ಇಂದು ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ 128ನೇ ಜನ್ಮದಿನ. ಅಂಬಿಕಾತನಯದತ್ತ ಅವರು ಕನ್ನಡ ಸಾಹಿತ್ಯ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲ್ಲೊಬ್ಬರು. ವರಕವಿ, ಶಬ್ದಗಾರುಡಿಗ, ದಾರ್ಶನಿಕ ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ದ.ರಾ. ಬೇಂದ್ರೆ ಧಾರವಾಡಿಗರಿಗೆ ಮಾತ್ರ ಸದಾ ಪ್ರೀತಿಯ ‘ಬೇಂದ್ರೆ ಅಜ್ಜ’ನಾಗಿ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಒಡನಾಡಿಗಳು ಬೇಂದ್ರೆಯವರ ಜೀವನವನ್ನು ಮೆಲುಕು ಹಾಕಿರುವುದು ಹೀಗೆ.
ಕಾಲಮಾನದ ಕವಿಧಾರವಾಡದ ಅಜ್ಜ ಎಂದೇ ಮನೆಮಾತಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡ ಸಾಹಿತ್ಯ ಕಂಡ ಮೋಡಿಗಾರ. ತಮ್ಮನ್ನು ‘ಒಲವಿನ ವೇದಾಂತಿ’ ಎಂದು ಕರೆದುಕೊಳ್ಳುತ್ತಿದ ಬೇಂದ್ರೆಯವರ ಮೇಲೆ ಮಹರ್ಷಿ ಅರವಿಂದರು, ಶಾರದಾ ಮಾತೆ, ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರವಿಂದ್ರನಾಥ ಟ್ಯಾಗೋರರ ಅಪಾರ ಪ್ರಭಾವವಿದೆ. ಧಾರವಾಡದ ನೆಲದ ಭಾಷೆಯನ್ನು ತಮ್ಮ ಕಾವ್ಯವಾಗಿಸಿದ ಬೇಂದ್ರೆ ಅಜ್ಜನ ಕವಿತೆಗಳು ಕೆಲವು ಸಲ ಜನಪದ ಗೀತೆಗಳಂತೆ ಭಾಸವಾಗುತ್ತವೆ; ‘ಬಂತಣ್ಣ ಸಣ್ಣಸೋಮವಾರ, ಇನ್ನೂ ಯಾಕ ಬರ್ಲಿಲಾಂವಾ ಹುಬ್ಬಳ್ಳಿಯಾಂವ’ ಹೀಗೆ ಮುಂತಾದ ಕವಿತೆಗಳನ್ನು ಗಮನಿಸಬಹುದು.
ಧಾರವಾಡದ ಕಾಮನಕಟ್ಟಿ, ದತ್ತಾತ್ತೇಯ ಗುಡಿ, ಧಾರವಾಡದ ತಾಯಿ-ದುರ್ಗಾಮಾತೆ, ಹಾಲಗೇರಿ, ಎಮ್ಮೀಕೇರಿ, ಸಾಧನಕೇರಿ, ಮುಗದ ಅವರು ಸುಳಿದಾಡಿ ಬಿಟ್ಟುಹೋದ ನೆನಪುಗಳಾಗಿ ಈಗಲೂ ಧಾರವಾಡದ ಜನರಿಗೆ ಕಾಡುತ್ತವೆ. ಬೇಂದ್ರೆ ಕಾವ್ಯ ಬಾಹ್ಯದಲ್ಲಿ ಸರಳ ಅರ್ಥವನ್ನು ನೀಡಿದರೆ ಅಂತರಂಗದಲ್ಲಿ ವೇದಾಂತಿಕ ಅರ್ಥವನ್ನು ಹುದುಗಿಸಿಟ್ಟುಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಕವಿ ರೂಪಕಗಳ ಮೂಲಕ ಕಾವ್ಯವನ್ನು ಕಟ್ಟಿರುವುದು. ಉದಾ: ‘ಬಿದಿಗೆ ಚಂದ್ರನ ಹೆಣಾ ಬಂತು ಮುಗಿಲಾಗ ತೇಲತ ಹಗಲ’ ಇತ್ಯಾದಿ ನೋಡಬಹುದು.
ಬೇಂದ್ರೆ ಕೇವಲ ಒಬ್ಬ ಕವಿಯಾಗಿರಲಿಲ್ಲ, ಅವರೊಬ್ಬ ಮನೋವಿಜ್ಞಾನಿಯೂ ಆಗಿದ್ದರು. ದೇಹ ಮತ್ತು ಮನಸುಗಳ ನಡುವೆ ಸಂವಾದವಾಗಿಸುವ ಕವಿ, ತಮ್ಮ ಕೂಸು ಮಂಗಳಾ ತೀರಿಕೊಂಡಾಗ ‘ನೀ ಹೀಂಗ ನೋಡಬ್ಯಾಡ ನನ್ನ’ ಪದ್ಯದಲ್ಲಿ ‘ಅತ್ತಾರ ಅತ್ತುಬಿಡು.. ತುಟಿ ಕಚ್ಚಿ ಹಿಡಿಯದಿರು ದುಃಖ’ ಎನ್ನುವ ಮೂಲಕ ಅತ್ತು ಹಗುರಾಗುವುದು, ದುಖದಿಂದ ಹೊರಬರುವ ಮಾರ್ಗ ಎಂಬುದನ್ನು ತಿಳಿಸುತ್ತಾರೆ. ಸಖಿಗೀತದ ಮೂಲಕ ದಾಂಪತ್ಯದ ಹೊನಲು ಹರಿಸಿದ ಕವಿ ನಾಕುತಂತಿಯಲ್ಲಿ ಋಷಿಸದೃಷ ಅನುಭೂತಿಯ ಪರಿಚಯ ಮಾಡಿಸುತ್ತಾರೆ. ಅತಂತ್ರ, ಅನಿಶ್ಚಿತ ಬದುಕಿಗೆ ನೆಲೆಗಾಣದೆ ಊರೂರು ಅಲೆದು ಅನುಭಾವಿ ಸಂತನಾಗಿ ಬೆಳೆದವರು.
ಹುಸಿನಗುತ ಬಂದೇವ ನಸುನಗುತ ಬಾಳೋಣ ತುಸುನಗುತ ತೆರಳೋಣ ಬಡನೂರು ವರುಷಾನ ಹರುಷದಿ ಕಳೆಯೋಣ ಯಾಕಾರ ಕೆರಳೋಣ ಎನ್ನುವ ಕವಿ, ಬದುಕಿನಲ್ಲಿ ದುಃಖ, ನೋವು, ನಿರಾಶೆ ತರುವ ಘಟನೆಗಳನ್ನೇ ಕಾವ್ಯವಾಗಿಸಿಯೇ ಬದುಕಿದವರು.
| ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಸಾಹಿತಿ
ವಿಶಿಷ್ಟ ಜೀವನದೃಷ್ಟಿಬೇಂದ್ರೆ ಎಲ್ಲರಂತೆ ಇರಲಿಲ್ಲ. ಅವರ ಇರುವಿಕೆ, ಮಾತು ಸೇರಿ ಎಲ್ಲವೂ ವಿಶಿಷ್ಟವಾಗಿದ್ದವು. ಜೀವನದ ಬಗ್ಗೆ ವಿಶೇಷದೃಷ್ಟಿ ಹಾಗೂ ಜೀವನವನ್ನು ಸಕಾರಾತ್ಮವಾಗಿ ನೋಡುವ ದೃಷ್ಟಿ ಅವರಲ್ಲಿತ್ತು. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಸಮರ್ಥವಾಗಿ ಎದುರಿಸಬೇಕು ಎಂಬ ಮಾತನ್ನು ಹೇಳುತ್ತಿದ್ದರು. ಇಂತಹ ಕವಿಯ ಜನ್ಮದಿನವಾದ ಜನವರಿ 31ರಂದು ‘ಕರ್ನಾಟಕ ವರಕವಿ’ ದಿನ ಎಂದು ರಾಜ್ಯ ಸರ್ಕಾರ ಘೊಷಣೆ ಮಾಡಿದರೆ ಸಮಂಜಸ. ಈಗಾಗಲೇ ಯುನೆಸ್ಕೊ ‘ವಿಶ್ವ ಕವಿ ದಿನ’ ಘೋಷಿಸಿದೆ. ಹೀಗಾಗಿ ಬೇಂದ್ರೆ ಅವರನ್ನು ಸ್ಮರಣೆ ಮಾಡಲು ‘ಕರ್ನಾಟಕ ವರಕವಿ ದಿನ’ ಎಂದು ಘೊಷಿಸಬೇಕು.
| ಡಾ. ಶ್ಯಾಮಸುಂದರ ಬಿದರಕುಂದಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ನ ಮಾಜಿ ಅಧ್ಯಕ್ಷರು
ಬೇಂದ್ರೆ ನೆನಪಿನಲ್ಲಿ…ಮೊದಲ ಬಾರಿ ನಾನು ಬೇಂದ್ರೆ ಅವರಂತೆ ವೇಷ ಧರಿಸಿದಾಗ ನನಗೇ ಆಶ್ಚರ್ಯವಾಗಿತ್ತು. ಜನರಿಂದ ಉತ್ತಮ ಸ್ಪಂದನೆ ಸಿಕ್ಕ ಕಾರಣಕ್ಕೆ ಅದನ್ನು ಮುಂದುವರಿಸಿದ್ದೇನೆ. ಈವರೆಗೆ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಬೇಂದ್ರೆ ಅವರನ್ನು ನೋಡದ ಯುವಪೀಳಿಗೆಗೆ ಬೇಂದ್ರೆ ಅವರ ಹಾವಭಾವ, ಅವರು ಹೇಗಿದ್ದರು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದ್ದೇನೆ. ಇದನ್ನು ನಾನು ಇರುವವರೆಗೂ ನಡೆಸುತ್ತೇನೆ.
| ಅನಂತ ದೇಶಪಾಂಡೆ ರಂಗಭೂಮಿ ಕಲಾವಿದರು
ಬದುಕು ಕಲಿಸಿದ ಅಜ್ಜನಾನು ಚಿತ್ರಕಲೆಯಲ್ಲಿ ನೈಪುಣ್ಯ ಹೊಂದಲು ಬೇಂದ್ರೆ ಅವರೂ ಕಾರಣ. ನನ್ನ ಚಿತ್ರಕಲೆ ಮೆಚ್ಚಿಕೊಂಡು ಪ್ರೋತ್ಸಾಹ ನೀಡಿದ್ದರು. ಚಿತ್ರಕಲೆ ಪದವಿ ಪಡೆದಿದ್ದ ನನಗೆ, ಕಲೆಯಲ್ಲಿನ ಹೊಸ ದೃಷ್ಟಿಕೋನ ತೋರಿಸಿದವರು ಬೇಂದ್ರೆ. ಒಂದು ಚಿತ್ರ ಗಮನಿಸಿದರೆ ಪ್ರತಿ ಕ್ಷಣಕ್ಕೂ ಅದರಲ್ಲಿ ಹೊಸತನದ ಕಲ್ಪನೆ ನೋಡುಗರಲ್ಲಿ ಕಾಣುವಂತೆ ಮಾಡುವ ಕೆಲಸ ಕಲಾವಿದನದ್ದು ಎಂಬುದನ್ನು ಮನಗಾಣಿಸಿದ್ದಾರೆ. ಬೇಂದ್ರೆ ಅವರು ಅದ್ಭುತ ವ್ಯಕ್ತಿ. ಪ್ರೀತಿ, ಪ್ರೇಮದ ಬಗ್ಗೆ ಜನರಿಗೆ ತಿಳಿಸಿರುವ ಅವರು, ಕಷ್ಟದ ಕಾಲದಲ್ಲೂ ಉತ್ತಮ ಜೀವನ ನಡೆಸುವುದನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಬೇಂದ್ರೆ ಅವರ ಒಂದು ಸಾವಿರ ಕವನಗಳಿಗೆ ಚಿತ್ರ ಬಿಡಿಸಿದ್ದೇನೆ.
| ಸುರೇಶ ಕುಲಕರ್ಣಿ ಖ್ಯಾತ ಕಲಾವಿದರು
ವಿಶಿಷ್ಟ ಪ್ರಯತ್ನ:ರಂಗಭೂಮಿ ಕಲಾವಿದ ಅನಂತ ದೇಶಪಾಂಡೆ ಅವರು ಬೇಂದ್ರೆ ಅವರ 100ನೇ ಜನ್ಮದಿನದ ಸಮಾರಂಭದಲ್ಲಿ ಬೇಂದ್ರೆಯವರಂತೆ ವೇಷ ಧರಿಸಿ ಮಕ್ಕಳೊಂದಿಗೆ ಸಂವಾದ ನಡೆಸಿ ಗಮನ ಸೆಳೆದಿದ್ದರು. ಅಂದಿನಿಂದ ಬೇಂದ್ರೆಯವರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಲ್ಲದೆ, ಅವರ ಜೀವನವನ್ನು ಯುವಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ದೇಶಪಾಂಡೆಯವರ ಕಾರ್ಯ ಗುರುತಿಸಿರುವ ಅಂಬಿಕಾತನಯದತ್ತ ವೇದಿಕೆಯು 2023-24ನೇ ಸಾಲಿನ ಬೇಂದ್ರೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.
180 ಸಿನಿಮಾಗಳು ಫ್ಲಾಪ್ ಆದರೂ, 400 ಕೋಟಿ ರೂ. ಒಡೆಯ ಈ ನಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 17 =
Remember me
