ಬೆಂಗಳೂರು:ಯುವಜನರೇ ನಿಮ್ಮ ಹೃದಯ ಜೋಪಾನ. ಯುವಸಮೂಹವನ್ನು ಬೆನ್ನತ್ತಿ ಬರುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಹಾರ್ಟ್ ಬೀಟ್​ನತ್ತ ಆರೋಗ್ಯ ಕಾಳಜಿ ಅತ್ಯಗತ್ಯ. ಅದಕ್ಕಾಗಿ ರೋಗ ಬರುವ ಮುನ್ನವೇ ಎಚ್ಚರಿಕೆ ವಹಿಸುವುದು ಯುಕ್ತ. ‘ಉತ್ತಮ ದಿನಚರಿ ಆರೋಗ್ಯಕರ ಹೃದಯಕ್ಕೆ ಸೋಪಾನ’ ಎಂಬ ನಾಣ್ಣುಡಿ ಧ್ಯೇಯವಾಕ್ಯವಾಗಿರಲಿ.
ಪ್ರತಿಯೊಬ್ಬ ವ್ಯಕ್ತಿಯೂ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಅಂಶ, ಕೊಬ್ಬು, ಶರೀರದ ತೂಕ ಹಾಗೂ ಸೊಂಟದ ಸುತ್ತಳತೆಯ ಜೊತೆಗೆ ಅತಿಯಾದ ನಿರೀಕ್ಷೆ, ಅಪೇಕ್ಷೆ, ಆಸೆ ಕಡಿಮೆ ಇಟ್ಟುಕೊಂಡರೆ ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎನ್ನುತ್ತಾರೆ ಶ್ರೀ ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್. ‘ವಿಶ್ವ ಹೃದಯ ದಿನ’ ಅಂಗವಾಗಿ ವಿಜಯವಾಣಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಓದುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಮೇಲಿನ ಈ ಐದು ಅಂಶಗಳ ಬಗ್ಗೆ ಗಮನಹರಿಸಿದರೆ ಆರೋಗ್ಯವಂತ ಹೃದಯ ಹೊಂದಬಹುದು ಎಂದು ಕಿವಿಮಾತು ಹೇಳಿದರು.
ಹೃದಯದ ಆರೋಗ್ಯಕ್ಕೆ 6 ‘ಎಸ್’ ಬಗ್ಗೆ ಎಚ್ಚರ:ಸಾಲ್ಟ್ (ಉಪ್ಪು), ಸ್ಟ್ರೆಸ್ (ಒತ್ತಡ), ಸ್ಪಿರಿಟ್ (ಮದ್ಯಪಾನ), ಸ್ಮೋಕಿಂಗ್ (ಧೂಮಪಾನ), ಸೆಡೆಂಟರಿ (ಜಡತೆ) ಹಾಗೂ ಶುಗರ್ (ಸಕ್ಕರೆ) – ಈ 6 ಅಂಶಗಳ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ. ಇವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಕಿವಿಮಾತು ಹೇಳಿದರು.
ಹೃದಯದ ಆರೋಗ್ಯ ಕೆಡುವ ಮುನ್ನವೇ ಔಷಧವಲ್ಲದ ಔಷಧಗಳನ್ನು ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಅವುಗಳು ಯಾವುದೆಂದರೆ ಧ್ಯಾನ, ವ್ಯಾಯಾಮ, ಬಿಸಿಲಿನಲ್ಲಿ ನಡಿಗೆ, ಉಪವಾಸ, ನಗು, ಅತ್ಮವಿಶ್ವಾಸ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು – ಮಿತವಾದ ಆಹಾರ ಸೇವನೆ, ತಾಜಾ ಹಣ್ಣು ಮತ್ತು ತರಕಾರಿ ಸ್ವಿಕಾರ, ವಿಶ್ರಾಂತಿ, ಉತ್ತಮ ನಿದ್ರೆ, ಸ್ವಯಂ ಪ್ರೀತಿ, ಗೆಳೆತನ-ಬಂಧುಗಳೊಡನೆ ಉತ್ತಮ ಒಡನಾಟ, ಕುಟುಂಬದವರೊಂದಿಗೆ ಸಹಭೋಜನ ಹಾಗೂ ಸಮಯ ಕಳೆಯುವುದರಿಂದ ಜೀವನಶೈಲಿ ಬದಲಾಯಿಸಿಕೊಳ್ಳುವ ಜತೆಗೆ ಉತ್ತಮ ಆರೋಗ್ಯವನ್ನೂ ಪಡೆಯಬಹುದು ಎಂದು ಪ್ರತಿಪಾದಿಸಿದರು.
ಹೃದಯದ ಕಾರ್ಯಕ್ಷಮತೆ ಕುಗ್ಗುವಿಕೆ ಸೇರಿ ಹೃದಯ ಸಮಸ್ಯೆ ತಡೆಗೆ ಅಳವಡಿಸುವ ಪೇಸ್ ಮೇಕರ್ ಬಗ್ಗೆ ರೋಗಿಗಳು ಎಚ್ಚರ ವಹಿಸಬೇಕಿದೆ. ಈ ಪೇಸ್​ವೆುೕಕರ್ ಅಂದಾಜು 8-10 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ವರ್ಷಕ್ಕೆ ಒಮ್ಮೆಯಾದರೂ ಬ್ಯಾಟರಿಯ ಕಾರ್ಯನಿರ್ವಹಣೆ ಕುರಿತು ಪರೀಕ್ಷಿಸಿಕೊಳ್ಳಬೇಕು. ಆರು ತಿಂಗಳ ಮೊದಲೇ ಅದರ ಬ್ಯಾಟರಿ ಬದಲಿಸಿಕೊಳ್ಳುವುದು ಯುಕ್ತ. ಇಲ್ಲವಾದಲ್ಲಿ ಇದ್ದಕ್ಕಿದಂತೆ ಅದರ ಕಾರ್ಯನಿರ್ವಹಣೆ ಸ್ಥಗಿತಗೊಂಡರೆ ಹೃದಯ ಬಡಿತವೂ ನಿಂತು ಹೋಗಲಿದೆ. ಹಾಗಾಗಿ ಎಚ್ಚರವಹಿಸಬೇಕಿದೆ. ಮುಖ್ಯವಾಗಿ ಪೇಸ್​ವೆುೕಕರ್ ಅಳವಡಿಸಿಕೊಂಡ ವರು ಎದೆಯ ಎಡಭಾಗದಲ್ಲಿ ಮೊಬೈಲ್ ಇರಿಸಿಕೊಳ್ಳ ಬಾರದು. ಲೌಡ್ ಸ್ಪೀಕರ್ ಸಮೀಪ ಹಾಗೂ ಹೈ ಟೆನ್ಷನ್ ತಂತಿಗಳ ಬಳಿ ನಿಲ್ಲಬಾರದು.
ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗಲು ಕೋವಿಡ್ ಕಾರಣವಲ್ಲ. ಕೋವಿಡ್ ನಂತರ ಹಾಗೂ ಅದರ ನಿಯಂತ್ರಣಕ್ಕೆ ಪಡೆದ ಲಸಿಕೆಯಿಂದ ಹೃದಯಾಘಾತ ಹೆಚ್ಚು ಎಂದು ಜನರಲ್ಲಿ ಪ್ರಶ್ನೆ ಮೂಡಿದೆ. ಆದರೆ ಅದಕ್ಕೂ ಮೊದಲೇ ಏರಿಕೆಯಾಗಿತ್ತು. ಜಯದೇವ ಆಸ್ಪತ್ರೆ 2014-19ರವರೆಗೆ ನಡೆಸಿದ ಅಧ್ಯಯನದಿಂದ ಯುವಜನರಲ್ಲಿ ಹೃದಯಾಘಾತದ ಪ್ರಮಾಣ ಶೇ. 22 ಹೆಚ್ಚಳವಾಗಿರುವುದು ತಿಳಿದು ಬಂದಿದೆ. ಕೋವಿಡ್ ನಂತರ ಹೃದಯಾಘಾತ ಪ್ರಮಾಣ ಶೇ. 3-4 ಹೆಚ್ಚಳವಾಗಿದೆ. ಲಸಿಕೆ ಪಡೆದ 10 ಲಕ್ಷ ಮಂದಿಯಲ್ಲಿ 3-4 ಮಂದಿಗೆ ಹೃದಯಾಘಾತ ಆಗಿರಬಹುದು ಎಂದು ಡಾ. ಸಿ.ಎನ್. ಮಂಜುನಾಥ್ ವಿವರಿಸಿದರು.
ಯುವಜನರಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳು ಶೇ.35 ಇದ್ದು, 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೆಚ್ಚು ಸಂಭವಿಸುತ್ತಿದೆ. ಈ ಗುಂಪಿನಲ್ಲಿ ಶೇ.8 ಯುವತಿಯರೂ ಸೇರಿದ್ದಾರೆ. ಕುಟಂಬ ನಿರ್ವಹಣೆ, ಕೆಲಸದ ಒತ್ತಡ, ಮಕ್ಕಳ ಪಾಲನೆ ಮಹಿಳೆಯರಲ್ಲಿ ಒತ್ತಡ ಹೆಚ್ಚಿಸುತ್ತಿದ್ದು, ಹೃದಯಘಾತಕ್ಕೆ ಕಾರಣವಾಗಿದೆ. ಇನ್ನು ಜೀವನ ಶೈಲಿ, ಆಹಾರ ಕ್ರಮ, ಚಟುವಟಿಕೆ ರಹಿತ ಜೀವನದಿಂದಾಗಿ ಭಾರತೀಯರಲ್ಲಿ ಹೃದ್ರೋಗ ಸೇರಿ ವಿವಿಧ ಆರೋಗ್ಯ ಸಮಸ್ಯೆಗಳು 15-20 ವರ್ಷ ಮುಂಚಿತವಾಗಿ ಕಾಣಿಸಿಕೊಳ್ಳುತ್ತಿವೆ. ಹಿಂದೆಲ್ಲಾ 60 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಮಧ್ಯಮ ವಯಸ್ಕರಲ್ಲಿ ಕಂಡುಬರುತ್ತಿದೆ. ಹೃದಯಾಘಾತಕ್ಕೆ ಬಹುತೇಕ ಜನರ ಸ್ವಭಾವವೇ ಕಾರಣವಾಗಿರುತ್ತದೆ. ಅತಿಯಾದ ಕೋಪ, ಅಸೂಯೆ, ಅನುಮಾನ, ಒತ್ತಡ, ವಾದ ಮಾಡುವುದರಿಂದ ದೇಹದಲ್ಲಿ ಒತ್ತಡ ಹೆಚ್ಚಾಗಿ ಹೃದಯಕ್ಕೆ ಅಪಾಯ ತಂದುಕೊಳ್ಳುತ್ತಾರೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತವಾದರೆ ಅಂತಹವರಲ್ಲಿ ಶೇ.17 ಅನುವಂಶಿಕ ಕಾರಣ ಇರುತ್ತದೆ. ಹಾಗಾಗಿ ಕೌಟುಂಬಿಕ ಹಿನ್ನೆಲೆ ಹೊಂದಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೃದಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮ ಎನ್ನುತ್ತಾರೆ ಡಾ. ಮಂಜುನಾಥ್.
‘ವಿಜಯವಾಣಿ ಫೋನ್ ಇನ್’ ಕಾರ್ಯಕ್ರಮದಲ್ಲಿ ಹೃದಯ ಸಮಸ್ಯೆಗೆ ಫೋನ್​ನಲ್ಲೇ ಪರಿಹಾರ ! ಪಡೆಯಬಹುದೆಂಬ ಪತ್ರಿಕೆಯ ಕರೆಗೆ ಓಗೊಟ್ಟು ಓದುಗ ಬಳಗದಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ದೂರವಾಣಿ ಕರೆಗಳ ಮಹಾಪೂರವೇ ಹರಿದುಬಂತು. ಫೋನ್ ಇನ್ ಆರಂಭವಾಗುವ ಕೆಲ ಗಂಟೆಗಳ ಮುನ್ನವೇ ಕಚೇರಿಗೆ ಕರೆ ಮಾಡಿ ತಮ್ಮ ಹೆಸರನ್ನು ಮುಂಗಡವಾಗಿ ನೋಂದಣಿ ಮಾಡಿಕೊಳ್ಳುವಂತೆ ಮನವಿಗಳು ಬಂದವು. ಇನ್ನೂ ಕೆಲವರು ಮಧ್ಯಾಹ್ನವೇ ಕರೆ ಮಾಡಿ ಪೋನ್ ಇನ್ ಸಂಪರ್ಕ ಸಿಗದಿದ್ದಲ್ಲಿ ತಮ್ಮ ಪ್ರಶ್ನೆಗಳಿಗೆ ಡಾ. ಸಿ.ಎನ್.ಮಂಜುನಾಥ್ ಅವರಿಂದ ಉತ್ತರ ಕೊಡಿಸುವಂತೆ ಅಹವಾಲು ಸಲ್ಲಿಸಿದರು. ಫೋನ್ ಇನ್ ವೇಳೆ ಡಜನ್​ಗೂ ಹೆಚ್ಚು ಕರೆಗಳನ್ನು ಸ್ವೀಕರಿಸಿ ಆಪ್ತ ಸಮಾಲೋಚಕರಂತೆ ಓದುಗರು ಹೇಳಿಕೊಂಡ ಹೃದಯ ಸಂಬಂಧಿ ಸಮಸ್ಯೆ ಹಾಗೂ ಸಂದೇಹಗಳಿಗೆ ಮಾರ್ಗದರ್ಶನ ನೀಡಿದರು. ಕೆಲವರು ಹೆಸರೇಳದೆ ನೇರವಾಗಿಯೇ ಪ್ರಶ್ನೆ ಕೇಳಿದ್ದಕ್ಕೆ, ಮೊದಲು ನಿಮ್ಮ ಹೆಸರು, ವಯಸ್ಸು ತಿಳಿಸಿ. ಹಿಂದೊಮ್ಮೆ ನಿಮಗೆ ಹೃದಯಾಘಾತ ಆಗಿತ್ತೇ? ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಹೃದಯದ ಕಾಯಿಲೆ ಇದೆಯೆ ಇತ್ಯಾದಿ ಮಾಹಿತಿಯನ್ನು ಪಡೆದು ಸಾವಕಾಶವಾಗಿಯೇ ಪರಿಹಾರ ನೀಡಿದ ಹೃದಯ ತಜ್ಞನಿಗೆ ಓದುಗರು ಕೃತಜ್ಞತೆ ಹೇಳಿದರು.
ಹೃದಯಾಘಾತ ಎಂದರೆ ರಕ್ತನಾಳ ಬ್ಲಾಕ್ ಆಗಿ ರಕ್ತಸಂಚಾರ ಇಲ್ಲದಿದ್ದಾಗ ಹೃದಯಾಘಾತ ಎಂದು ಹೇಳುತ್ತೇವೆ. ಹೃದಯಸ್ತಂಭನವು ಏಕಾಏಕಿಯಾಗಿ ಹೃದಯ ಕಾರ್ಯ ನಿಂತು ಹೋಗುತ್ತದೆ. ಅದಕ್ಕೆ ಹೃದಯಾಘಾತ ಹಾಗೂ ಹೃದಯ ವೈಫಲ್ಯ ಕಾರಣವಾಗಿರುತ್ತದೆ. ಹೀಗಾದಾಗ ‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ದೊರೆಯಬೇಕು. ಇಲ್ಲವಾದಲ್ಲಿ ಸಾವಿನ ಪ್ರಮಾಣ ಶೇ.7 ಹೆಚ್ಚಾಗಲಿದೆ. ಹಾಗಾಗಿ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಹಾಗೂ ಹೃದಯಾಘಾತದ ಕೌಟುಂಬಿಕ ಹಿನ್ನೆಲೆ ಹೊಂದಿರುವವರು ವರ್ಷಕ್ಕೊಮ್ಮೆ ಹೃದಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
ಒತ್ತಡ ಕೇವಲ ಜನಸಾಮಾನ್ಯರಿಗೆ ಹಾಗೂ ಇತರ ವರ್ಗದವರಿಗೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ರೋಗಿಗಳ ಸಂಖ್ಯೆಯಲ್ಲಿ ಏರಿಕೆ, ಕ್ಲಿಷ್ಟಕರ ಪ್ರಕರಣಗಳ ನಿರ್ವಹಣೆ, ರೋಗಿ ಮತ್ತು ಅವರ ಕುಟುಂಬದವರಿಂದ ಒತ್ತಡ, ನಿದ್ರಾಹೀತನೆ, ಸಮಯಕ್ಕೆ ಸರಿಯಾಗಿ ಊಟ ಇಲ್ಲದಿರುವುದು ಹಾಗೂ ವೈಯಕ್ತಿಕ ಜೀವನ ಈ ಎಲ್ಲವುಗಳನ್ನು ನಿಭಾಯಿಸುವಲ್ಲಿ ವೈದ್ಯರಿಗೆ ಒತ್ತಡ ಹೆಚ್ಚುತ್ತಿದೆ. ಇದರಿಂದಾಗಿ ವೈದ್ಯರ ಆಯಸ್ಸು 10 ವರ್ಷ ಕಡಿಮೆಯಾಗುತ್ತಿದೆ. ಒತ್ತಡದ ಜೀವನದಿಂದ ಹೃದಯ ಸಮಸ್ಯೆ ಹೆಚ್ಚುತ್ತಿದೆ ಎಂಬ ಅಂಶವು ಅಧ್ಯಯನವೊಂದರಿಂದ ಬಹಿರಂಗವಾಗಿದೆ.
ಜಯದೇವ ಆಸ್ಪತ್ರೆ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಆಸ್ಪತ್ರೆಗಳ ಮೇಲೆ ಒತ್ತಡ ತೀವ್ರವಾಗಿದೆ. ಇದರಿಂದ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕಳೆದ ಒಂದು ವರ್ಷದಲ್ಲಿ ಜಯದೇವ ಆಸ್ಪತ್ರೆಯಲ್ಲಿ 7 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, 55 ಸಾವಿರ ಮಂದಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಐದು ಸಾವಿರ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಮಟ್ಟಿನ ಒತ್ತಡ ದೇಶದಲ್ಲಿ ಬೇರಾವುದೇ ಆಸ್ಪತ್ರೆಯಲ್ಲಿಲ್ಲ. ಅತಿ ಹೆಚ್ಚು ಹೃದ್ರೋಗಿಗಳಿಗೆ ಸೇವೆ ನೀಡಿದ ಆಸ್ಪತ್ರೆಗಳಲ್ಲಿ ಜಯದೇವ ಮೊದಲ ಸ್ಥಾನದಲ್ಲಿದೆ ಎಂದು ಡಾ. ಮಂಜುನಾಥ್ ಹೇಳಿದರು.
ಹೃದಯ ಕಾಯಿಲೆಯಿಂದ ಸ್ಟಂಟ್ ಹಾಕಿಕೊಂಡವರು ಮೊಬೈಲ್ ಅನ್ನು ಅಂಗಿಯ ಜೇಬಿನಲ್ಲಿ ಇಟ್ಟುಕೊಳ್ಳವುದು ಸೂಕ್ತವಲ್ಲ. ಮೊಬೈಲ್ ಬಳಸಿದ ಬಳಿಕ ಅದನ್ನು ಬೇರೆಡೆ ಇಟ್ಟು ಎಂದಿನಂತೆ ಚಟುವಟಿಕೆಯಲ್ಲಿ ತೊಡಗಬಹುದು.
ಹಿಂದೊಮ್ಮೆ ಹೃದಯಾಘಾತಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾದವರು ವೈದ್ಯರು ಸೂಚಿಸಿರುವಂತೆ ನಿಯಮಿತವಾಗಿ ಮಾತ್ರೆಗಳನ್ನು ಸೇವಿಸಲು ಮರೆಯಬಾರದು. ಸಮಸ್ಯೆ ಮುಂದುವರಿದಲ್ಲಿ ವರ್ಷಕ್ಕೊಮ್ಮೆ ಅಥವಾ 2 ವರ್ಷಕ್ಕೊಮ್ಮೆ ಟ್ರೆಡ್​ವಿುಲ್ ಇಸಿಜಿ ಮಾಡಿಸುವುದು ಸೂಕ್ತ. ಇದರಿಂದ ಮತ್ತೆ ಹೃದಯಾಘಾತ ಆಗುವುದನ್ನು ತಪ್ಪಿಸಲು ಅವಕಾಶ ಇದೆ. ಟ್ರೆಡ್​ವಿುಲ್ ಇಸಿಜಿ ಸೌಲಭ್ಯ ಜಿಲ್ಲೆಗಳಲ್ಲೇ ಸಿಗುವುದರಿಂದ ಅಲ್ಲಿಯೇ ಮಾಡಿಸಿಕೊಳ್ಳಬಹುದು.
ಪ್ರತಿಯೊಬ್ಬರೂ ನಿತ್ಯ 30-45 ನಿಮಿಷ ಚುರುಕು ನಡಿಗೆ, ದೇಹದಾರ್ಢ್ಯತೆ ತಕ್ಕಂತೆ ಅರ್ಧಗಂಟೆ ವ್ಯಾಯಾಮ ಮಾಡಬೇಕು. ಜಿಮ್ ಮನೆಯಲ್ಲೇ ವರ್ಕ್​ಔಟ್ ಮಾಡಿದರೂ ತಪ್ಪಿಲ್ಲ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೀರ್ಘಾಯುಷ್ಯ ಪಡೆಯಬಹುದು. ಆದರೆ, ಅತಿಯಾದ ವ್ಯಾಯಾಮ ಹಾಗೂ ದೇಹದಂಡೆ ಒಳ್ಳೆಯದಲ್ಲ. ಈ ಶಿಸ್ತು ಪಾಲಿಸಿದ್ದಲ್ಲಿ ಹೃದಯ ಕಾಯಿಲೆಗಳಿಂದ ದೂರವುಳಿಯಬಹುದಾಗಿದೆ. ಜಿಮ್ಲ್ಲಿ ತರಬೇತುದಾರರ ಸಲಹೆ ಆಧರಿಸಿ ಮುಂದುವರಿಯುವುದು ಯುಕ್ತ.
ಈಗೀಗ ಸಣ್ಣ ವಯಸ್ಸಿನ ಮಕ್ಕಳಲ್ಲಿ ಹೃದಯದ ಕಾಯಿಲೆಗಳು ವರದಿಯಾಗುತ್ತಿವೆ. ಇದು ಆರಂಭಿಕ ಹಂತವಾದ್ದರಿಂದ ಆತಂಕ ಬೇಡ. ಎಕೋ ಟೆಸ್ಟ್ ಮಾಡಿಸಿದರೆ ಹೃದಯದಲ್ಲಿ ರಂಧ್ರ ಆಗಿದೆಯೆ ಇಲ್ಲವೇ ಎಂಬುದು ದೃಢಪಡುತ್ತದೆ. ಇದಕ್ಕಾಗಿ ಅಂಬ್ರೆಲ್ಲಾ ಡಿವೈಸ್​ನಿಂದ ತಪಾಸಣೆ ನಡೆಸಬಹುದಾಗಿದ್ದು, ಆಸ್ಪತ್ರೆಯಲ್ಲಿ 2 ದಿನ ಚಿಕಿತ್ಸೆ ಪಡೆದು ಮಾರನೇ ದಿನವೇ ವಾಪಸಾಗಬಹುದು.
ಹೃದಯಾಘಾತ ಅಥವಾ ಇನ್ನಿತರ ಕಾಯಿಲೆಗಾಗಿ ವೈದ್ಯರ ಸಲಹೆ ಮೇರೆಗೆ ಮಾತ್ರ, ಔಷಧ ತೆಗೆದುಕೊಳ್ಳಬೇಕು. ಕಾಯಿಲೆ ಗುಣವಾಯಿತೆಂದು ಮಾತ್ರೆ ಸೇವಿಸುವುದು ಹಠಾತ್ ನಿಲ್ಲಿಸುವುದು ಸರಿಯಲ್ಲ. ವೈದ್ಯರು ಹೇಳಿದಂತೆ ಔಷಧ ಮುಂದು ವರಿಸುವ ಅಥವಾ ನಿಲ್ಲಿಸುವ ನಿರ್ಧಾರ ಕೈಗೊಳ್ಳಬೇಕು. ಸ್ವಯಂ ವೈದ್ಯರಾಗುವ ಯತ್ನ ಬೇಡ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − thirteen =
Remember me
