ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ಬೆಳಗಾವಿಯಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಆರ್ಭಟಿಸುತ್ತಿದ್ದು, ಇವುಗಳೊಂದಿಗೆ ಹಿರಣ್ಯಕೇಶಿ, ವೇದಗಂಗಾ ನದಿಗಳೂ ಸಹ ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ನದಿಪಾತ್ರದಲ್ಲಿ ‘ಮಹಾ’ ಪ್ರವಾಹ ಭೀತಿ ಎದುರಾಗಿದೆ. ಮಾರ್ಕಂಡೇಯ ನದಿ, ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿರುವುದರಿಂದ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಅಡವಿಸಿದ್ಧೇಶ್ವರ ಮಠ ಜಲಾವೃತಗೊಂಡಿದೆ. ಮಠದೊಳಗೆ ಸಿಲುಕಿಕೊಂಡಿದ್ದ ಅರ್ಚಕರು ಸೇರಿ ಸುಮಾರು 20 ಜನರನ್ನು ವಿಪತ್ತು ನಿರ್ವಹಣಾ ತಂಡವು ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-4ರ ನಿಪ್ಪಾಣಿ ಬಳಿಯ ಯಮಗರ್ಣಿ ಸೇತುವೆ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿದೆ. ಅಥಣಿ, ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ 115ಕ್ಕೂ ಅಧಿಕ ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಈ ಮಧ್ಯೆಯೇ ನಿಪ್ಪಾಣಿ ತಾಲೂಕಿನ ಕೋಡ್ನಿ ಗ್ರಾಮದಲ್ಲಿ ಶುಕ್ರವಾರ ಮನೆಗಳಿಗೆ ನೀರು ನುಗ್ಗಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಲಾಗಿದೆ. ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಎರಡು ಕಡೆ ಭೂ ಕುಸಿತ ಉಂಟಾಗಿದ್ದರಿಂದ ರೈಲು ಸಂಚಾರ ವ್ಯತ್ಯಯವಾಗಿದೆ.
ಮುಳುಗುವ ಹಂತದಲ್ಲಿ ದೇವಸ್ಥಾನಗಳು:ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಮೂರು ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಪ್ರವಾಹ ಸೃಷ್ಟಿಯಾಗಿದ್ದು, ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಿದೆ. ದೇವದುರ್ಗ ತಾಲೂಕಿನ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ವೀರಗೋಟದ ಶ್ರೀ ಆದಿಮೌನಲಿಂಗೇಶ್ವರ ದೇವಸ್ಥಾನದ ರಸ್ತೆ ಮುಳುಗಿದ್ದು, ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಗೋಡೆವರೆಗೆ ಮತ್ತು ಗೂಗಲ್​ನ ಶ್ರೀ ಅಲ್ಲಮಪ್ರಭು ದೇವಸ್ಥಾನದ ಸಮೀಪದ ನೀರು ಬಂದಿದೆ.
ಬಾಗಲಕೋಟೆಗೆ ನೆರೆ ಭೀತಿ:ಪಶ್ಚಿಮ ಘಟ್ಟ ಮತ್ತು ನೆರೆಯ ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಅಬ್ಬರದಿಂದಾಗಿ ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. 26 ಗೇಟ್​ಗಳ ಮುಖಾಂತರ 3 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದ ನದಿತಳಪಾತ್ರಕ್ಕೆ ಹರಿಸಲಾಗುತ್ತಿದೆ. ಕೃಷ್ಣ, ಮಲಪ್ರಭಾ, ಘಟಪ್ರಭಾ ಮೂರೂ ನದಿಗಳು ಹರಿದಿರುವ ಬಾಗಲಕೋಟೆಯಲ್ಲಿ ಮತ್ತೆ ಪ್ರವಾಹ ಸ್ಥಿತಿ ಎದುರಾಗಿದೆ.
ಕೊಡಗು ಅಸ್ತವ್ಯಸ್ತ:ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ವರ್ಷ ಸಂಭವಿಸಿದ್ದ ಪ್ರಕೃತಿ ವಿಕೋಪದ ದುರ್ಘಟನೆ ಮತ್ತೊಮ್ಮೆ ಸಂಭವಿಸುವ ಆತಂಕ ಎದುರಾಗಿದೆ. ಭಾಗಮಂಡಲ ಜಲಾವೃತಗೊಂಡಿದೆ. 2018ರಲ್ಲಿ ಭೂಕುಸಿತ ಉಂಟಾಗಿದ್ದ ಹಟ್ಟಿಹೊಳೆ-ಹಮ್ಮಿಯಾಲ ಮಾರ್ಗದಲ್ಲಿ ಮತ್ತೊಮ್ಮೆ ಭೂಕುಸಿತ ಉಂಟಾಗಿದೆ. ರಸ್ತೆ ಮೇಲೆ ಮಣ್ಣು ಬಿದ್ದು ಸಂಚಾರಕ್ಕೆ ಅಡ್ಡಿವುಂಟಾಗಿದೆ.
6 ಯುವಕರು ಸುರಕ್ಷಿತ:ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಶಿರಲೆ ಜಲಪಾತ ವೀಕ್ಷಣೆಗೆ ಗುರುವಾರ ತೆರಳಿದ್ದ ವೇಳೆ ಉಂಟಾದ ಪ್ರವಾಹದಿಂದಾಗಿ ಕಾಡಿನಲ್ಲಿ ಸಿಲುಕಿದ್ದ ಹುಬ್ಬಳ್ಳಿಯ ಆರು ಯುವಕರು ಸುರಕ್ಷಿತವಾಗಿ ಮರಳಿದ್ದಾರೆ. ಹೆದ್ದಾರಿಯಿಂದ ಸ್ವಲ್ಪ ದೂರ ಒಳರಸ್ತೆಯಲ್ಲಿ ಬೈಕ್ ರ್ಪಾಂಗ್ ಮಾಡಿ ಜಲಪಾತ ವೀಕ್ಷಣೆಗೆ ಕಾಡಿನೊಳಗೆ ಕಾಲು ಹಾದಿಯಲ್ಲಿ ತೆರಳಿದ್ದರು. ವಾಪಸ್ ಬರುವಾಗ ಮಾರ್ಗಮಧ್ಯದ ಕಾಲುಸಂಕ ಹಳ್ಳದ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರಿಂದ ಕಾಡಿನ ಮಧ್ಯೆಯೇ ಸಿಲುಕಿದ್ದರು.
ದಾಖಲೆ ವರ್ಷಧಾರೆ:ಮುಂಗಾರು ಚುರುಕಾದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 24 ಗಂಟೆ ಅವಧಿಯಲ್ಲಿ ದಾಖಲೆ ಮಟ್ಟದ ಮಳೆಯಾಗಿದೆ. ಜು.22ರ ಬೆಳಗ್ಗೆ 8ರಿಂದ ಜು.23ರ ಬೆಳಗ್ಗೆ 8 ಗಂಟೆವರೆಗೆ ಬೆಳಗಾವಿಯ ಜಿಲ್ಲೆಯ ಲೊಂಡಾದಲ್ಲಿ 380 ಮಿ.ಮೀ., ಉತ್ತರ ಕನ್ನಡದ ಕದ್ರಾದಲ್ಲಿ 340 ಮಿ.ಮೀ. ಹಾಗೂ ಶಿವಮೊಗ್ಗದ ತಾಳಗುಪ್ಪದಲ್ಲಿ 270 ಮಿ.ಮೀ. ಮಳೆಯಾಗಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾವೇರಿಯಲ್ಲಿ ಸರಾಸರಿ 160 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಹಾಮಳೆಗೆ ಉತ್ತರ ಕನ್ನಡ ತತ್ತರಿಸಿದೆ. ಕಾಳಿ, ಅಘನಾಶಿನಿ, ಗಂಗಾವಳಿ ನದಿಗಳು ರೌದ್ರಾವತಾರ ತಾಳಿ ಹರಿಯುತ್ತಿವೆ. 79 ಗ್ರಾಮಗಳಿಗೆ ನೀರು ನುಗ್ಗಿದ್ದು, 62 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 4305 ಜನರನ್ನು ಶುಕ್ರವಾರ ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ. ಕಾರವಾರ ದ್ವೀಪದಂತಾಗಿದ್ದು, ಹಾಲು, ದಿನಸಿ ಮುಂತಾದ ಅಗತ್ಯ ವಸ್ತುಗಳಿಗೂ ಸಮಸ್ಯೆಯಾಗಿದೆ. ಗಂಗಾವಳಿ ನದಿ ನೀರು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತುಂಬಿದ್ದರಿಂದ ಅಂಕೋಲಾ ತಾಲೂಕಿನ ಸುಂಕಸಾಳ ಸಮೀಪದ ಹೈಲ್ಯಾಂಡ್ ಹಾಗೂ ನವಮಿ ಹೋಟೆಲ್ ಬಳಿ ಅಪಾಯಕ್ಕೆ ಸಿಲುಕಿಕೊಂಡಿದ್ದ 48 ಜನರ ಪೈಕಿ 8 ಜನರನ್ನು ನೌಕಾನೆಲೆ ಹೆಲಿಕ್ಯಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ತರಲಾಗಿದೆ. ಉಳಿದ 40 ಜನರಲ್ಲಿ 24 ಜನರನ್ನು ದೋಣಿಯ ಮೂಲಕ ರಕ್ಷಿಸಲಾಗಿದೆ. ನೌಕಾನೆಲೆ, ಕೋಸ್ಟ್​ಗಾರ್ಡ್, ತಂಡಗಳು ಕಾಳಿ ಪ್ರದೇಶದಲ್ಲಿ, ಎಸ್​ಡಿಆರ್​ಎಫ್ ತಂಡ ಗಂಗಾವಳಿ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಮರುಜೀವ ಪಡೆದ ನದಿ-ತೊರೆಗಳು:ಹಾಸನ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿದು ಭಾರಿ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದೆ. ಹೇಮಾವತಿ, ಯಗಚಿ, ವಾಟೇಹೊಳೆ ಹರಿವಿನ ಮಟ್ಟ ಏರಿಕೆಯಾಗಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ಸಕಲೇಶಪುರ ಪಟ್ಟಣವನ್ನು ಸುತ್ತುವರಿದಿರುವ ಹೇಮಾವತಿ ನದಿಯ ನೀರು ಅಕ್ಕಪಕ್ಕದ ಗದ್ದೆ ಬಯಲಿಗೆ ನುಗ್ಗಿದ್ದು, ಹೊಳೆಮಲ್ಲೇಶ್ವರ ದೇವಾಲಯದ ಮೆಟ್ಟಿಲಿನವರೆಗೂ ನೀರಿನ ಮಟ್ಟ ಏರಿಕೆಯಾಗಿದೆ. ಪಟ್ಟಣದ ರಸ್ತೆಗಳೆಲ್ಲ ಜಲಾವೃತವಾಗಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಕರಾವಳಿಯಲ್ಲಿ ತಗ್ಗಿದ ಮಳೆ:ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದೆ. ಗ್ರಾಮಾಂತರ ಭಾಗದ ಕೆಲವು ಕಡೆ ಉತ್ತಮ ಮಳೆಯಾಗಿದೆ. ಘಟ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ರೆಡ್ ಅಲರ್ಟ್:ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಜು.24ರಂದು ಅತಿ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಚಾರ್ಮಾಡಿ ಘಾಟಿ ಗುಡ್ಡ ಕುಸಿತ:ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರು-ತುಮಕೂರು ರಸ್ತೆಯ ಚಾರ್ವಡಿ ಘಾಟ್ ಪ್ರದೇಶದಲ್ಲಿ ಶುಕ್ರವಾರ ಗುಡ್ಡ ಕುಸಿದಿದ್ದು, ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ವರುಣನ ಅಬ್ಬರಕ್ಕೆ ಮಲೆನಾಡು ಅಕ್ಷರಶಃ ನಲುಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 73,431 ಕ್ಯೂಸೆಕ್, ಲಕ್ಕವಳ್ಳಿ ಭದ್ರಾ ಜಲಾಶಯಕ್ಕೆ 39,286 ಕ್ಯೂಸೆಕ್ ನೀರು ಬರುತ್ತಿದೆ. ತುಂಗಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಡುತ್ತಿರುವುದರಿಂದ ಶಿವಮೊಗ್ಗದಲ್ಲಿ ಪ್ರವಾಹದ ಆತಂಕ ನಿರ್ವಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತುಂಗಾ, ಭದ್ರಾ, ಹೇಮಾವತಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಹಲವೆಡೆ ರಸ್ತೆಗೆ ಗುಡ್ಡಗಳು ಜರಿದು ಸಂಚಾರ ಸ್ಥಗಿತವಾಗಿದೆ.
ಬೆಂಗಳೂರು:ರಾಜ್ಯದಲ್ಲಿ ನಿರಂತರ ಮಳೆಯ ಆರ್ಭಟ, ಪ್ರವಾಹದ ಅಬ್ಬರದಿಂದ ಸೃಷ್ಟಿಯಾಗಿರುವ ಸಂಕ್ಷೋಭೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತಾಗಿ ಸ್ಪಂದಿಸಿದ್ದು, ಬಾಧಿತ ಜಿಲ್ಲೆಗಳ ಆಡಳಿತ ಯಂತ್ರಾಂಗವನ್ನು ಯುದ್ಧೋಪಾದಿ ಕೆಲಸಕ್ಕೆ ಅಣಿಗೊಳಿಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್​ವೈ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಪರಿಸ್ಥಿತಿ ಅವಲೋಕಿಸಿದರು. ಪ್ರವಾಹಪೀಡಿತ ಗ್ರಾಮಗಳ ಜನರನ್ನು ತಕ್ಷಣವೇ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ, ಕಾಳಜಿ ಕೇಂದ್ರಗಳಲ್ಲಿ ಬೇಕಾದ ಅನುಕೂಲತೆ ಕಲ್ಪಿಸಬೇಕು ಎಂದು ತಾಕೀತು ಮಾಡಿದರು. ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ಮಹಾರಾಷ್ಟ್ರದಲ್ಲೂ ವರುಣನ ಅಬ್ಬರ, ಜಲಾಶಯಗಳಿಗೆ ಒಳ ಹರಿವು ಹೆಚ್ಚಳ, ಹಲವಾರು ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಜನರ ರಕ್ಷಣೆ ಮತ್ತು ಸಮರೋಪಾದಿ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಟಾಸ್ಕ್ ಫಿಕ್ಸ್ ಮಾಡಿದ್ದಾರೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಎಲ್ಲಿಯೂ ಹಾನಿ ಸಂಭವಿಸಿಲ್ಲ. ಒಂದು ವೇಳೆ ಪ್ರವಾಹ ಪರಿಸ್ಥಿತಿ ಕಂಡುಬಂದಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸಚಿವರು ಶಾಸಕರಿಗೆ ತಾಕೀತು:ಪ್ರವಾಹಬಾಧಿತ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ಬಿಡಾರ ಹೂಡಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಿಎಂ ಬಿಎಸ್​ವೈ ತಾಕೀತು ಮಾಡಿದ್ದಾರೆ.
ಮುನ್ನೆಚ್ಚರಿಕೆ ವಹಿಸಿ:ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಅಪಾಯ ಎದುರಾಗಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದ್ದಾರೆ.
ಉತ್ತರಪ್ರದೇಶ ಮೂಲದ ನಕಲಿ ಶಾಪಿಂಗ್ ವೆಬ್‌ಸೈಟ್ ವಂಚಕ ಬನಶಂಕರಿಯಲ್ಲಿದ್ದ, ಸೈಬರಾಬಾದ್ ಪೊಲೀಸರ ಕೈಗೆ ಸಿಕ್ಕಿಬಿದ್ದ..

ನಾನು-ನಾನು ಎನ್ನುವವರು ಸಿಎಂ ಆಗಲ್ಲ: ಕಂದಾಯ ಸಚಿವ ಆರ್. ಅಶೋಕ್

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × 4 =
Remember me
