ಇರುವುದೊಂದೇ ಜೀವನ, ಅದು ಅಮೂಲ್ಯ ಎಂಬ ಅರಿವು ಎಲ್ಲರಲ್ಲೂ ಇರಬೇಕು. ವಿಶೇಷವಾಗಿ ವಿದ್ಯಾರ್ಥಿಗಳು, ಯುವಜನತೆ ಜೀವನದ ಮಹತ್ವವನ್ನು ಅರಿತುಕೊಳ್ಳಬೇಕು. ಕ್ಷಣಿಕ ಸುಖ, ಆಸೆಗಳ ಬೆನ್ನತ್ತಿಕೊಂಡು ಕಷ್ಟಕ್ಕೆ ಸಿಲುಕಬಾರದು, ಜೀವ ಕಳೆದುಕೊಳ್ಳಬಾರದು. ಮೋಜಿನಾಟಕ್ಕೆ ಜೀವನದ ಬೆಳಕು ಆರಿಹೋಗಬಾರದು. ಬದಲಿಗೆ ಆ ಬೆಳಕು ಕುಟುಂಬವನ್ನು ಬೆಳಗುವಂತಾಗಬೇಕು.
ಸಾಹಸ ಮನುಷ್ಯನ ಸಹಜ ಗುಣ. ರೋಮಾಂಚನ ಅಥವಾ ಒಂದು ತೆರನಾದ ಅಸಾಮಾನ್ಯ ಅನುಭವವನ್ನು ಹೊಂದುವುದಕ್ಕೆ ಬಯಸಲು ಮನಸ್ಸು ಕೆಲವೊಮ್ಮೆ ಕಾತರಿಸುತ್ತದೆ. ತನ್ನ ಕುತೂಹಲಗೊಳ್ಳುವ ಗುಣದಿಂದ ಹೊಸತನ್ನು ಕಂಡುಕೊಳ್ಳಲು, ಹೊಸದನ್ನು ಸಾಧಿಸಲು ಮನ ಹಾತೊರೆಯುತ್ತದೆ. ತನ್ನ ಕುತೂಹಲ, ಅನ್ವೇಷಣೆಯ ಸಾಹಸ ಕೈಗೊಂಡ ಕೊಲಂಬಸ್​ನಿಂದಾಗಿಯೇ ಸಾಕಷ್ಟು ಭೂಪ್ರದೇಶಗಳು ಬೆಳಕಿಗೆ ಬಂದವು ಎಂದು ಇತಿಹಾಸ ಪುಸ್ತಕದಲ್ಲಿ ಓದಿದ್ದೇವೆ. ಅಂತಹ ಮನಸ್ಸು ಇಂದೂ ಬಹುತೇಕರಲ್ಲಿ ಇದೆ. ಇವೆಲ್ಲ ಒಳ್ಳೆಯದೇ. ಆದರೆ ಅತಿಯಾಗಬಾರದು. ಸಾಹಸದ ಬದಲು ದುಸ್ಸಾಹಸ ಮಾಡಬಾರದು ಅಷ್ಟೇ. ಈಗಿನ ಬದುಕು, ಉದ್ಯೋಗದಲ್ಲಿನ ಒತ್ತಡಗಳಿಂದ ಬೇಸತ್ತ ಕೆಲವರು ವಾರಾಂತ್ಯಗಳಲ್ಲಿ ಮನಸ್ಸನ್ನು ಹಗುರ ಮಾಡಿಕೊಳ್ಳಲು ಕುಟುಂಬ, ಓದು, ಅಡುಗೆ, ಸ್ನೇಹಿತರ ಭೇಟಿಗಳನ್ನು ಕೈಗೊಂಡರೆ ಇನ್ನು ಕೆಲವು ಸಾಹಸಪ್ರಿಯರು ಟ್ರೆಕ್ಕಿಂಗ್, ಪ್ರವಾಸ, ಬೈಕ್​ರೈಡ್, ಭಂಗಿಜಂಪ್, ಸ್ಕೈಡೈವಿಂಗ್, ರ್ಯಾಫ್ಟಿಂಗ್ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಹೊಸ ಹೊಸ ಅನುಭವ ಪಡೆಯುತ್ತಾರೆ. ಅವಿಸ್ಮರಣೀಯ ಕ್ಷಣಗಳನ್ನು ಮನದುಂಬಿಕೊಳ್ಳುತ್ತಾರೆ. ಆದರೆ ಸಾಹಸ ಮಾಡುವ ಸಂದರ್ಭದಲ್ಲಿ ಕೆಲವು ಮಂದಿ ದುಸ್ಸಾಹಸಕ್ಕೆ ಕೈಹಾಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಕೆಲವೇ ಕ್ಷಣಗಳ ಖುಷಿ ಅಥವಾ ಒಂದು ಕ್ಷಣದ ತಪ್ಪು ನಿರ್ಧಾರದಿಂದ ಅವಘಡ ಸಂಭವಿಸಿ ನೋವು ಅನುಭವಿಸಬೇಕಾಗುತ್ತದೆ. ಅಂತಹ ಘಟನೆಗಳು ಸಾಕಷ್ಟು ನಡೆದರೂ, ಅವುಗಳ ಬಗ್ಗೆ ತಿಳಿದಿದ್ದರೂ ಮತ್ತೆ ಮತ್ತೆ ದುಸ್ಸಾಹಸ ಮಾಡುತ್ತಾರೆ. ಅಪಾಯಕ್ಕೆ ಎದೆಯೊಡ್ಡಿ ತಾವೂ ಕಷ್ಟಕ್ಕೆ ಸಿಲುಕುವುದಲ್ಲದೆ, ಇತರರನ್ನೂ ಸಂಕಟಕ್ಕೆ ದೂಡುತ್ತಾರೆ. ಸಾಹಸಕ್ಕೂ ದುಸ್ಸಾಹಸಕ್ಕೂ ಅಜಗಜಾಂತರವಿದೆ.
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿತ್ತು. ಕುಟುಂಬವೊಂದು ಜಲಪಾತದಲ್ಲಿ ಸಿಲುಕಿ ಬಂಡೆಯೊಂದರ ಮೇಲೆ ನಿಂತು ಸಾವು ಬದುಕಿನ ನಡುವೆ ಸಂದಿಗ್ಧ ಪರಿಸ್ಥಿತಿಯಲ್ಲಿ ಒದ್ದಾಡಿ 5-10 ನಿಮಿಷಗಳ ಬಳಿಕ ನೀರು ಪಾಲಾಗುವ ಭಯಾನಕ ಮತ್ತು ಘನಘೊರ ದೃಶ್ಯ ಅದು. ಅದನ್ನು ನೋಡಿದ ಕೆಲವರು ‘ಇಂಥಾ ಮಳೆಯಲ್ಲಿ ಜಲಪಾತದ ಕೆಳಗೆ ಯಾಕೆ ಹೋಗಬೇಕು, ಜೊತೆಗೆ ಮಕ್ಕಳನ್ನೂ ಬಂಡೆಗೆ ಕರೆದೊಯ್ಯುತ್ತಾರೆ, ಇಂಥ ಹಿರಿಯರಿಗೆ ಏನು ಹೇಳಬೇಕು’ ಎನ್ನುತ್ತಿದ್ದರು. ನನಗೂ ಹೌದೆನಿಸಿತು. ಮಕ್ಕಳನ್ನು ತಿದ್ದಿ, ಬುದ್ಧಿ ಹೇಳಬೇಕಾದ ಹಿರಿಯರೇ ಅಪಾಯಕ್ಕೆ ಮೈ ಒಡ್ಡಿದರೆ, ಮುಂದಿನ ಪೀಳಿಗೆಗೆ ಏನು ಸಂದೇಶ ರವಾನೆಯಾಗಬಹುದು ಎನ್ನುವುದು ನನ್ನನ್ನು ಕಾಡಿತ್ತು. ಯಾಕೆಂದರೆ ಒಬ್ಬ ಬೈಕ್​ನಲ್ಲಿ ವೀಲಿಂಗ್ ಮಾಡುವುದು, ಗುಡ್ಡಗಾಡುಗಳಲ್ಲಿ ವಾಹನ ಚಲಾಯಿಸುವುದು ಮುಂತಾದ ಸಾಹಸ ಮಾಡಿದ ವಿಡಿಯೋವನ್ನು ಅಂತರ್ಜಾಲದಲ್ಲಿ ಹಾಕಿದ ಕೂಡಲೇ ಅದೇ ರೀತಿಯ ಸಾಹಸವನ್ನು ಕೈಗೊಂಡು ಅಂತರ್ಜಾಲದಲ್ಲಿ ಹಂಚಿಕೊಳ್ಳುವವರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಈ ರೀತಿಯ ಘಟನೆಗಳು ಅನೇಕರ ಪ್ರಾಣಾಪಾಯಕ್ಕೆ ಕಾರಣವಾಗಬಹುದು.
ಬಿಸಿಲ ಝುಳದಿಂದ ಬೇಸತ್ತ ಜನರು ಮಳೆಗಾಲ ಬರ್ತಿದ್ದಂತೆ ಖುಷಿಯಾಗ್ತಾರೆ. ಮಳೆಗಾಲದಲ್ಲಿ ಎಲ್ಲೆಡೆ ಪರಿಸರ ಹಚ್ಚಹಸಿರಿನಿಂದ ಕಂಗೊಳಿಸುತ್ತಾ ರಮಣೀಯವಾಗಿರುತ್ತದೆ. ಪ್ರಕೃತಿಗೆ ನವಚೈತನ್ಯ ಕೊಡುವ ಶಕ್ತಿ ಮಳೆಗೆ ಇದೆ. ಹಸಿರು ಪರಿಸರ ಮನಸ್ಸಿಗೆ ಮುದ, ಆಹ್ಲಾದವನ್ನು ನೀಡುತ್ತದೆ. ಅನೇಕರು ಪ್ರಕೃತಿಯ ಸೌಂದರ್ಯ ಆಸ್ವಾದಿಸಲು ಹಾಗೂ ಇದೊಂದು ರಿಲ್ಯಾಕ್ಸ್ ಮಾಡುವ ಸಮಯವೆಂದು ಪ್ರವಾಸ ಕೈಗೊಳ್ಳುತ್ತಾರೆ. ನಿಸರ್ಗದ ಜೀವಂತಿಕೆಯನ್ನು ಸಾಕ್ಷೀಕರಿಸುವ ಜಲಪಾತಗಳನ್ನು ವೀಕ್ಷಿಸುವ, ನೀರಿನೊಂದಿಗೆ ಆಟ ಆಡುವ ಹಂಬಲ ಹೆಚ್ಚಿನವರಿಗೆ ಇರುತ್ತದೆ. ಆದರೆ ಮಳೆಗಾಲ ಎನ್ನುವುದು ಎಷ್ಟು ರಮಣೀಯವೋ ಕೆಲವೊಮ್ಮೆ ಅಷ್ಟೇ ರೌದ್ರಾವತಾರ ತಾಳುತ್ತದೆ ಎನ್ನುವುದನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು.
ನಿಸರ್ಗದ ಮಡಿಲಲ್ಲಿ ಆಟವಾಡುವುದು ತಪ್ಪಲ್ಲ. ಆದರೆ ಹುಡುಗಾಟ ಮಾಡುವುದು ಅಕ್ಷಮ್ಯ. ಆ ಕುಟುಂಬ ಜಲಪಾತ ವೀಕ್ಷಣೆಗೆ ತೆರಳಿ ದೂರದಿಂದಲೇ ಸೌಂದರ್ಯ ಆಸ್ವಾದಿಸುವ ಬದಲು, ಜಲಪಾತದ ಹತ್ತಿರ, ಬಂಡೆಗಲ್ಲನ್ನು ಏರಿ ಸಾಹಸ ಮಾಡುವುದು, ಫೋಟೋ, ಸೆಲ್ಪಿ ತೆಗೆದುಕೊಳ್ಳುತ್ತಾ ಪ್ರಾಣಾಪಾಯಕ್ಕೆ ಸಿಲುಕುವುದು ಬಹುದೊಡ್ಡ ದುರಂತ. ಕೆಲವೊಮ್ಮೆ ಬುದ್ಧಿ ಹೇಳಬೇಕಾದ ದೊಡ್ಡವರೇ ದುಸ್ಸಾಹಸಕ್ಕೆ ಇಳಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ, ಅಲ್ಲವೇ?
ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಮನೆಯ ಆಸುಪಾಸಿನಲ್ಲಿ ಸಣ್ಣ ತೊರೆಗಳು, ಹಳ್ಳಗಳು ಇರುತ್ತಿದ್ದವು. ಮಕ್ಕಳಿಗಂತೂ ನೀರಲ್ಲಿ ಆಟವಾಡುವುದೇ ಕೆಲಸ. ದೊಡ್ಡವರ ಕಣ್ಣು ತಪ್ಪಿಸಿ ನೀರಾಟವಾಡಲು ಕಾಯುತ್ತಿರುತ್ತಾರೆ. ಹಾಗಾಗಿ ದೊಡ್ಡವರು ‘ಮಳೆಗಾಲದಲ್ಲಿ ನೀರಿಗೆ ಇಳಿಯಬೇಡಿ, ತೊರೆ ಹತ್ತಿರ ಹೋಗಬೇಡಿ’ ಎಂದು ಗದರಿಸಿ ನೀರಿನಿಂದ ದೂರ ಇರುವಂತೆ ನೋಡಿಕೊಳ್ಳುತ್ತಿದ್ದರು. ಮಕ್ಕಳ ಬಗ್ಗೆ ಸಾಕಷ್ಟು ಎಚ್ಚರ ವಹಿಸುತ್ತಿದ್ದರು. ಆಗಿನ ಕಾಲದಲ್ಲಿ ಸಾರಿಗೆ ಸಂಪರ್ಕವೂ ಕಡಿಮೆ ಇದ್ದುದ್ದರಿಂದ ಇಂದಿನ ಹಾಗೆ ಜಲಪಾತಗಳ ವೀಕ್ಷಣೆ, ಸಮುದ್ರಗಳ ಬಳಿ ತೆರಳುವುದು ವಿರಳಾತಿವಿರಳವಾಗಿತ್ತು. ಅಲ್ಲದೆ ಹಿಂದೆಲ್ಲ ಮಳೆಗಾಲದಲ್ಲಿ ಸಮುದ್ರತೀರಕ್ಕೆ ಹೋಗುವುದು, ಬಂಡೆಗಳನ್ನು ಹತ್ತುವುದು, ಜಲಪಾತಗಳ ವೀಕ್ಷಣೆಗೆ ಹಿರಿಯರೇ ನಿಷೇಧ ಹೇರುತ್ತಿದ್ದರು. ಆದರೆ ಈಗ ಮಳೆಗಾಲದಲ್ಲಿ ಅದೇ ಒಂದು ಟ್ರೆಂಡ್. ಜಲಧಾರೆಗಳಲ್ಲಿ ಸ್ನಾನ ಮಾಡುವುದು, ಎತ್ತರದ ಬಂಡೆಗಳನ್ನು ಹತ್ತುವುದು, ಮರ ಏರುವುದು ಮುಂತಾದ ಸಾಹಸ ಪ್ರದರ್ಶನಕ್ಕೆ ಮನ ಮುಂದಾಗುತ್ತದೆ. ನಾಲ್ಕೈದು ಜನರ ತಂಡವು ಪ್ರವಾಸಕ್ಕೆ ಹೋದಾಗ ನದಿಯಲ್ಲಿ ಈಜಾಡಲು ನೀರಿಗಿಳಿದ್ದರು. ಈ ದಂಡೆಯಿಂದ ಆ ದಂಡೆಗೆ ಹೋಗಿ ಬಂದವರಿಗೆ ಇಂತಿಷ್ಟು ಇನಾಮು ಎಂದು ಅವರಲ್ಲಿ ಒಬ್ಬ ಸುಮ್ಮನೇ ಘೊಷಣೆ ಮಾಡಿಬಿಟ್ಟ. ‘ಹೌದಾ.. ನಿಜವಾಗಿ ಆ ದಡಕ್ಕೆ ಹೋಗಿ ಬಂದರೆ ಹಣ ಕೊಡುತ್ತಿಯಲ್ಲ’ ಎಂದು ಹೇಳಿದ ಒಂದಿಬ್ಬರು ಧುಮ್ಮಿಕ್ಕಿ ಹರಿಯುವ ನದಿ ನೀರಿಗೆ ಜಿಗಿದೇ ಬಿಡುತ್ತಾರೆ. ಆದರೆ ನೀರಿನ ಪ್ರವಾಹದಿಂದ ಒಬ್ಬ ಸೆಳೆತಕ್ಕೆ ಸಿಲುಕಿ ‘ಕಾಪಾಡಿ ಕಾಪಾಡಿ’ ಎನ್ನುತ್ತಾನೆ. ಆತನನ್ನು ರಕ್ಷಿಸಲು ಮತ್ತಿಬ್ಬರು ನೀರಿಗಿಳಿದವರೂ ಆತನೊಂದಿಗೆ ಕೊಚ್ಚಿ ಹೋಗುತ್ತಾರೆ. ತಮಾಷೆಗೆಂದು ಮಾಡಿದ್ದೇ ಜೀವಕ್ಕೆ ಎರವಾಯಿತು. ರಕ್ಷಿಸಲು ಹೋದವರೂ ಜೀವ ಕಳೆದುಕೊಳ್ಳುವಂತಾಯಿತು.
ಇತ್ತೀಚೆಗೆ ನ್ಯಾಶನಲ್ ಜಿಯೋಗ್ರಫಿ, ವೈಲ್ಡ್ ಲೈಫ್ ಮುಂತಾದ ವಿದೇಶಿ ಚಾನೆಲ್​ಗಳಲ್ಲಿ ಕಾಡು, ಬೆಟ್ಟಗುಡ್ಡಗಳಲ್ಲಿ ಸಾಹಸ ಮಾಡುವ, ಹಾವು, ಚೇಳು ವಿಷಕಾರಿ ಪ್ರಾಣಿಗಳೊಂದಿಗೆ ಸರಸವಾಡುವ, ಕಾಡು ಪ್ರಾಣಿಗಳ ಜೊತೆ ಮುಖಾಮುಖಿಯಾಗುವ, ಕಾಡಿನಲ್ಲೇ ರಾತ್ರಿ ಕಳೆಯುವ ಶೋಗಳು ಪ್ರಸಾರವಾಗುತ್ತವೆ. ಅವರೆಲ್ಲ ಟಿ.ವಿ. ಕಾರ್ಯಕ್ರಮಗಳಿಗಾಗಿಯೇ ಅಂತಹ ಸಾಹಸ ಪ್ರದರ್ಶನ ಮಾಡುವುದರಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಾರೆ. ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಅಂತಹ ಕಾರ್ಯಕ್ರಮಗಳನ್ನು ನೋಡುವವರು ಅವೆಲ್ಲ ಸತ್ಯವೆಂದು ಭಾವಿಸಿ, ಅನುಕರಿಸಲು ನೋಡುತ್ತಾರೆ. ಸೂಕ್ತ ರಕ್ಷಣೆ, ಮಾರ್ಗದರ್ಶನವಿಲ್ಲದೆ ವಿದೇಶಿಯರನ್ನು ಅನುಕರಿಸಿದರೆ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಅನುಕರಿಸದೇ ನಮ್ಮ ಎಚ್ಚರದಲ್ಲಿ ನಾವಿರಬೇಕು.
ಸುಮ್ಮನೆ ಬರೀ ಮಾತಿಗೆ, ತಮಾಷೆಗೆ ಆರಂಭವಾಗುವ ಛಾಲೆಂಜ್, ಬೆಟ್ಟಿಂಗ್​ಗಳು ಪ್ರತಿಷ್ಠೆಯ ವಿಷಯವಾಗಿ ಪ್ರಾಣಕ್ಕೆ ಎರವಾದ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ನದಿಯಲ್ಲಿ ಈಜಲು ಹೋಗಿ, ಜಲಪಾತದಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ, ತಾವು ಪ್ರಾಣ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಕುಟುಂಬವನ್ನು ದುಃಖದ ಮಡುವಲ್ಲಿ ನೂಕುತ್ತಾರೆ. ಇಂತಹ ಘಟನೆಗಳೆಲ್ಲ ಕಣ್ಣು ಮುಚ್ಚಿ ತೆರೆಯುವುದರೊಳಗೆ ನಡೆದು ಬಿಡುತ್ತವೆ. ಅಲ್ಲಿ ಜೀವ ಉಳಿಸಿಕೊಳ್ಳಲು ಮತ್ತು ಬೇರೆಯವರ ಜೀವವನ್ನು ಉಳಿಸಲು ಸಮಯಾವಕಾಶ ಲಭ್ಯವಾಗುವುದು ಬಹಳ ಕಡಿಮೆಯೇ. ಅದಕ್ಕಾಗಿ ಎಂದಿಗೂ ಯಾರೂ ದುಸ್ಸಾಹಸಕ್ಕೆ ಮುಂದಾಗಬಾರದು.
ಮಳೆಗಾಲ ಬಂದಾಗಲೆಲ್ಲ ಸರಕಾರ, ಸ್ಥಳೀಯ ಆಡಳಿತ ವ್ಯವಸ್ಥೆ ‘ಸಮುದ್ರಕ್ಕೆ ಇಳಿಯಬೇಡಿ, ನದಿ-ಜಲಪಾತಗಳಿಂದ ದೂರವಿರಿ, ರಕ್ಷಿತಾರಣ್ಯದೊಳಗೆ ಹೋಗಬೇಡಿ’ ಎಂದು ಜಾಗೃತಿ ಮೂಡಿಸಿದರೂ ಅಧಿಕಾರಿಗಳ ಕಣ್ಣುತಪ್ಪಿಸಿ ಸಮುದ್ರದ ಅಲೆಗಳಲ್ಲಿ ಕುಣಿದು ಕುಪ್ಪಳಿಸುವವರು, ಕಳ್ಳ ದಾರಿಯಲ್ಲಿ ಅಭಯಾರಣ್ಯದೊಳಗೆ ಚಾರಣ ಕೈಗೊಳ್ಳುವವರು, ಧುಮ್ಮಿಕ್ಕುವ ಜಲಪಾತಕ್ಕೆ ತಲೆಯೊಡ್ಡಿ, ಹುಚ್ಚು ಸಾಹಸ ಮಾಡುವವರೂ ಇದ್ದಾರೆ. ಎಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದರೂ ಲೆಕ್ಕಿಸದಿರುವ ಪ್ರವಾಸಿಗರೂ ಇದ್ದಾರೆ.
ಬದುಕಿನಲ್ಲಿ ಮೋಜು-ಮಸ್ತಿ ಬೇಕು. ಆದರೆ ಅದು ಜೀವವನ್ನೇ ತೆಗೆಯುವ ಮಟ್ಟಿಗೆ ಹೋದರೆ ಅಂತಹ ಮೋಜಿನಿಂದ ದುಃಖವೇ ಹೊರತು ಸುಖ, ಆನಂದ ದೊರೆಯಲು ಸಾಧ್ಯವೇ? ಹೆಚ್ಚಾಗಿ ಯುವಜನರು ಕ್ಷಣಿಕ ಆಸೆಗಾಗಿ ದುಸ್ಸಾಹಸಕ್ಕೆ ಕೈ ಹಾಕಿ ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿರುವುದು ದುರಂತವೇ ಸರಿ. ಕೆಲವು ಮಧ್ಯವಯಸ್ಸಿನವರೂ ಪ್ರಾಣದ ಜೊತೆಗೆ ಚೆಲ್ಲಾಟ ಮಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಾರೆ. ಇಂತಹ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದಾಗ ಮನಸ್ಸು ವಿಚಲಿತವಾಗುತ್ತದೆ. ದುರಂತಗಳಿಂದ ನಾವು ಪಾಠ ಕಲಿಯಬೇಕು. ಪ್ರತಿ ಬಾರಿಯೂ ಮಾಡಿದ ತಪ್ಪನ್ನೇ ಪುನರಾವರ್ತಿಸುವುದು ಖೇದಕರ.
ಇದು ಕೇವಲ ಮಳೆಗಾಲ, ಜಲಪಾತಗಳ ನೀರಿನೊಂದಿಗಿನ ಸರಸದ ವಿಚಾರಕ್ಕೆ ಸೀಮಿತವಲ್ಲ. ಒಬ್ಬಾತ ತನ್ನ ಬೈಕ್​ನ ಮುಂಭಾಗಕ್ಕೆ ಪಟಾಕಿಗಳನ್ನು ಕಟ್ಟಿ, ವೀಲಿಂಗ್ ಮಾಡುತ್ತಾ ಸ್ಪೋಟಿಸಿಕೊಂಡು ಹೋಗುವ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಬಂದಿತ್ತು. ಅದೃಷ್ಟವಶಾತ್ ಅವನಿಗೇನೂ ಆಗಿರಲಿಲ್ಲವಂತೆ. ಅತಿಯಾದ ವೇಗದಲ್ಲಿ ವಾಹನ ಚಾಲನೆ, ಬೈಕ್, ಕಾರ್​ಗಳಲ್ಲಿ ಸ್ಟಂಟ್ ಮಾಡುವುದು, ಅತಿಯಾದ ಮದ್ಯಪಾನ ಮಾಡಿ ವಾಹನ ಚಲಾಯಿಸಿ ತಾನೇನೋ ವಿಶೇಷ ಸಾಧನೆ ಮಾಡಿದ್ದೇನೆ ಎನ್ನುವಂತೆ ಬಿಂಬಿಸಿಕೊಳ್ಳುವುದು, ಪರಿಣತರೂ ಹತ್ತಲಾಗದ ಬಂಡೆಗಳನ್ನು ಹತ್ತಿ ಫೋಟೋ ಕ್ಲಿಕ್ಕಿಸಿಕೊಂಡು ತನ್ನ ಸಾಧನೆ ಅತ್ಯಂತ ಶ್ರೇಷ್ಠ ಎಂದು ಹೇಳಿಕೊಳ್ಳುವುದು ಇಂತಹ ದುಸ್ಸಾಹಸಕ್ಕೆ ಕೈ ಹಾಕಿ ಬಿದ್ದು ಕೈ-ಕಾಲು ಮುರಿದುಕೊಂಡು ಅಂಗವಿಕಲರಾದವರೂ ಇದ್ದಾರೆ. ಅವರೆಲ್ಲ ಒಂದು ಕ್ಷಣ ಯೋಚಿಸಿ ತಾನು ಮಾಡುತ್ತಿರುವುದು ತಪ್ಪು, ಆಚಾತುರ್ಯವಾದರೆ ತನ್ನ ಬದುಕು ಶೋಚನೀಯವಾಗುತ್ತದೆ ಎಂದು ಯೋಚಿಸಿದರೆ ದುರ್ಘಟನೆ ಸಂಭವಿಸಲಾರದು.
ಯಾರೇ ಆಗಲಿ ಅಪಾಯಕಾರಿ ಮೋಜು ಮಸ್ತಿ ಮಾಡುವ ಮೊದಲು ಮನೆಯಲ್ಲಿರುವ ತಂದೆ-ತಾಯಿಯನ್ನೋ, ತಮ್ಮ ಬಾಳಸಂಗಾತಿಯನ್ನೋ, ಮಕ್ಕಳನ್ನೋ ಒಮ್ಮೆ ನೆನಪಿಸಿಕೊಂಡರೆ, ತನ್ನ ಇಲ್ಲದಿರುವಿಕೆಯಿಂದ ಆಗುವ ನಷ್ಟದ ಅರಿವು ಮೂಡುತ್ತದೆ. ತನ್ನ ಜೀವನ ಎಷ್ಟೊಂದು ಅಮೂಲ್ಯ ಎನ್ನುವುದರ ಬಗ್ಗೆ ಅರ್ಥವಾಗುತ್ತದೆ ಅಲ್ಲವೇ? ಜವಾಬ್ದಾರಿ, ಹೊಣೆಗಾರಿಕೆ ಎನ್ನುವುದು ನಾವು ನಿಭಾಯಿಸಬೇಕಾದ ಕರ್ತವ್ಯವಾಗಿದ್ದು ಕ್ಷುಲ್ಲಕ, ಅನಗತ್ಯ ವಿಚಾರಗಳಿಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬಾರದು ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು. ಸಾಹಸದ ಸಂದರ್ಭಗಳಲ್ಲಿ ಮಾತ್ರವಲ್ಲದೆ ವಾಹನ ಚಾಲನೆ, ವಿದ್ಯುತ್, ಯಂತ್ರೋಪಕರಣಗಳ ಕೆಲಸ ನಿರ್ವಹಿಸುವಾಗಲೂ ಸಾಹಸ ಪ್ರದರ್ಶನ ಮಾಡಲೇಬಾರದು. ಮುಂಜಾಗ್ರತೆಯಿಂದ ಕಾರ್ಯನಿರ್ವಹಿಸಿ ಆಗಬಹುದಾದ ಅವಘಡವನ್ನು ತಡೆಯಬೇಕು.
ಮಳೆಗಾಲದ ಸಮಯದಲ್ಲಿ ವಿದ್ಯುತ್ ಅವಘಡಗಳು ಬಹಳಷ್ಟು ನಡೆಯುತ್ತವೆ. ಈ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ತುಂಡಾಗಿರುವ ವಿದ್ಯುತ್ ತಂತಿಗಳನ್ನು ಮುಟ್ಟುವುದಾಗಲಿ, ವಿದ್ಯುತ್ ಪರಿಕರ ಹಾಳಾಗಿರುವುದನ್ನು ನಿರ್ಲಕ್ಷಿಸುವುದಾಗಲಿ ಮಾಡಲೇಬಾರದು. ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಅಪಾಯಗಳು ನಡೆಯದಂತೆ ಎಚ್ಚರಿಕೆ ವಹಿಸೋಣ. ಸರಕಾರ ಹಾಗೂ ಇಲಾಖೆಗಳು ನೀಡುವ ಸೂಚನೆಗಳನ್ನು ಪಾಲಿಸಿ ಅಪಾಯದಿಂದ ದೂರವಿರೋಣ.
ಇರುವುದೊಂದೇ ಜೀವನ. ಅದು ಅಮೂಲ್ಯ ಎಂಬ ಅರಿವು ಎಲ್ಲರಲ್ಲೂ ಇರಬೇಕು. ವಿಶೇಷವಾಗಿ ವಿದ್ಯಾರ್ಥಿಗಳು, ಯುವಜನತೆ ಜೀವನದ ಮಹತ್ವವನ್ನು ಅರಿತುಕೊಳ್ಳಬೇಕು. ಕ್ಷಣಿಕ ಸುಖ, ಆಸೆಗಳ ಬೆನ್ನತ್ತಿಕೊಂಡು ಕಷ್ಟಕ್ಕೆ ಸಿಲುಕಬಾರದು, ಜೀವ ಕಳೆದುಕೊಳ್ಳಬಾರದು. ಶಿಕ್ಷಣ ಪಡೆಯುವ ವೇಳೆ ಉತ್ತಮ ಶಿಕ್ಷಣ ಪಡೆದು, ಇಷ್ಟದ ಉದ್ಯೋಗವನ್ನು ಮಾಡುತ್ತಾ, ಸಂಸಾರಿಗಳಾಗಿ ಜೀವನ ಸುಖವನ್ನು ಅನುಭವಿಸಬೇಕು. ಮೋಜಿನಾಟಕ್ಕೆ ಜೀವನದ ಬೆಳಕು ಆರಿಹೋಗಬಾರದು. ಬದಲಿಗೆ ಆ ಬೆಳಕು ನಂದಾದೀಪವಾಗಿ ಕುಟುಂಬವನ್ನು ಬೆಳಗುವಂತಾಗಬೇಕು.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)
ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 6 =
Remember me
