ಆತನೊಬ್ಬ ಪದವೀಧರ ಯುವಕ. ಎಲ್​ಎಲ್​ಬಿ ಮುಗಿಸಿ ವಕೀಲಿ ವೃತ್ತಿ ಶುರು ಮಾಡಿದ್ದ. ನಾಲ್ಕೇ ವರ್ಷಗಳಲ್ಲಿ ಒಳ್ಳೆಯ ಹೆಸರನ್ನೂ ಹಣವನ್ನೂ ಸಂಪಾದಿಸಿದ್ದ. ನೋಡಲು ಸುಂದರ. ಇವನಿಗೆ ವಯಸ್ಸು 30 ಆಗುತ್ತಿದ್ದಂತೆ ಸಹಜವಾಗಿಯೇ ಹೆತ್ತವರು ಅವನ ಮದುವೆಯ ಪ್ರಸ್ತಾಪ ಮಾಡಲು ಶುರು ಮಾಡಿದರು. ಅಂತೆಯೇ ಯಾರೋ ಪರಿಚಯದವರು ಸೂಚಿಸಿದ ಕನ್ಯೆ ನೋಡಲು ಹೋದರು. ಹುಡುಗಿ ನೋಡಲು ಚೆಲುವೆ, ಜೊತೆಗೆ ಪದವೀಧರೆ. ಮರುಮಾತಿಲ್ಲದೆ ಹುಡುಗ ಹುಡುಗಿಯನ್ನು ಒಪ್ಪಿಕೊಂಡ. ಅವಳೂ ಇವನನ್ನು ಒಪ್ಪಿಕೊಂಡಳು. ಇನ್ನೇನು ನಿಶ್ಚಿತಾರ್ಥ ನಡೆಯಬೇಕಿತ್ತು. ಅಷ್ಟರಲ್ಲಿ ಹುಡುಗಿಯ ತಾಯಿ ಹುಡುಗನ ಕಡೆಯವರಿಗೆ ‘ಹುಡುಗನ ತಿಂಗಳ ಆದಾಯವೆಷ್ಟು?’ ಎಂದಳು. ಇದು ಮುಜುಗರವೆನಿಸುವ ಪ್ರಶ್ನೆಯಾದರೂ ಆ ಪ್ರಶ್ನೆಗೆ ಹುಡುಗನೇ ಉತ್ತರಿಸಿದ. ‘ನನ್ನದು ವಕೀಲಿ ವೃತ್ತಿ. ಈ ವೃತ್ತಿಯಲ್ಲಿ ಆದಾಯದಲ್ಲಿ ಏರುಪೇರು ಸಹಜ. ಆದುದರಿಂದ ಪ್ರತಿ ತಿಂಗಳ ಆದಾಯ ಇಷ್ಟೆಂದು ನಿಖರವಾಗಿ ಹೇಳುವುದು ಕಷ್ಟ. ಆದರೂ ನನ್ನ ಪ್ರಾಕ್ಟೀಸು ಚೆನ್ನಾಗಿದೆ; ಓಡಾಡಲು ಒಂದು ಕಾರು ಇದೆ; ವಾಸವಾಗಿರಲು ಸ್ವಂತ ಮನೆ ಇದೆ. ಹಿರಿಯರಿಂದ ಬಂದ ಸ್ವಲ್ಪ ಜಮೀನು ಕೂಡ ಇದೆ. ನೆಮ್ಮದಿಯ ಜೀವನಕ್ಕೆ ತೊಂದರೆ ಇಲ್ಲ.’ ಇಷ್ಟು ಹೇಳಿದರೂ ಹುಡುಗಿಯ ತಾಯಿಗೆ ಸಮಾಧಾನವಾಗಲಿಲ್ಲ. ಆಕೆ ಆದಾಯದ ಮೊತ್ತವನ್ನು ನಿಖರವಾಗಿ ಹೇಳುವಂತೆ ಪಟ್ಟು ಹಿಡಿದಳು. ಇದು ಹುಡುಗನಿಗೆ ಸಾಧ್ಯವಾಗದ ಹಾಗೂ ಮೆಚ್ಚುಗೆಯಾಗದ ಕಾರಣ ಮದುವೆಯು ಮುರಿದುಬಿತ್ತು.
ಕೆಲವು ತಿಂಗಳ ನಂತರ ಆ ಹುಡುಗಿಯ ಹೆತ್ತವರು ಮಗಳಿಗೆ ಇನ್ನೊಬ್ಬ ವರನನ್ನು ಹುಡುಕಿ ಅವನ ಜತೆ ಮದುವೆ ಆಯೋಜಿಸಿದರು. ಆ ಮದುವೆಗೆ ಈ ವಕೀಲ ಹುಡುಗನೂ ಹೋಗಿದ್ದ. ಮದುವೆ ಸಮಾರಂಭದಲ್ಲಿ ಇವನನ್ನು ನೋಡಿ ಹುಡುಗಿಯ ಕಡೆಯವರಿಗೆ ಸ್ವಲ್ಪ ಅಚ್ಚರಿಯೂ ಕಸಿವಿಸಿಯೂ ಆಯಿತು. ಇವನೇಕೆ ಇಲ್ಲಿಗೆ ಬಂದ? ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು. ಆದರೂ ಹೇಗೆ ಕೇಳುವುದು? ಕೊನೆಗೂ ಹುಡುಗಿಯ ತಾಯಿ ವಕೀಲ ಹುಡುಗನನ್ನು ಕೇಳಿಯೇ ಬಿಟ್ಟಳು : ‘ನೀವು ಹೇಗೆ ಇಲ್ಲಿ?’ ಉತ್ತರವಾಗಿ ನಸುನಗುತ್ತಾ ಹುಡುಗ ಹೇಳಿದ: ‘ನಾನು ನಿಮ್ಮ ಮಗಳನ್ನು ಮದುವೆಯಾಗುತ್ತಿರುವ ಹುಡುಗನ ಕಡೆಯಿಂದ ಬಂದಿದ್ದೇನೆ. ಈ ಹುಡುಗ ನನ್ನ ಆಫೀಸಿನಲ್ಲಿ ಗುಮಾಸ್ತ. ನಾನು ಅವನಿಗೆ ತಿಂಗಳು 30000 ರೂಗಳನ್ನು ಕೊಟ್ಟು ನನ್ನ ಬಳಿ ಕೆಲಸಕ್ಕೆ ಇಟ್ಟುಕೊಂಡಿದ್ದೇನೆ. ನನ್ನ ಪ್ರಾಕ್ಟೀಸ್ ಮತ್ತು ಆದಾಯ ಹೆಚ್ಚು ಇರುವಾಗ ಅಕೌಂಟ್ಸ್ ಇಟ್ಟುಕೊಳ್ಳಲು ಒಬ್ಬ ಗುಮಾಸ್ತ ಬೇಕಲ್ಲ?’ ಇದನ್ನು ಕೇಳಿದ ಹುಡುಗಿಯ ಕಡೆಯವರ ಮುಖ ಇಂಗು ತಿಂದ ಮಂಗನಂತಾಯಿತು!
ತಾತ್ಪರ್ಯ ಇಷ್ಟೇ: ಮನುಷ್ಯನಿಗೆ ಆಸೆಗಳಿರಬೇಕು. ಆದರೆ ಅತಿ ಆಸೆ, ದುರಾಸೆಗಳಲ್ಲ; ಕಾರಣ ದುರಾಸೆಗೆ ಇತಿಮಿತಿ ಇಲ್ಲ. ಮಕ್ಕಳಿಗೆ ಸಂಗಾತಿಯನ್ನು ಹುಡುಕುವಾಗ ಅವರ ಪ್ರಸ್ತುತ ಆರ್ಥಿಕ ಸ್ಥಿತಿಗತಿಯನ್ನು ಮಾತ್ರ ನೋಡಬಾರದು. ಉತ್ತಮ ಭವಿಷ್ಯವನ್ನು ರೂಪಿಸಬಲ್ಲ, ಹೆಚ್ಚಿನ ಹಣ ಸಂಪಾದನೆ ಮಾಡಬಲ್ಲ, ಅವರ ಶಕ್ತಿ ಸಾಮರ್ಥ್ಯವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ಮದುವೆಗೆ ಮುಂಚೆ ಕುಬೇರರಾಗಿದ್ದವರು ಮದುವೆಯ ನಂತರ ಕುಚೇಲರಾಗಿದುದ್ದನ್ನು ಕಂಡಿಲ್ಲವೇ? ಅಂತೆಯೇ ಮದುವೆಗೆ ಮೊದಲು ಒಳ್ಳೆಯ ಆದಾಯ ಇಲ್ಲದ ಹುಡುಗ ಕೈಹಿಡಿದ ಹುಡುಗಿಯ ಸಹಕಾರ ಮತ್ತು ಕಾಲ್ಗುಣದಿಂದಲೋ ಏನೋ ಒಳ್ಳೆಯ ಹಣವಂತನಾದ ಉದಾಹರಣೆಗಳು ಕಣ್ಣ ಮುಂದಿವೆ. ಮೇಲಾಗಿ ಒಬ್ಬರ ಮಾಸಿಕ ಆದಾಯವನ್ನು ಕೇಳುವುದು ಸಭ್ಯತೆಯೂ ಅಲ್ಲ. ಮಕ್ಕಳಿಗೆ ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ಶಾರೀರಿಕ ಸೌಂದರ್ಯದ ಜತೆ ಆಂತರಿಕ ಸೌಂದರ್ಯವನ್ನು, ಹಣವಂತಿಕೆಯ ಜತೆ ಗುಣವಂತಿಕೆಯನ್ನು, ಶಿಕ್ಷಣದೊಂದಿಗೆೆ ಅವರಲ್ಲಿರುವ ಸಂಸ್ಕಾರವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಅಂತೆಯೇ ಅವರ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸುವುದು ಅವಶ್ಯ. ಕಾರಣ ಮದುವೆ ಎಂದರೆ ಗಂಡು ಹೆಣ್ಣಿನ ನಡುವೆ ಮಾತ್ರವಲ್ಲ; ಎರಡು ಕುಟುಂಬದ ನಡುವಿನ ವ್ಯವಹಾರ; ಸಂಬಂಧ. ಇದು ಚೆನ್ನಾಗಿದ್ದರೆ ಅದು ಮಕ್ಕಳ ದಾಂಪತ್ಯ ಜೀವನಕ್ಕೆ ಪೂರಕವಾಗುತ್ತದೆ. ಹಣದ ಶ್ರೀಮಂತಿಕೆಗಿಂತಲೂ ಗುಣದ ಶ್ರೀಮಂತಿಕೆ ಉಳ್ಳವರೇ ಸಂಬಂಧಿಗಳಾದಾಗ ಎಲ್ಲವೂ ಸುಮಧುರ, ಸುಖಮಯ.
ಒಟ್ಟಿನಲ್ಲಿ ಬಾಳ ಸಂಗಾತಿ ಆಯ್ಕೆ ವಿಚಾರದಲ್ಲಿ ಆತುರ, ಅವಸರ ಮತ್ತು ಹುಡುಗಾಟಿಕೆ ಸಲ್ಲದು. ಏಕೆಂದರೆ ಜೀವನ ಪರ್ಯಂತ ಅದರ ಫಲವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ. ನಮ್ಮ ಜೀವನದ ಬಹುಪಾಲು ಅವಧಿಯು ವೈವಾಹಿಕ ಜೀವನವಾಗಿರುವುದರಿಂದ ಬಾಳ ಸಂಗಾತಿ ಆಯ್ಕೆ ವಿಚಾರದಲ್ಲಿ ಸಾವಧಾನವಿರಲಿ! ಸೂಕ್ತ ನಿರ್ಧಾರವಿರಲಿ!
( ಪ್ರತಿಕ್ರಿಯಿಸಿ:[email protected])
ಮುಡಾ ಹಗರಣ: ಹೈಕೋರ್ಟ್​ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಇಲ್ಲಿದೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 + 12 =
Remember me
