಂಕ್ರಾಮಿಕ ರೋಗವಾಗಿ ಪರಿಣಮಿಸುತ್ತದೆ. ನಂತರ ನಿಯಂತ್ರಣ ಕಷ್ಟಸಾಧ್ಯ. ಹೀಗಾಗಿ ಕರೊನಾ ನಿಯಂತ್ರಣದ ನಿಟ್ಟಿನಲ್ಲಿ ಪ್ರಧಾನಿ ನೀಡಿರುವ ‘ಜನತಾ ಕರ್ಫ್ಯೂ’ ಕರೆಗೆ ದೇಶದ ಜನತೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೈಗಾರಿಕಾ ಕ್ಷೇತ್ರ, ಐಟಿ-ಬಿಟಿ ಕಂಪನಿಗಳು, ಹೋಟೆಲ್, ಶಾಪಿಂಗ್ ಮಾಲ್​ಗಳು, ಕಿರಾಣಿ ಅಂಗಡಿಗಳು, ಎಪಿಎಂಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಚಿನ್ನಾಭರಣ ಮಳಿಗೆಗಳು ಸ್ಥಗಿತಗೊಳ್ಳಲಿವೆ. ಭಾನುವಾರ ಮಧ್ಯರಾತ್ರಿವರೆಗೂ ದೇಶಾದ್ಯಂತದ 1300 ರೈಲುಗಳ ಸೇವೆ ಬಂದ್ ಆಗಲಿದೆ. ಬೆಂಗಳೂರು, ನವದೆಹಲಿ, ಮುಂಬೈ ಸೇರಿ ಪ್ರಮುಖ ಮಹಾನಗರಗಳಲ್ಲಿ ಮೆಟ್ರೋ ರೈಲುಗಳ ಸಂಚಾರ ಸ್ಥಗಿತವಾಗಲಿದೆ. ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ಈಗಾಗಲೇ ವರ್ಕ್ ಫ್ರಂ ಹೋಂ ವ್ಯವಸ್ಥೆ ಕಲ್ಪಿಸಿವೆ. ಭಾನುವಾರ ರಜೆ ದಿನವಾಗಿದ್ದು, ಯಾರೂ ಹೊರಬರುವುದಿಲ್ಲ. ಉಳಿದಂತೆ ಆರೋಗ್ಯ ಸಂಬಂಧಿ ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ ಇಡೀ ದೇಶ ಬಹುತೇಕ ಸ್ತಬ್ಧವಾಗಲಿದೆ.
ಜನತಾ ಕರ್ಫ್ಯೂ ಏಕೆ?
ಜನತಾ ಕರ್ಫ್ಯೂ ಎಂದರೆ ಜನರು ತಮಗೆ ತಾವೇ ಕರ್ಫ್ಯೂ ವಿಧಿಸಿಕೊಳ್ಳು ವುದು. ಸ್ವಯಂಪ್ರೇರಿತವಾಗಿ ಮನೆಯಲ್ಲಿ ಉಳಿಯುವುದು. ಇದರಿಂದ ಜನರ ಸಂಚಾರ ಸಂಪೂರ್ಣ ಸ್ತಬ್ಧವಾಗಿ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಎಲ್ಲರೂ ಮನೆಯಲ್ಲಿಯೇ ಉಳಿದಾಗ ಸೋಂಕಿತರ ಸಂಪರ್ಕ ತಪು್ಪತ್ತದೆ. ಈ ವೇಳೆ ವಿದೇಶ ಪ್ರಯಾಣ ಮಾಡಿ ಬಂದವರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದವರು, ರೋಗ ಲಕ್ಷಣಗಳು ಕಾಣಿಸಿಕೊಂಡವರು ಸ್ವತಃ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ನಂತರ ಇವರೆಲ್ಲರೂ ಮನೆ ಹಾಗೂ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾಗೆ ಒಳಗಾಗುತ್ತಾರೆ. ಇದರಿಂದ ಸಾರ್ವಜನಿಕವಾಗಿ ಸೋಂಕಿತರ ಸಂಚಾರ ಇಲ್ಲದೆ ಸೋಂಕು ಹರಡುವ ಚೈನ್ ಲಿಂಕ್ ಸ್ಥಗಿತ ಆಗಲಿದೆ. ಸೋಮವಾರದಿಂದ ಒಂದು ವಾರ ಕಾಲ ಅಂತಾ ರಾಷ್ಟ್ರೀಯ ವಿಮಾನ ಹಾರಾಟವನ್ನು ಸಂಪೂರ್ಣ ಬಂದ್ ಮಾಡಿರುವುದರಿಂದ ಹೊರಗಿನಿಂದ ಸೋಂಕಿತರು ಬರಲು ಅವಕಾಶ ಇಲ್ಲ. ಸದ್ಯ ಭಾರತ ಕರೊನಾ ವೈರಸ್ ಹರಡುವಿಕೆಯಲ್ಲಿ 2ನೇ ಹಂತದಲ್ಲಿದೆ. ಅದು 3ನೇ ಹಂತ ತಲುಪದಂತೆ ಮಾಡಲು ‘ಜನತಾ ಕರ್ಫ್ಯೂ’ ಪರಿಣಾಮಕಾರಿ.
ಏನಿರಲ್ಲ?
ಭಾನುವಾರ ಮಧ್ಯರಾತ್ರಿವರೆಗೂ ದೇಶಾದ್ಯಂತ 1300 ರೈಲು ಸೇವೆ ರದ್ದು
ಬೆಂಗಳೂರು, ಮುಂಬೈ, ದೆಹಲಿ ಸೇರಿ ಎಲ್ಲ ಕಡೆ ಮೆಟ್ರೋ ರೈಲು ಸಂಚಾರ ಸ್ಥಗಿತ
ಕರ್ನಾಟಕದಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ರದ್ದು
ಹೋಟೆಲ್, ಶಾಪಿಂಗ್ ಮಾಲ್, ಥಿಯೇಟರ್, ಪಬ್, ಕ್ಲಬ್​ಗಳು ಬಾಗಿಲು ತೆರೆಯಲ್ಲ
ಬೇಕರಿ, ಜ್ಯೂಸ್ ಅಂಗಡಿ, ಟೀ ಅಂಗಡಿ, ಚಾಟ್ಸ್ ಅಂಗಡಿ, ಕಿರಾಣಿ ಅಂಗಡಿ ಬಂದ್
ಬೆಂಗಳೂರಲ್ಲಿ ಇಂದಿರಾ ಕ್ಯಾಂಟೀನ್, ಕೇಟರಿಂಗ್ ಸೇವೆ, ಮಾಂಸ ಮಾರಾಟ ಸ್ಥಗಿತ
ಬಾರ್ ಆಂಡ್ ರೆಸ್ಟೋರೆಂಟ್, ವೈನ್
ಶಾಪ್​ಗಳು ಇಡೀ ದಿನ ಬಂದ್ ಆಗಲಿವೆ
ಎಪಿಎಂಸಿ ಮಾರುಕಟ್ಟೆ, ಕಲಾಸಿಪಾಳ್ಯ, ಮಲ್ಲೇಶ್ವರ ಮಾರುಕಟ್ಟೆಗಳ ವಹಿವಾಟು ಸ್ಟಾಪ್
ರಾಜ್ಯಾದ್ಯಂತ ಎಲ್ಲ ಆಭರಣ ಮಳಿಗೆಗಳು, ದೇವಾಲಯಗಳ ಬಾಗಿಲು ತೆಗೆಯುವುದಿಲ್ಲ
ಆಟೋ ರಿಕ್ಷಾ, ಟ್ಯಾಕ್ಸಿ, ಓಲಾ, ಉಬರ್, ಲಾರಿ, ಮ್ಯಾಕ್ಸಿ ಕ್ಯಾಬ್​ಗಳ ಸಂಚಾರ ಸ್ತಬ್ಧ
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ
ಗೋ ಏರ್​ನ ಎಲ್ಲ ವಿಮಾನಯಾನ ರದ್ದು, ಇಂಡಿಗೋ ಶೇ.60 ದೇಶೀ ವಿಮಾನ ಹಾರಾಟ
ಮುಂಬೈ, ಕೋಲ್ಕತಾ, ದೆಹಲಿ ಮತ್ತು ಚೆನ್ನೈ ಸಬರ್ಬನ್ ರೈಲು ಸೇವೆಯಲ್ಲಿ ಕಡಿತ
ಏನಿರುತ್ತೆ?
ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಎಂದಿನಂತೆ
ಮೆಡಿಕಲ್ ಶಾಪ್​ಗಳು, ತುರ್ತು ಸೇವೆಗೆ ಆಂಬುಲೆನ್ಸ್ ಸೇವೆ ಲಭ್ಯ
ಪೆಟ್ರೋಲ್ ಬಂಕ್​ಗಳು ತೆರೆದಿರುತ್ತವೆ, ಹಾಲು ಮತ್ತು ದಿನಪತ್ರಿಕೆ ಸಿಗಲಿದೆ
ಜನರೇನು ಮಾಡಬೇಕು?
ತುರ್ತ ಅಗತ್ಯ ಹೊರತುಪಡಿಸಿ ಇಡೀ ದಿನ ಮನೆಯಿಂದ ಹೊರಬರಬೇಡಿ
ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗುವ ಕಾರ್ಯಕ್ರಮ ಇಟ್ಟುಕೊಳ್ಳಬೇಡಿ, ಊರಿಗೆ ಹೋಗುವ ಯೋಚನೆಯಿದ್ದರೆ ಒಂದು ದಿನದ ಮಟ್ಟಿಗೆ ಮುಂದೂಡಿ
ಟಿವಿ ನೋಡುವುದು, ಪುಸ್ತಕ/ಪತ್ರಿಕೆ ಓದುವುದು, ಧ್ಯಾನ ಇತ್ಯಾದಿ ಚಟುವಟಿಕೆಯಲ್ಲಿ ಸಮಯ ಕಳೆಯಿರಿ
ಹೋಟೆಲ್​ನಲ್ಲಿ ಊಟ ಸಿಗುವುದಿಲ್ಲ. ಹೀಗಾಗಿ ಮನೆಯಲ್ಲೇ ಊಟ ತಯಾರಿಸಿ
ಏನು ಮಾಡಬಾರದು?
ರಸ್ತೆಗಳಲ್ಲಿ ಸುಮ್ಮನೆ ಓಡಾಡುವುದು, ವಾಹನಗಳಲ್ಲಿ ತಿರುಗಾಡುವುದು, ರಸ್ತೆಗಳಲ್ಲಿ ಗುಂಪುಗೂಡುವುದು ಬೇಡ
ಬಲವಂತವಾಗಿ ಅಂಗಡಿ ಮುಂಗಟ್ಟು ತೆರೆಸುವುದು, ಮುಚ್ಚಿಸುವುದು ಮಾಡಬೇಡಿ, ಸ್ವಯಂಪ್ರೇರಿತ ಕರ್ಫ್ಯೂ ಆದ್ದರಿಂದ ಯಾರಿಗೂ ಬಲವಂತಪಡಿಸಬೇಡಿ
ಅನಗತ್ಯವಾಗಿ ಹೊರಬಂದ್ರೆ ಶಿಸ್ತುಕ್ರಮ
ಸಮಾಜದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಜನತಾ ಕರ್ಫ್ಯೂಗೆ ಸಹಕರಿಸಬೇಕು. ಇದನ್ನು ಲಘುವಾಗಿ ಪರಿಗಣಿಸಿ, ಅನವಶ್ಯಕವಾಗಿ ನಗರದಲ್ಲಿ ಸುತ್ತಾಡುವುದು ಕಂಡುಬಂದರೆ ಕರ್ನಾಟಕ ಪೊಲೀಸ್ ಕಾಯ್ದೆ 31 (ಎಲ್) ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಎಚ್ಚರಿಕೆ ಕೊಟ್ಟಿದ್ದಾರೆ. ಹೊರಗೆ ಬರುವ ವ್ಯಕ್ತಿಯನ್ನು ಸಾರ್ವಜನಿಕರಿಗೆ ತೊಂದರೆ ಕೊಟ್ಟ ಆರೋಪದಲ್ಲಿ ಠಾಣೆಗೆ ಕರೆದೊಯ್ದು ಸಂಜೆವರೆಗೆ ಅಲ್ಲೇ ಕೂರಿಸಿ ಕೊನೆಗೆ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸಲು ಕಾಯ್ದೆಯಲ್ಲಿ ಅವಕಾಶವಿದೆ.
ಕರೊನಾ ವೈರಸ್ ತಡೆ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಎಲ್ಲರೂ ಬೆಂಬಲ ನೀಡೋಣ. ನಿಮ್ಮೆಲ್ಲರ ಬೆಂಬಲ ಅತಿ ಅಗತ್ಯವಾಗಿದೆ. ಕರ್ಫ್ಯೂ ಅವಧಿ ಮುಗಿದ ನಂತರ ಎಲ್ಲರೂ ಮನೆ ಹೊರಗಡೆ ಬಂದು ಸಂಭ್ರಮಿಸುವುದಾಗಲೀ, ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸುವುದಾಗಲೀ ಮಾಡಬೇಡಿ.
| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
ಮುನಿರತ್ನ ಚುನಾವಣಾ ಹಾದಿ ಸುಗಮ?: ಆಯ್ಕೆ ಅಸಿಂಧು ಕೋರಿದ್ದ ಮಧ್ಯಂತರ ಮನವಿ ವಜಾ ಮಾಡಿದ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
