ಮೃತ್ಯುಂಜಯ ಕಪಗಲ್ಬೆಂಗಳೂರು
ರಾಜ್ಯವನ್ನು ಬಹುವಾಗಿ ಕಾಡುತ್ತಿರುವ ಕರೊನಾ ವೈರಸ್ ತಹಬಂದಿಗೆ ತರಲು ಹಾಗೂ ಸಂಪರ್ಕದ ಸರಪಳಿ ಕಳಚಲು ಕನಿಷ್ಠ ಒಂದು ವಾರ ಲಾಕ್​ಡೌನ್ ವಿಸ್ತರಿಸಬೇಕೆಂದು ತಜ್ಞರು ಸಲಹೆ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂದಿಗ್ಧತೆಗೆ ಸಿಲುಕಿದ್ದಾರೆ.
ಲಾಕ್​ಡೌನ್ ವಿಸ್ತರಿಸಿದರೆ, ಆರ್ಥಿಕತೆಗೆ ಪೆಟ್ಟು ಬಿಳಲಿದೆ ಎಂಬ ಕಾರಣಕ್ಕೆ ಸಿಎಂ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಘೊಷಿತ ಪರಿಹಾರ ಪ್ಯಾಕೇಜ್​ಗಳಿಗೆ ಅನುದಾನ ಹಂಚಿಕೆ ಪೂರ್ಣಗೊಂಡಿಲ್ಲ. ಲಾಕ್​ಡೌನ್ ಅವಧಿ ಹೆಚ್ಚಿದಂತೆ ಸಂಕಷ್ಟಕ್ಕೆ ಸಿಲುಕಿದವರು ಮತ್ತೆ ಪರಿಹಾರ ಪ್ಯಾಕೇಜ್​ಗೆ ಮೊರೆಯಿಡಲಿದ್ದು, ಒಟ್ಟೊಟ್ಟಿಗೆ ಹಲವು ಸವಾಲುಗಳನ್ನು ನಿಭಾಯಿಸುವುದು ಕಷ್ಟವೆಂದು ಉನ್ನತ ಮೂಲಗಳು ತಿಳಿಸಿವೆ.
ಇತಿ-ಮಿತಿಯೊಳಗೆ ಸಾಲ: ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿತ್ತೀಯ ಕೊರತೆ ಪ್ರಮಾಣವನ್ನು ಶೇ.3ರಿಂದ 5ರವರೆಗೆ ವಿಸ್ತರಿಸಿ, ಸಾಲ ಪಡೆಯುವ ನಿಯಮಗಳನ್ನು ಸಡಿಲಿಸಿದೆ. ಆರ್​ಬಿಐನಿಂದ 8,000 ಕೋಟಿ ರೂ. ಸಾಲ ಪಡೆದಿದೆ. ಇಷ್ಟಾಗಿಯೂ 14ನೇ ಹಣಕಾಸು ಆಯೋಗದ ಸೂಚಿತ ಮಿತಿಯಂತೆ ಜಿಡಿಪಿಯ ಶೇ.25ಕ್ಕಿಂತ ಕಡಿಮೆ ಸಾಲವನ್ನು ರಾಜ್ಯ ಸರ್ಕಾರ ಹೊಂದಿದೆ.
ಅಪೂರ್ಣ ಕಾಮಗಾರಿ:ಗಳಿಗೆ ನಿಧಾನಕ್ಕೆ ಚಾಲನೆ ನೀಡಲಾಗಿದ್ದು, ಮಹತ್ವದ ಅಭಿವೃದ್ಧಿ ಕಾಮಗಾರಿ ನಿಲ್ಲದಂತೆ ನೋಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ನಿರೀಕ್ಷಿತ ನೆರವು ಲಭಿಸದ ಕಾರಣ ಸ್ವಂತ ಸಂಪನ್ಮೂಲ ಕ್ರೋಡೀಕರಿಸಬೇಕಾಗಿದೆ. ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದಕ್ಕೂ ಬಿಎಸ್​ವೈಗೆ ಸುತಾರಾಂ ಇಷ್ಟವಿಲ್ಲ. ಕಷ್ಟ ಕಾಲದಲ್ಲಿ ಉದ್ಯೋಗ ಖಾತ್ರಿ ಯೋಜನೆಗೂ ಬೇಡಿಕೆ ಹೆಚ್ಚಿದೆ. ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನವನ್ನೂ ಒದಗಿಸಬೇಕಾಗಿದೆ. ಸಂಭವನೀಯ ಪ್ರಾಕೃತಿಕ ವಿಪತ್ತನ್ನು ಎದುರಿಸಲು ಹಣಕಾಸಿನ ವ್ಯವಸ್ಥೆ, ಕುಡಿಯುವ ನೀರು ಸೇರಿ ಅಗತ್ಯ ಸವಲತ್ತುಗಳು, ಪ್ರಮುಖ ನೀರಾವರಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಜೋಡಿಸಬೇಕಾಗಿದೆ. ಉದ್ಯಮ-ವಹಿವಾಟು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದು, ಲಾಕ್​ಡೌನ್ ವಿಸ್ತರಿಸಿದರೆ ಎಲ್ಲದಕ್ಕೂ ಹೊಡೆತ ಬೀಳಲಿದೆ ಎಂಬ ಅಳುಕು ಮುಖ್ಯಮಂತ್ರಿಗೆ ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಜ್ಞರ ಆತಂಕ:ಮಳೆ, ಶೀತಗಾಳಿ, ತಂಪು ಹವೆಯಿಂದಾಗಿ ಬೇರೆ ಸಾಂಕ್ರಾಮಿಕ ರೋಗಗಳು ತಲೆ ಎತ್ತಲಿವೆ. ವ್ಯಾಪಿಸಿದ ಕರೊನಾ ಸೋಂಕು ಹೆಚ್ಚಾಗಲಿದೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದು, ಇನ್ನೊಂದು ವಾರ ಸಾಧ್ಯವಿಲ್ಲದಿದ್ದರೆ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಲಾಕ್​ಡೌನ್ ಮಾದರಿಯ ಕಟ್ಟುನಿಟ್ಟಿನ ಕ್ರಮಗಳನ್ನಾದರೂ ಕೈಗೊಳ್ಳಬೇಕು ಎನ್ನುವ ಸಲಹೆ ನೀಡಿದ್ದಾರೆ. ಲಾಕ್​ಡೌನ್ ವಿಚಾರದಲ್ಲಿ ತಮ್ಮ ನಿರ್ಧಾರವೇ ಅಂತಿಮವೆಂದು ಸಿಎಂ ಹೇಳಿರುವ ಕಾರಣ ಒಲವು ತೋರಿದ್ದ ಸಚಿವ, ಶಾಸಕರು ಮೌನಕ್ಕೆ ಶರಣಾಗಿದ್ದಾರೆ. ಹಾಟ್​ಸ್ಪಾಟ್​ಗಳಲ್ಲಿ ಕಠಿಣ ಕ್ರಮಗಳಿಗೆ ಬಿಎಸ್​ವೈ ಉತ್ಸುಕತೆ ತೋರಿದ್ದು, ಮುಂದಿನ ಬೆಳವಣಿಗೆಯನ್ನು ಕಾದು ನೋಡುತ್ತಿದ್ದಾರೆ.
ಬಿಎಸ್​ವೈ ವರದಿ ನೆಗೆಟಿವ್:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 3ನೇ ಬಾರಿಗೆ ಮಾಡಿಸಿಕೊಂಡ ಕರೊನಾ ತಪಾಸಣೆಯಲ್ಲಿ ನೆಗೆಟಿವ್ ವರದಿಯಾಗಿದ್ದು, ಸಿಎಂ ಸೇರಿ ಅಧಿಕಾರಿಗಳು ನಿರಾಳರಾಗಿದ್ದಾರೆ. ಗೃಹ ಕಚೇರಿ ಕೃಷ್ಣಾ, ನಿವಾಸ ಕಾವೇರಿ ಹಾಗೂ ಖಾಸಗಿ ಮನೆ ಧವಳಗಿರಿಯಲ್ಲಿ ಕೆಲವು ಸಿಬ್ಬಂದಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ತಪಾಸಣೆ ಮಾಡಿಸಿಕೊಳ್ಳಲು ಸಿಎಂ ನಿರ್ಧರಿಸಿದ್ದರು. ಅಲ್ಲದೆ, ಕೆಲದಿನ ಸ್ವಯಂ ಕ್ವಾರಂಟೈನ್​ಗೂ ಒಳಗಾಗಿ ಕಾವೇರಿ ನಿವಾಸದಿಂದಲೇ ದೈನಂದಿನ ಕರ್ತವ್ಯ ನಿರ್ವಹಿಸಿದ್ದರು. ನೆಗೆಟಿವ್ ವರದಿ ಲಭ್ಯವಾದ ಬಳಿಕ ಸಿಎಂ ಗೃಹ ಕಚೇರಿ, ಕಾವೇರಿ ಹಾಗೂ ಧವಳಗಿರಿ ಮನೆಗೆ ಬಿಬಿಎಂಪಿ ಸೋಂಕು ನಿವಾರಕ ಸಿಂಪಡಿಸಿದೆ. ಕೃಷ್ಣಾದಲ್ಲಿ ಎಂದಿನಂತೆ ಕಾರ್ಯಚಟುವಟಿಕೆಗಳು ಪ್ರಾರಂಭವಾಗಿವೆ.
ಪಾನ್ ತಿಂದವರಲ್ಲಿ ಢವಢವ!:ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ಹಳೇ ಬಸ್ ನಿಲ್ದಾಣ ಹತ್ತಿರದ ಪಾನ್​ಬೀಡಾ ಅಂಗಡಿಯ ಪಾನ್​ವಾಲಾನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ, ಆತನಿಂದ ಪಾನ್ ಕಟ್ಟಿಸಿಕೊಂಡು ತಿಂದವರ ಎದೆಯಲ್ಲಿ ಈಗ ಢವಢವ ಶುರುವಾಗಿದೆ. ಆದರೆ, ಪಾನ್ ತಿಂದವರ್ಯಾರೂ ಸತ್ಯ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕ ಮನೆಮಾಡಿದೆ. ಶಿಗ್ಲಿ ಗ್ರಾಮದ ಕಂಡಕ್ಟರ್​ಗೆ ಜು.12ರಂದು ಕರೊನಾ ದೃಢಪಟ್ಟಿತ್ತು. ಪಾನ್​ವಾಲಾನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಕಂಡಕ್ಟರ್ ಅಂಗಡಿಗೆ ಬಂದಿದ್ದರಿಂದ ಪಾನ್​ವಾಲಾಗೆ ಸೋಂಕು ತಗುಲಿದೆ. ಅಲ್ಲದೆ, ಲಕ್ಷ್ಮೇಶ್ವರ ಡಿಪೋದಲ್ಲಿನ ನಾಲ್ವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.
ಕರೊನಾಕ್ಕೆ ನಾವೇಕೆ ಹೆದರಬೇಕಿಲ್ಲ; ಸೆಪ್ಟಂಬರ್​ವರೆಗೆ ಹೇಗಿರಲಿದೆ ಪರಿಸ್ಥಿತಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
