ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೆದಿದೆ. ಎಲ್ಲರಲ್ಲಿಯೂ ಸಂತೋಷದ ಮಂದಹಾಸ. ಮನೆ-ಮನೆಗಳಲ್ಲಿ ಹಬ್ಬದ ವಾತಾವರಣ. ಇಡೀ ಅಯೋಧ್ಯಾಪಟ್ಟಣವೇ ಪಟ್ಟಾಭಿಷೇಕದ ಸಂಭ್ರಮದಲ್ಲಿ ಇದೆ. ಆದರೆ ದೈವಪ್ರೇರಣೆಯಂತೆ ಮಂಥರೆಯ ಮಾತಿನಿಂದ ಪ್ರೇರಿತಳಾದ ಕೈಕೇಯೀ ರಾಮನ ವನವಾಸಕ್ಕೆ ಪಟ್ಟುಹಿಡಿಯುತ್ತಾಳೆ. ಕೊಟ್ಟ ಮಾತಿಗೆ ತಪ್ಪಿ ನಡೆಯಲು ಆಗದೇ ದಶರಥ ಬಹಳ ದುಃಖಿತನಾಗಿ ಧರಾಶಾಯಿಯಾಗುತ್ತಾನೆ. ಪಟ್ಟಾಭಿಷೇಕ ನಿಂತುಹೋಗಿದ್ದರೂ ಅದರಿಂದ ಸ್ವಲ್ಪವೂ ವಿಚಲಿತನಾಗದ ಶ್ರೀರಾಮ ತಂದೆಯ ಮಾತನ್ನು ಪರಿಪಾಲಿಸುವುದಕ್ಕಾಗಿ ವನವಾಸಕ್ಕೆ ತೆರಳಲು ಸಿದ್ಧನಾಗುತ್ತಾನೆ. ಅನುಜ್ಞೆ ಪಡೆಯಲು ತಾಯಿ ಕೌಸಲ್ಯೆಯ ಬಳಿ ಹೋದಾಗ ಅಲ್ಲಿ ಲಕ್ಷ್ಮಣ ಹೇಳುವ ಮಾತು ನಿಜಕ್ಕೂ ರೋಮಾಂಚನಕಾರಿಯಾಗಿದೆ-
ನಾಸ್ಯಾಪರಾಧಂ ಪಶ್ಯಾಮಿ ನಾಪಿ ದೋಷಂ ತಥಾವಿಧಮ್ |
ನ ತಂ ಪಶ್ಯಾಮ್ಯಹಂ ಲೋಕೇ ಪರೋಕ್ಷಮಪಿ ಯೋ ನರಃ
ಸ್ವಮಿತ್ರೋಪಿ ನಿರಸ್ತೋಪಿ ಯೋಸ್ಯ ದೋಷಮುದಾಹರೇತ್ ||
‘ಶ್ರೀರಾಮ ಕಾಡಿಗೆ ಹೋಗುವಷ್ಟು ಯಾವ ಅಪರಾಧವನ್ನೂ ಮಾಡಿಲ್ಲ. ಅಷ್ಟೇಕೆ ಅವನಲ್ಲಿ ಯಾವ ದೋಷವೂ ಇಲ್ಲ. ಎಷ್ಟರಮಟ್ಟಿಗೆ ರಾಮ ನಿದೋಷಿ ಎಂದರೆ, ಶತ್ರುಗಳೇ ಇರಬಹುದು ಅಥವಾ ಮಾಡಿದ ತಪ್ಪಿಗೆ ರಾಮನಿಂದ ತಿರಸ್ಕೃತನಾದ ವ್ಯಕ್ತಿಯೇ ಇರಬಹುದು. ಅಂತಹ ವ್ಯಕ್ತಿಯೂ ರಾಮನ ಎದುರು ಅಲ್ಲ ಪರೋಕ್ಷವಾಗಿಯೂ (ದೂರದ ಏಕಾಂತದಲ್ಲಿ ಮಾತನಾಡುವಾಗಲೂ) ರಾಮನಲ್ಲಿ ಇಂತಹ ಒಂದು ದೋಷವಿದೆ ಎಂದು ಹೇಳುವುದಿಲ್ಲ. ರಾಮನಲ್ಲಿ ದೋಷ ಕಾಣುವವನು, ಹೇಳುವವನು ಅಂತಹವರನ್ನು ನಾನು ನೋಡಿಲ್ಲ’.
ಇದು ಶ್ರೀರಾಮಚಂದ್ರನ ನೈಜವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಸತ್ಯಮಾತು.
ಜೀವನದಲ್ಲಿ ಅಪರಾಧಗಳು ನಡೆಯುವುದು ಸಹಜ. ಮನುಷ್ಯ ಎಂದಮೇಲೆ ದೋಷಗಳಿರುವುದು ಕೂಡ ಸಹಜ. ನಮ್ಮ ಅಪರಾಧದಿಂದ ಅಥವಾ ನಮ್ಮ ಅಜ್ಞಾನ-ಅಹಂಕಾರ ಮುಂತಾದ ದೋಷಗಳಿಂದ ಅನೇಕರಿಗೆ ತೊಂದರೆಯಾಗಬಹುದು. ನಮ್ಮ ಎದುರಿನಲ್ಲಿಯೇ ನಮ್ಮ ದೋಷಗಳನ್ನು ಹೇಳುವವರಿರುತ್ತಾರೆ. ಅಥವಾ ದೊಡ್ಡ ಅಧಿಕಾರವೋ, ಭಾರೀ ಶ್ರೀಮಂತಿಕೆಯೋ, ಬಹಳ ಜನಬೆಂಬಲವೋ ಇದ್ದಾಗ ಅದಕ್ಕೆ ಹೆದರಿ ನಮ್ಮ ಎದುರಿನಲ್ಲಿ ನಮ್ಮ ದೋಷಗಳನ್ನು ಹೇಳಿ ಜನ ನಿಂದಿಸದಿರಬಹುದು. ಆದರೆ ಹತ್ತು ಜನರೆದುರು ಮಾತನಾಡುವಾಗ, ಏಕಾಂತದಲ್ಲಿ ಇರುವಾಗ ನಮ್ಮನ್ನು ನಿಂದಿಸದೇ ಇರಲಾರರು. ಆದರೆ ರಾಮನ ಎದುರಿನಲ್ಲಿ ಅಲ್ಲ, ಏಕಾಂತದಲ್ಲಿಯೂ ರಾಮನ ಬಗ್ಗೆ ದೋಷಭಾವನೆ ತಳೆಯುವವರು ಯಾರೂ ಇರಲಿಲ್ಲ ಎಂದರೆ ರಾಮನ ನಿದೋಷತ್ವ, ರಾಮನ ವ್ಯಕ್ತಿತ್ವ ಹೇಗಿರಬೇಕು? ಯೋಚಿಸಿ!
ಶ್ರೀರಾಮ ನಮ್ಮಂತೆ ಮನುಷ್ಯನಲ್ಲ, ಅವನು ದೇವೋತ್ತಮ ನಿಜ. ಆದರೆ ಮನುಷ್ಯನಾಗಿ ಹುಟ್ಟಿದಾಗ ಒಬ್ಬ ಮನುಷ್ಯ ಹೇಗೆ ಬದುಕಬೇಕು? ಮನುಷ್ಯನ ವ್ಯಕ್ತಿತ್ವ ಹೇಗಿರಬೇಕು? ಇದನ್ನು ತಾನು ಪಾಲಿಸಿ ತೋರಿಸಿದ. ನಮ್ಮ ವ್ಯವಹಾರಗಳು, ನಮ್ಮ ಮಾತುಗಳು ಯಾವ ರೀತಿ ಇರಬೇಕು? ಅದನ್ನು ರಾಮ ನಮಗೆ ತೋರಿಸಿಕೊಟ್ಟಿದ್ದಾನೆ. ರಾಮನ ಈ ವ್ಯಕ್ತಿತ್ವ ನಮ್ಮೆಲ್ಲರಿಗೂ ನಿಜವಾದ ಆದರ್ಶ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಬೇಕಷ್ಟೇ. ಆಗಲೇ, ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು, ದೋಷರಹಿತರಾಗಲು ಸಾಧ್ಯ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
