ಬೆಂಗಳೂರು:ಲಿಂಗಾಯತರನ್ನು ಸರ್ಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನದ ಬೇಗುದಿ ಮುಂದುವರಿದಿದೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಭಾನುವಾರ ಮತ್ತೆ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಕಿಸಂಖ್ಯೆ ಒದಗಿಸುವ ಸವಾಲು ಹಾಕಿದ್ದಾರೆ. ಅದಕ್ಕೆ ಸಿಎಂ ಸಹ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಕೂಡ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ಹೊರಹಾಕಿದ್ದಾರೆ. ಶಾಮನೂರು ಶಿವಶಂಕರಪ್ಪ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರು. ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಅವರು ವ್ಯಕ್ತಪಡಿಸಿರುವ ಭಾವನೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಸಮಾಜದ ಎಲ್ಲ ಮುಖಂಡರಲ್ಲಿ ಇದೇ ತಳಮಳವಿದ್ದು, ವೀರಶೈವ ಲಿಂಗಾಯತರು ಜಾಗೃತರಾಗಬೇಕು ಎಂದು ಯಡಿಯೂರಪ್ಪ ಕರೆಕೊಟ್ಟಿದ್ದಾರೆ.
ಇನ್ನೊಂದೆಡೆ ಈ ಆರೋಪಕ್ಕೆ ಕಾಂಗ್ರೆಸ್ ಶಾಸಕರೇ ಸಾಕ್ಷಿ ಹೇಳಲಾರಂಭಿಸಿದ್ದು, ಶಿವಶಂಕರಪ್ಪ ಹೇಳಿಕೆಯನ್ನು ಚನ್ನಗಿರಿ ಶಾಸಕ ಶಿವಗಂಗ ಬಸವರಾಜ್ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.
ಈ ವಿಷಯವನ್ನಿಟ್ಟುಕೊಂಡು ಬಿಜೆಪಿಯು ಸಿಎಂರನ್ನು ಕೆಣಕಿದೆ. ‘ರಾಜ್ಯದ ಒಂದೆರೆಡು ಸಮುದಾಯಗಳನ್ನು ಹೊರತುಪಡಿಸಿದರೆ, ಉಳಿದೆಲ್ಲ ಸಮುದಾಯಗಳನ್ನು ಖಂಡತುಂಡವಾಗಿ ದ್ವೇಷಿಸಬೇಕು ಎಂಬುದು ಸಂವಿಧಾನದ ಯಾವ ಭಾಗದಲ್ಲಿದೆ ಎಂಬುದನ್ನು ಸ್ವಯಂ ಘೊಷಿತ ಸಂವಿಧಾನ ತಜ್ಞ ಸಿದ್ದರಾಮಯ್ಯರವರೇ ಹೇಳಬೇಕು’ ಎಂದು ಕುಟುಕಿದೆ.
ರಾಜ್ಯದ ವೀರಶೈವ-ಲಿಂಗಾಯತ ಸಮುದಾಯವನ್ನು ವೋಟಿಗಾಗಿ ಬಳಸಿಕೊಂಡು, ಆ ಬಳಿಕ ಸಂಪೂರ್ಣ ಕಡೆಗಣಿಸುವುದು ಕಾಂಗ್ರೆಸ್ ದಶಕಗಳ ಕಾಲದಿಂದ ಪಾಲಿಸಿಕೊಂಡು ಬಂದಂತಹ ಮನಸ್ಥಿತಿ. ಸಿದ್ದರಾಮಯ್ಯ ಅವರ ವೀರಶೈವ-ಲಿಂಗಾಯತ ವಿರೋಧಿ ಮನಸ್ಥಿತಿ ಬಗ್ಗೆ ಹಾಗೂ ಸಮುದಾಯಕ್ಕೆ ಕಾಂಗ್ರೆಸ್​ನಿಂದ ಆಗುತ್ತಿರುವ ಅನ್ಯಾಯದ ಕುರಿತು ಶಾಮನೂರು ಶಿವಶಂಕರಪ್ಪ ಸೇರಿ ಸಮುದಾಯದ ಸ್ವಾಮೀಜಿಗಳು ಪದೇಪದೆ ದನಿ ಎತ್ತುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಬಿಜೆಪಿಯಿಂದ ಕಾಂಗ್ರೆಸ್​ಗೆ ವಲಸೆ ಹೋಗಿರುವ ಸೋ ಕಾಲ್ಡ್ ಲಿಂಗಾಯತ ನಾಯಕರು ಮತ್ತು ಕಾಂಗ್ರೆಸ್​ನ ಸ್ವಯಂಘೊಷಿತ ಲಿಂಗಾಯತ ನಾಯಕರು ಈ ವಿಚಾರದಲ್ಲಿ ಮೌನವಾಗಿರುವುದೇಕೆ? ಸಿದ್ದರಾಮಯ್ಯರ ಲಿಂಗಾಯತ ವಿರೋಧಿ ಧೋರಣೆ ವಿರುದ್ಧ ಮಾತನಾಡಿದರೆ ಮತ್ತಷ್ಟು ಮೂಲೆಗುಂಪಾಗುವ ಭಯವೇ? ಎಂದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಹೆಸರೆತ್ತದೇ ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ಸಿಎಂ ತೀಕ್ಷ್ಣ ಪ್ರತಿಕ್ರಿಯೆ:ನಮ್ಮದು ಜಾತ್ಯತೀತ ಸರ್ಕಾರ. ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳನ್ನು ಜಾತಿ ನೋಡಿ ಕೊಟ್ಟಿಲ್ಲ. ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಲಿಂಗಾಯತ ಬೇಗುದಿ ವಿಚಾರದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.ಶ್ಯಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಸಿಎಂ ಗಂಭೀರವಾಗಿ ಪರಿಗಣಿಸಬೇಕೆಂದು ಯಡಿಯೂರಪ್ಪ ಹೇಳಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆ:ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳು ಕಂಗಾಲಾಗಿದ್ದಾರೆಂಬ ಹೇಳಿಕೆಯ ಮೂಲಕ ರಾಜಕೀಯ ತಲ್ಲಣ ಸೃಷ್ಟಿಸಿರುವ ಶಾಸಕ ಶಾಮನೂರು ಶಿವಶಂಕರಪ್ಪ, ಇದೀಗ ತಮ್ಮ ಬತ್ತಳಿಕೆಯಿಂದ ಅಂಕಿ-ಅಂಶಗಳ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದ್ದಾರೆ.
ನಮ್ಮ ಸರ್ಕಾರದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಗೆ ಡೋಂಟ್ ಕೇರ್ ನಿಲುವು ತಾಳಿರುವ ಶಿವಶಂಕರಪ್ಪ, ತೊಂದರೆಗೀಡಾದ ಅಧಿಕಾರಿಗಳ ಪಟ್ಟಿ ತಯಾರಿಸಲು ಮುಂದಾಗಿದ್ದು ಕಾದು ನೋಡಿ ಬಿಡುಗಡೆ ಮಾಡುವ ಬಾಂಬ್ ಹಾಕಿದ್ದಾರೆ.
ವಿಧಾನಸೌಧದ ಸಚಿವಾಲಯಗಳಲ್ಲಿ ಲಿಂಗಾಯತ ಸಮುದಾಯದ ಒಬ್ಬರೇ ಒಬ್ಬ ಹಿರಿಯ ಅಧಿಕಾರಿ ಇಲ್ಲ. ಒಂದೆರಡು ಜಿಲ್ಲೆ ಹೊರತುಪಡಿಸಿದರೆ ಉಳಿದೆಡೆ ಡಿಸಿಗಳು ಕೂಡ ಇಲ್ಲ. ಐಪಿಎಸ್ ಅಧಿಕಾರಿಗಳೂ ಅಷ್ಟಕ್ಕಷ್ಟೇ. ಅನಿವಾರ್ಯಕ್ಕೆ ಕಟ್ಟುಬಿದ್ದು ಅಲ್ಲೊಬ್ಬರು-ಇಲ್ಲೊಬ್ಬರನ್ನು ನೇಮಿಸಿದ್ದರೂ, ಲಿಂಗಾಯತರನ್ನು ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗಷ್ಟೇ ಸೀಮಿತ ಮಾಡಲಾಗಿದೆ. ಇವೆಲ್ಲ ಮೇಲ್ನೋಟಕ್ಕೇ ತಿಳಿಯಬಹುದಾದ ಅಂಕಿ-ಅಂಶಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದ ಜನಸಂಖ್ಯೆ 6.50 ಕೋಟಿಗೂ ಅಧಿಕವಿದೆ. ಇದರಲ್ಲಿ 2 ಕೋಟಿಗೂ ಹೆಚ್ಚು ವೀರಶೈವ ಲಿಂಗಾಯತರಿದ್ದಾರೆ. ಶೇ. 33 ಜನಸಂಖ್ಯೆ ಇರುವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ಬೇಕಲ್ಲವೆ ಎಂದು ವಾದ ಮಂಡಿಸಿದ್ದಾರೆ. ಸುಖಾಸುಮ್ಮನೆ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಹೇಳಲು ನಾನೇನೂ ಸಣ್ಣ ಹುಡುಗನಲ್ಲ. ಸಮಾಜದ ಹಿರಿಯ ಅಧಿಕಾರಿಗಳು ಈ ಸಂಬಂಧ ನನ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ವೀರಶೈವರಿಗೆ ಅನ್ಯಾಯ ಆಗಿದ್ದರಿಂದಲೇ ಧ್ವನಿ ಎತ್ತಿದ್ದೇನೆ. ಸಮುದಾಯದ ಹಿತ ಕಾಯುವುದು ನನ್ನ ಜವಾಬ್ದಾರಿ ಎಂದು ಸಮರ್ಥನೆ ನೀಡಿದ್ದಾರೆ. ದಾವಣಗೆರೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬರುವ ಸುಳಿವನ್ನೂ ನೀಡಿದ್ದಾರೆ.
ನಿಗಮ -ಮಂಡಳಿಗಳಲ್ಲಿ ಆದ್ಯತೆ: ವೀರಶೈವರಿಗೆ ಅನ್ಯಾಯವಾಗಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಹಿನ್ನೆಲೆಯಲ್ಲಿ ಸದ್ಯದಲ್ಲೇ ನೇಮಕ ಆಗಲಿರುವ ನಿಗಮ- ಮಂಡಳಿ ಅಧ್ಯಕ್ಷರ ಹುದ್ದೆಗಳಿಗೆ ವೀರಶೈವರಿಗೆ ಆದ್ಯತೆ ನೀಡಬಹುದು ಎಂಬ ಚರ್ಚೆ ಇದೀಗ ಕಾಂಗ್ರೆಸ್ ಪಾಳಯದಲ್ಲೇ ಮುನ್ನೆಲೆಗೆ ಬಂದಿದೆ.
ನಮ್ಮ ಬಳಿಯೂ ಪೆನ್ ಇದೆ. ಅಂಕಿ-ಅಂಶ ಇದೆ. ಸಮಯ ಸಂದರ್ಭ ಬಂದಾಗ ಬಹಿರಂಗಪಡಿಸುತ್ತೇವೆ. ಅನ್ಯಾಯ ಮಾಡಿದವರು ಅನ್ಯಾಯ ಮಾಡಿದ್ದೇವೆಂದು ಹೇಳುತ್ತಾರಾ? ನಮ್ಮ ಸಮುದಾಯವರು ಸಿಎಂ ಆಗಬೇಕು. ಡಿಸಿಎಂ ಪಿಸಿಎಂ ಎಲ್ಲ ಬಿಡಬೇಕು. ನಮ್ಮ ಬೇಡಿಕೆ ಇದ್ದೇ ಇದೆ.
| ಶಾಮನೂರು ಶಿವಶಂಕರಪ್ಪ, ಶಾಸಕ
ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷರೂ ಆಗಿರುವ ಡಾ.ಶಾಮನೂರು ಶಿವಶಂಕರಪ್ಪ ಅವರು ಸರ್ಕಾರಕ್ಕೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅವರ ಹೇಳಿಕೆಯನ್ನು ಸಮಸ್ತ ವೀರಶೈವ-ಲಿಂಗಾಯತ ಸಮುದಾಯ ಬೆಂಬಲಿಸುತ್ತದೆ.
| ಡಾ.ಪ್ರಭಾಕರ ಕೋರೆ, ಅಖಿಲ ಭಾರತ ವೀರಶೈವ ಮಹಾಸಭೆ ಉಪಾಧ್ಯಕ್ಷ
ನಾವು ಯಾರಾದರೂ ಒಬ್ಬರಿಗೆ ಪೋಸ್ಟಿಂಗ್ ನೀಡಲು ಸಾಧ್ಯವೇ? ನಾವು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಬೇಕು. ಶಾಮನೂರು ಒಂದು ಸಮಾಜದ ಸಂಘದ ಅಧ್ಯಕ್ಷರು. ಅವರ ಮೇಲೂ ಒತ್ತಡ ಇರುತ್ತದೆ.
| ಡಿ.ಕೆ. ಶಿವಕುಮಾರ್, ಡಿಸಿಎಂ
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರೇ ಲಿಂಗಾಯತ ಅಧಿಕಾರಿಗಳನ್ನು ಸರ್ಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆ ಮುಂದೆ ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಐಪಿಎಸ್, ಐಎಫ್​ಎಸ್, ಉಪ ವಿಭಾಗಾಧಿಕಾರಿಗಳ ಜಾತಿ ಮಾಹಿತಿ ಇರುವ ಪಟ್ಟಿ ವಿವಿಧ ಮೂಲಗಳಿಂದ ಹೊರ ಬಂದಿದೆ.
ತಿಂಗಳ ಹಿಂದಷ್ಟೇ ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ಸಮಾಜದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಬಳಿಕ ಗುಸುಗುಸು ಚರ್ಚೆ ನಡೆದೇ ಇತ್ತು. ಎರಡು ದಿನಗಳ ಹಿಂದೆ ಕಾಂಗ್ರೆಸ್​ನ ಹಿರಿಯ ಶಾಸಕರ ಶಾಮನೂರು ಶಿವಶಂಕರಪ್ಪ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆ ವ್ಯಾಪಕ ಚರ್ಚೆ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜಾತಿವಾರು ಪಟ್ಟಿ ಬಿಡುಗಡೆಯಾಗಿದೆ. ಹಾಗೆಯೇ ಕುಲಪತಿಗಳ ಜಾತಿವಾರು ಲೆಕ್ಕವನ್ನು ಹೊರಗೆಡಹಿದೆ. ಅದರ ಪ್ರಕಾರ 13 ಲಿಂಗಾಯತ, 8 ಒಕ್ಕಲಿಗ, 8 ಸಾಮಾನ್ಯ ಹಾಗೂ ಬ್ರಾಹ್ಮಣ, ಆರು ಒಬಿಸಿ, ಐದು ಎಸ್ಸಿ, 1 ಎಸ್ಟಿ ಸೇರಿ ಒಟ್ಟು 41 ಮಂದಿ ಕುಲಪತಿಗಳು ಇದ್ದಾರೆ. ಒಬ್ಬರೂ ಮುಸ್ಲಿಮರಿಲ್ಲ ಎಂಬ ಮಾಹಿತಿ ಅದರಲ್ಲಿದೆ.31 ಜಿಲ್ಲೆಗಳ ಜಿಪಂ ಸಿಇಒಗಳು, 47 ಐಪಿಎಸ್ ಅಧಿಕಾರಿಗಳು, 53 ಎಸಿಗಳು ಹಾಗೂ 31 ಡಿಸಿಗಳ ಹಾಗೂ ಮುಖ್ಯ ಇಂಜಿನಿಯರ್​ಗಳ ಜಾತಿ ಮಾಹಿತಿ ಈ ಪಟ್ಟಿಯಲ್ಲಿದೆ. ಅಧಿಕಾರಿಗಳ ನೇಮಕದಲ್ಲಿ ಸಾಮಾಜಿಕ ನ್ಯಾಯ ಇರುವುದು ಕಂಡು ಬಂದಿದೆ ಎಂದೇ ಹೇಳಲಾಗುತ್ತಿದೆ.
ತೆನೆ ಹೊತ್ತ ಕಮಲ: ಎಚ್​ಡಿಕೆ ನಡೆಗೆ ಬೇಸತ್ತ ಅಲ್ಪಸಂಖ್ಯಾತ ಮುಖಂಡರಿಂದ ಜೆಡಿಎಸ್​ಗೆ ಸಾಮೂಹಿಕ ರಾಜೀನಾಮೆ ನಿರ್ಧಾರ

ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿಗೆ ಶಾಕ್; ಹೆಂಡತಿಯನ್ನು ರಕ್ಷಿಸಲು ಧಾವಿಸಿದ ಗಂಡ; ಕೊನೆಗೆ ಇಬ್ಬರ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + five =
Remember me
