ಬೆಂಗಳೂರು:ರಾಜ್ಯದ 16ನೇ ವಿಧಾನಸಭೆ ರಚನೆಗಾಗಿ ಬುಧವಾರ ಮತದಾನ ನಡೆಯಲಿದೆ. ಸರಾಗ ಮತಪ್ರಕ್ರಿಯೆಗೆ ಚುನಾವಣಾ ಆಯೋಗ ಸಕಲ ಸನ್ನದ್ಧತೆ ಕೈಗೊಂಡಿದ್ದರೆ, ರಾಜಕೀಯ ಪಕ್ಷಗಳು ಮತ್ತು ಅಭ್ಯಥಿಗಳು ಮತದಾರ ಪ್ರಭುಗಳ ಕೃಪೆಗಾಗಿ ಕಾದಿದ್ದಾರೆ.
ಪ್ರಜಾಪ್ರಭುತ್ವದ ಉತ್ಸವ, ಮತದಾನ ಹಬ್ಬದಲ್ಲಿ ಪ್ರತಿಯೊಬ್ಬರೂ ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಹಕ್ಕು ಚಲಾಯಿಸಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮತ ‘ದಾನ’ ಎನ್ನುವ ಪಾವಿತ್ರ್ಯದ ಅಭಿದಾನವನ್ನೂ ನೀಡಲಾಗಿದೆ. ‘ಪ್ರಜಾಪ್ರಭುತ್ವದಲ್ಲಿ ಆಡಳಿತ ಮಾಡುವವರು ಮತಪೆಟ್ಟಿಗೆಯಲ್ಲಿ (ಇವಿಎಂ) ರೂಪುಗೊಳ್ಳುತ್ತಾರೆ. ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದೇ ಮೌಲ್ಯ’ ಎನ್ನುವುದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮಾತು. ಮತದಾನದ ಮಹತ್ವ, ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಹಾಗೂ ವಿವೇಕವನ್ನು ಜಾಗೃತಗೊಳಿಸುತ್ತದೆ. ಅಂತೆಯೇ, ಪ್ರತಿಯೊಬ್ಬರೂ ತಮ್ಮ ಅಪೇಕ್ಷೆಗೆ ಅನುಗುಣವಾಗಿ ಹಕ್ಕು ಚಲಾಯಿಸುವುದರಿಂದ ಪ್ರಜಾಪ್ರಭುತ್ವದ ಕಳೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ದಿಗ್ಗಜರು, ಪ್ರಮುಖರ ಮೂಲಕ ಮತದಾನ ಜಾಗೃತಿಗೆ ಚುನಾವಣೆ ಆಯೋಗ ಪ್ರಯತ್ನಿಸಿದೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸಬಹುದು.
ಭವಿಷ್ಯ ನಿರ್ಧರಿಸುತ್ತೆ:ವೈಯಕ್ತಿಕ ಸುರಕ್ಷತೆ, ಅಭಿವೃದ್ಧಿ, ನಾಡು ಹಾಗೂ ದೇಶದ ಅಭಿವೃದ್ಧಿ ಜತೆಗೆ ಮುಂದಿನ ಐದು ವರ್ಷಗಳ ಭವಿಷ್ಯವನ್ನು ಒಂದು ಮತ ತೀರ್ವನಿಸಲಿದೆ. ರಾಜಕೀಯ ಪಕ್ಷಗಳು, ವಿಧಾನಸಭೆ ಪ್ರವೇಶಿಸಲು ಬಯಸಿದ ಅಭ್ಯರ್ಥಿಗಳು ತಮ್ಮ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದ್ದಾರೆ. ಪ್ರತಿಯೊಬ್ಬ ಮತದಾರ ತನಗೆ ಸೂಕ್ತವಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಅಷ್ಟೇ ಅಲ್ಲ, ಸ್ಪರ್ಧಾಕಣದಲ್ಲಿರುವ ಯಾವುದೇ ಅಭ್ಯರ್ಥಿ ಬೇಡವೆಂದಾದರೆ ‘ನೋಟಾ’ ಗುಂಡಿ ಒತ್ತುವುದಕ್ಕೂ ವಿದ್ಯುನ್ಮಾನ ಮತಯಂತ್ರದಲ್ಲಿ ಅವಕಾಶವಿದೆ.
ರಾಜಧಾನಿಯಲ್ಲೂ ಹುರುಪು:ಗ್ರಾಮೀಣ, ನಗರ-ಪಟ್ಟಣ ಸೇರಿದಂತೆ ಎಲ್ಲೆಡೆ ಜಾತಿ, ವರ್ಗಭೇದವಿಲ್ಲದೆ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತ ದೃಶ್ಯಗಳು ಮತದಾನದ ದಿನ ಕಂಡುಬರುತ್ತವೆ. ಆದರೆ, ಮಹಾನಗರ ಅದರಲ್ಲೂ ಸಿಲಿಕಾನ್ ಸಿಟಿಯೆಂದು ಹೆಸರಾದ ರಾಜಧಾನಿ ಬೆಂಗಳೂರಿನಲ್ಲಿ ನೀರಸ ಸ್ಪಂದನೆಯು ಆಯೋಗ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಜತೆಗೆ ಪ್ರಾಜ್ಞರ ಚಿಂತೆಗೆ ಕಾರಣವಾಗಿದೆ. ಇದನ್ನು ಹೋಗಲಾಡಿಸಲು ಹೊಸ ತಂತ್ರಜ್ಞಾನ ವೇದಿಕೆಗಳನ್ನು ಬಳಸಿ ಹುರುಪು ತುಂಬಿದ್ದು, ಶತಾಯುಷಿಗಳು ಮತಗಟ್ಟೆಗೆ ಧಾವಿಸಿ ತಮ್ಮ ಹಕ್ಕು ಚಲಾಯಿಸಿದ್ದನ್ನು ಬಿಂಬಿಸಿ ಪ್ರೇರಣೆ ನೀಡಲಾಗಿದೆ. ತೀವ್ರ ಆಕ್ಷೇಪ, ಕಾವೇರಿದ ಚರ್ಚೆಯ ಕಾರಣಕ್ಕೆ ಈ ಬಾರಿ ನೀರಸ ಸ್ಪಂದನೆಯ ಟೀಕೆ-ಟಿಪ್ಪಣಿಗಳಿಂದ ರಾಜಧಾನಿ ಮುಕ್ತವಾಗುವ ಆಶಾಭಾವನೆಯಿದೆ.
ಹೀಗೂ ಇದೆ ಅವಕಾಶ:ತನ್ನ ಮತವನ್ನು ಬೇರೆ ಯಾರಾದರೂ ಚಲಾಯಿಸಿದ್ದರೆ ಟೆಂಡರ್ ವೋಟ್ ಮೂಲಕ ತನ್ನ ಹಕ್ಕು ಚಲಾಯಿಸುವ ಅವಕಾಶವನ್ನು ಚುನಾವಣೆ ನಿಯಮಗಳು 1961, ಸೆಕ್ಷನ್ 49ಪಿ ಕಲ್ಪಿಸುತ್ತದೆ. ಇದಕ್ಕಾಗಿ ಮತಗಟ್ಟೆ ಅಧಿಕಾರಿ (ಪ್ರಿಸೈಡಿಂಗ್ ಆಫೀಸರ್) ಬಳಿ ತನ್ನ ಗುರುತಿನ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಆಗ ಮತಗಟ್ಟೆ ಅಧಿಕಾರಿ ಸ್ವತಃ ಸಹಿ ಹಾಕಿದ ಬ್ಯಾಲೆಟ್ ಪೇಪರ್ ಮತದಾರನಿಗೆ ನೀಡುತ್ತಾರೆ. ಈ ರೀತಿ ಚಲಾವಣೆಯಾದ ಮತಗಳನ್ನು ವಿಶೇಷವಾಗಿ ಸೀಲ್ ಆದ ಕವರ್​ನಲ್ಲಿಟ್ಟು ಮತಗಳ ಲೆಕ್ಕ ಹಾಕಲಾಗುತ್ತದೆ. ಆ ಸಮಯದಲ್ಲಿ ಟೆಂಡರ್ ವೋಟ್​ಗಳಿಗೆ ಯಾವುದೇ ಆಕ್ಷೇಪಣೆ ಇಲ್ಲವೆಂಬ ನಿರ್ಧಾರಕ್ಕೆ ಬಂದ ಬಳಿಕ ಅವನ್ನು ಸಾಮಾನ್ಯ ಮತಗಳ ಜತೆಗೆ ಎಣಿಸಲಾಗುತ್ತದೆ. ವಿದ್ಯುನ್ಮಾನ ಮತಯಂತ್ರ ಬಳಸುತ್ತಿದ್ದರೂ ಟೆಂಡರ್ ವೋಟಿಗೆ ಹಳೇ ಪದ್ಧತಿ ಚಾಲ್ತಿಯಲ್ಲಿದೆ.
ಅತ್ಯಧಿಕ ಮತಗಳ ಅಂತರದಿಂದ ಗೆದ್ದವರು:ಅಖಂಡ ಶ್ರೀನಿವಾಸಮೂರ್ತಿ- 81,626, ಡಿ.ಕೆ. ಶಿವಕುಮಾರ್- 79,909, ಅಭಯ್ ಪಾಟೀಲ್- 58,692, ಹಾಲಾಡಿ ಶ್ರೀನಿವಾಸ ಶೆಟ್ಟಿ- 56,405 ಮತಗಳು. ಇವರು ಸೇರಿ ಒಟ್ಟು 11 ಅಭ್ಯರ್ಥಿಗಳು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದರು.
ಅತಿ ಕಡಿಮೆ ಮತಗಳ ಅಂತರದಿಂದ ಗೆದ್ದವರು:ಪ್ರತಾಪಗೌಡ ಪಾಟೀಲ್- 213, ವೆಂಕಟರಮಣಪ್ಪ- 409, ಬಸನಗೌಡ ಪಾಟೀಲ್- 555, ಸಿ.ಎಸ್. ಶಿವಳ್ಳಿ- 634, ಸುಭಾಷ್ ಗುತ್ತೇದಾರ್- 697 ಮತಗಳು

ನಾನು ವೋಟ್ ಮಾಡುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡಿಲ್ಲ. ಅದರಲ್ಲೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡಬೇಕು ಎನ್ನುವುದೇ ನಮ್ಮ ನಂಬಿಕೆ. ಬನ್ನಿ, ವೋಟ್ ಮಾಡೋಣ, ಉತ್ತಮ ಸಮಾಜ ಕಟ್ಟೋಣ.
| ಅಶ್ವಿನಿ ಪುನೀತ್​ರಾಜ್​ಕುಮಾರ್, ನಿರ್ಮಾಪಕಿ
ಕರ್ನಾಟಕದ ಮತದಾರರು ಬುಧವಾರ ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಬೇಕು. ವಿಶೇಷವಾಗಿ ಯುವಜನರು, ನಗರ, ಅದರಲ್ಲೂ ಬೆಂಗಳೂರಿನ ಜನರು ಈ ಪ್ರಜಾತಂತ್ರ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.
| ರಾಜೀವ್ ಕುಮಾರ್, ಮುಖ್ಯ ಚುನಾವಣಾ ಆಯುಕ್ತ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಒಂದು ಹಬ್ಬ. ನಮ್ಮ ಹಬ್ಬಗಳನ್ನು ಹೇಗೆ ಉತ್ಸಾಹದಿಂದ ಆಚರಿಸುತ್ತೇವೋ ಅದೇ ರೀತಿಯಲ್ಲಿ ಮತದಾನ ಪ್ರಕ್ರಿಯೆಯಲ್ಲಿಯೂ ಭಾಗವಹಿಸಬೇಕು. ನಮ್ಮ ಹಕ್ಕನ್ನು ಚಲಾಯಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡಬೇಕು. ಎಲ್ಲರೂ ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಬೇಕು.
| ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಮತದಾನ ನಮ್ಮೆಲ್ಲರ ಪವಿತ್ರ ಕರ್ತವ್ಯ. ಪ್ರಜಾತಂತ್ರ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗಲು, ರಾಜ್ಯದ ಅಭಿವೃದ್ಧಿ ಗೆ ಸಮರ್ಥ ಸರ್ಕಾರವನ್ನು ತರಲು ನಾಡಿನ ಜನತೆಗೆ ಇರುವ ಅವಕಾಶ. ಆದ್ದರಿಂದ ಪ್ರತಿಯೊಬ್ಬ ಮತದಾರರು ಸಹ ತಪ್ಪದೇ ಮತದಾನದಲ್ಲಿ ಭಾಗವಹಿಸಿ, ತಮ್ಮ ಹಕ್ಕು ಚಲಾಯಿಸಿ.
| ಸಿದ್ದರಾಮಯ್ಯ, ಮಾಜಿ ಮಖ್ಯಮಂತ್ರಿ
ಮತದಾರರ ಗುರುತಿನ ಚೀಟಿ ಹೊರತುಪಡಿಸಿ ಆಧಾರ್ ಕಾರ್ಡ್, ನರೇಗಾ ಉದ್ಯೋಗ ಗುರುತಿನ ಚೀಟಿ, ಅಂಚೆ ಕಚೇರಿ ಮತ್ತು ಬ್ಯಾಂಕ್​ಗಳಲ್ಲಿ ನೀಡಿರುವ ಭಾವಚಿತ್ರವಿರುವ ಪಾಸ್ ಬುಕ್, ಕಾರ್ವಿುಕ ಇಲಾಖೆ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೖೆವಿಂಗ್ ಲೈಸನ್ಸ್, ಪಾನ್ ಕಾರ್ಡ್, ಆರ್​ಜಿಐ ಮತ್ತು ಎನ್​ಪಿಆರ್ ಮೂಲಕ ನೀಡಿರುವ ಸ್ಮಾರ್ಟ್ ಕಾರ್ಡ್, ಪಾಸ್​ಪೋರ್ಟ್, ಭಾವಚಿತ್ರ ಹೊಂದಿರುವ ಪಿಂಚಣಿ ಕಾರ್ಡ್, ಕೇಂದ್ರ/ರಾಜ್ಯ/ಪಿಎಸ್​ಯುು/ಪಬ್ಲಿಕ್ ಲಿಮಿಟೆಡ್ ಕಂಪನಿಗಳ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ, ಲೋಕಸಭೆ/ರಾಜ್ಯಸಭೆ/ವಿಧಾನಸಭೆ/ಪರಿಷತ್ ಸದಸ್ಯರಿಗೆ ನೀಡಿರುವ ಗುರುತಿನ ಚೀಟಿ, ವಿಶಿಷ್ಟ ಅಂಗವೈಕಲ್ಯ ಕಾರ್ಡ್ ತೋರಿಸಿಯೂ ಮತದಾನ ಮಾಡಬಹುದು.
ಹೆಮ್ಮೆಯ ಗುರುತು:ಅಳಿಸಲಾಗದ ಶಾಯಿಯನ್ನು ಈ ಬಾರಿ ಎಡಗೈ ತೋರು ಬೆರಳಿಗೆ ಲೇಪಿಸಲಾಗುತ್ತದೆ.
ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿ. ಸೋಮಣ್ಣ, ಡಿ.ಕೆ. ಶಿವಕುಮಾರ್, ಆರ್. ಅಶೋಕ್, ಎಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಬಿ.ವೈ. ವಿಜಯೇಂದ್ರ, ಡಾ.ಕೆ. ಸುಧಾಕರ್, ಡಾ. ಅಶ್ವತ್ಥ ನಾರಾಯಣ, ಮುರುಗೇಶ್ ನಿರಾಣಿ, ಬಿ.ವೈ. ವಿಜಯೇಂದ್ರ, ಲಕ್ಷ್ಮಣ ಸವದಿ, ಎಂ.ಬಿ. ಪಾಟೀಲ್, ರಮೇಶ್ ಜಾರಕಿಹೊಳಿ, ಗೋವಿಂದ ಕಾರಜೋಳ, ಬಸನಗೌಡ ಪಾಟೀಲ್ ಯತ್ನಾಳ್, ಮಹೇಶ್ ಟೆಂಗಿನಕಾಯಿ, ಬಿ. ಶ್ರೀರಾಮುಲು, ಎಸ್. ಸುರೇಶ್​ಕುಮಾರ್, ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ, ಲಕ್ಷಿ್ಮೕ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಆರ್.ವಿ. ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಡಾ.ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ, ಕೆ.ಎಂ. ಶಿವಲಿಂಗೇಗೌಡ ಮತ್ತಿತರರ ಭವಿಷ್ಯ ಇಂದು ಇವಿಎಂನಲ್ಲಿ ಭದ್ರವಾಗಲಿದೆ.
ಜಿದ್ದಾಜಿದ್ದಿನ ಕ್ಷೇತ್ರಗಳು:ವರುಣಾ, ಕನಕಪುರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಅಥಣಿ, ಚಿತ್ತಾಪುರ, ಬೆಳಗಾವಿ ಗ್ರಾಮಾಂತರ, ಗೋಕಾಕ್, ಚನ್ನಪಟ್ಟಣ, ಚಾಮರಾಜನಗರ, ಶಿಗ್ಗಾಂವಿ, ಪುಲಕೇಶಿನಗರ, ಕೊರಟಗೆರೆ, ಪುತ್ತೂರು, ಮೂಡಿಗೆರೆ ಕ್ಷೇತ್ರಗಳು ಜಿದ್ದಾಜಿದ್ದಿನ ಕಣಗಳಾಗಿ ಮಾರ್ಪಟ್ಟಿವೆ.
ವಯಸ್ಕ ಮತದಾನ ಪದ್ಧತಿ:ಸಂವಿಧಾನದ 326ನೇ ಪರಿಚ್ಛೇದವು ವಯಸ್ಕ ಮತದಾನ ಪದ್ಧತಿಯನ್ನು ಒಳಗೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಫಲಪ್ರದವಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಗೆ ಒತ್ತಾಸೆ ನೀಡಲಾಗಿದೆ. ಸಂವಿಧಾನದ 326ನೇ ಪರಿಚ್ಛೇದದಡಿ ವಯಸ್ಕ ಮತದಾನ ಪದ್ಧತಿ ಅಳವಡಿಸಿ, ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ 18 ವರ್ಷದವರೆಲ್ಲರೂ ಮತದಾರರಾಗಲು ಅವಕಾಶವಿದ್ದು, ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿದೆ.
ಎಲೆಕ್ಷನ್​ಗೆ ಮಳೆ ಅಡ್ಡಿ?:ಮೋಕಾ ಚಂಡಮಾರುತದ ಪರಿಣಾಮ ಬುಧವಾರ ರಾಜ್ಯದಲ್ಲಿ ಮತದಾನಕ್ಕೆ ಮಳೆ ಭೀತಿ ಎದುರಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಇನ್ನೂ ಐದು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
