| ಕೀರ್ತಿನಾರಾಯಣ ಸಿ. ಬೆಂಗಳೂರು
ಸರ್ಕಾರಿ ಸೇವೆ ತ್ವರಿತಗತಿಯಲ್ಲಿ ಸಿಗಬೇಕೆಂಬ ಉದ್ದೇಶದಿಂದ ಎಲ್ಲ ಇಲಾಖೆಗಳಲ್ಲೂ ಆಫ್​ಲೈನ್ ವ್ಯವಸ್ಥೆ ರದ್ದುಗೊಳಿಸಿ ಆನ್​ಲೈನ್ ಸೇವೆ ಜಾರಿಗೊಳಿಸಲಾಗುತ್ತಿದೆ. ಹಲವು ವರ್ಷಗಳ ಬೇಡಿಕೆಯ ಬಳಿಕ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಗಣಕೀಕೃತ ಪದ್ಧತಿ ಅನುಷ್ಠಾನಕ್ಕೆ ತಂದರೂ ಸರ್ಕಾರಿ ನೌಕರರು ವಿಮಾ ಇಲಾಖೆಯ ಸೌಲಭ್ಯ ಪಡೆಯಲು ಪಡಿಪಾಟಲು ಪಡುವಂತಾಗಿದೆ. ಆಫ್​ಲೈನ್ ವ್ಯವಸ್ಥೆಯಲ್ಲಿ 3 ದಿನದಲ್ಲಿ ವಿಲೇವಾರಿಯಾಗುತ್ತಿದ್ದ ಸಾಲದ ಅರ್ಜಿ ಆನ್​ಲೈನ್​ನಲ್ಲಿ ವಾರಗಟ್ಟಲೆ, ತಿಂಗಳುಗಟ್ಟಲೆ ಇತ್ಯರ್ಥ ವಾಗುತ್ತಿಲ್ಲ. ಜತೆಗೆ ಪದೇಪದೆ ಸರ್ವರ್ ಸಮಸ್ಯೆಯೂ ಕಾಡುತ್ತಿದೆ.
ರಾಜ್ಯದಲ್ಲಿ ಎಲ್ಲ ಸರ್ಕಾರಿ ನೌಕರರು ಕಡ್ಡಾಯವಾಗಿ ಜೀವ ವಿಮೆ ಮಾಡಿಸುವ ನಿಯಮ ಇದೆ. ನೌಕರನ ಮೂಲವೇತನ ಶ್ರೇಣಿಯ ಮೇಲೆ ವಿಮೆ ಮಾಡಲಾಗುತ್ತದೆ. ಆಯಾ ವೇತನ ಶ್ರೇಣಿಗೆ ಅನುಗುಣವಾಗಿ ಕನಿಷ್ಠ ಕಡ್ಡಾಯ ವಿಮಾ ಕಂತು 1,440 ರೂ.ನಿಂದ ಆರಂಭವಾಗಿ 7,980 ರೂ.ವರೆಗೆ ಇದೆ. ಈ ವಿಮಾ ಪಾಲಿಸಿಗಳ ಮೇಲೆ ಸಾಲ ನೀಡಲಾಗುತ್ತದೆ. ಶೇ.9 ಬಡ್ಡಿ ದರ ವಿಧಿಸಲಾಗುತ್ತಿದೆ. ಆದರೆ, ಸಾಲಕ್ಕಾಗಿ ಸಲ್ಲಿಸುವ ಅರ್ಜಿಗಳು ವಿಲೇವಾರಿಯಾಗಬೇಕಾದರೆ ಲಂಚ ಕೊಡಬೇಕೆಂಬ ಆರೋಪವೂ ಕೇಳಿಬಂದಿದೆ.
ಆನ್​ಲೈನ್​ನಲ್ಲಿ ಅರ್ಜಿ ಬಂದ ದಿನವೇ ಇತ್ಯರ್ಥಪಡಿಸಬೇಕೆಂದು ಆದೇಶಿಸಿದ್ದರೂ ಪಾಲಿಸಲು ಡಿಡಿಒ ಕಚೇರಿ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಲಕ್ಷಾಂತರ ನೌಕರರಿಗೆ ಒಂದಲ್ಲ ಒಂದು ರೀತಿ ಸಮಸ್ಯೆಯಾಗುತ್ತಿದೆ. ಅಲ್ಲದೆ, ವಿಮಾ ಇಲಾಖೆ ಇತ್ತೀಚೆಗಷ್ಟೇ ಗಣಕೀಕೃತಗೊಂಡಿದೆ. ನೌಕರರ ಎಲ್ಲ ಮಾಹಿತಿಯನ್ನು ಕೆಜಿಐಡಿ ವೆಬ್​ಸೈಟ್​ನಲ್ಲಿ ಇಂದೀಕರಿಸಬೇಕು. ಆಯಾ ಜಿಲ್ಲೆಗೆ ಸಂಬಂಧಿಸಿದ ಸಂಖ್ಯೆಯ ಅನುಸಾರವಾಗಿ, ಲಿಪಿಕ ಸಿಬ್ಬಂದಿ ಇಂದೀಕರಿಸಲು ತಲಾ 2,000-3,000 ಪಾಲಿಸಿಗಳನ್ನು ಹಂಚಿಕೊಂಡಿದ್ದಾರೆ.
ಸಿ ಹಾಗೂ ಡಿ ದರ್ಜೆ ನೌಕರರು ವಿಮಾ ಪಾಲಿಸಿಗಳ ಮೇಲೆ ಹೆಚ್ಚಾಗಿ ಸಾಲ ಪಡೆಯುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಕರು, ಟೆಕ್ನಿಶಿಯನ್​ಗಳು, ಕ್ಲರಿಕಲ್ ಸಿಬ್ಬಂದಿ, ನಾನ್ ಗೆಜೆಟೆಡ್ ಅಧಿಕಾರಿಗಳು, ಕಾನ್​ಸ್ಟೆಬಲ್​ಗಳು, ಸಹಾಯಕ ಸಬ್ ಇನ್​ಸ್ಪೆಕ್ಟರ್​ಗಳು, ಕ್ಲರ್ಕ್​ಗಳು, ಕಚೇರಿ ಅಟೆಂಡರ್​ಗಳು, ಎಸ್​ಡಿಎ, ಎಫ್​ಡಿಎಗಳು ಹಾಗೂ ಇನ್ನಿತರ ಕೆಳಹಂತದ ಸಿಬ್ಬಂದಿ ಸಾಲಕ್ಕೆ ಅರ್ಜಿ ಹಾಕುತ್ತಾರೆ.
ಸಾಲ ಎಷ್ಟು ಸಿಗುತ್ತೆ, ಕಂತು ಎಷ್ಟು?: ಸರ್ಕಾರಿ ನೌಕರ ತೆಗೆದುಕೊಂಡ ವಿಮಾ ಪಾಲಿಸಿ 55 ವರ್ಷಕ್ಕೆ ಮುಕ್ತಾಯವಾಗುತ್ತದೆ. ಅದಕ್ಕೂ ಮುನ್ನ ಆತ ಪಾಲಿಸಿ ಮೇಲೆ ಸಾಲ ಪಡೆಯಬಹುದು. ಪಾಲಿಸಿ ಪ್ರಮಾಣ ಆಧರಿಸಿ ಸಾಲ ಕೊಡಲಾಗುತ್ತೆ. ಕನಿಷ್ಟ 24 ಕಂತು ಹಾಗೂ ಗರಿಷ್ಠ 40 ಕಂತಿನಲ್ಲಿ ಸಾಲ ಮರುಪಾವತಿ ಮಾಡಬೇಕು. ಶೇ.9 ಬಡ್ಡಿ ವಿಧಿಸುತ್ತಿದ್ದು, ಇದನ್ನು ತೀರಿಸಲು 8 ಕಂತು ನೀಡಲಾಗುತ್ತದೆ. ಅಂದರೆ ಒಟ್ಟು 48 ಕಂತು ಪಾವತಿಸಬೇಕು.
ಆಫ್​ಲೈನ್ ವ್ಯವಸ್ಥೆ ಹೇಗಿತ್ತು?: ಆಫ್​ಲೈನ್ (ಮ್ಯಾನ್ಯುವಲ್) ವ್ಯವಸ್ಥೆ ಇದ್ದಾಗ ನೌಕರ ಸಾಲದ ಅರ್ಜಿ ತುಂಬಿ ನೇರವಾಗಿ ಜಿಲ್ಲಾ ವಿಮಾಧಿಕಾರಿ ಕಚೇರಿಗೆ ಹೋಗಿ ಕೊಡುತ್ತಿದ್ದ. ಅರ್ಜಿ ಸ್ವೀಕರಿಸುತ್ತಿದ್ದ ಕೇಸ್ ವರ್ಕರ್ ಕೈ ಬಿಸಿ ಮಾಡಿದರೆ ತಕ್ಷಣವೇ ಕಡತಗಳ ಪರಿಶೀಲನೆ ನಡೆಸಿ, ವಿಮಾಧಿಕಾರಿಯ ಸಹಿ ಹಾಕಿಸಿ, ಜಿಲ್ಲಾ ಖಜಾನೆ ಕಚೇರಿಗೆ ಕಳುಹಿಸಲಾಗುತ್ತಿತ್ತು. ಅಲ್ಲೂ ಓಕೆಯಾಗಿ ಅದೇ ದಿನ ಚೆಕ್ ಟಪಾಲ್ ಮೂಲಕ ನೌಕರನಿಗೆ ರವಾನೆಯಾಗುತ್ತಿತ್ತು. ಅಂದರೆ ಒಂದೇ ದಿನದಲ್ಲಿ ನೌಕರನ ಸಾಲದ ಅರ್ಜಿ ಇತ್ಯರ್ಥವಾಗಿ, ಚೆಕ್ ಕೈ ಸೇರುತ್ತಿತ್ತು.
ಆನ್​ಲೈನ್ ವ್ಯವಸ್ಥೆ ಹೇಗಿದೆ?: ಸಾಲ ಬೇಕಾಗಿರುವ ನೌಕರ ಕೆಜಿಐಡಿ ವೆಬ್​ಸೈಟ್​ಗೆ ಭೇಟಿ ನೀಡಿ ಫಾರಂ ಭರ್ತಿ ಮಾಡಿ ಆನ್​ಲೈನ್​ನಲ್ಲೇ ಸಲ್ಲಿಸಬೇಕು. ಇದಕ್ಕಾಗಿ ಬಹುತೇಕ ನೌಕರರು ಸೈಬರ್ ಕೆಫೆಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಅರ್ಜಿ ಮೊದಲಿಗೆ ಡಿಡಿಒ ಕಚೇರಿಗೆ ಬರುತ್ತೆ. ಅಲ್ಲಿನ ಕೇಸ್ ವರ್ಕರ್ ನೌಕರನ ವೇತನ, ಹಿಂದಿನ ಸಾಲ ಸೇರಿ ಎಲ್ಲ ದಾಖಲೆ ಪರಿಶೀಲಿಸಿ, ವೇತನ ಮುಖ್ಯಸ್ಥರ ಡಿಜಿಟಲ್ ಸಹಿ ಮಾಡಿಸಿ ಜಿಲ್ಲಾ ವಿಮಾಧಿಕಾರಿ ಕಚೇರಿಗೆ ಕಳುಹಿಸಬೇಕು. ಅಲ್ಲಿ ಪುನಃ ಅರ್ಜಿಯನ್ನು ಪರಿಶೀಲಿಸಿ, ಎಲ್ಲ ಸರಿಯಾಗಿದ್ದರೆ ಜಿಲ್ಲಾ ಖಜಾನೆ ಕಚೇರಿಗೆ ಕಳುಹಿಸುತ್ತಾರೆ. ಅಲ್ಲಿ ಮತ್ತೊಮ್ಮೆ ಪರಿಶೀಲಿಸಿ ನೌಕರನ ಖಾತೆಗೆ ಸಾಲದ ಹಣ ಮಂಜೂರು ಮಾಡುತ್ತಾರೆ. ನ್ಯೂನತೆ ಇದ್ದರೆ ಅರ್ಜಿ ತಿರಸ್ಕರಿಸುತ್ತಾರೆ. ಆದರೆ, ಬಹುತೇಕ ಕಚೇರಿಗಳಲ್ಲಿ ಸರ್ವರ್ ಡೌನ್ ಎಂಬ ಉತ್ತರ ದೊರೆಯುತ್ತಿದೆ.
ಸಾಲದ ಅರ್ಜಿ ನೋಡುವುದೇ ಇಲ್ಲ: ಬಹುತೇಕ ಕೇಸ್ ವರ್ಕರ್​ಗಳು ಅರ್ಜಿಯನ್ನು ಪರಿಶೀಲಿಸುವುದೇ ಇಲ್ಲ. ಅರ್ಜಿ ಸಲ್ಲಿಸಿದ ನೌಕರ ಮೊದಲು ಡಿಡಿಒ ಕಚೇರಿಗೆ ಹೋಗಿ ವಿಷಯ ತಿಳಿಸಬೇಕು. ಒಂದಷ್ಟು ಹಣ ಕೊಟ್ಟರೆ ಆತ ತಕ್ಷಣ ಅರ್ಜಿ ಪರಿಶೀಲಿಸಿ, ಜಿಲ್ಲಾ ವಿಮಾಧಿಕಾರಿ ಕಚೇರಿಗೆ ಕಳುಹಿಸುತ್ತಾನೆ. ನೌಕರ ಅಲ್ಲಿಂದ ಜಿಲ್ಲಾ ವಿಮಾಧಿಕಾರಿ ಕಚೇರಿಗೆ ಹೋಗಿ ಅಲ್ಲಿನ ಸಿಬ್ಬಂದಿಗೆ ಅರ್ಜಿ ಸಲ್ಲಿಸಿರುವ ಬಗ್ಗೆ ತಿಳಿಸಬೇಕು. ಆತ ಮತ್ತೊಮ್ಮೆ ಪರಿಶೀಲಿಸಿ, ಜಿಲ್ಲಾ ಖಜಾನೆ ಕಚೇರಿಗೆ ಕಳುಹಿಸುತ್ತಾನೆ. ಅಲ್ಲಿಗೆ ಹೋಗಿ ತಿಳಿಸಿದರೆ ಮಗದೊಮ್ಮೆ ಅರ್ಜಿ ಪರಿಶೀಲಿಸಿ ಓಕೆ ಮಾಡುತ್ತಾರೆ. ಪ್ರತಿಯೊಂದು ಕಚೇರಿಯಲ್ಲೂ ಒಂದಷ್ಟು ಹಣ ಕೊಡಬೇಕು ಎಂದು ನೌಕರರು ಆರೋಪಿಸಿದ್ದಾರೆ.
ಮೊಬೈಲ್ ಲಿಂಕ್​ಗೂ ಅಲೆದಾಟ: ಕೆಜಿಐಡಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾದರೆ ಮೊದಲಿಗೆ ನೌಕರನ ಕೆಜಿಐಡಿ ಖಾತೆ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಮಾಡಬೇಕು. ಡಿಡಿಒ ಕಚೇರಿಯ ಲಿಪಿಕ ಸಿಬ್ಬಂದಿಯನ್ನು ಭೇಟಿಯಾಗಿ ಲಿಂಕ್ ಮಾಡಿಸಬೇಕು. ಒಂದು ಹಾಳೆಯಲ್ಲಿ ಮೊಬೈಲ್ ನಂಬರ್ ಹಾಗೂ ಹೆಸರು ಬರೆದಿಟ್ಟು ಹೋಗಿ ಎನ್ನುತ್ತಾರೆ. ತಕ್ಷಣ ಖಾತೆಗೆ ಲಿಂಕ್ ಮಾಡಲ್ಲ. ಪದೇಪದೆ ಹೋಗಿ ನೆನಪು ಮಾಡಿದರೆ ಲಿಂಕ್ ಮಾಡುತ್ತಾರೆ; ಮೊಬೈಲ್ ಅಪ್​ಡೇಟ್ ಎಂದು ಇ-ಮೇಲ್ ಕಳುಹಿಸುವ ವ್ಯವಸ್ಥೆ ಇದೆ. ಆದರೆ, ಬಹುತೇಕ ಸಿಬ್ಬಂದಿಗೆ ಈ ಜ್ಞಾನ ಇಲ್ಲ ಎಂಬುದು ನೌಕರರ ಆರೋಪ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + sixteen =
Remember me
