ಬೆಂಗಳೂರು:ರಾಜ್ಯದಲ್ಲಿ ಕೂಡಲೇ ಡೆಂಘೆ ತುರ್ತು ಪರಿಸ್ಥಿತಿ ಘೋಷಿಸಿ, ಜನರಿಗೆ ಉಚಿತವಾಗಿ ಸರ್ಕಾರದಿಂದಲೇ ಪರೀಕ್ಷೆ ಮಾಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.
ಆರ್‌.ಅಶೋಕ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಡೆಂಘೆ ರೋಗಿಗಳನ್ನು ಭೇಟಿ ಮಾಡಿ, ಸೌಲಭ್ಯ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ರೋಗ ಹೀಗೆ ಹರಡುವಾಗ ಸರ್ಕಾರ ಪ್ರತಿ ತಾಲೂಕಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಿ ಔಷಧಿ ಪೂರೈಸುವ, ರೋಗ ನಿಯಂತ್ರಿಸುವ ಕ್ರಮಗಳನ್ನು ವಹಿಸಬೇಕಿತ್ತು. ಇವ್ಯಾವುದನ್ನೂ ಸರ್ಕಾರ ಮಾಡಿಲ್ಲ.
ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಡೆಂಘೆ ಕಾಯಿಲೆಗೆ ಒಳಗಾಗಿದ್ದಾರೆ. ಇವರಿಗೆ ಪರೀಕ್ಷೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ತೈಲ ದರ ಏರಿಕೆ ಸೇರಿದಂತೆ ವಿವಿಧ ತೆರಿಗೆಗಳನ್ನು ಸರ್ಕಾರ ಹಾಕಿರುವಾಗ ಜನರಿಗೆ ಉಚಿತ ಪರೀಕ್ಷೆ ಮಾಡಿಸಲು ಸಾಧ್ಯವಿಲ್ಲವೇ? ಎಂದು ಆರ್.ಅಶೋಕ್ ಪ್ರಶ್ನಿಸಿದರು.
ಉಚಿತ ಪರೀಕ್ಷೆ ಮಾಡಿದರೆ ಸುಮಾರು 10 ಕೋಟಿ ರೂ. ಖರ್ಚಾಗಬಹುದು. ಅಷ್ಟು ಹಣವನ್ನು ಮಂಜೂರು ಮಾಡಲು ಸಾಧ್ಯವೇ ಇಲ್ಲವೇ? ಅದಕ್ಕೂ ತೆರಿಗೆ ಹಾಕಬೇಕೆ? ಕೆಲ ಆರೋಗ್ಯ ಕೇಂದ್ರಗಳು 1,000 ರೂ.ವರೆಗೂ ಪರೀಕ್ಷಾ ಶುಲ್ಕ ವಿಧಿಸುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಡೆಂಘೆ ರೋಗ ವೇಗವಾಗಿ ಹರಡುತ್ತಿದ್ದು, ಪ್ರತಿ ದಿನ ಮೂರರಿಂದ ನಾಲ್ಕು ಜನರು ಸಾವಿಗೀಡಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲ ಭಾಗಗಳಲ್ಲಿ ಜನರು ಭಯಕ್ಕೊಳಗಾದರೂ ಸರ್ಕಾರಕ್ಕೆ ಇದರ ಭಯ ಬಂದಿಲ್ಲ. 100 ಮಾದರಿ ಪರೀಕ್ಷೆ ಮಾಡಿದರೆ 13-14 ರಲ್ಲಿ ಡೆಂಘೆ ಲಕ್ಷಣ ಕಂಡುಬರುತ್ತಿದೆ.
ಬೇರೆ ರೋಗಗಳಿರುವ ವ್ಯಕ್ತಿಗಳಿಗೆ ಡೆಂಘೆ ಬಂದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲೆಡೆ ಕಸದ ರಾಶಿ ಇದೆ, ಮಳೆಯಿಂದಾಗಿ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದೆ. ಆದರೂ ಸರ್ಕಾರ ಏನೂ ಕ್ರಮ ವಹಿಸಿಲ್ಲ ಎಂದು ದೂರಿದರು.
ಅತಿ ಸಣ್ಣ ವಯಸ್ಸಿನ ಮಕ್ಕಳಿಗೂ ಡೆಂಘೆ ರೋಗ ಬರುತ್ತಿದೆ. ಅಧಿಕಾರಿಗಳು ಕೊಠಡಿ ಬಿಟ್ಟು ಹೊರಗೆ ಬರುತ್ತಿಲ್ಲ. ಸರ್ಕಾರ ಡೆಂಘೀ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರೆ ಮಾತ್ರ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಬೆಂಗಳೂರು ಸೇರಿದಂತೆ ಅನೇಕ ಕಡೆ ಕಸದ ರಾಶಿ ಬಿದ್ದಿದೆ. ಅದನ್ನು ಸ್ವಚ್ಛ ಮಾಡಲು ಸರ್ಕಾರ ಗಮನಹರಿಸಬೇಕು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರನ್ನು ಬಳಸಿಕೊಂಡು ಮನೆ ಮನೆಗೆ ಹೋಗಿ ಪರೀಕ್ಷೆ ಮಾಡಬೇಕು. ಪ್ರತಿ ಆಸ್ಪತ್ರೆಯಲ್ಲಿ ಡೆಂಘೆಗೆ ಒಂದು ವಾರ್ಡ್‌ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಜನರಲ್ಲಿ ಡೆಂಘೆ ಬಗ್ಗೆ ಉಂಟಾಗಿರುವ ಆತಂಕವನ್ನು ನಿವಾರಿಸಲು ಸರ್ಕಾರ ಜಾಗೃತಿ ಮೂಡಿಸಬೇಕು. ಉದ್ಯಾನ, ಸಾರ್ವಜನಿಕ ಸ್ಥಳ, ನೀರು ನಿಲ್ಲುವ ಸ್ಥಳ ಸೇರಿದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಸಬೇಕು. ಆರೋಗ್ಯ ಸಚಿವರು ಎಲ್ಲ ಜಿಲ್ಲೆಗಳಿಗೆ ಹೋಗಿ ಜನರನ್ನು ಭೇಟಿ ಮಾಡಬೇಕು. ಕಾಂಗ್ರೆಸ್‌ನ ಎಲ್ಲ ಸಚಿವರು, ಶಾಸಕರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಜನರಿಗೆ ಧೈರ್ಯ ಹೇಳಬೇಕು ಎಂದು ಸಲಹೆ ನೀಡಿದರು.
ಇದರ ಜತೆಗೆ ಝೀಕಾ, ಕಾಲರಾ ಕೂಡ ಕಂಡುಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲೇ ಜನರು ಕಲುಷಿತ ನೀರು ಕುಡಿದು ಸತ್ತಿದ್ದಾರೆ. ಈ ಮೂರು ರೋಗಗಳಿಂದ ಜನರನ್ನು ಕಾಪಾಡಲು ಸರ್ಕಾರ ಹೆಚ್ಚು ಗಮನಹರಿಸಬೇಕು.
ಬಿಬಿಎಂಪಿ ಆಯುಕ್ತರಿಗೇ ಸೊಳ್ಳೆ ಕಚ್ಚಿ ಡೆಂಘೆ ಬಂದಿರುವಾಗ ಬಿಬಿಎಂಪಿ ಬೇರೆಯವರನ್ನು ಕಾಪಾಡಲು ಸಾಧ್ಯವಿಲ್ಲ ಎಂಬ ಆತಂಕ ಜನರಲ್ಲಿ ಮೂಡಿದೆ. ಸಭೆ ಮಾಡುವುದರಿಂದ ಏನೂ ಆಗುವುದಿಲ್ಲ.
ಅಧಿಕಾರಿಗಳು ಸ್ಥಳಕ್ಕೆ ಹೋಗಿ ಕೆಲಸ ಮಾಡಬೇಕು. ನಗರದಲ್ಲಿ ಬಿದ್ದಿರುವ ರಾಶಿ ಕಸವನ್ನು ವಿಲೇವಾರಿ ಮಾಡಲು ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಬೇಕು. ಹೆಚ್ಚು ಹಣ ನೀಡಬೇಕು ಎಂದು ಆರ್.ಅಶೋಕ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
