| ಹರೀಶ್ ಬೇಲೂರು ಬೆಂಗಳೂರುರಾಜ್ಯದಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಮದ್ಯದಂಗಡಿಗಳಿಗೆ ಅನುಮತಿ ನೀಡಲಾಗುತ್ತಿದೆ. ಕಾನೂನುಬಾಹಿರವಾಗಿ ಹೊಸದಾಗಿ ಸಿಎಲ್ 7 (ಹೋಟೆಲ್ ಮತ್ತು ವಸತಿ ಗೃಹದಲ್ಲಿ ಮದ್ಯ ಮಾರಾಟ) ಪರವಾನಗಿ ನೀಡಲಾಗುತ್ತಿದ್ದು, ಇಡೀ ರಾಜ್ಯಕ್ಕೆ ಹೋಲಿಸಿದರೆ ಅತಿ ಹೆಚ್ಚು ಸಿಎಲ್ 7 ಮದ್ಯದಂಗಡಿಗಳು ಬೆಂಗಳೂರಿ ನಲ್ಲಿವೆ. ಹಾಸನ ನಂತರದ ಸ್ಥಾನದಲ್ಲಿದೆ. ಗಲ್ಲಿಗಲ್ಲಿಗಳಲ್ಲಿ ನಾಯಿಕೊಡೆಗಳಂತೆ ಸಿಎಲ್ 7 ಮದ್ಯದಂಗಡಿಗಳು ತಲೆ ಎತ್ತುತ್ತಿವೆ. 2020-21ರಲ್ಲಿ 1,572 ಸಿಎಲ್7 ಮದ್ಯದಂಗಡಿಗಳಿದ್ದವು. ಆದರೆ, 2022-23ರಲ್ಲಿ ಇವುಗಳ ಸಂಖ್ಯೆ 2,382ಕ್ಕೇರಿದೆ. ಪ್ರಸಕ್ತ ಸಾಲಿನಲ್ಲಿ ಹೊಸ ಸಿಎಲ್7 ಪರವಾನಗಿ ಕೋರಿ ಸಾವಿರಾರು ಅರ್ಜಿಗಳು ಇಲಾಖೆಗೆ ಸಲ್ಲಿಕೆಯಾಗಿವೆ. ಮುಂದಿನ ಎರಡು ವರ್ಷಗಳಲ್ಲಿ ಇವುಗಳ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟುವ ನಿರೀಕ್ಷೆ ಇದೆ. ಇದರೊಂದಿಗೆ 3,988 ವೈನ್​ಶಾಪ್ (ಸಿಎಲ್ 2) ಹಾಗೂ 3,634 ಸಿಎಲ್ 9 (ಬಾರ್ ಆಂಡ್ ರೆಸ್ಟೋರೆಂಟ್) ಮದ್ಯದಂಗಡಿಗಳಿಗಿಂತ ಸಿಎಲ್ 7 ಮದ್ಯದಂಗಡಿಗಳು ಇರುವಂತಾಗಲಿದೆ.
ಪ್ರತಿ ವರ್ಷ ಅಬಕಾರಿ ಇಲಾಖೆ ಸರಾಸರಿ 500-600 ಸಿಎಲ್ 7 ಪರವಾನಗಿ ಮಂಜೂರು ಮಾಡುತ್ತಿದೆ. ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ ಮತ್ತು ಬಾಗಲಕೋಟೆಗಳಲ್ಲಿ ಹೆಚ್ಚು ಸಿಎಲ್ 7 ಪರವಾನಗಿಗಳನ್ನು ಪಡೆಯಲಾಗಿದೆ. ರಾಜಕೀಯ ಮುಖಂಡರು, ಶಾಸಕರು, ಸಚಿವರ ಬೆಂಬಲಿಗರೇ ಹೆಚ್ಚಾಗಿ ಮದ್ಯದಂಗಡಿಗಳನ್ನು ತೆರೆಯುತ್ತಿದ್ದಾರೆ ಎಂಬುದು ಗೊತ್ತಾಗಿದೆ.
ಜಿಲ್ಲಾವಾರು ಸಿಎಲ್ 7 ವಿವರ:ಬೆಂಗಳೂರಿನಲ್ಲಿ 534, ಹಾಸನ 211, ಮೈಸೂರು 199, ಉಡುಪಿ 108, ಬೆಳಗಾವಿ 107, ದಕ್ಷಿಣ ಕನ್ನಡ 99, ಕೋಲಾರ 82, ಕಲಬುರಗಿ 82, ತುಮಕೂರು 78, ಮಂಡ್ಯ 72, ಬಾಗಲಕೋಟೆ 71, ಬೆಂ. ಗ್ರಾಮಾಂತರ 61, ಕೊಪ್ಪಳ 60, ಶಿವಮೊಗ್ಗ 52, ಕೊಡಗು 48, ವಿಜಯಪುರ 47, ರಾಯಚೂರು 45, ಧಾರವಾಡ 45, ಬೀದರ್ 43, ಗದಗ 40, ಚಿಕ್ಕಮಗಳೂರು 39, ಬಳ್ಳಾರಿ 33, ಹಾವೇರಿ 31, ಚಿಕ್ಕಬಳ್ಳಾಪುರ 31, ಉತ್ತರ ಕನ್ನಡ 30, ಚಾಮರಾಜನಗರ 27, ಯಾದಗಿರಿ 27, ಚಿತ್ರದುರ್ಗ 26, ರಾಮನಗರ 19, ವಿಜಯನಗರ 18, ದಾವಣಗೆರೆ 17 ಪರವಾನಗಿ ನೀಡಲಾಗಿದೆ.
12,614 ಮದ್ಯದಂಗಡಿ:ರಾಜ್ಯದಲ್ಲಿ ಸದ್ಯ 12,614 ಮದ್ಯದಂಗಡಿಗಳಿವೆ. ಬೆಂಗಳೂರಲ್ಲೇ ಅತಿ ಹೆಚ್ಚು ಅಂದರೆ ಶೇ.45 ಮದ್ಯದಂಗಡಿಗಳಿವೆ. 3,988 ವೈನ್​ಶಾಪ್(ಸಿಎಲ್ 2), 279 ಕ್ಲಬ್ (ಸಿಎಲ್ 4), 78 ಸ್ಟಾರ್ ಹೋಟೆಲ್ ( ಸಿಎಲ್ 6ಎ), 2,382 ಹೋಟೆಲ್ ಮತ್ತು ವಸತಿಗೃಹ, 68 ಮಿಲಿಟರಿ ಕ್ಯಾಂಟೀನ್ ಮಳಿಗೆ (ಸಿಎಲ್ 8), 3,634 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್ 9), 1,041 ಎಂಎಸ್​ಐಎಲ್ (ಸಿಎಲ್ 11ಸಿ), 745 ಆರ್​ವಿಬಿ ಸೇರಿವೆ. ಸಿಎಲ್ 2 ಹಾಗೂ ಸಿಎಲ್ 9 ಹೊರತುಪಡಿಸಿ ಉಳಿದ ಮಾದರಿಯ ಮದ್ಯದಂಗಡಿಗಳನ್ನು ತೆರೆಯಲು ಇಲಾಖೆ ಲೈಸೆನ್ಸ್ ನೀಡುತ್ತಿದೆ.
ಎರಡೂವರೆ ಕೋಟಿ ರೂ. ಬೇಕು:ಹೊಸದಾಗಿ ಸಿಎಲ್ 7 ಮದ್ಯದಂಗಡಿ ತೆರೆಯಲು ಅಂದಾಜು 2 ಕೋಟಿ ರೂ.ಗೂ ಹೆಚ್ಚು ಬಂಡವಾಳ ಬೇಕು. ಕರ್ನಾಟಕ ಅಬಕಾರಿ (ದೇಶೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮ 1968ರ ರೂಲ್3(7) ಪ್ರಕಾರ ವಸತಿಗೃಹದಲ್ಲಿ ತಂಗುವ ಗ್ರಾಹಕರಿಗೆ ಹಾಗೂ ಅವರ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಲು ಅವಕಾಶವಿದೆ. ಆದ್ದರಿಂದ, ಮಹಾನಗರ ಪಾಲಿಕೆ ಪ್ರದೇಶದ ವಸತಿಗೃಹದಲ್ಲಿ ಕನಿಷ್ಠ 15 ಡಬಲ್ ಕೊಠಡಿ, ಇತರೆಡೆಯ ವಸತಿಗೃಹದಲ್ಲಿ ಕನಿಷ್ಠ 10 ಕೊಠಡಿ, ಹಾಲ್, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಹೊಂದಿರಬೇಕು. ಇಲಾಖೆಯ ಅಧಿಕಾರಿಗಳಿಂದ ಹಿಡಿದು ಸಚಿವರಿಗೆ ಲಕ್ಷಾಂತರ ರೂ. ಲಂಚವೂ ಸೇರಿ ಮದ್ಯದಂಗಡಿ ತೆರೆಯಲು 2.5 ಕೋಟಿ ರೂ. ಆಗಲಿದೆ. ಸಹಜವಾಗಿಯೇ ದುಡ್ಡಿನ ಕುಳಗಳಷ್ಟೇ ಪರವಾನಗಿ ಪಡೆಯಬಹುದು.
ಬೇಕಾಬಿಟ್ಟಿ ನಿಯಮ:ಇಲಾಖೆಯಿಂದ ಮದ್ಯದಂಗಡಿಗಳಿಗೆ ಅನುಮತಿ ನೀಡುವಂತೆ ಶಿಫಾರಸು ಮಾಡುವ ವೇಳೆ ಅಧಿಕಾರಿಗಳು ತಮಗೆ ಬೇಕಾದಂತೆ ನಿಯಮಗಳನ್ನು ತಿರುಚುತ್ತಿದ್ದಾರೆ. ರೂಲ್ 5ರಂತೆ ಗೆಜೆಟೆಡ್ ಅಧಿಕಾರಿಯಿರುವ ಸರ್ಕಾರಿ ಕಚೇರಿಗೆ ಮಾತ್ರವೇ 100 ಮೀಟರ್ ನಿಯಮ ಅನ್ವಯವಾಗುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಬಕಾರಿ ನಿಯಮ 5ರಂತೆ ಮದ್ಯದಂಗಡಿಗೆ ಅನುಮತಿ ನೀಡುವ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಯಾವುದೇ ಧಾರ್ವಿುಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಕಚೇರಿ ಅಥವಾ ಸ್ಥಳೀಯ ಸಂಸ್ಥೆಗಳ ಕಾರ್ಯಾಲಯಗಳು ಇರುವಂತಿಲ್ಲ. ವಸತಿ ಪ್ರದೇಶಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲನಿಗಳು ಇರಬಾರದು. ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯಿಂದ 220 ಮೀಟರ್ ವ್ಯಾಪ್ತಿಯಲ್ಲಿ ಇರಬಾರದೆಂಬ ನಿಯಮವಿದೆ. ಆದರೆ, ಕೆಲ ಅಬಕಾರಿ ಅಧಿಕಾರಿಗಳು ಈ ನಿಯಮಗಳನ್ನು ಉಲ್ಲಂಘಿಸಿ ಸಿಎಲ್ 7 ಪರವಾನಗಿ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಏರ್ ಇಂಡಿಯಾ ಪೈಲಟ್ ಹೃದಯಾಘಾತದಿಂದ ಸಾವು; ಇದು ಮೂರನೇ ಪ್ರಕರಣ!

ವಿಶ್ವಕಪ್​ ಕ್ರಿಕೆಟ್​: ಫೈನಲ್​ ಪಂದ್ಯ ವೀಕ್ಷಿಸಲಿದ್ದಾರಾ ಪ್ರಧಾನಿ ಮೋದಿ?; ಭಾರತದ ಎದುರಾಳಿ ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
