| ದತ್ತಾತ್ರೇಯ ಪರಮೇಶ್ವರ ಹೆಗಡೆ
ಇಹಲೋಕ ತ್ಯಜಿಸಿದ ನಂತರವೂ ತಮ್ಮ ಕಾರ್ಯಸಾಧನೆಗಳಿಂದಾಗಿ ಈ ಜಗತ್ತಿನಲ್ಲಿ ಜೀವಂತವಾಗಿರುವ ಅಜರಾಮರ ವ್ಯಕ್ತಿಗಳಲ್ಲಿ ಬಾಲಗಂಗಾಧರ ತಿಲಕರೂ ಒಬ್ಬರು. ಭಾರತೀಯರು ಅವರನ್ನು ಲೋಕಮಾನ್ಯರೆಂದು ಕೊಂಡಾಡಿದ್ದಾರೆ. ಭಾರತೀಯರಿಗೆ ನಮ್ಮ ದೇಶ, ನಮ್ಮ ಭಾಷೆ, ನಮ್ಮ ಜನ ಎಂಬ ರಾಷ್ಟ್ರೀಯತೆಯ ಪ್ರಜ್ಞೆ ಮೂಡಿಸಿ ರಾಷ್ಟ್ರೀಯತೆಯ ಜನಕರಾದ ಹೆಗ್ಗಳಿಕೆಯೂ ಅವರಿಗಿದೆ. ಜೀವನ, ಶಿಕ್ಷಣ, ವ್ಯಕ್ತಿತ್ವ, ದೇಶಕ್ಕಾಗಿ ಅವರ ಕೊಡುಗೆ ಎಲ್ಲರಿಗೂ ಮಾದರಿ.
ಮಹಾರಾಷ್ಟ್ರದ ರತ್ನಾಗಿರಿಯಲ್ಲಿ 1856ರ ಜುಲೈ 23ರಂದು ಜನಿಸಿದ ಬಾಲಗಂಗಾಧರ ತಿಲಕರ ಮೂಲ ಹೆಸರು ಕೇಶವ ಗಂಗಾಧರ ತಿಲಕ. ಶಾಲಾ ಶಿಕ್ಷಕರೂ ಮತ್ತು ಸಂಸ್ಕೃತ ವಿದ್ವಾಂಸರೂ ಆದ ಗಂಗಾಧರ ತಿಲಕರು ಇವರ ತಂದೆ. ಪಾರ್ವತಿ ಬಾಯಿ ಇವರ ತಾಯಿ. ಸುಸಂಸ್ಕೃತ ಮರಾಠಿ ಹಿಂದು ಚಿತ್ಪಾವನ ಬ್ರಾಹ್ಮಣ ಕುಟುಂಬದ ಕುಡಿಯಾಗಿ, ಉತ್ತಮ ಶಿಕ್ಷಣ ಪಡೆದು, ಗಣಿತ ಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಕಾನೂನು ಅಧ್ಯಯನಕ್ಕೆ ಮನಸ್ಸು ಮಾಡಿದ ಇವರು ಎಲ್​ಎಲ್​ಬಿ ಪದವಿಯನ್ನೂ ಯಶಸ್ವಿಯಾಗಿ ಪೂರೈಸಿದರು. ತಮ್ಮ ಹದಿನಾರನೇ ವಯಸ್ಸಿನಲ್ಲಿ ಸತ್ಯಭಾಮಾರನ್ನು ವಿವಾಹವಾದರು. ಇವರಿಗೆ ರಾಂಭೌ, ವಿಶ್ವನಾಥ ಮತ್ತು ಶ್ರೀಧರ ಎಂಬ ಪುತ್ರರಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ತಿಲಕರು:1890ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾದ ಮೇಲೆ ಬಾಲಗಂಗಾಧರ ತಿಲಕರ ಜೀವನದ ಮತ್ತೊಂದು ಅಧ್ಯಾಯ ತೆರೆದುಕೊಂಡಿತು. ಮಂದಗಾಮಿಗಳ ಯುಗದ ಕಾಲವದು. ಮಂದಗಾಮಿಗಳ ಪ್ರಾರ್ಥನೆ, ಮನವಿ, ಪ್ರತಿಭಟನೆಗಳಿಗೆ ಫಲ ದೊರೆಯದಿದ್ದಾಗ ಉದಯಿಸಿದವರೇ ಲಾಲ್, ಬಾಲ್, ಪಾಲ್​ರೆಂಬ ತ್ರಿಮೂರ್ತಿ ತೀವ್ರಗಾಮಿಗಳು. ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್ ಅವರೇ ಆ ತ್ರಿವಳಿ ರತ್ನಗಳು. ರಾಜಕೀಯ ಹಕ್ಕುಗಳಿಗಾಗಿ ಭಿಕ್ಷಾಟನೆ ಮಾಡುವ ಬದಲು ಹೋರಾಡಿ ಅದನ್ನು ಪಡೆಯಬೇಕೆಂದು ಪ್ರತಿಪಾದಿಸಿ ತೀವ್ರಗಾಮಿ ವಿಚಾರಧಾರೆಯ ಪ್ರವರ್ತಕರಾದರು. ಅವರು ಆರಂಭಿಸಿದ ಮರಾಠ ಎಂಬ ಆಂಗ್ಲಭಾಷೆಯ ಪತ್ರಿಕೆ ಮತ್ತು ಕೇಸರಿ ಎಂಬ ಮರಾಠಿ ಭಾಷೆಯ ಪತ್ರಿಕೆಗಳು ಒಂದು ಕಡೆ ಬ್ರಿಟಿಷರ ವಿರುದ್ಧ ಬೆಂಕಿಯನ್ನು ಉಗುಳಿದರೆ ಇನ್ನೊಂದೆಡೆ ರಾಷ್ಟ್ರೀಯತೆಯ ಕಿಡಿಯನ್ನು ಹೊತ್ತಿಸಿದವು. ಪುಣೆಯಲ್ಲಿ ಪ್ಲೇಗ್​ನ ಅಟ್ಟಹಾಸಕ್ಕಿಂತ ಬ್ರಿಟಿಷರ ದಬ್ಬಾಳಿಕೆಯೇ ಮಿತಿ ಮೀರಿದಾಗ ತಿಲಕರು ಕೇಸರಿ ಪತ್ರಿಕೆಯಲ್ಲಿ ಭಗವದ್ಗೀತೆಯನ್ನು ಉಲ್ಲೇಖಿಸಿ ‘ಪ್ರತಿಫಲವನ್ನು ನಿರೀಕ್ಷಿಸದೇ ದಬ್ಬಾಳಿಕೆಯನ್ನು ಕೊಂದರೆ ಯಾರೂ ಹೊಣೆಗಾರರಾಗಲಾರರು’ ಎಂದು ಪ್ರತಿಪಾದಿಸಿದರು. ಇದರ ಫಲವೋ ಎಂಬಂತೆ ಚಾಪೇಕರ್ ಸಹೋದರರಿಂದ ಪ್ಲೇಗ್ ಕಮಿಷನರ್ ರಾಂಡ್ ಹತ್ಯೆ ನಡೆಯಿತು. ಆಗ ಬ್ರಿಟಿಷರ ಕೆಂಗಣ್ಣು ತಿಲಕರತ್ತ ಹರಿಯಿತೇ ಹೊರತು ರಾಂಡ್​ನ ದೌರ್ಜನ್ಯದತ್ತ ಹರಿಯಲಿಲ್ಲ. ತಿಲಕರು 18 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಾಗ ಅವರಿಗೆ ರಾಷ್ಟ್ರೀಯ ನಾಯಕ ಎಂಬ ಗೌರವ ದೊರೆಯಿತು.

ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ:ಯುವ ಜನತೆ ದೇಶದ ಆಸ್ತಿ ಎಂದು ಅರಿತಿದ್ದ ಇವರು ಯುವಶಿಕ್ಷಣಕ್ಕಾಗಿ ‘ಡೆಕ್ಕನ್ ಎಜುಕೇಶನ್ ಸೊಸೈಟಿ’ಯನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆ ಸಂಸ್ಥೆಯ ಮೂಲಕ ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಪಾಠವನ್ನು ಯುವಜನತೆಗೆ ತಲುಪಿಸಿದರು. ಈ ಸಂಸ್ಥೆಯಡಿ ಸ್ಥಾಪನೆಯಾದ ಫರ್ಗಸನ್ ಕಾಲೇಜು ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದ್ದು ಮಾತ್ರವಲ್ಲ ತಿಲಕರಿಂದ ಗಣಿತ ಕಲಿಯುವ ಭಾಗ್ಯವೂ ವಿದ್ಯಾರ್ಥಿಗಳಿಗೆ ದೊರಕಿತು.
ಸ್ವದೇಶಿ ಚಳವಳಿ:ಬಂಗಾಳ ವಿಭಜನೆಯ ನಂತರ ತಿಲಕರು ಸ್ವದೇಶಿ ಚಳವಳಿಯನ್ನು ಜನಪ್ರಿಯಗೊಳಿಸಿದರು. ವಿದೇಶಿ ವಸ್ತುಗಳ ಬಹಿಷ್ಕಾರ ಮತ್ತು ಸ್ವದೇಶಿ ವಸ್ತುಗಳ ಬಳಕೆ ಬ್ರಿಟಿಷ್ ವಿರೋಧಿ ಚಳವಳಿಯ ಬ್ರಹ್ಮಾಸ್ತ್ರಗಳಾದವು. ಬ್ರಿಟಿಷರ ಒಡೆದು ಆಳುವ ನೀತಿಗೆ ಸ್ವದೇಶಿ ಚಳವಳಿ ತಿರುಗುಬಾಣದಂತೆ ಕಾರ್ಯನಿರ್ವಹಿಸಿತು. ಬ್ರಿಟಿಷರಿಗೆ ತಿಲಕರು ಅಶಾಂತಿಯ ಜನಕರಂತೆ ಭಾಸವಾದರು.
ಬರ್ವದ ಮ್ಯಾಂಡಲೆ ಜೈಲಿನಲ್ಲಿದ್ದಾಗ ಗೀತಾ ರಹಸ್ಯ ಎಂಬ ಕೃತಿ ರಚಿಸಿ ಭಗವದ್ಗೀತೆಯ ಕರ್ಮಯೋಗದ ಅಧ್ಯಯನಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿದರು. ‘ದಿ ಆರ್ಕ್​ಟಿಕ್ ಹೋಮ್ ಇನ್ ದಿ ವೇದಾಸ್’ ಎಂಬ ಇನ್ನೊಂದು ಕೃತಿಯಲ್ಲಿ ಆರ್ಯರ ಮೂಲವನ್ನು ವೇದಗಳ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುವ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. 1916ರಲ್ಲಿ ಸ್ವರಾಜ್ಯಕ್ಕಾಗಿ ಡಾ. ಅನಿಬೆಸೆಂಟ್ ಮತ್ತು ಜಿ.ಎಸ್. ಖಾಪರ್ಡೆ ಅವರೊಂದಿಗೆ ಸೇರಿ ‘ಹೋಂ ರೂಲ್ ಲೀಗ್’ ಚಳವಳಿ ಆರಂಭಿಸಿ ನಮ್ಮನ್ನು ನಾವೇ ಆಳಿಕೊಳ್ಳುವ ಸ್ವಾವಲಂಬಿ ಭಾರತದ ಕನಸಿಗೆ ನೀರೆರೆದರು. ಅವರು ನೀಡಿದ ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ನಾನದನ್ನು ಪಡೆದೇ ತೀರುತ್ತೇನೆ’ ಎಂಬ ಸಿಂಹನಿನಾದ ಪ್ರತಿ ಭಾರತೀಯನ ಧ್ಯೇಯ ವಾಕ್ಯವಾಯಿತು. ಅವರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಮತ್ತು ಶಿವಾಜಿ ಜಯಂತಿ ಭಾರತೀಯರನ್ನು ಜೇನಿನ ಗೂಡಿನಂತೆ ಒಂದುಗೂಡಿಸಿತು. 1920ರ ಆಗಸ್ಟ್ 1ರಂದು ತಿಲಕರು ಮರಣ ಹೊಂದಿದಾಗ ಭಾರತದಲ್ಲಿ ಆವರಿಸಿದ ಶೂನ್ಯ ಭಾವನೆ ಅವರ ಮೇರು ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ. ಶಿಕ್ಷಕರಾಗಿ, ಪತ್ರಕರ್ತರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ನಮ್ಮಲ್ಲಿರುವ ದೇಶಪ್ರೇಮವನ್ನು ಬಡಿದೆಬ್ಬಿಸಿದ ಚೇತನವಾಗಿ ಇಂದಿಗೂ ಅವರು ಪ್ರಾತಃಸ್ಮರಣೀಯರು. ಎಂದೆಂದಿಗೂ ಲೋಕಮಾನ್ಯರು.
(ಲೇಖಕರು ಇತಿಹಾಸ ಉಪನ್ಯಾಸಕರು)
ದಕ್ಷಿಣ ಕೊರಿಯಾಗೆ ತೆರಳಿದ ಸಚಿವ ಎಂಬಿ ಪಾಟೀಲ್​ ನೇತೃತ್ವದ ನಿಯೋಗ: ಹೈವಿಷನ್‌ ಜೊತೆಗೆ ಒಪ್ಪಂದಕ್ಕೆ ಅಂಕಿತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − 10 =
Remember me
