ಮೈಸೂರು:ಕರೊನಾ ಮಹಾಮಾರಿಯನ್ನು ಮಟ್ಟಹಾಕಲು ದೇಶಾದ್ಯಂತ ಜಾರಿಗೊಳಿಸಲಾಗಿರುವ ಲಾಕ್​ಡೌನ್​ನಿಂದ ಎಲ್ಲ ಚಟುವಟಿಕೆಗಳು ಸ್ತಬ್ಧಗೊಂಡು ಜನತೆ ಮನೆಯೊಳಗೆ ಬಂಧಿಯಾಗಿದ್ದರೂ, ಪ್ರಕೃತಿಗೆ ಈ ದಿಗ್ಬಂಧನ ವರದಾನವಾಗಿದೆ. ಹೌದು. ಲಾಕ್​ಡೌನ್ ಘೋಷಣೆ ಬಳಿಕ ದೇಶಾದ್ಯಂತ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯದ ಪ್ರಮಾಣ ಶೇ.50ರಿಂದ ಶೇ.70ರಷ್ಟು ಕಡಿಮೆ ಆಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ಲಾಕ್​ಡೌನ್ ಬಳಿಕ ವಾಹನ ಸಂಚಾರ, ಕೈಗಾರಿಕೆಗಳು, ಉದ್ದಿಮೆಗಳು, ವಿದ್ಯುತ್ ಉತ್ಪಾದನಾ ಘಟಕಗಳು ಬಂದ್ ಆದ ಹಿನ್ನೆಲೆಯಲ್ಲಿ ವಾಹನಗಳಿಂದ ಬರುವ ಹೊಗೆ, ತ್ಯಾಜ್ಯ ಸುಡುವುದು, ಧೂಳಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ದೇಶದ ವಿವಿಧ ಬೃಹತ್ ನಗರಗಳ ಮಾಲಿನ್ಯ ಅಚ್ಚರಿ ರೀತಿಯಲ್ಲಿ ತಗ್ಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯ ಮಂಡಳಿ ಸಹಯೋಗದೊಂದಿಗೆ ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ಕಾರ್ಯಕ್ರಮದಡಿ (ಎನ್​ಎಎಂಪಿ) ರಾಜ್ಯದ 24 ನಗರಗಳಲ್ಲಿ 37 ಮಾನವ ರಹಿತ ಗಾಳಿ ಗುಣಮಟ್ಟ ನಿರ್ವಹಣಾ ಕೇಂದ್ರ ಸ್ಥಾಪಿಸಿದ್ದು, ಇಲ್ಲಿನ ಸ್ವಯಂಚಾಲಿತ ಉಪಕರಣ ಕ್ಷಣ ಕ್ಷಣಕ್ಕೂ ಗಾಳಿಯ ಗುಣಮಟ್ಟದ ಮಾಹಿತಿ ಒದಗಿಸುತ್ತಿದೆ.
ಸಾಮಾನ್ಯವಾಗಿ ವಾಯುಮಾಲಿನ್ಯದ ಗುಣಮಟ್ಟವನ್ನು ಏರ್ ಕ್ವಾಲಿಟಿ ಇಂಡೆಕ್ಸ್ (ಎಕ್ಯುಐ)ನಲ್ಲಿ ಧೂಳಿನ ಕಣ(ಪಿಎಂ), ನೈಟ್ರೋಜನ್ ಡೈಯಾಕ್ಸೈಡ್ (ಎನ್​ಒ2), ಸಲ್ಪರ್ ಡೈಯಾಕ್ಸೈಡ್(ಎಸ್​ಒ2), ಕಾರ್ಬನ್ ಮಾನಾಕ್ಸೈಡ್, ಓಝೆೊನ್ 2 ಆಧಾರದ ಮೇಲೆ ಉತ್ತಮ, ತೃಪ್ತಿದಾಯಕ, ಮಧ್ಯಮ ಹಾಗೂ ಕೆಳ ದರ್ಜೆ ಎಂದು ವಿಶ್ಲೇಷಿಸಲಾಗುತ್ತದೆ.
ಜಿಲ್ಲಾವಾರು ವರದಿ
ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ರಾಯಚೂರು, ಕಲ್ಬುರ್ಗಿ, ಬಳ್ಳಾರಿ, ಬೀದರ್, ಕೊಡಗು, ಮಂಗಳೂರು, ಕೋಲಾರ, ಧಾರವಾಡ, ಹುಬ್ಬಳ್ಳಿ, ಕಾರವಾರ, ದಾವಣಗೆರೆ, ಚಿತ್ರದುರ್ಗ, ಭದ್ರಾವತಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಇನ್ನಿತರ ಜಿಲ್ಲಾ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ಎಕ್ಯುಐ ಪ್ರಮಾಣ ತೃಪ್ತಿದಾಯಕವಾಗಿದೆ. (50 ರಿಂದ 60) ಪಿಎಂ ಪ್ರಮಾಣ ಸರಾಸರಿ 2.3 ಇದ್ದು, ವಾಯು ಮಾಲಿನ್ಯ ಶೇ.65 ರಿಂದ 70 ರಷ್ಟು ಗಣನೀಯ ಇಳಿಕೆ ಕಂಡಿದೆ.
ಮುಂಬೈನಲ್ಲೂ ಅಚ್ಚರಿ
ದೇಶದ 109 ಬೃಹತ್ ನಗರಗಳ ಪೈಕಿ ಮುಂಬಯಿ, ದೆಹಲಿ, ನಾಗಪುರ್, ಹೈದ್ರಾಬಾದ್, ಬೆಂಗಳೂರು, ಪಂಚಕುಲ, ಪಟಿಯಾಲ,ಪುಣೆ, ರೂಪಾನಗರ್, ಥಾಣೆ, ತಿರುಪತಿ, ಉದಯಪುರ ನಗರಗಳಲ್ಲಿ ವಾಯು ಮಾಲಿನ್ಯದ ಗುಣಮಟ್ಟ ಉತ್ತಮವಾಗಿದ್ದು, ಎಕ್ಯುಐ ಪ್ರಮಾಣ 20 ರಿಂದ 50ಒಳಗೆ ದಾಖಲಾಗಿದೆ.
ಶಬ್ದಮಾಲಿನ್ಯವೂ ಕಡಿಮೆ
ವಾಹನಗಳ ಹಾರ್ನ್, ಕಾರ್ಖಾನೆಗಳ ಮೆಷಿನ್ ಸದ್ದು , ಪಟಾಕಿ ಸಿಡಿಸುವುದು, ಡಿಜೆ ಸೌಂಡ್, ಸಭೆ ಸಮಾರಂಭ ಕಡಿಮೆಯಾದ ಹಿನ್ನೆಲೆಯಲ್ಲಿ ಶಬ್ದಮಾಲಿನ್ಯದ ಪ್ರಮಾಣ ಶೇ.60 ರಿಂದ 75 ಇಳಿಮುಖ ಕಂಡಿದೆ. ಲಾಕ್​ಡೌನ್ ಜಾರಿಯಾಗುವ ಮುಂಚೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ರಾಜ್ಯದಲ್ಲಿ 60 ರಿಂದ 70 ಡೆಸಿಬಲ್ ಇದ್ದ ಶಬ್ದದ ಪ್ರಮಾಣ ಲಾಕ್​ಡೌನ್ ಬಳಿಕ 30 ರಿಂದ 40 ಡೆಸಿಬಲ್​ಗೆ ಇಳಿದು ಸಾಮಾನ್ಯ ಸ್ಥಿತಿಗೆ ಮರಳಿದೆ. ಗ್ರಾಮೀಣ ಭಾಗದಲ್ಲಿ ವಾಹನಗಳ ಸಂಚಾರ, ಕೈಗಾರಿಕೆಗಳು ಬಂದ್ ಆದ ಹಿನ್ನೆಲೆಯಲ್ಲಿ ಶಬ್ದಮಾಲಿನ್ಯ ಶೇ.30 ಕಡಿಮೆ ಇದೆ.
ಜನರಿಗೆ ತಮ್ಮ ತಪ್ಪಿನ ಅರಿವಾಗಿದೆ. ಕರೊನಾ ಒಂದು ಕಾರಣ ಮಾತ್ರ. ಪರಿಸರ ರಕ್ಷಣೆಗೆ ಕರೊನಾದಂತಹ ಘಟನೆಗಳು ಕಾರಣವಾಗಬಾರದು. ಬದಲಾಗಿ ಜನರಲ್ಲಿ ಪರಿಸರದ ಬಗ್ಗೆ ಪ್ರೀತಿಯ ಜತೆಗೆ ಅರಿವು ಮೂಡಬೇಕು. ಸಾರ್ವಜನಿಕರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಳವಡಿಸಿಕೊಂಡಾಗ ಮಾತ್ರ ಪರಿಸರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬಹುದು.
– ಬಸವರಾಜ್ ಪಾಟೀಲ್, ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಲಾಕ್​ಡೌನ್​ನಿಂದ ಪ್ರಾಣಿ, ಪಕ್ಷಿಗಳು ಸಂಭ್ರಮಿಸುತ್ತಿವೆ. ಇದಕ್ಕೆ ಬೆಂಗಳೂರಿನ ಮಲ್ಲೇಶ್ವರಂ ರಸ್ತೆಗಳಲ್ಲಿ ನವಿಲು ಓಡಾಡಿದ್ದೆ ಸಾಕ್ಷಿ. ಮಾನವ ಮತ್ತು ಪ್ರಕೃತಿ ನಡುವೆ ಸಮತೋಲನ ಮೂಡಬೇಕು.
– ವಿಜಯ್ ನಿಶಾಂತ್ ಪರಿಸರ ತಜ್ಞ ಬೆಂಗಳೂರು
ಬೆಂಗಳೂರು ಜನತೆ ಖುಷ್
ಲಾಕ್​ಡೌನ್ ಬಳಿಕ ಬೆಂಗಳೂರು ಸೇರಿ ರಾಜ್ಯಾದ್ಯಂತ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿದೆ. ಬೆಂಗಳೂರಿನ ಕೆಂಪೇಗೌಡ ರೈಲು ನಿಲ್ದಾಣ ಹೊರತುಪಡಿಸಿ (ಎಕ್ಯುಐ 150) ಹೆಬ್ಬಾಳ್, ಜಯನಗರ, ಎಸ್.ಜಿ.ಹಳ್ಳಿ, ಬಾಪೂಜಿನಗರ, ನಿಮ್ಹಾನ್ಸ್, ಸಿಲ್ಕ್​ಬೋರ್ಡ್, ಕವಿಕಾ ಕೇಂದ್ರದ ಸುತ್ತಮುತ್ತ ಶೇ.55 ರಿಂದ 60 ಕಡಿಮೆಯಾಗಿದ್ದು, ಗಾಳಿಯ ಗುಣಮಟ್ಟ 50 ರಿಂದ 100 ರ ಆಸುಪಾಸಿನಲ್ಲಿದೆ.
ಪ್ರಮಾಣದ ಲೆಕ್ಕ ಹೇಗೆ?
ಉತ್ತಮ ಗುಣಮಟ್ಟಕ್ಕೆ 0 ಯಿಂದ 50, ತೃಪ್ತಿದಾಯಕ ಗುಣಮಟ್ಟಕ್ಕೆ 50 ರಿಂದ 100, ಮಧ್ಯಮಕ್ಕೆ 101 ರಿಂದ 200 ಹಾಗೂ 200 ರಿಂದ 400ರ ಮೇಲ್ಪಟ್ಟಿರುವುದನ್ನು ಕೆಳದರ್ಜೆ ಎಂದು ಹೇಳಲಾಗುತ್ತದೆ. ಅದರಂತೆ ಬೆಂಗಳೂರು ಸೇರಿ ರಾಜ್ಯದ ಎಲ್ಲ ನಗರಗಳಲ್ಲಿ 2.10 ಇದ್ದ ವಾಯು ಮಾಲಿನ್ಯದ ಧೂಳಿನ ಕಣದ ಪ್ರಮಾಣ (ಪರ್ಟಿಕ್ಯುಲರ್ ಮ್ಯಾಟರ್-ಪಿಎಂ) 2.3 ಕ್ಕೆ ಇಳಿದು 50 ರಿಂದ 70 ರೊಳಗೆ ದಾಖಲಾಗಿದೆ. ಇನ್ನು ಕೈಗಾರಿಕಾ ಪ್ರದೇಶಗಳ ಬಳಿ ಕಾರ್ಖಾನೆಗಳು ಹೊರಸೂಸುವ ರಾಸಾಯನಿಕಗಳಿಂದ (ನೈಟ್ರೋಜನ್, ಕಾರ್ಬನ್ ಡೈಯಾಕ್ಸೈಡ್, ಸಲ್ಪರ್ ಡೈಯಾಕ್ಸೈಡ್) ವಾಯು ಮಾಲಿನ್ಯವಾಗಿರುವ ಬಗ್ಗೆ ಯಾವುದೇ ಮಾಹಿತಿ ದಾಖಲಾಗಿಲ್ಲ.
| ಶಿವಶಂಕರ್ ಎಂ.ಹೆಬ್ಬಳ್ಳ
ಕರೊನಾ ವೈರಸ್​ ಗಾಳಿಯಿಂದ ಹರಡುವುದಕ್ಕೆ ಆಧಾರಗಳಿಲ್ಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
