ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕೋಲಾರ ಲೋಕಸಭಾ ಕ್ಷೇತ್ರವನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ತನ್ನದಾಗಿಸಿಕೊಂಡಿತ್ತು. ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ಪಡೆಯಲು ಕೈ ಮುಖಂಡರು ಹವಣಿಸುತ್ತಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕೂಡ ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ಮೈತ್ರಿ ಲೆಕ್ಕಾಚಾರದಲ್ಲಿ ಅಭ್ಯರ್ಥಿ ಕಣಕ್ಕಿಳಿಸುವ ಇರಾದೆಯನ್ನು ಜೆಡಿಎಸ್ ಹೊಂದಿದೆ.
| ಕಿರುವಾರ ಎಸ್. ಸುದರ್ಶನ್ ಕೋಲಾರ
ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ 1991 ರಿಂದ ಸತತ 35 ವರ್ಷ ಸಂಸದರಾಗಿದ್ದ ಕೆ.ಎಚ್. ಮುನಿಯಪ್ಪ ಅವರನ್ನು 2019ರಲ್ಲಿ ಸೋಲಿಸಿದ್ದ ಬಿಜೆಪಿ, ಈ ಬಾರಿ ಕ್ಷೇತ್ರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.
ಈ ಸಲ ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಡಲಿದೆ. ಮೈತ್ರಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆದರೆ ಗೆಲುವು ಮೈತ್ರಿ ಅಭ್ಯರ್ಥಿ ಕಡೆ ವಾಲುವುದು ನಿಶ್ಚಿತ. ಬಿಜೆಪಿಯ ಹಾಲಿ ಸಂಸದ ಮುನಿಸ್ವಾಮಿಗೆ ಟಿಕೆಟ್ ನೀಡಬೇಕೆಂದು ಸ್ಥಳೀಯ ಮುಖಂಡರು ಒತ್ತಾಯಿಸುತ್ತಿದ್ದರೆ, ನಮ್ಮ ಪಕ್ಷದವರಿಗೆ ನೀಡಿ ಎಂದು ಜೆಡಿಎಸ್ ಮುಖಂಡರು ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್​ನಿಂದ ಟಿಕೆಟ್ ಬಯಸಿ 12 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಕ್ಷೇತ್ರ ವ್ಯಾಪ್ತಿಗೆ ಜಿಲ್ಲೆಯ 6, ಚಿಕ್ಕಬಳ್ಳಾಪುರ ಜಿಲ್ಲೆಯ 2 ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರರಲ್ಲಿ ಜೆಡಿಎಸ್, ಐದರಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಶೇಕಡವಾರು ಮತಗಳೂ ಲಭಿಸಿಲ್ಲ. ಸಂಸದರಿರುವ ಕ್ಷೇತ್ರವನ್ನು ಜೆಡಿಎಸ್​ಗೆ ಏಕೆ ಬಿಟ್ಟುಕೊಡಬೇಕು ಎಂಬುದು ಬಿಜೆಪಿ ಮುಖಂಡರ ಪ್ರಶ್ನೆ. ಮೈತ್ರಿ ಅಡಿ ಚುನಾವಣೆ ನಡೆಸಿದರೆ ಜೆಡಿಎಸ್ ಅಭ್ಯರ್ಥಿ ಗೆಲುವು ಸುಲಭವಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಮೇಲೆ ಸ್ಥಳೀಯ ಮುಖಂಡರು ಒತ್ತಡ ಹಾಕಿದ್ದಾರೆ.
ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ಘಟಬಂಧನ್ ಹಾಗೂ ಕಾಂಗ್ರೆಸ್​ನಲ್ಲಿನ ಒಳಜಗಳದಿಂದಾಗಿ ಕೆ.ಎಚ್.ಮುನಿಯಪ್ಪಗೆ 2019ರಲ್ಲಿ ಸೋಲಾಯಿತು. ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬೆಂಬಲಿಗರ ನಡುವಿನ ಮುನಿಸು ಮುಂದುವರಿದಿದೆ. ಈ ನಡುವೆ ಕೆ.ಎಚ್.ಮುನಿಯಪ್ಪ ಅವರನ್ನು ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಸದ್ಯ ಆಹಾರ ಸಚಿವರಾಗಿರುವ ಮುನಿಯಪ್ಪ ಹೈಕಮಾಂಡ್ ತೀರ್ವನಕ್ಕೆ ಬದ್ಧ ಎಂದು ಹೇಳಿದ್ದಾರೆ.
ಬೆಳೆಯುತ್ತಿದೆ ಕಾಂಗ್ರೆಸ್ ಪಟ್ಟಿ:ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಕೆ.ಎಚ್.ಮುನಿಯಪ್ಪ ಅವರು ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸಬೇಕೆಂಬ ಪ್ರಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅಳಿಯ ಚಿಕ್ಕಪೆದ್ದನ್ನ ಪ್ರಬಲ ಅಕಾಂಕ್ಷಿಯಾಗಿದ್ದಾರೆ. ಈಗಾಗಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯ ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದ ಡಾ.ಮುದ್ದುಗಂಗಾಧರ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು, ಕಲಾವಿದ ಮದನ್​ಗೋಪಾಲ್, ಪಿಚ್ಚಳ್ಳಿ ಶ್ರೀನಿವಾಸ್, ಮುನಿವೆಂಕಟಪ್ಪ ಸೇರಿ ಇನ್ನೂ ಹಲವರು ಅರ್ಜಿ ಸಲ್ಲಿಸಿದ್ದಾರೆ.
ಮತ ಲೆಕ್ಕಾಚಾರ2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 2,10,121 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಂಸದ ಎಸ್.ಮುನಿಸ್ವಾಮಿ 7,09,165 ಹಾಗೂ ಕಾಂಗ್ರೆಸ್ ಕೆ.ಎಚ್.ಮುನಿಯಪ್ಪ 4,99,144 ಮತಗಳನ್ನು ಪಡೆದಿದ್ದರು. ಕಳೆದ ಸಲ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದ್ದರೂ ಕಾಂಗ್ರೆಸ್​ನಲ್ಲಿನ ಒಳ ಏಟುಗಳಿಂದ ಮುನಿಯಪ್ಪ ಸೋಲು ಅನುಭವಿಸಬೇಕಾಯಿತು. ಈ ಬಾರಿ ಮೈತ್ರಿ ಬದಲಾಗಿದೆ.
ಮೈತ್ರಿಲಾಭಕ್ಕೆ ಜೆಡಿಎಸ್ ಕಸರತ್ತುಜೆಡಿಎಸ್​ನಿಂದ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಬಂಗಾರಪೇಟೆ ಮಲ್ಲೇಶ್ ಬಾಬು, ದೇವನಹಳ್ಳಿ ನಿಸರ್ಗ ನಾರಾಯಣಸ್ವಾಮಿ ಹೆಸರು ಕೇಳಿಬಂದಿದೆ. ಈ ಮೂವರು ಆಕಾಂಕ್ಷಿಗಳ ಸರ್ವೆ ಪ್ರಗತಿಯಲ್ಲಿದ್ದು, ಜೆಡಿಎಸ್​ಗೆ ಕ್ಷೇತ್ರಗಳು ಹಂಚಿಕೆಯಾದ ನಂತರ ಟಿಕೆಟ್ ಯಾರಿಗೆ ಎಂದು ಗೊತ್ತಾಗಲಿದೆ.
ಕಾಂಗ್ರೆಸ್ ಗ್ಯಾರಂಟಿಗಳಿಗೆ ಕೇಂದ್ರ ಯೋಜನೆಗಳ ಸೆಡ್ಡುಗ್ಯಾರಂಟಿಗಳಿಂದಲೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಜತೆಗೆ ಬಿಜೆಪಿ ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಸಂಸದ ಮುನಿಸ್ವಾಮಿ ಆರಂಭದಿಂದಲೂ ವ್ಯಾಪಕ ಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಲೋಕಸಭೆ ಚುನಾವಣೆಗೂ ಮೊದಲೇ ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಚೆನ್ನೈ-ಬೆಂಗಳೂರು ಎಕ್ಸ್​ಪ್ರೆಸ್ ಕಾರಿಡಾರ್ ರಸ್ತೆ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಇದರಿಂದ ಬಿಜೆಪಿಗೆ ಲಾಭ ಸಿಗುವ ಲೆಕ್ಕಾಚಾರ ಇದೆ.
ಸದನದಲ್ಲಿ ಹಾಜರಾತಿಸಂಸದ ಎಸ್.ಮುನಿಸ್ವಾಮಿ ಸಂಸತ್ ಕಲಾಪಗಳಲ್ಲಿ ಶೇ.73 ಹಾಜರಾತಿ ಹೊಂದಿದ್ದು 252 ಪ್ರಶ್ನೆಗಳನ್ನು ಕೇಳಿದ್ದಾರೆ. 24 ವಿಷಯಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.
ಕೆರೆಗಳ ಅಭಿವೃದ್ಧಿಗೆ ಅನುದಾನಕಳೆದ 5 ವರ್ಷಗಳ ಅವಧಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 15 ಕೋಟಿ ರೂ. ಬಿಡುಗಡೆಯಾಗಿದ್ದು, ಆ ಪೈಕಿ 211 ಕಾಮಗಾರಿಗಳಿಗೆ 12.57 ಕೋಟಿ ರೂ ಅನುದಾನ ವೆಚ್ಚವಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ 75 ಕೆರೆಗಳ ಅಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೋಲಾರಕ್ಕೆ ಭೇಟಿ ನೀಡಿದ್ದಾಗ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಸಚಿವರು ಸಿಎಸ್​ಆರ್ ಅನುದಾನ ಸೇರಿ ಒಟ್ಟು 25.88 ಕೋಟಿ ಮಂಜೂರು ಮಾಡಿದ್ದು, ಕೆರೆಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರ ಸಂಸದರ ನಿಧಿ ಹಾಗೂ ಸಿಎಸ್​ಆರ್ ಅನುದಾನ ತಂದು 25.88 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ.
* ಮಾಲೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 20.44 ಕೋಟಿ ರೂ.
* ಬಂಗಾರಪೇಟೆ ನಿಲ್ದಾಣ ಮೇಲ್ದರ್ಜೆಗೆ 21.59 ಕೋಟಿ ರೂ.
* 49 ಕೋಟಿ ರೂ. ವೆಚ್ಚದಲ್ಲಿ ಬಂಗಾರಪೇಟೆಟೇಕಲ್ ರೈಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ.
ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + three =
Remember me
