ಧಾರ್ವಿುಕ ಹಾಗೂ ಪೌರಾಣಿಕ ಹಿನ್ನೆಲೆ ಇರುವ ಕೃಷ್ಣೆಯ ಬಗ್ಗೆ ಅರಿತು ಆಕೆಗೆ ಸಾಂಸ್ಕೃತಿಕ ಹಾಗೂ ಧಾರ್ವಿುಕ ವೈಭವವನ್ನು ನೀಡುವಲ್ಲಿ ನಾವು ಕೊಂಚ ಎಡವಿದ್ದೇವೆ. ಆಕೆಗೆ ಕನಿಷ್ಠ ವರ್ಷಕ್ಕೊಂದು ಬಾರಿ ಕೃಷ್ಣಾರತಿ ಮಾಡಬೇಕೆಂದು ನಮಗೆ ಇಲ್ಲಿಯವರೆಗೂ ಅನಿಸಿರಲಿಲ್ಲ! ಆಕೆಯ ಮಡಿಲಿನಲ್ಲಿ ಹಸಿರಿನ ಸಮೃದ್ಧಿ ಪಡೆದು ಅತ್ಯುತ್ತಮ ಜೀವನ ಕಟ್ಟಿಕೊಂಡ ನಾವೆಲ್ಲರೂ ಸೇರಿ ನದಿ ಪೂಜೆಯೋ ಅಥವಾ ದಕ್ಷಿಣದವರು ಕಾವೇರಿ-ಶರಾವತಿಗೆ ಮಾಡಿದ ಹಾಗೆ ತೆಪ್ಪೋತ್ಸವ ಮಾಡಬೇಕೆಂಬ ಸಣ್ಣ ಕಲ್ಪನೆಯೂ ನಮ್ಮ ಮನಸ್ಸಿನಲ್ಲಿ ಸುಳಿಯಲಿಲ್ಲ.
| ಸಂಗಮೇಶ ಆರ್. ನಿರಾಣಿ
ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಕೃಷ್ಣರಾಜಸಾಗರಕ್ಕೆ ಭೇಟಿ ನೀಡಿದ ವೇಳೆ ‘ಕಾವೇರಿ ನದಿಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ’ ನೆರವೇರಿಸಲು ತೀರ್ವನಿಸಿರುವುದು ಸ್ವಾಗತಾರ್ಹವಾಗಿದೆ. ಸರ್ಕಾರವೇ ಕಾವೇರಿ ಜಲಭಾಗ್ಯ ನಿಗಮ ಹಾಗೂ ಧಾರ್ವಿುಕ ದತ್ತಿ ಇಲಾಖೆ ಜಂಟಿಯಾಗಿ ಕಾರ್ಯಕ್ರಮ ರೂಪಿಸುವುದು ಹಾಗೂ ಈ ಕುರಿತು ಅಧ್ಯಯನ ನಡೆಸಲು ವಾರಣಾಸಿಗೆ ತೆರಳಲು ನಿಯೋಗ ಕಳುಹಿಸುವ ಕುರಿತು ಘೊಷಣೆ ಮಾಡಿದ್ದಾರೆ. ಆದರೆ ಕಾವೇರಿಯ ಜತೆಗೆ ಕೃಷ್ಣೆಗೂ ಆರತಿ ನಡೆಯಲಿ ಎಂಬುದು ಉತ್ತರ ಕರ್ನಾಟಕದ ಜನತೆಯ ಆಶಯವಾಗಿದೆ. ಕರ್ನಾಟಕದ ಮಟ್ಟಿಗೆ ಕಾವೇರಿ ದಕ್ಷಿಣದ ಗಂಗೆಯಾದರೆ, ಕೃಷ್ಣೆ ಉತ್ತರದ ಗಂಗೆಯಾಗಿದ್ದಾಳೆ. ಇಬ್ಬರಿಗೂ ಸಮಾನ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಇಂತಹ ಹೊಸತನದ ಪ್ರಯತ್ನಕ್ಕೊಂದು ಅರ್ಥ ಬರುತ್ತದೆ.
ಈ ಹಿಂದೆ ಬಿಜೆಪಿ ಸರ್ಕಾರ ಹರಿಹರದಲ್ಲಿ ತುಂಗಭದ್ರೆಯ ದಂಡೆಯಲ್ಲಿ ಗಂಗಾ ತಟದ ಮಾದರಿಯಲ್ಲಿ ಮಂಟಪಗಳು ಹಾಗೂ ಸ್ನಾನಘಟ್ಟಗಳನ್ನು ನಿರ್ವಿುಸಿ ತುಂಗಾರತಿ ಮಾಡುವುದಾಗಿ ಘೊಷಿಸಿತ್ತು. ಇತ್ತೀಚೆಗೆ ಡಿ.ಕೆ. ಶಿವಕುಮಾರ್ ‘ಕಾವೇರಿ ಆರತಿ’ ಬಗ್ಗೆ ಘೊಷಣೆ ಮಾಡಿದ್ದಾರೆ. ಆದರೆ ತುಂಗೆ, ಕಾವೇರಿಯಂತೆ ಕೃಷ್ಣೆಯ ವಿಷಯದಲ್ಲಿ ಧಾರ್ವಿುಕ ಹಾಗೂ ಸಾಮಾಜಿಕ ಕಳಕಳಿ ವ್ಯಕ್ತವಾಗದಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ.
ನದಿಯ ಬಗೆಗಿನ ಧಾರ್ವಿುಕ ಅಂತಃಪ್ರಜ್ಞೆ ಹಾಗೂ ಭಕ್ತಿಭಾವ ಭಾರತೀಯರಾದ ನಮ್ಮ ನರನಾಡಿಗಳಲ್ಲಿದೆ. ಭಗವಾನ್ ವೇದವ್ಯಾಸರು ‘ನದಿ ವಿಶ್ವಸ್ಯ ಮಾತರಂ’ ಎಂದಿದ್ದಾರೆ. ಉಪನಿಷತ್ತು ಕೂಡ ‘ನದಿ ರಾಷ್ಟ್ರಸ್ಯಃ ಮಹಾ ಅಮೃತಂ’ ಎಂದು ಹೇಳಿದೆ. ನಮ್ಮ ಪೂರ್ವಜರು ಭೂಮಿ, ನಿಸರ್ಗ ಹಾಗೂ ನೀರಿನ ಜತೆಗೆ ತಾಯಿ ಮಗುವಿನ ಸಂಬಂಧ ಹೊಂದಿದ್ದರು. ಈ ಭಾವನೆಯ ಪುಷ್ಟೀಕರಣಕ್ಕಾಗಿ ಹಾಗೂ ಮುಂದಿನ ಪೀಳಿಗೆಗೆ ಈ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುವುದಕ್ಕಾಗಿ ಇಂತಹ ಧಾರ್ವಿುಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಆದರೆ ಇಲ್ಲಿ ತಾರತಮ್ಯ ಅಥವಾ ಅಭಿಮಾನ ಶೂನ್ಯತೆ ಆವರಿಸಿದಾಗ ಮಾತ್ರ ಸಮುದಾಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಕಾವೇರಿಯಂತೆ ಕೃಷ್ಣೆಯೂ ಕರ್ನಾಟಕದ ಜೀವನದಿ. ಸಾಂಸ್ಕೃತಿಕ ಹಿನ್ನೆಲೆ, ಜಲಸಂಪನ್ಮೂಲ, ನೀರಾವರಿ ಬಳಕೆ ಎಲ್ಲದರಲ್ಲೂ ಕೃಷ್ಣೆಯು ಕಾವೇರಿಗಿಂತ ಹಿರಿದಾಗಿದ್ದಾಳೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟ, ವಿಜಯಪುರ, ಯಾದಗಿರಿ, ರಾಯಚೂರ, ಕಲಬುರಗಿ ಜಿಲ್ಲೆಗಳ ಪಾಲಿಗೆ ಕೃಷ್ಣೆ ಜೀವ ಹಾಗೂ ಜೀವನ ಎಲ್ಲವೂ ಆಗಿದ್ದಾಳೆ. ಆದರೆ ಇಲ್ಲಿಯವರೆಗೂ ಸರ್ಕಾರ ಹಾಗೂ ಸಾರ್ವಜನಿಕ ಎರಡೂ ವಲಯದಲ್ಲೂ ಕೃಷ್ಣೆಗೆ ದೊರೆಯಬೇಕಾದ ಸಾಂಸ್ಕೃತಿಕ, ಧಾರ್ವಿುಕ ಪ್ರಾತಿನಿಧ್ಯ ಇಂದಿಗೂ ದೊರೆತಿಲ್ಲ. ಸರ್ಕಾರದ ಯೋಜನೆ ಅನುಷ್ಠ್ಠಾನದ ವಿಷಯದಲ್ಲೂ ಕಾವೇರಿ ಕೊಳ್ಳಕ್ಕಿರುವ ಗಂಭೀರತೆ ಕೃಷ್ಣೆಯ ವಿಷಯದಲ್ಲಿ ಇಂದಿಗೂ ಬರದಿರುವುದು ವಿಷಾದನೀಯ ಸಂಗತಿಯಾಗಿದೆ.
ಕೃಷ್ಣೆಯ ಧಾರ್ವಿುಕ ಹಿನ್ನೆಲೆ:ಸ್ಕಂದ ಪುರಾಣದ ಭಾಗವಾದ ಶ್ರೀ ಕೃಷ್ಣವೇಣಿ ಮಹಾತ್ಮೆ ಕೃಷ್ಣಾ ನದಿಯ ಜನ್ಮದ ರೋಚಕತೆಗಳನ್ನು ತೆರದಿಡುತ್ತದೆ. ಈ ಪೌರಾಣಿಕ ಹಿನ್ನೆಲೆಯಂತೆ ವಿಷ್ಣುವು ಸ್ತ್ರೀರೂಪ ತಾಳಿ ತನ್ನ ದೇಹದಿಂದ ಕೃಷ್ಣಾ ನದಿಯನ್ನು ಸಹ್ಯಾದ್ರಿ ಪರ್ವತದ ಮಡಿಲಿನಲ್ಲಿ ಸೃಷ್ಟಿಸಿದ್ದಾನೆ. ಜನರು ಕೃಷ್ಣಾ ನದಿಯನ್ನು ಧ್ಯಾನಿಸುವುದು, ರ್ಸ³ಸುವುದು, ಕುಡಿಯುವುದು, ಸ್ನಾನ ಮಾಡುವುದು ಮತ್ತು ಅದರ ಸ್ತುತಿಯನ್ನು ಹಾಡುವುದರಿಂದ ತಮ್ಮ ಎಲ್ಲಾ ಪಾಪಗಳಿಂದ ವಿಮುಕ್ತಿ ಹೊಂದುತ್ತಾರೆ ಮತ್ತು ಉನ್ನತ ಸ್ಥಿತಿಯನ್ನು ಪಡೆಯುತ್ತಾರೆ ಎಂಬ ಪ್ರತೀತಿ ಇದೆ.
ಭಗವಾನ್ ವಿಷ್ಣುವು ಕೃಷ್ಣೆಯಾಗಿ ಕಲ್ಪವೃಕ್ಷ ಮತ್ತು ಕಾಮಧೇನು ನಂತರ ಸ್ವರ್ಗದ ಇಷ್ಟಾರ್ಥಗಳನ್ನು ಪೂರೈಸುವ ಮತ್ತು ಮೋಕ್ಷ ಸೇರಿದಂತೆ ಎಲ್ಲವನ್ನು ನೀಡುವ ನದಿಯ ರೂಪವಾಗಿ ಭೂಲೋಕದಲ್ಲಿ ಅವತರಿಸಿದ್ದಾನೆ. ಒಮ್ಮೆ ಶ್ರೀ ಸುಬ್ರಹ್ಮಣ್ಯ ದೇವರು ಋಷಿಗಳೊಂದಿಗೆ ಶಿವನ ದರ್ಶನಕ್ಕಾಗಿ ಕೈಲಾಸಕ್ಕೆ ಬಂದರು. ಪುರಾಣಗಳಿಂದ ಸುತ್ತುವರಿದ ಆರು ಭಾಗಗಳೊಂದಿಗೆ (ಷಡಂಗಗಳು) ಅವರು ವೇದದ ವ್ಯಕ್ತಿತ್ವದಂತೆ ಗೋಚರಿಸತೊಡಗಿದರು. ಸುಬ್ರಮಣ್ಯರು ಪರಮೇಶ್ವರನನ್ನು ಕೃಷ್ಣಾ ನದಿಯ ಹಿರಿಮೆಯನ್ನು ತಿಳಿಸಿಕೊಡಲು ಮನವಿ ಮಾಡಿದಾಗ ಪರಶಿವನು ವಿಷ್ಣುವಿನ ಪಾದಗಳನ್ನು ಒಮ್ಮೆ ಮಾತ್ರ ರ್ಸ³ಸಿದ ಗಂಗೆಯು ಮಾನವನಿಗೆ ಕೇವಲ ಆಲೋಚನೆ ಮಾತ್ರದಿಂದಲೇ ಮೋಕ್ಷವನ್ನು ನೀಡಬಲ್ಲಳಾದರೆ, ಕೃಷ್ಣೆ ನಿಜವಾಗಿಯೂ ವಿಷ್ಣುವಿನ ದೇಹ. ಹೀಗಾಗಿ ಕೃಷ್ಣೆಯ ವ್ಯಕ್ತಿತ್ವವು ಎಲ್ಲರಿಗಿಂತ ಹಿರಿದಾಗಿದೆ ಎಂದು ಕೃಷ್ಣೆಯ ಮಹಿಮೆಯನ್ನು ಪರಶಿವ ಕೇವಲ ಒಂದೇ ವಾಕ್ಯದಲ್ಲಿ ವಿವರಿಸುತ್ತಾನೆ.
ದೂರವಾಗಲಿ ಅಭಿಮಾನ ಶೂನ್ಯತೆ: ಇಷ್ಟು ದೊಡ್ಡ ಧಾರ್ವಿುಕ ಹಾಗೂ ಪೌರಾಣಿಕ ಹಿನ್ನೆಲೆ ಇರುವ ಕೃಷ್ಣೆಯ ಬಗ್ಗೆ ಅರಿತು ಆಕೆಗೆ ಸಾಂಸ್ಕೃತಿಕ ಹಾಗೂ ಧಾರ್ವಿುಕ ವೈಭವವನ್ನು ನೀಡುವಲ್ಲಿ ನಾವು ಕೊಂಚ ಎಡವಿದ್ದೇವೆ. ಆಕೆಗೆ ಕನಿಷ್ಠ ವರ್ಷಕ್ಕೊಂದು ಬಾರಿ ಕೃಷ್ಣಾರತಿ ಮಾಡಬೇಕೆಂದು ನಮಗೆ ಇಲ್ಲಿಯವರೆಗೂ ಅನಿಸಿರಲಿಲ್ಲ! ಆಕೆಯ ಮಡಿಲಿನಲ್ಲಿ ಹಸಿರಿನ ಸಮೃದ್ಧಿ ಪಡೆದು ಅತ್ಯುತ್ತಮ ಜೀವನ ಕಟ್ಟಿಕೊಂಡ ನಾವೆಲ್ಲರೂ ಸೇರಿ ನದಿ ಪೂಜೆಯೋ ಅಥವಾ ದಕ್ಷಿಣದವರು ಕಾವೇರಿ-ಶರಾವತಿಗೆ ಮಾಡಿದ ಹಾಗೆ ತೆಪ್ಪೋತ್ಸವ ಮಾಡಬೇಕೆಂಬ ಸಣ್ಣ ಕಲ್ಪನೆಯೂ ನಮ್ಮ ಮನಸ್ಸಿನಲ್ಲಿ ಸುಳಿಯದಿರುವುದು ಬೇಸರದ ಸಂಗತಿ.
ಕೇವಲ ಧಾರ್ವಿುಕ ಪೂಜೆ- ಪುನಸ್ಕಾರ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ಕಲೆ, ಸಾಹಿತ್ಯಿಕವಾಗಿ ಕೃಷ್ಣೆಯನ್ನು ಸ್ತುತಿಸುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ನಮ್ಮ ಪಕ್ಕದಲ್ಲಿಯೇ ಇರುವ ಮಂಡ್ಯ-ಮೈಸೂರು ಜನ ಕಾವೇರಿಯನ್ನು ನಾಡಿನ ಜೀವನದಿ ಎಂದು ಕರೆದರು. ಶರಾವತಿ ಕನ್ನಡ ನಾಡಿನ ಭಾಗೀರಥಿಯಾದಳು. ಅಷ್ಟೇ ಏಕೆ, ಕಾವೇರಿ, ಶರಾವತಿ ಜತೆಗೆ ತುಂಗೆ-ಭದ್ರೆಯರ ಕುರಿತು ಸಿನಿಮಾ ಹಾಡುಗಳು, ನೃತ್ಯಗಳು ರಚಿತವಾದವು. ಹಿರಿಯ ಕಲಾವಿದರ ಬಾಯಲ್ಲಿ ಈ ನದಿಗಳ ವೈಭವ ನಲಿದಾಡಿತು. ಆದರೆ ಇದೇ ಪ್ರಾಮುಖ್ಯತೆ ಕೃಷ್ಣೆಗೇಕೆ ದೊರಕಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಇನ್ನಾದರೂ ಕೃಷ್ಣೆಯ ಇತಿಹಾಸವನ್ನು ಅರಿತು ಆಕೆಗೆ ಈ ನಾಡಿನಿಂದ ಧಾರ್ವಿುಕ ಹಿರಿತನದ ಪ್ರಾಶಸ್ತ್ಯ ನೀಡಬೇಕಿದೆ.
ಸಾಮಾಜಿಕ ನ್ಯಾಯದಲ್ಲೂ ಹಿಂದೆ:ಇದರಿಂದಾಗಿ ಸಾಮಾಜಿಕ ನ್ಯಾಯ ಪಡೆಯುವಲ್ಲಿಯೂ ನಾವು ಕುಗ್ಗಿ ಹೋದೆವು. ಕಾವೇರಿ ಜಲಾನಯನ ಪ್ರದೇಶದ ಯೋಜನೆಗಳು ಅಲ್ಲಿಯ ಜನರಿಗೆ ಅಸ್ಮಿತೆಯ ಸಂಕೇತವಾದರೆ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ಜಲಾನಯನ ಪ್ರದೇಶದ ಯೋಜನೆಗಳು ಕೇವಲ ರಾಜಕೀಯ ಪ್ರಚಾರಕ್ಕಷ್ಟೇ ಸೀಮಿತವಾದವು. ಹೀಗಾಗಿ ನಮ್ಮ ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆಗಳು ಇಂದಿಗೂ ಪೂರ್ಣಗೊಂಡಿಲ್ಲ.
ತಮಿಳುನಾಡಿನ ಜನ ಕುಡಿಯಲು ಕಾವೇರಿಯ ನೀರನ್ನು ಕೇಳಿದರೆ ಹಳೆ ಮೈಸೂರು ಭಾಗದ ಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ. ದಶಕಗಳಿಂದ ಕೃಷ್ಣೆಯ ಸಾವಿರಾರು ಟಿಎಂಸಿ ನೀರು ಆಂಧ್ರ- ತೆಲಂಗಾಣದ ಪಾಲಾದರೂ ನಮ್ಮ ಜನ ಗಾಢ ನಿದ್ರೆಯಲ್ಲಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಗಳು ಪೂರ್ಣಗೊಂಡರೆ ಉತ್ತರದ ಬಹುಪಾಲು ಜಿಲ್ಲೆಗಳ ಭೂಮಿ ಹಸಿರಿನಿಂದ ಕಂಗೊಳಿಸುತ್ತದೆ. ಯೋಜನೆಯನ್ನು ಘೊಷಿಸಿದಾಗ ಇದ್ದ ಯೋಜನಾ ವೆಚ್ಚ ಇಂದು ಹತ್ತು ಪಟ್ಟು ಅಧಿಕವಾಗಿದೆ. ಒಂದು ಲಕ್ಷ ಕೋಟಿ ರೂ. ಮೀರಿದೆ. ಆದರೂ ನಮ್ಮ ಸರ್ಕಾರಗಳಿಗೆ ಭದ್ರಾ ಮೇಲ್ದಂಡೆ ಯೋಜನೆ, ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಮೇಲೆ ಇರುವ ಮಮಕಾರ ಕೃಷ್ಣೆಯ ಮೇಲೆ ಹುಟ್ಟುತ್ತಿಲ್ಲ!
ಕಾವೇರಿಯ ಮೇಲೆ ಮೈಸೂರು ಮಹಾರಾಜರಿಗೆ ವಿಶೇಷ ಅಕ್ಕರೆಯಿತ್ತು. ತುಂಗಭದ್ರೆಯ ದಡದಲ್ಲಿ ವೈಭವದ ವಿಜಯನಗರ ಸಾಮ್ರಾಜ್ಯ ನಿರ್ವಣವಾಗಿತ್ತು. ಹೀಗಾಗಿ ವಿಜಯನಗರದ ಅರಸರು ತುಂಗಭದ್ರೆಯನ್ನು ದೈವವಾಗಿ ಕಂಡರು. ನಮ್ಮ ಕೃಷ್ಣೆಗೆ ಮೈಸೂರು ಮಹಾರಾಜರೂ ಸಿಗಲಿಲ್ಲ, ವಿಜಯನಗರದ ವೈಭವವೂ ದೊರಕಲಿಲ್ಲ. ಹೀಗಾಗಿ ಕೃಷ್ಣೆಯ ದೈವತ್ವ, ಪೂಜ್ಯತೆ, ಸಮೃದ್ಧತೆ, ವಿಶಾಲತೆ ನಮ್ಮ ಜನಕ್ಕೆ ಅರ್ಥವಾಗದೆ ಉಳಿದು ಹೋಗಿದೆ.
ಕೃಷ್ಣೆ ಮಾತ್ರವಲ್ಲ, ಕಾವೇರಿಯೂ ಬಗೆಗೂ ನಮ್ಮ ಅಭಿಮಾನ ಗಟ್ಟಿಯಾಗಿದೆ. ಆದರೆ ನಮ್ಮ ಜೀವನದ ಅವಿಭಾಜ್ಯ ಅಂಗ ಕೃಷ್ಣೆಗೂ ಪ್ರಾಧಾನ್ಯತೆ ದೊರೆಯಲಿ, ಆಕೆಗೂ ಕಾವೇರಿಗೆ ದೊರೆಯುವ ಪ್ರಾಶಸ್ಱ ದೊರೆಯಬೇಕು ಎಂಬುದು ಮಾತ್ರ ನಮ್ಮ ಆಗ್ರಹವಾಗಿದೆ.
ಕೃಷ್ಣೆ ದಕ್ಷಿಣ ಭಾರತದ ಎರಡನೇ ಅತಿದೊಡ್ಡ ನದಿ. ಧಾರ್ವಿುಕವಾಗಿ ಹಾಗೂ ಸಾಮಾಜಿಕವಾಗಿ ಕೃಷ್ಣೆಯ ಕೊಡುಗೆ ಕರ್ನಾಟಕಕ್ಕೆ ಅಪೂರ್ವವಾಗಿದೆ. ಆಕೆಯ ಮಡಿಲು ಸಹ ಕರ್ನಾಟಕದಲ್ಲಿ ಅನೇಕ ಪುಣ್ಯಕ್ಷೇತ್ರಗಳನ್ನು ಸೃಷ್ಟಿಸಿದೆ. ಹುಟ್ಟಿದ್ದು ಮಹಾರಾಷ್ಟ›ವಾದರೂ ಆಕೆಯ ಗರಿಷ್ಠ ಹರಿವು ಹಾಗೂ ಪ್ರಯೋಜನ ಉತ್ತರ ಕರ್ನಾಟಕಕ್ಕಿದೆ. ಆದರೂ ಅಪಾರ ಜಲಸಂಪನ್ಮೂಲದ ಸಂಪೂರ್ಣ ಸದ್ಬಳಕೆ ಇಂದಿಗೂ ನಮಗೆ ಸಾಧ್ಯವಾಗಿಲ್ಲ. ಈಗ ಸರ್ಕಾರ ಸಾಂಸ್ಕೃತಿಕವಾಗಿಯೂ ಪ್ರಾಧಾನ್ಯತೆ ನೀಡದಿದ್ದ ಪಕ್ಷದಲ್ಲಿ ಉತ್ತರ ಕರ್ನಾಟಕದವರಾದ ನಮ್ಮ ಪಾಲಿಗೆ ನಿಜಕ್ಕೂ ಇದು ತಾರತಮ್ಯ ಧೋರಣೆಯೇ ಆಗುತ್ತದೆ. ಉತ್ತರದ ಬಗೆಗಿನ ತಾರತಮ್ಯಕ್ಕೆ ಈ ವಿಷಯವು ಹೊಸದೊಂದು ಉದಾಹರಣೆ ಸೃಷ್ಟಿಯಾಗಲು ಸರ್ಕಾರವೇ ಆಸ್ಪದ ಕೊಟ್ಟ ಹಾಗೆ ಆಗುತ್ತದೆ. ಈ ತಾರತಮ್ಯಕ್ಕೆ ಅವಕಾಶ ನೀಡದೆ ಕೃಷ್ಣೆ ಹಾಗೂ ಕಾವೇರಿ ಇಬ್ಬರಿಗೂ ಭವ್ಯವಾದ ಆರತಿ ಮಾಡುವ ಮೂಲಕ ಇಬ್ಬರು ತಾಯಂದಿರಿಗೂ ಸಮಾನ ಗೌರವ ನೀಡಬೇಕಾಗಿದೆ.
(ಲೇಖಕರು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು)

ಮೈಸೂರು: ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರ ಗುರು ಹೃದಯಘಾತದಿಂದ ನಿಧನ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 12 =
Remember me
