‘ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ರಾಜಧಾನಿ’ಯೆಂದೇ ಜನಜನಿತವಾಗಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಕಳೆದ ಭಾನುವಾರ ಧೋಲ್​ಪುರದ ಭರತ್ ಎಂಬ ಮತ್ತೊಬ್ಬ ವಿದ್ಯಾರ್ಥಿ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಈತ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್) ಸಿದ್ಧತೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಸ್ಥಳದಲ್ಲಿ ಸಿಕ್ಕಿರುವ ಡೆತ್​ನೋಟ್​ನಲ್ಲಿ ‘ಕ್ಷಮಿಸು ಪಪ್ಪಾ, ಈ ಸಲವೂ ನಾನು ಪಾಸಾಗಲಾರೆ’ ಎಂಬ ಬರಹ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾಸು ಮಾಡುವ ವಿಷಯದಲ್ಲಿ ವಿದ್ಯಾರ್ಥಿಗಳ ಮೇಲೆ ಎಷ್ಟರಮಟ್ಟಿಗಿನ ಒತ್ತಡ ಇರಬಹುದು ಎಂಬುದಕ್ಕೆ ಈ ಡೆತ್​ನೋಟ್ ನಿದರ್ಶನವಾಗಿದೆ. ಕೋಟಾದಲ್ಲಿ 2017ರಿಂದಲೂ ವಿದ್ಯಾರ್ಥಿಗಳ ಆತ್ಮಹತ್ಯೆಗಳು ವರದಿಯಾಗುತ್ತಲೇ ಇವೆ. 2022ರಲ್ಲಿ 15 ವಿದ್ಯಾರ್ಥಿಗಳು ಬಲಿಯಾಗಿದ್ದರೆ, 2023ರಲ್ಲಿ 26 ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದರು. ಈ ವರ್ಷ ಇದುವರೆಗೆ 10 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ, ಬಹುತೇಕ ಎಲ್ಲ ಪ್ರಕರಣಗಳಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಕೆಯ ಭಯವೇ ಕಾರಣವಾಗಿದೆ.
ಅಧ್ಯಯನ ಕೇಂದ್ರಗಳ ಅಥವಾ ಪಾಲಕರ ಒತ್ತಡ ತಡೆಯಲಾಗದೇ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಒಂದು ಅಂದಾಜಿನ ಪ್ರಕಾರ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶಕ್ಕೆ ಸಂಬಂಧಿಸಿದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ನೀಟ್ ಪರೀಕ್ಷೆಯ ಸಿದ್ಧತೆಗಾಗಿ ಪ್ರತಿ ವರ್ಷ ಕೋಟಾ ನಗರಕ್ಕೆ 2 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ದೇಶದ ವಿವಿಧೆಡೆಯಿಂದ ಬರುತ್ತಾರೆ. ಅಲ್ಲಿನ ತರಬೇತಿ ಕೇಂದ್ರಗಳಲ್ಲಿ ಪ್ರವೇಶ ಪಡೆದು, ದೊಡ್ಡ ಸಂಖ್ಯೆಯಲ್ಲಿ ಸ್ಥಾಪನೆಯಾಗಿರುವ ಹಾಸ್ಟೆಲ್​ಗಳಲ್ಲಿ ಹಲವು ತಿಂಗಳುಗಳ ಕಾಲ, ಕೆಲವೊಮ್ಮೆ ವರ್ಷದುದ್ದಕ್ಕೂ ಏಕಾಂಗಿಯಾಗಿ ಅಥವಾ ಅಪರಿಚಿತ ವಿದ್ಯಾರ್ಥಿಗಳ ಜತೆ ರೂಮ್ ಶೇರ್ ಮಾಡಿಕೊಂಡು ವಾಸ ಮಾಡುತ್ತಾರೆ.
ಒಂದೆಡೆ ಹೋಮ್ ಸಿಕ್​ನೆಸ್. ಮತ್ತೊಂದೆಡೆ, ಈ ಮಕ್ಕಳ ಮೇಲೆ ಪಾಲಕರ ನಿರೀಕ್ಷೆಯ ಭಾರ. ಜೊತೆಗೆ, ತರಬೇತಿ ಕೇಂದ್ರಗಳ ಪಾಠ-ಪ್ರವಚನದ ಶೆಡ್ಯೂಲ್​ಗಳು ಸಿಕ್ಕಾಪಟ್ಟೆ ಬಿಗಿಯಾಗಿರುತ್ತವೆ. ಒಂದೆರಡು ಗಂಟೆಗಳನ್ನೂ ರಿಲ್ಯಾಕ್ಸ್ ಆಗಿ ಕಳೆಯುವ ಸ್ಥಿತಿ ಇರುವುದಿಲ್ಲ. ಇನ್ನಷ್ಟು, ಮತ್ತಷ್ಟು ಚೆನ್ನಾಗಿ ಓದಬೇಕು, ಇತರ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಒತ್ತಡ ನಿರಂತರವಾಗಿರುತ್ತದೆ. ಈ ಮನಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸುವವರು ಕೆಲವರಾದರೆ, ಸೋತು ಆತ್ಮಹತ್ಯೆಗೆ ಶರಣಾಗುವವರು ಕೆಲವರು. ಇದೊಂದು ಗಂಭೀರ ಸಮಸ್ಯೆ. ಈ ಸಮಸ್ಯೆಯ ಬಗ್ಗೆ ಸ್ಥಳೀಯ ಕೋಚಿಂಗ್ ಸೆಂಟರ್​ಗಳು ಕಣ್ಮುಚ್ಚಿ ಕುಳಿತಿವೆ ಎಂದೇನೂ ಅಲ್ಲ. ಮಕ್ಕಳಲ್ಲಿ ಧೈರ್ಯ ತುಂಬುವ ಕಾರ್ಯಕ್ರಮಗಳನ್ನು ಅವು ಮಾಡಿವೆ. ಆದರೆ ಅದರ ಪ್ರಮಾಣ ಸಾಲದು. ರಾಜಸ್ಥಾನ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಟ್ಟಿಗೇ ಸೇರಿ ಈ ಸಮಸ್ಯೆಯ ಮೂಲವನ್ನು ಅರಿತು, ಇದಕ್ಕೊಂದು ಪರಿಹಾರವನ್ನು ತುರ್ತಾಗಿ ಕಂಡುಹಿಡಿಯುವ ಅವಶ್ಯಕತೆ ಇದೆ.
ಕಾಂಗ್ರೆಸ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪ್ರಚಾರದಲ್ಲಿ ಭಾಗವಹಿಸದಂತೆ ಮಾಜಿ ಸಿಎಂ ಕೆಸಿಆರ್​ಗೆ ನಿಷೇಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 18 =
Remember me
