ಬೆಂಗಳೂರು :ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಚುಕ್ಕಾಣಿ ಹಿಡಿದು ಸಂಭ್ರಮ ಆಚರಿಸಿದ್ದವರ ಭವಿಷ್ಯ ಇದೀಗ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ಮೀಸಲಾತಿ ವಿಚಾರದಲ್ಲಿ ರೊಟೇಷನ್ ಪದ್ಧತಿ ಪಾಲಿಸಿಲ್ಲ ಎಂಬ ಕಾರಣಕ್ಕೆ ಸರ್ಕಾರ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನೇ ಹೈಕೋರ್ಟ್ ರದ್ದುಪಡಿಸಿದ್ದು, ನಿಯಮಾನುಸಾರ 4 ವಾರಗಳ ಒಳಗೆ ಮರು ಅಧಿಸೂಚನೆ ಹೊರಡಿಸುವಂತೆ ಆದೇಶಿಸಿದೆ.
ಏತನ್ಮಧ್ಯೆ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ 10 ದಿನ ಕಾಲಾವಕಾಶ ನೀಡಿರುವ ನ್ಯಾಯಾಲಯ, ಅಲ್ಲಿಯವರೆಗೆ ತನ್ನ ಆದೇಶಕ್ಕೆ ತಡೆ ನೀಡಿದೆ. ಒಂದು ವೇಳೆ ವಿಭಾಗೀಯ ಪೀಠಕ್ಕೆ ಸಲ್ಲಿಸುವ ಮೇಲ್ಮನವಿಯಲ್ಲಿ ಸರ್ಕಾರ ಅಧಿಸೂಚನೆಯನ್ನು ಸಮರ್ಥಿಸಿಕೊಳ್ಳಲು ವಿಫಲವಾದಲ್ಲಿ 276 ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪುನಃ ಚುನಾವಣೆ ನಡೆಯಬೇಕಾಗುತ್ತದೆ. ಬಹುತೇಕ ಸಂಸ್ಥೆಗಳಲ್ಲಿ ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದು, ಅವರಲ್ಲಿ ಇದೀಗ ಅತಂಕ ಸೃಷ್ಟಿಯಾಗಿದೆ. ಈ ಬೆಳವಣಿಗೆ ತಮಗೆ ಅಧಿಕಾರ ಸಿಗಬೇಕೆಂದು ಬಯಸಿದ್ದವರಲ್ಲಿ ಹಾಗೂ ಅನ್ಯಾಯವಾಗಿತ್ತು ಎಂದು ನ್ಯಾಯಾಲಯದ ಮೆಟ್ಟಿಲೇರಿದವರಲ್ಲಿ ಆಶಾಭಾವನೆ ಮೂಡಿದೆ.
ಮೇಲ್ಮನವಿ ಮೇಲೆ ಭವಿಷ್ಯ :ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅ.8ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ರದ್ದುಪಡಿಸಿ, ದ್ವಿಸದಸ್ಯ ಪೀಠದಲ್ಲಿ 10 ದಿನದೊಳಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ. ಹೀಗಾಗಿ ಸರ್ಕಾರದ ಮೇಲ್ಮನವಿ ಕುರಿತು ವಿಭಾಗೀಯ ಪೀಠ ಹೊರಡಿಸುವ ಆದೇಶ ಅಥವಾ ಮಧ್ಯಂತರ ಆದೇಶದ ಮೇಲೆ ಮುಂದಿನ ಭವಿಷ್ಯ ನಿಂತಿದೆ.
25 ಪ್ರತ್ಯೇಕ ಅರ್ಜಿಗಳು :ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಹಾಸನ, ಅರಸಿಕೇರೆ, ಕೊಪ್ಪಳ, ಶಿಡ್ಲಘಟ್ಟ, ಹರಿಹರ ನಗರಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪುರಸಭೆ, ಕೊಡಗು ಜಿಲ್ಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸೇರಿ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಲ್ಲಿಸಿದ್ದ 25 ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಗುರುವಾರ ಪ್ರಕಟಿಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಎಲ್ಲ ಅರ್ಜಿಗಳನ್ನು ಮಾನ್ಯ ಮಾಡಿ ಆದೇಶಿಸಿದೆ.
ಆದೇಶದಲ್ಲೇನಿದೆ?
* ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅ.8ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು* ತೀರ್ಪಿನ ದೃಢೀಕೃತ ಪ್ರತಿ ಕೈಸೇರಿದ 4 ವಾರಗಳ ಒಳಗೆ ಮರು ಅಧಿಸೂಚನೆ ಹೊರಡಿಸಬೇಕು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ರೊಟೇಷನ್ ನಿಗದಿಪಡಿಸುವ ವೇಳೆ, ಕಾಲ ಕಾಲಕ್ಕೆ ತಿದ್ದುಪಡಿಗೊಂಡಿರುವ ಕರ್ನಾಟಕ ಮುನ್ಸಿಪಾಲಿಟೀಸ್ (ಅಧ್ಯಕ್ಷ ಹಾಗೂ ಉಪಾಧ್ಯಕ್ಷ) ಚುನಾವಣೆ ನಿಯಮಗಳು -1965 ಹಾಗೂ 2020ರ ಸೆ.11ರಂದು ಸರ್ಕಾರದ ಹೊರಡಿಸಿರುವ ಮಾರ್ಗಸೂಚಿ ಪಾಲಿಸಬೇಕು.* ರೊಟೇಷನ್ ಪ್ರಕ್ರಿಯೆ ಸಂದರ್ಭದಲ್ಲಿ ಸಿದ್ಧಪಡಿಸಿಕೊಳ್ಳುವ ವರ್ಕ್​ಶೀಟ್​ಗಳು ಹಾಗೂ ಟಿಪ್ಪಣಿಗಳನ್ನು ಸರ್ಕಾರ ನಿರ್ವಹಿಸಬೇಕು, ಮೀಸಲಾತಿ ಆವರ್ತನೆಯಲ್ಲಿ ಬದಲಾವಣೆಗಳಿದ್ದರೆ ಅದಕ್ಕೆ ಕಾರಣಗಳನ್ನು ಉಲ್ಲೇಖಿಸಬೇಕು.* ಹೊಸ ಮೀಸಲು ಪಟ್ಟಿ ಅಧಿಸೂಚನೆ ಹೊರಡಿಸಿದ ಬಳಿಕ, ಹಿಂದಿನ ಅಧಿಸೂಚನೆಯಲ್ಲಿ ನೀಡಿದ್ದ ಮೀಸಲಾತಿಯಲ್ಲಿ ಶೇ. 50ಕ್ಕೂ ಅಧಿಕ ಪ್ರಕರಣಗಳಲ್ಲಿ ಯಾವುದೇ ಬದಲಾವಣೆ ಕಂಡು ಬರದಿದ್ದಲ್ಲಿ, ಮತ್ತೆ ಹೊಸದಾಗಿ ಚುನಾವಣೆ ನಡೆಸುವುದನ್ನು ತಪ್ಪಿಸಲು, ಸರ್ಕಾರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಈಗಾಗಲೇ ನಡೆಸಿರುವ ಚುನಾವಣೆಯನ್ನೇ ಪರಿಗಣಿಸಿ ಆಯ್ಕೆಗೊಂಡವರ ಕಾರ್ಯ ನಿರ್ವಹಣೆಯೇ ಮುಂದುವರಿಸುವಂತೆ ಕೋರಬಹುದು.* ಹೊಸ ಅಧಿಸೂಚನೆ ಆಧರಿಸಿ ವೇಳಾಪಟ್ಟಿ ಪ್ರಕಟಿಸುವರೆಗೆ ಅಥವಾ ನಡೆದಿರುವ ಚುನಾವಣೆಗಳ ಫಲಿತಾಂಶವನ್ನು ಮುಂದುವರಿಸುವಂತೆ ನ್ಯಾಯಾಲಯ ಘೊಷಿಸುವರೆಗೆ, ಈ ಎರಡಲ್ಲಿ ಯಾವುದು ಮೊದಲು ಸಂಭವಿಸುವುದೋ ಅಲ್ಲಿಯವರೆಗೆ ಈಗಾಗಲೇ ಚುನಾವಣೆ ನಡೆಸಿ ಪ್ರಕಟಗೊಂಡಿರುವ ಫಲಿತಾಂಶವು ಅಮಾನತಿನಲ್ಲಿರುತ್ತದೆ.
ಸಂಸ್ಥೆಗಳು117 ಪುರಸಭೆ59 ನಗರ ಸಭೆ100 ಪಟ್ಟಣ ಪಂಚಾಯಿತಿ
ಸಾಧ್ಯಾಸಾಧ್ಯತೆಗಳು* 10 ದಿನದಲ್ಲಿ ಸರ್ಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕು* ಮೇಲ್ಮನವಿ ಸಲ್ಲಿಸಿದ ಬಳಿಕ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ಕೇಳಬಹುದು* ವಿಭಾಗೀಯ ಪೀಠ ತಡೆಯಾಜ್ಞೆ ಕೊಟ್ಟರೆ ಈಗಿರುವ ಸ್ಥಿತಿಯೇ ಮುಂದುವರಿಯುತ್ತೆ* ಸರ್ಕಾರದ ಮೇಲ್ಮನವಿಯನ್ನು ಪುರಸ್ಕರಿಸಿದರೆ ಮರು ಚುನಾವಣೆ ನಡೆಸುವ ಅಗತ್ಯವಿಲ್ಲ* ಏಕಸದಸ್ಯ ಪೀಠದ ಆದೇಶ ಎತ್ತಿಹಿಡಿದರೆ ಮೀಸಲಾತಿ ಬಗ್ಗೆ ಅಧಿಸೂಚನೆ ಹೊರಡಿಸಿ ಚುನಾವಣೆ ನಡೆಸಬೇಕು* ವಿಭಾಗೀಯ ಪೀಠದ ಆದೇಶವನ್ನೂ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಅವಕಾಶವೂ ಇದೆ
ಪ್ರಕರಣವೇನು?ಮೀಸಲಾತಿ ಕಲ್ಪಿಸುವ ವೇಳೆ ರೊಟೇಷನ್ ಅನುಸರಿಸಲಾಗಿಲ್ಲ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ಅ.15ರಂದು ಹಾಗೂ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ಅಧಿಸೂಚನೆಗೆ ಅ.19ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೇ ವೇಳೆ, ಮೀಸಲಾತಿ ಆವರ್ತನೆ ಪರಿಶೀಲಿಸಿ ಕರಡು ಸಲ್ಲಿಸಲು ಮೂವರು ವಕೀಲರನ್ನೊಳಗೊಂಡ ಸಮಿತಿ ನೇಮಕ ಮಾಡಿತ್ತು. ಈ ಮಧ್ಯೆ, ಏಕಸದಸ್ಯ ಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಅ.21ರಂದು ಮಾನ್ಯ ಮಾಡಿದ್ದ ವಿಭಾಗೀಯ ಪೀಠ, ತಡೆಯಾಜ್ಞೆ ತೆರವುಗೊಳಿಸಿ, ರಾಜ್ಯದ ಎಲ್ಲ ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹಸಿರು ನಿಶಾನೆ ತೋರಿತ್ತು. ಇದೇ ವೇಳೆ, ಚುನಾವಣಾ ಫಲಿತಾಂಶ ಮೀಸಲಾತಿ ಅಧಿಸೂಚನೆ ಪ್ರಶ್ನಿಸಿ ಏಕಸದಸ್ಯ ಪೀಠದಲ್ಲಿ ಸಲ್ಲಿಕೆಯಾಗಿರುವ ತಕರಾರು ಅರ್ಜಿಗಳ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ತಡೆಯಾಜ್ಞೆ ನೀಡಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅ.22ರಂದು ಹಿಂಪಡೆದಿದ್ದ ಏಕಸದಸ್ಯಪೀಠ, ನ.10ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.
https://www.vijayavani.net/dri-recovers-66-4-kg-smuggled-gold-worth-rs-35-cr/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
