ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಬೇಡಿಕೆ ಹೆಚ್ಚಾಗಲು ನೆರೆಯ ಆಂಧ್ರಪ್ರದೇಶದಲ್ಲಿ ತೆಗೆದುಕೊಂಡಿರುವ ಕ್ರಮ ಕಾರಣ. ಜ.1ರಂದು ಅಲ್ಲಿನ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಆದೇಶಿಸಲಾಗಿದ್ದು, ರಾಜ್ಯದಲ್ಲೂ ಅದೇ ಮಾದರಿ ಜಾರಿಗೊಳಿಸಬೇಕೆಂಬ ಆಗ್ರಹ ವ್ಯಾಪಕವಾಗುತ್ತಿದೆ.
ದೇಶದ ಯಾವುದೇ ರಾಜ್ಯದಲ್ಲಿ ಉತ್ತಮ ಕ್ರಮಗಳನ್ನು ಕೈಗೊಂಡರೆ, ಅದನ್ನು ಇನ್ನೊಂದು ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಆದರೆ, ಸರ್ಕಾರಕ್ಕೆ ಆದಾಯ ತಂದುಕೊಡುವ ನೌಕರರಿಗೆ ಅನುಕೂಲವಾಗುವ ಕ್ರಮಗಳ ಅಳವಡಿಕೆಗೆ ಮಾತ್ರ ಹಿಂದೇಟು ಹಾಕಲಾಗುತ್ತದೆ. ಆಂಧ್ರದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ಕುರಿತು ಪ್ರತ್ಯೇಕ ಬಿಲ್ ಮಂಡಿಸಿದ್ದು, ಜ.1ರಿಂದ ಎಪಿಎಸ್​ಆರ್​ಟಿಸಿಯ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಸೇರಿ 51,488 ಮಂದಿ ಸರ್ಕಾರಿ ನೌಕರರಾಗಿ ಪರಿಗಣಿಸಲಾಗಿದೆ.
ಸಾಲದ ಸುಳಿಯಲ್ಲಿದ್ದ ನಿಗಮ: ಆಂಧ್ರ ಸಿಎಂ ಜಗನ್​ವೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ನಂತರ ಕೈಗೊಂಡ ಪ್ರಮುಖ ಕಾರ್ಯಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿದ್ದೂ ಒಂದು. ಆ ವೇಳೆ ಎಪಿಎಸ್​ಆರ್​ಟಿಸಿ ಮೇಲೆ 6,938 ಕೋಟಿ ರೂ. ಹೊಣೆಗಾರಿಕೆಯಿತ್ತು. ಅದರಲ್ಲಿ 3,450 ಕೋಟಿ ರೂ. ಸಾಲವೂ ಸೇರಿತ್ತು. ಸಾಲಕ್ಕೆ ವಾರ್ಷಿಕ 320 ಕೋಟಿ ರೂ. ಬಡ್ಡಿ ಪಾವತಿಸಲಾಗುತ್ತಿತ್ತು.
ಎಪಿಎಸ್​ಆರ್​ಟಿಸಿ ಸಾಲ ಮತ್ತು ಹೊಣೆಗಾರಿಕೆಯನ್ನು ಆಂಧ್ರ ಸರ್ಕಾರವೇ ಹೊತ್ತಿದೆ. ಅದರಂತೆ ಹಂತ ಹಂತವಾಗಿ ಅದನ್ನು ತೀರಿಸುವ ಮತ್ತು ಪರ್ಯಾಯ ಮಾರ್ಗ ಕಂಡುಕೊಳ್ಳುವ ಕುರಿತು ನಿರ್ಧರಿಸಿದೆ. ಅದೇ ರೀತಿ ರಾಜ್ಯದಲ್ಲೂ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿದರೆ ನಿಗಮಗಳ ಲಾಭ, ನಷ್ಟಗಳ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಹೊರಬೇಕಿದೆ. ಸದ್ಯ ಬಿಎಂಟಿಸಿ ಒಂದರಲ್ಲೇ ಮಾಸಿಕ 100 ಕೋಟಿ ರೂ. ನಷ್ಟವುಂಟಾಗುತ್ತಿದೆ.
ನಾಲ್ಕೂ ನಿಗಮಗಳಿಂದ ಒಟ್ಟಾರೆ 6 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹೊಣೆಗಾರಿಕೆ, ಸಾಲವಿದೆ. ರಾಜ್ಯಕ್ಕೆ ದುಪ್ಪಟ್ಟಾಗಲಿದೆ ಹೊರೆ: ಆಂಧ್ರಕ್ಕಿಂತ ಕರ್ನಾಟಕದಲ್ಲಿ ನೌಕರರು, ಬಸ್​ಗಳು ಮತ್ತು ಹೊಣೆಗಾರಿಕೆ ಹೆಚ್ಚಿದೆ. ರಾಜ್ಯದಲ್ಲಿ 1.26 ಲಕ್ಷ ನೌಕರರು, 22 ಸಾವಿರಕ್ಕೂ ಹೆಚ್ಚಿನ ಬಸ್​ಗಳಿವೆ. ಒಂದು ವೇಳೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿದರೆ ಸರ್ಕಾರಕ್ಕೆ ವಾರ್ಷಿಕ 6,500 ಕೋಟಿ ರೂ.ಗೂ ಹೆಚ್ಚಿನ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.
ನಿವೃತ್ತಿ ವಯೋಮಿತಿ ಹೆಚ್ಚಳ
ಆಂಧ್ರ ಜಾರಿ ಮಾಡಿದ ನೂತನ ಬಿಲ್ ಪ್ರಕಾರ ಸಾರಿಗೆ ನೌಕರರ ನಿವೃತ್ತಿ ವಯೋಮಿತಿಯನ್ನು 58ರಿಂದ 60 ವರ್ಷಕ್ಕೆ ಹೆಚ್ಚಿಸಲಾಗಿದೆ. ಜತೆಗೆ, ನೌಕರರಿಗೆ ಪಾವತಿಸಲಾಗುತ್ತಿದ್ದ ವಿಮೆ, ಭವಿಷ್ಯನಿಧಿ ಮೊತ್ತ ಹೆಚ್ಚಿಸಲಾಗಿದೆ. ಹಾಗೆಯೇ, ವೇತನದಲ್ಲೂ ಬದಲಾವಣೆ ತರಲಾಗಿದೆ. ಈ ಎಲ್ಲ ಕ್ರಮಗಳಿಂದಾಗಿ ಸಮಯಕ್ಕೆ ಸರಿಯಾಗಿ ವೇತನ, ಪಿಎಫ್, ವಿಮಾ ಮೊತ್ತ ಪಾವತಿಯಾಗಲಿದೆ. ಜತೆಗೆ ನೌಕರರ ನಿವೃತ್ತಿ ನಂತರ ನೀಡುವ ಗ್ರಾ್ಯಚ್ಯುಟಿ ಮೊತ್ತವನ್ನೂ ನಿಗದಿತ ಅವಧಿಯಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಆರ್ಥಿಕ ಹೊರೆ ಇದ್ದರೂ ಜಾರಿ…
ಆಂಧ್ರ ಸರ್ಕಾರ ಲೆಕ್ಕ ಹಾಕಿದಂತೆ ಪ್ರತಿ ಕಿ.ಮೀ.ಗೆ ಸರಾಸರಿ 44.72 ರೂ. ವೆಚ್ಚ ಮಾಡಲಾಗುತ್ತಿದೆ. 38.09 ರೂ. ಆದಾಯ ಬರುತ್ತಿತ್ತು. ಅದನ್ನು ಗಮನಿಸಿದರೆ ಪ್ರತಿ ಕಿ.ಮೀ.ಗೆ 6.53 ರೂ. ನಷ್ಟ ಉಂಟಾಗುವುದಲ್ಲದೆ, ಮಾಸಿಕ 100 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ. ಸಾಲ ಮತ್ತು ನಷ್ಟದ ನಡುವೆಯೂ ಸಾರಿಗೆ ನೌಕರರನ್ನು ಸರ್ಕಾರಿ ಸಲುವಾಗಿ ಆಂಧ್ರ ಸರ್ಕಾರ ಕಳೆದ ಜುಲೈ ವೇಳೆಗೆ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿತ್ತು.
ಅದರಂತೆ ಸಮಿತಿ ವರದಿ ನೀಡಿ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬಹುದು ಎಂದು ತಿಳಿಸಿತ್ತು. ಹಾಗಾಗಿ 2019ರ ಡಿ. 16ರಂದು ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮ (ನೌಕರರನ್ನು ಸರ್ಕಾರಿ ಸೇವೆಗೊಳಪಡಿಸುವುದು) ಬಿಲ್ ಮಂಡಿಸಿ, ಅನುಮೋದನೆ ಪಡೆದಿತ್ತು. ಅದರಂತೆ 2020ರ ಜ.1ರಿಂದ ಎಲ್ಲ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ವಾರ್ಷಿಕ 3,600 ಕೋಟಿ ರೂ. ಹೆಚ್ಚುವರಿ ಹೊರೆಬಿದ್ದಿದೆ. ವೇತನ ಪಾವತಿ ಸೇರಿ ನೌಕರರಿಗೆ ನೀಡಬೇಕಾದ ಇನ್ನಿತರ ಸವಲತ್ತಿಗೆ ಅಷ್ಟು ಪ್ರಮಾಣದ ಹಣ ವ್ಯಯಿಸಬೇಕಿದೆ.
| ಗಿರೀಶ್ ಗರಗ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
