ಮಂಡ್ಯ:ಚುನಾವಣೆಗಳ ಸತತ ಸೋಲಿನ ಬಳಿಕವೂ ಜತೆಗೆ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳಷ್ಟೇ ಬಾಕಿ ಇದ್ದರೂ ಜಿಲ್ಲಾ ಜೆಡಿಎಸ್‌ನ ಒಳಜಗಳ ಸರಿಯಾಗುವ ಲಕ್ಷಣ ಕಂಡುಬರುತ್ತಿಲ್ಲ. ಪರಿಣಾಮ ಹಳಿ ತಪ್ಪಿರುವ ಪಕ್ಷವನ್ನು ಸರಿದಾರಿಗೆ ತರಬೇಕಾದರೆ ಸಧ್ಯದ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯೇ ಮಂಡ್ಯ ಅಖಾಡಕ್ಕೆ ಬರಬೇಕೆನ್ನುವ ಮಾತು ಮುಖಂಡರು, ಕಾರ್ಯಕರ್ತರಿಂದ ಕೇಳಿಬರುತ್ತಿದೆ.ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಆದರೆ ಜೆಡಿಎಸ್‌ನಲ್ಲಿ ಅಂತಹ ಬೆಳವಣಿಗೆ ನಡೆಯುತ್ತಿಲ್ಲ. ಮಾತ್ರವಲ್ಲದೆ ಸ್ಪರ್ಧೆಗೆ ಒಮ್ಮತದ ಅಭಿಪ್ರಾಯಗಳು ಬರುತ್ತಿಲ್ಲ. ಬದಲಿಗೆ ಒಬ್ಬೊಬ್ಬರು ಒಂದೊಂದು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಜತೆಗೆ ಸ್ವಪಕ್ಷದವರ ಕಾಲೆಳೆಯುವ ಕೆಲಸವೂ ಪರೋಕ್ಷವಾಗಿ ನಡೆಯುತ್ತಿದೆ. ಇದು ಕಾಂಗ್ರೆಸ್‌ಗೆ ವರವಾಗುವ ಲಕ್ಷಣ ಗೋಚರಿಸಲಾರಂಭಿಸಿವೆ.ಸೋಲುಂಡರೂ ಎಚ್ಚೆತ್ತುಕೊಳ್ಳದ ದಳಪತಿಗಳು: 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮಕಾಡೆ ಮಲಗಿಸಿದ ಜೆಡಿಎಸ್, ಜಿಲ್ಲೆಯ ಏಳು ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. ಅದಕ್ಕೆ ಕಾರಣ ನಾಯಕರ ಮತ್ತು ಮುಖಂಡರ ಒಗ್ಗಟ್ಟಿನ ದುಡಿಮೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಅದ್ಯಾಕೋ ಕೆಲವೇ ತಿಂಗಳಲ್ಲೇ ಒಗ್ಗಟ್ಟಿನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ನಡುವೆ ಎದುರಾದ ಲೋಕಸಭಾ ಚುನಾವಣೆ ದಳಪತಿಗಳಿಗೆ ಮೊದಲ ಶಾಕ್ ನೀಡಿತ್ತು. ತಮ್ಮದೇ ಸರ್ಕಾರವಿದ್ದರೂ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಮೂವರು ಸಚಿವರು, ಐವರು ಶಾಸಕರು, ಮೂವರು ಎಂಎಲ್‌ಸಿಗಳಿದ್ದರೂ ಗೆಲುವು ಧಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಶಾಸಕರ ನಡುವಿನ ಹೊಂದಾಣಿಕೆಯ ಕೊಂಡಿ ಇನ್ನಷ್ಟು ಸಡಿಲಗೊಂಡಿತು.ಪರಿಣಾಮ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದರು. ಮಾತ್ರವಲ್ಲದೆ ಉಪಚುನಾವಣೆಯ ಗೆಲುವಿನೊಂದಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡರು. ಇದಕ್ಕೂ ಮುನ್ನವೇ ಮೈತ್ರಿ ಸರ್ಕಾರ ಪತನಗೊಂಡಿತು. ಇದಾದ ಬಳಿಕ ನಡೆದ ಎರಡು ಪರಿಷತ್ ಚುನಾವಣೆಯಲ್ಲಿಯೂ ದಳಕ್ಕೆ ಗೆಲುವು ಸಿಗಲಿಲ್ಲ. ಇದಕ್ಕೆ ಕಾರಣ ನಾಯಕರ ನಡುವಿನ ಒಳಜಗಳ ಎನ್ನುವುದು ಬಹಿರಂಗ ಸತ್ಯ. ಇಷ್ಟೆಲ್ಲ ಅಸಮಾಧಾನದ ಹೊಗೆಯಾಡುತ್ತಿದ್ದರೂ ವರಿಷ್ಠರು ಅದನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ. ಅದಾಗಲೇ ಪಕ್ಷದೊಳಗೆ ಬಣಗಳ ಮೇಲಾಟ ನಡೆಯಲಾರಂಭಿಸಿತು. ಒಂದಷ್ಟು ಸ್ಥಳೀಯ ನಾಯಕರು ಪಕ್ಷ ತೊರೆದರು. ಇದೇ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ಎದುರಿಸಿದ ಪರಿಣಾಮ ಏಳರಿಂದ ಒಂದು ಕ್ಷೇತ್ರಕ್ಕೆ ಕುಸಿಯುವಂತಾಯಿತು. ಆದರೆ ದಳಪತಿಗಳು ಮಾತ್ರ ಈಗಲೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.ನಾಯಕರ ಒಳಜಗಳ, ಕಾರ್ಯಕರ್ತರು ಅನಾಥ: ಭದ್ರಕೋಟೆಯನ್ನು ಕಳೆದುಕೊಂಡಿರುವ ದಳಪತಿಗಳು, ಸಧ್ಯದ ಪರಿಸ್ಥಿತಿಯಲ್ಲಿ ಅಸ್ಥಿತ್ವಕ್ಕಾಗಿ ಹೋರಾಟ ಮಾಡಬೇಕಿದೆ. ನಾಯಕರು ಮತ್ತು ಮುಖಂಡರ ಒಳಜಗಳ ಶಮನಗೊಂಡಿಲ್ಲ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ನಡೆದ ಬರ ಅಧ್ಯಯನ ಪ್ರವಾಸದಲ್ಲಿಯೂ ಎಲ್ಲ ಶಾಸಕರೂ ಒಟ್ಟಿಗೆ ಕಾಣಿಸಲೇ ಇಲ್ಲ. ಅನಾರೋಗ್ಯದ ಕಾರಣ ನೀಡಿ ರವೀಂದ್ರ ಶ್ರೀಕಂಠಯ್ಯ ಸಂಪೂರ್ಣ ಪ್ರವಾಸಕ್ಕೆ ಗೈರಾದರು. ಕಾವೇರಿ ಹೋರಾಟದ ವೇಳೆಯೂ ನಾಯಕರ ನಡುವೆ ಹೊಂದಾಣಿಕೆ ಕಾಣಿಸಲಿಲ್ಲ. ಆದರೆ ಈ ಪರಿಸ್ಥಿತಿ ಕಾರ್ಯಕರ್ತರನ್ನು ಅನಾಥರಂತೆ ಕಾಣುವಂತಾಗಿದೆ.ಗೆಲುವಿನ ಅಮಲಿನಲ್ಲಿ ತೇಲಾಡುತ್ತಿರುವ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆ ಮೂಲಕ ಸೆಡ್ಡು ಹೊಡೆಬೇಕೆನ್ನುವ ಕಾರ್ಯಕರ್ತರು ಹಾಗೂ ಎರಡನೇ ಹಂತದ ಮುಖಂಡರಿಗಿರುವ ಹುಮ್ಮಸ್ಸು ನಾಯಕರಲ್ಲಿ ಕಾಣಿಸುತ್ತಿಲ್ಲ. ಇದು ಕಾರ್ಯಕರ್ತರ ಅತೃಪ್ತಿಗೆ ಕಾರಣವಾಗಿದೆ.
ಎಂಪಿ ಅಭ್ಯರ್ಥಿ ಯಾರು?:ಸೋತು ಸುಣ್ಣವಾಗಿರುವ ದಳಕ್ಕೆ ಮತ್ತೆ ಪ್ರಾಬಲ್ಯ ಸಾಬೀತುಪಡಿಸಲು ಮುಂಬರುವ ಲೋಕಸಭಾ ಚುನಾವಣೆ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಾದ ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೆಸರು ಮುಂಚೂಣಿಯಲ್ಲಿದೆ. ಈ ನಡುವೆಯೇ ಮತ್ತೆ ನಿಖಿಲ್ ಕುಮಾರಸ್ವಾಮಿಗೆ ಅವಕಾಶ ಕೊಡಲಿ ಎನ್ನುವ ಮಾತನ್ನು ದಳಪತಿಗಳೇ ಹೇಳುತ್ತಿದ್ದಾರೆ. ಈ ಮಧ್ಯೆ ಮಾಜಿ ಶಾಸಕ ಸುರೇಶ್‌ಗೌಡ ತಾನು ಕೂಡ ರೇಸ್‌ನಲ್ಲಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಗಮನಾರ್ಹ ಅಂಶವೆಂದರೆ ಜಿಲ್ಲೆಯ ಮಾಜಿ ಶಾಸಕರ ಪೈಕಿ ಒಬ್ಬರಿಗೆ ಅವಕಾಶ ಕೊಟ್ಟರೆ ಮತ್ತೊಬ್ಬರು ಬಂಡೇಳುವುದು ಖಚಿತ.ಈ ನಿಟ್ಟಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯೇ ಸ್ಪರ್ಧೆ ಮಾಡಿದರೆ ಪಕ್ಷದ ಹಿತದೃಷ್ಟಿಯಿಂದ ಒಳಿತೆನ್ನುವ ಮಾತು ಕೇಳಿಬರುತ್ತಿದೆ. ಕಾರಣ, ಎಚ್‌ಡಿಕೆ ಸ್ಪರ್ಧೆ ಮಾಡಿದರೆ ಮಾಜಿ ಶಾಸಕರೆಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಾರೆ. ಪ್ರಮುಖವಾಗಿ ವಿರೋಧವೂ ವ್ಯಕ್ತವಾಗುವುದಿಲ್ಲ. ಹಾಗೂ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ಸಿಗರಿಗೆ ಠಕ್ಕರ್ ಕೊಡಲು ಪ್ರಬಲ ಅಭ್ಯರ್ಥಿಯಾಗಲಿದ್ದಾರೆನ್ನುವ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಡಿ.21ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಮಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಎಚ್‌ಡಿಕೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆದ್ದರಿಂದ ಚುನಾವಣೆ ದೃಷ್ಟಿಯಿಂದ ಗಮನಿಸಿದರೆ ಎಚ್‌ಡಿಕೆ ಅವರಿಗೆ ಸಧ್ಯಕ್ಕೆ ಅವಕಾಶ ಇರುವುದು ಮಂಡ್ಯದಲ್ಲಿ ಮಾತ್ರ.
ಬಿಜೆಪಿ ಕ್ಷೇತ್ರ ಸಿಗುವುದು ಅನುಮಾನ?:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ. ಅದರಂತೆ ಉಭಯ ಪಕ್ಷಗಳಿಗೆ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಸೀಟು ಹಂಚಿಕೆಯಾಗುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿರುವುದರಿಂದ ಬಿಟ್ಟುಕೊಡುವ ಮಾತನ್ನು ತಳ್ಳಿಹಾಕುವಂತಿಲ್ಲ.ಮೈತ್ರಿಯಾಗಿರುವುದರಿಂದ ತಮ್ಮ ವರಿಷ್ಠರ ಸೂಚನೆಯನ್ನು ಪಾಲಿಸುವುದಾಗಿ ಜಿಲ್ಲಾ ಬಿಜೆಪಿಗರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನು ಹಾಲಿ ಸಂಸದರಿಗೆ ಅವಕಾಶ ಕೊಟ್ಟರಷ್ಟೇ ಚುನಾವಣೆ ಮಾಡುವುದಾಗಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. ಆದರೆ ಕೆಸಿಎನ್ ಮಾತಿಗೆ ಕಿಮ್ಮತ್ತಿಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಅದಾಗಲೇ ಪಕ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಹಾಗೂ ಚಟುವಟಿಕೆಗಳಿಂದ ದೂರಾಗಿರುವ ಮಾಜಿ ಸಚಿವರ ಪರ ಸ್ಥಳೀಯ ಬಿಜೆಪಿ ನಾಯಕರ‌್ಯಾರೂ ದನಿಗೂಡಿಸುತ್ತಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + six =
Remember me
