ಬೆಂಬೆಂಗಳೂರು:ಕರೊನಾ ನಿಯಂತ್ರಣಕ್ಕೆ ಸಿಗದೆ ಇರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಮುಂದುವರಿಕೆ ಹಾಗೂ ಶಾಸಕರ ವೇತನ ಕಡಿತ ಸೇರಿ ವಿವಿಧ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಗುರುವಾರ (ಏ.9) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಪ್ರಮುಖ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಸಂಪುಟ ಸಭಾಂಗಣ ಬಿಟ್ಟು ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಸಭೆ ನಡೆಯಲಿದೆ.
ಕರೊನಾ ಆರಂಭಕ್ಕೆ ಮುಂಚೆಯೇ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಇದೀಗ ಇನ್ನಷ್ಟು ಕಳವಳಕಾರಿಯಾಗಿದೆ. ಕರೊನಾ ನಿಯಂತ್ರಣಕ್ಕೆ ಹಣ ಹೊಂದಾಣಿಕೆಗೆ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿ ಜನಪ್ರತಿನಿಧಿಗಳ ವೇತನ ಶೇ.30 ಕಡಿತ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಸಂಸದರ ವೇತನದಲ್ಲಿ ಮಾತ್ರ ಶೇ.30 ಕಡಿತ ಮಾಡಿದೆ. ರಾಜ್ಯದಲ್ಲಿಯೂ ಅದೇ ಮಾದರಿ ಅನುಸರಿಸಿ, ಇನ್ನಿತರ ಭತ್ಯೆಗಳನ್ನು ಯಥಾವತ್ತಾಗಿ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ, ಸಚಿವರು, ಶಾಸಕರು, ಉಭಯ ಸದನಗಳ ವಿರೋಧ ಪಕ್ಷದ ನಾಯಕರು, ಸಭಾಧ್ಯಕ್ಷರು, ಮುಖ್ಯ ಸಚೇತಕರ ಸಂಬಳ ಹಾಗೂ ಭತ್ಯೆಗಳ ವೆಚ್ಚಕ್ಕಾಗಿ ವರ್ಷಕ್ಕೆ ಸುಮಾರು 47 ಕೋಟಿ ರೂ. ವೆಚ್ಚವಾಗುತ್ತದೆ.
ಲಾಕ್​ಡೌನ್ ಬಗ್ಗೆ ಚರ್ಚೆ:ರಾಜ್ಯದಲ್ಲಿ ಏ.14ಕ್ಕೆ ಲಾಕ್​ಡೌನ್ ಮುಕ್ತಾಯವಾಗಲಿದೆ. ಅದನ್ನು ಮುಂದುವರಿಸುವ ಅಥವಾ ಹಂತ ಹಂತವಾಗಿ ಸಡಿಲ ಮಾಡುವ ಕುರಿತಂತೆ ತಜ್ಞ ವೈದ್ಯರ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ಚರ್ಚೆ ನಡೆಸಲಿದೆ. ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ಬಗ್ಗೆ ಕಾದು ನೋಡುವಂತೆಯೂ ಸಮಿತಿ ಹೇಳಿದೆ. ಈ ಸಮಿತಿಯ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚೆ ಮಾಡಲಾಗುತ್ತದೆ. ಸಿಎಸ್ ವಿಜಯಭಾಸ್ಕರ್ ಅವರು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಲಾಕ್​ಡೌನ್ ನಂತರ ಇಲಾಖೆಗಳಲ್ಲಿ ಕೈಗೊಳ್ಳಬೇಕಾದ 10 ಕ್ರಮಗಳ ಬಗ್ಗೆ ವರದಿ ಕೇಳಿದ್ದಾರೆ. ಆ ವರದಿಯ ಅಂಶಗಳ ಬಗ್ಗೆಯೂ ಚರ್ಚೆ ನಡೆಸಲಿದೆ.
ಮೋದಿ ವಿಡಿಯೋ ಸಂವಾದ:ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜತೆ ಏ.11ರಂದು ವಿಡಿಯೋ ಸಂವಾದ ನಡೆಸಲಿದ್ದಾರೆ. ಅಲ್ಲಿ ರಾಜ್ಯದಿಂದ ಯಾವ ಯಾವ ಅಂಶಗಳನ್ನು ಚರ್ಚೆ ನಡೆಸಬೇಕು ಎಂಬ ಬಗ್ಗೆಯೂ ಸಂಪುಟ ನಿರ್ಧಾರ ಮಾಡಲಿದೆ.
ಮದ್ಯದ ಬಗ್ಗೆಯೂ ನಿರ್ಧಾರ:ಮದ್ಯ ಪೂರೈಕೆಗೆ ಸಾಕಷ್ಟು ಒತ್ತಡ ಇದೆ. ಏ.14ರ ನಂತರ ಮದ್ಯ ಸರಬರಾಜು ಮಾಡಬೇಕೆ ಅಥವಾ ಬೇಡವೇ ಎಂಬ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಪ್ರತಿ ನಿತ್ಯ 3 ಗಂಟೆಗಳ ಕಾಲ ಮದ್ಯ ಸರಬರಾಜಿಗೆ ತೀರ್ಮಾನ ಮಾಡಿದೆ.
ಪ್ರತಿಪಕ್ಷಗಳ ಜತೆ ಬಿಎಸ್​ವೈ ಚರ್ಚೆ
ಸಚಿವರು, ಶಾಸಕರು ಸೇರಿ ಜನಪ್ರತಿನಿಧಿಗಳ ವೇತನ ಕಡಿತ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಜತೆ ದೂರವಾಣಿಯಲ್ಲಿ ಮಾತನಾಡಿ ಒಪ್ಪಿಗೆ ಪಡೆದಿದ್ದಾರೆ.
ನಮ್ಮ ವಿರೋಧ ಇಲ್ಲ
ಸಿಎಂ ಯಡಿಯೂರಪ್ಪ ಕರೆ ಮಾಡಿದ್ದರು. ಶಾಸಕರು, ಸಂಸದರ ವೇತನ ಕಡಿತ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ನಮ್ಮ ಸಹಮತವೂ ಇದೆ. ಸಂಕಷ್ಟ ಸಂದರ್ಭದಲ್ಲಿ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳು ಸಹಕರಿಸಬೇಕಾಗುತ್ತದೆ. ಇದಕ್ಕೆ ನಮ್ಮ ಒಪ್ಪಿಗೆಯೂ ಇದೆ. ಈಗಾಗಲೇ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ದೇಣಿಗೆ ನೀಡಿದ್ದಾಗಿದೆ. ಅದು ಸಾಕು ಎಂಬುದು ನನ್ನ ಭಾವನೆ. ಬೇಕಾದರೆ ಸಂಸದರು, ಶಾಸಕರ ವೇತನವನ್ನು ಇನ್ನಷ್ಟು ಕಡಿತ ಮಾಡಲಿ. ಅದಕ್ಕೆ ನಮ್ಮ ವಿರೋಧ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸಿ: ಸರ್ಕಾರಕ್ಕೆ ತಜ್ಞರ ಸಮಿತಿ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eight =
Remember me
