ಬೆಂಗಳೂರು:ಯಾರದ್ದೋ ಮಾತು ಕೇಳಿ ನನ್ನ ಮೇಲೆ ದ್ವೇಷ ಸಾಧಿಸಿ ವರ್ಗಾವಣೆ ಮಾಡಿಸಬೇಡಿ. ನನ್ನ ಮತ್ತು ಸಾಹೇಬರ (ಎಂಎಲ್​ಎ) ಮಧ್ಯೆ ವಿಷಬೀಜ ಬಿತ್ತಬೇಡಿ. ಕೇವಲ ಆರೇಳು ತಿಂಗಳು ನಾನಿಲ್ಲಿರುತ್ತೇನೆ. ಆಮೇಲೆ ನಾನೇ ಡಿವಿಷನ್ ಬಿಟ್ಟು ಬೇರೆಡೆ ಹೋಗುತ್ತೇನೆ… ವರ್ಗಾವಣೆ ವಿಚಾರವಾಗಿ ಶಾಸಕರ ಆಪ್ತ ಸಹಾಯಕನ (ಪಿಎ) ಬಳಿ ಹಿರಿಯ ಪೊಲೀಸ್ ಅಧಿಕಾರಿ ಮಂಡಿಯೂರಿ ಬೇಡಿಕೊಂಡಿರುವ ಪರಿ ಇದು!
ಬೆಂಗಳೂರಿನ ಆಗ್ನೇಯ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ಗೃಹಸಚಿವರಾಗಿದ್ದ, ಪ್ರಭಾವಿ ಶಾಸಕರ ಪಿಎಗೆ ಬರೆದಿದ್ದಾರೆ ಎನ್ನಲಾದ ಪತ್ರ ವಿಜಯವಾಣಿಗೆ ಲಭ್ಯವಾಗಿದೆ. ಪೊಲೀಸರ ವರ್ಗಾವಣೆಯಲ್ಲಿ ರಾಜಕೀಯ ನಾಯಕರ ಹಸ್ತಕ್ಷೇಪ ಯಾವ ಪ್ರಮಾಣದಲ್ಲಿದೆ ಎಂಬುದಕ್ಕೆ ಈ ಪತ್ರ ಸಾಕ್ಷಿಯಾಗಿದೆ.
ಪೊಲೀಸ್ ಅಧಿಕಾರಿಗಳ ವರ್ಗಾವಣೆ ವೇಳೆ ರಾಜಕಾರಣಿಗಳ ಶಿಫಾರಸುಗಳನ್ನು ನಿರ್ಲಕ್ಷಿಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶ ಪಾಲಿಸು ವುದಾಗಿ ಡಿಜಿಪಿ ಪ್ರವೀಣ್ ಸೂದ್ ಹೈಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ ಬೆನ್ನಲ್ಲೇ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟು ಮಾಡಿದೆ. ವಿಭಾಗದಲ್ಲಿ ಆನ್​ಲೈನ್ ವೇಶ್ಯಾವಾಟಿಕೆ ನಿಯಂತ್ರಿಸದ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ವರ್ಗಾವಣೆ ಮಾಡಲು ನಿರ್ಧರಿಸಲಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಶಾಸಕರು ಹಾಗೂ ಪಿಎ ಬೆನ್ನುಬಿದ್ದಿದ್ದ ಅಧಿಕಾರಿ, ಪತ್ರ ಬರೆದು ಅದನ್ನು ವಾಟ್ಸ್​ಆಪ್​ನಲ್ಲಿ ಪಿಎಗೆ ಕಳುಹಿಸುವ ಮೂಲಕ ಇಲಾಖೆ ಮಾನ ಹರಾಜು ಹಾಕಿದ್ದಾರೆ.
ಪತ್ರದಲ್ಲೇನಿದೆ?
ಆತ್ಮೀಯ ಸ..ಅಣ್ಣನವರೇ, ನಾನು ಮತ್ತು ನೀವು ತುಂಬ ಆತ್ಮೀಯರಾಗಿದ್ದೆವು. ನೀವು ನನ್ನನ್ನು ಕರೆದು ಬೇರೆ ಕಡೆ ಹೋಗು ಎಂದಿದ್ದರೆ ಡಿವಿಷನ್ ಬಿಟ್ಟು ಹೋಗುತ್ತಿದ್ದೆ. ನನ್ನ ಜಾಗಕ್ಕೆ ಬೇರೆ ಅಧಿಕಾರಿಗೆ ಮಿನಿಟ್ (ವರ್ಗಾವಣೆಗೆ ಶಾಸಕರು ಕೊಡುವ ಶಿಫಾರಸು ಪತ್ರ) ಕೊಡಿಸಿರುವುದು ನನಗೆ ಗೊತ್ತಿರಲಿಲ್ಲ. ಗೊತ್ತಾದ ಬಳಿಕ 15-16 ಬಾರಿ ಕರೆ ಮಾಡಿದರೂ ಕೂಡ ನೀವು ಸ್ವೀಕರಿಸಲಿಲ್ಲ. ಖುದ್ದು ಭೇಟಿಯಾಗಿ ಮನವಿ ಮಾಡಿದರೂ ಒಪ್ಪಲಿಲ್ಲ. ಕೊನೆಗೆ ಸಾಹೇಬರನ್ನೇ (ಶಾಸಕರು) ಭೇಟಿ ಮಾಡಿದೆ. ಅವರು ಮುಂದುವರಿಯುವಂತೆ ನನಗೆ ಸೂಚಿಸಿದರು. ಮಾರನೇ ದಿನ ನೀವೇ ಕರೆ ಮಾಡಿ ಜಯನಗರ ಟ್ರಾಫಿಕ್​ಗೆ ಹೋಗುವಂತೆ ಹೇಳಿದಿರಿ. ಅದಕ್ಕೂ ನಾನು ಒಪ್ಪಿಕೊಂಡೆ. ಆದರೆ, ಪುನಃ ನೀವೇ ಕರೆ ಮಾಡಿ ‘ನಿಮ್ಹಾನ್ಸ್ ಬಳಿ ಇರಿ’ ಎಂದು ಹೇಳಿ, ನಿಮ್ಮ ಶಿಷ್ಯನ ಮೂಲಕ ದಕ್ಷಿಣ ವಿಭಾಗದ ಅಧಿಕಾರಿ ಜಾಗಕ್ಕೆ ಮಿನಿಟ್ ಕಳುಹಿಸಿ ಅದನ್ನು ಸಂಬಂಧಪಟ್ಟವರಿಗೆ ಕೊಡಲು ತಿಳಿಸಿದಿರಿ. ಅದರಂತೆ ನಾನು ಅವರಿಗೆ ಅದನ್ನು ತಲುಪಿಸಿದಾಗ ಅವರೂ ನನ್ನ ಮೇಲೆ ದ್ವೇಷ ಸಾಧಿಸುವಂತೆ ಮಾಡಿದಿರಿ. ಒಳ್ಳೆಯವರಿಗೆ ದೇವರು ಕಷ್ಟ ಕೊಡಬಹುದು. ಆದರೆ, ಯಾವತ್ತೂ ಕೈಬಿಡುವುದಿಲ್ಲ. ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ. 6-7 ತಿಂಗಳು ಮಾತ್ರ. ನಾನೇ ಈ ಡಿವಿಷನ್ ಬಿಟ್ಟು ಬೇರೆಡೆ ಹೋಗುತ್ತೇನೆ.
ಸರ್ಕಾರ, ಡಿಜಿಪಿಗೆ ಅವಮಾನ
ಶಾಸಕರು, ಸಂಸದರ ಶಿಫಾರಸಿನ ಮೇರೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ನೇಮಕಾತಿ ಮಂಡಳಿ ಮೂಲಕವೇ ಅಧಿಕಾರಿಗಳ ವರ್ಗಾವಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆಯಾಗಿದೆ. ಇತ್ತೀಚಿನ ವಿಚಾರಣೆ ವೇಳೆ ಪೊಲೀಸ್ ವರ್ಗಾವಣೆಯಲ್ಲಿ ರಾಜಕಾರಣಿಗಳ ಶಿಫಾರಸು ಪರಿಗಣಿಸದಂತೆ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ರಾಜ್ಯ ಸರ್ಕಾರ ಹಾಗೂ ಶಾಸಕರು, ಸಂಸದರು ಮಾಡುವ ಶಿಫಾರಸುಗಳನ್ನು ನಿರ್ಲಕ್ಷಿಸಲಾಗುವುದು ಎಂದು ಡಿಜಿಪಿ ಪ್ರತ್ಯೇಕವಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರು.
ಪ್ರಾಣ ಇರುವವರೆಗೂ ಚಿರಋಣಿ..
ಜನರಿಗೆ ರಕ್ಷಣೆ ಒದಗಿಸಬೇಕಾದ ಪೊಲೀಸ್ ಅಧಿಕಾರಿ, ಶಾಸಕರಿಗೆ ಜೀವನಪೂರ್ತಿ ಚಿರಋಣಿಯಾಗಿರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಸಾಹೇಬರು ನನ್ನನ್ನು ಬೆಂಗಳೂರಿಗೆ ಕರೆತಂದವರು. ನನ್ನ ಪ್ರಾಣ ಇರುವವರೆಗೂ ಅವರಿಗೆ ಚಿರಋಣಿಯಾಗಿರುತ್ತೇನೆ. ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ ವ್ಯಕ್ತಿ ನಾನಲ್ಲ ಎಂದು ಉಲ್ಲೇಖಿಸಿದ್ದಾರೆ.
| ಕೀರ್ತಿನಾರಾಯಣ ಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 16 =
Remember me
