ಕೆ.ಎನ್.ರಾಘವೇಂದ್ರ ಮಂಡ್ಯಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ತ್ರಿಫೇಸ್ ಕರೆಂಟ್ ಶಾಕ್ ಎದುರಾಗಿದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿತಗೊಂಡಿರುವ ನೆಪವೊಡ್ಡಿ ಪಂಪ್​ಸೆಟ್​ಗೆ ನೀಡುತ್ತಿದ್ದ ವಿದ್ಯುತ್ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಲಾಗುತ್ತಿದೆ. ಪರಿಣಾಮ, ನೀರಿದ್ದರೂ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ.
ಮಳೆಯಾಗದಿದ್ದರೂ ಪಂಪ್​ಸೆಟ್ ಅವಲಂಬಿಸಿಕೊಂಡು ಅನೇಕ ರೈತರು ಬೆಳೆ ಹಾಕಿದ್ದಾರೆ. ಈಗಾಗಲೇ ಬಿತ್ತನೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಬೆಳೆ ಬೆಳವಣಿಗೆಯ ಹಂತದಲ್ಲಿದೆ. ಆದರೆ ಸಮರ್ಪಕವಾದ ವಿದ್ಯುತ್ ಪೂರೈಕೆಯಾಗದ ಪರಿಣಾಮ, ಸರಿಯಾಗಿ ನೀರು ಸಿಗದೆ ಬೆಳೆ ಒಣಗಲಾರಂಭಿಸಿದೆ. ಹಾಕಿರುವ ಬಂಡವಾಳವೂ ಬಾರದೆ ನಷ್ಟವಾಗುವ ಆತಂಕ ಎದುರಾಗಿದೆ. ಕಳೆದೊಂದು ವಾರದಿಂದ ವಿದ್ಯುತ್ ಪೂರೈಕೆಯನ್ನು ಅನಿರ್ದಿಷ್ಟಾವಧಿ ಸ್ಥಗಿತಗೊಳಿಸಲಾಗುತ್ತಿದೆ. ಅದರಲ್ಲೂ ತ್ರಿಫೇಸ್ ವಿದ್ಯುತ್ ಕೊಟ್ಟು ಇದ್ದಕ್ಕಿದ್ದಂತೆ ನಿಲ್ಲಿಸಲಾಗುತ್ತಿದೆ. ಕಾರಣ ಕೇಳಿದರೆ ತಾಂತ್ರಿಕ ಸಮಸ್ಯೆ ನೆಪ ಹೇಳಲಾಗುತ್ತಿದೆ. ಪ್ರಮುಖವಾಗಿ ರಾತ್ರಿಹೊತ್ತು ತ್ರಿಫೇಸ್ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮೂರ್ನಾಲ್ಕು ದಿನಗಳಿಂದ ಸಂಪೂರ್ಣ ನಿಲುಗಡೆಗೊಳಿಸಲಾಗಿದೆ.
ನೌಕರರ ಅಳಲು:ವಿದ್ಯುತ್ ಲಭ್ಯತೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಕೊರತೆ ಸರಿದೂಗಿಸಲು ಲೋಡ್​ಶೆಡ್ಡಿಂಗ್ ಮಾಡಲಾಗುತ್ತಿದೆ. ಇದನ್ನು ಬೆಂಗಳೂರಿನಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಸ್ಥಳೀಯವಾಗಿ ಕೆಲಸ ಮಾಡುತ್ತಿರುವ ವಿದ್ಯುತ್ ಇಲಾಖೆ ನೌಕರರು ರೈತರ ಆಕ್ರೋಶವನ್ನು ಎದುರಿಸುವಂತಾಗಿದೆ. ಆದ್ದರಿಂದ ನೌಕರರೊಬ್ಬರು ಕರೆಂಟ್ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಮಾಹಿತಿ ವೈರಲ್ ಆಗುತ್ತಿದೆ. ‘ವಿದ್ಯುತ್ ಸಮಸ್ಯೆಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಆದರೆ ಇದಕ್ಕೆ ನೌಕರರು ಹೊಣೆಯಲ್ಲ. ಈ ವಿಷಯದಲ್ಲಿ ನಾವು ಅಸಹಾಯಕರು. ಥರ್ಮಲ್ ವಿದ್ಯುತ್ ಸ್ಟೇಷನ್​ನಲ್ಲಿ ಉತ್ಪಾದನೆ ಕುಂಠಿತವಾಗಿದೆ. ಪರಿಣಾಮ, ವಿದ್ಯುತ್ ಪೂರೈಕೆ ಬಹಳ ಕಷ್ಟವಾಗುತ್ತಿದೆ. ರಾಜ್ಯಾದ್ಯಂತ ಸಮಸ್ಯೆ ಎದುರಾಗಿದೆ. ಕರೆಂಟ್ ಯಾವಾಗ ಹೋಗುತ್ತದೋ? ಯಾವಾಗ ಬರುತ್ತದೋ ಎನ್ನುವುದಕ್ಕೆ ನಿರ್ದಿಷ್ಟ ಸಮಯ ತಿಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೈತರಿಂದ ನಿರಂತರವಾಗಿ ಕರೆಗಳು ಬರುತ್ತಿವೆ. ಆದ್ದರಿಂದ ನೌಕರರ ಮೇಲೆ ಕೋಪ ಮಾಡಿಕೊಳ್ಳಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ನಿರಂತರ ಜ್ಯೋತಿಗೂ ಕತ್ತರಿ ಬಿದ್ದಿದ್ದು, ಇಷ್ಟಬಂದಂತೆ ಲೋಡ್​ಶೆಡ್ಡಿಂಗ್ ಮಾಡಲಾಗುತ್ತಿದೆ. ರೈತರಿಗೆ ವಿದ್ಯುತ್ ಬಗ್ಗೆ ಮಾಹಿತಿ ನೀಡಲು ಸೆಸ್ಕ್ ನೌಕರರು ಸ್ಥಳೀಯವಾಗಿ ವಾಟ್ಸ್​ಆಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಅದರಲ್ಲಿ ವಿದ್ಯುತ್ ಕಡಿತಗೊಳಿಸುವ ವಿವರ ನೀಡಲಾಗುತ್ತಿದೆ. ಆದರೆ ಸಕಾರಣವನ್ನು ತಿಳಿಸುತ್ತಿಲ್ಲ. ಈಗಾಗಲೇ ಫಸಲು ಕೈಸೇರುವ ಹೊತ್ತಿನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಮಾತ್ರವಲ್ಲದೆ ತೆಂಗು, ಬಾಳೆ, ವಾಣಿಜ್ಯ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಈಗಾಗಲೇ ರೈತರು ಬೀದಿಗಿಳಿದಿದ್ದಾರೆ. ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ಉಚಿತ ವಿದ್ಯುತ್ ಕೊಡಲು ರಾಜ್ಯ ಸರ್ಕಾರ ತೋರುತ್ತಿರುವ ಆಸಕ್ತಿಯನ್ನು ತ್ರಿಫೇಸ್ ಕರೆಂಟ್ ಕೊಡುವತ್ತ ವಹಿಸಬೇಕಿದೆ. ಇಲ್ಲದಿದ್ದರೆ ಈಗಾಗಲೇ ಬರದಿಂದ ತತ್ತರಿಸಿರುವ ರೈತರ ಆದಾಯಕ್ಕೆ ದೊಡ್ಡ ಹೊಡೆತ ಬೀಳುವುದರಲ್ಲಿ ಅನುಮಾನವಿಲ್ಲ.
ಸಂಪೂರ್ಣ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ಪೂರೈಸುತ್ತಿದ್ದ ವಿದ್ಯುತ್ ನಿಲ್ಲಿಸಿದೆ. 23 ದಿನಗಳಿಂದ ವಿದ್ಯುತ್ ಪೂರೈಕೆ ನಿಲ್ಲಿಸಿದ್ದು ಎಲ್ಲಿಯವರೆಗೆ ಎಂದು ಹೇಳಿಲ್ಲ. ನಾವು ರಾಜ್ಯದಲ್ಲಿ ಏನು ಉತ್ಪಾದನೆ ಮಾಡುತ್ತಿದ್ದೇವೆ ಅದನ್ನ ಮಾತ್ರ ಕೊಡುತ್ತಿದ್ದೇವೆ. ಕುಡತಿನಿ, ವಿಜಯಪುರ, ರಾಯಚೂರಲ್ಲಿ ವಿದ್ಯುತ್ ಘಟಕಗಳು ದುರಸ್ತಿಯಲ್ಲಿವೆ.
| ಸತೀಶ್ ಜಾರಕಿಹೊಳಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
