|ಮಂಜುನಾಥ ಕೆ.ಬೆಂಗಳೂರು
ಒಂದು ಕಾಲದಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಲೋಕಾಯುಕ್ತ ಅಧಿಕಾರ ಮರುಸ್ಥಾಪನೆಯಾಗಿ 6 ತಿಂಗಳು ಕಳೆದರೂ ಜನರ ನಿರೀಕ್ಷೆಯಂತೆ ಇನ್ನೂ ದೊಡ್ಡಮಟ್ಟದ ಬೇಟೆ ಶುರು ಮಾಡಿಲ್ಲ. ಎಡಿಜಿಪಿ ಸೇರಿ ಉತ್ತಮ ಪೊಲೀಸ್ ಅಧಿಕಾರಿಗಳು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡರೂ ಹಳೇ ಖದರ್ ಇನ್ನೂ ಬಂದಿಲ್ಲ ಎಂಬ ಜನಾಭಿಪ್ರಾಯ ವ್ಯಕ್ತವಾಗಿದೆ.
ಎಸಿಬಿಯನ್ನು ರದ್ದುಪಡಿಸಿ ಮತ್ತೆ ದಾಳಿ ಮಾಡುವ ಅಧಿಕಾರವನ್ನು ಲೋಕಾಯುಕ್ತಕ್ಕೆ ಹೈಕೋರ್ಟ್ ನೀಡಿತ್ತು. ಹಳೇ ಖದರ್ ಮರಳಿದ ಹಿನ್ನೆಲೆಯಲ್ಲಿ ಈ ಸಂಸ್ಥೆಯ ಮೇಲಿನ ಜನರ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಲೋಕಾಯುಕ್ತ ಭಾರಿ ಕುಳಗಳಿಗೆ ಬಲೆ ಬೀಸಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳು, ಉನ್ನತ ಅಧಿಕಾರಿಗಳನ್ನು ಖೆಡ್ಡಾಕ್ಕೆ ಕೆಡವಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.
ಲಂಚಾವತಾರದ ವಿರುದ್ಧ ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಲೋಕಾಯುಕ್ತ ಇದುವರೆಗೂ ಸಣ್ಣಪುಟ್ಟ ಮೀನುಗಳಿಗೆ ಗಾಳ ಹಾಕುತ್ತಿದೆಯೇ ಹೊರತು, ತಿಮಿಂಗಿಲಗಳನ್ನು ಬಲೆಗೆ ಕೆಡವಲು ಇನ್ನೂ ಮನಸ್ಸು ಮಾಡಿದಂತಿಲ್ಲ. ಎಸಿಬಿಗೆ ಹೋಲಿಸಿದಲ್ಲಿ ಲೋಕಾಯುಕ್ತದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊಂಚ ಹೆಚ್ಚಾಗಿಯೇ ಇದ್ದಾರೆ. ಅತ್ಯಂತ ದಕ್ಷ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಹೀಗಿದ್ದರೂ ಲೋಕಾಯುಕ್ತ ದೊಡ್ಡಮಟ್ಟದ ಕಾರ್ಯಾಚರಣೆ ನಡೆಸಲು ಮೀನ-ಮೇಷ ಎಣಿಸುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಲೋಕಾಯುಕ್ತದಲ್ಲಿ ಒಟ್ಟು 1,399 ಹುದ್ದೆಗಳಿದ್ದು, ಇದರಲ್ಲಿ 965 ಹುದ್ದೆಗಳು ಭರ್ತಿ ಆಗಿವೆ. 434 ಹುದ್ದೆಗಳು ಖಾಲಿ ಇವೆ. ಈ ಮಧ್ಯೆ ಡಿ.19 ರಂದು 15 ಡಿವೈಎಸ್​ಪಿ ಮತ್ತು 15 ಇನ್​ಸ್ಪೆಕ್ಟರ್​ಗಳನ್ನು ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಸದ್ಯ ಲೋಕಾಯುಕ್ತದಲ್ಲಿ ತಕ್ಕಮಟ್ಟಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. ಆದರೆ, ಎಸಿಬಿಯಲ್ಲಿ 452 ಅಧಿಕಾರಿ ಸಿಬ್ಬಂದಿ ಮಾತ್ರ ಇದ್ದರು. ಆಗಲೂ ಎಸಿಬಿಯು ಬೆಂಗಳೂರಿನ ಡಿ.ಸಿ ಕಚೇರಿ, ಬಿಬಿಎಂಪಿ, ಬಿಡಿಎ ಸೇರಿ ದೊಡ್ಡಮಟ್ಟದ ದಾಳಿಯನ್ನು ಸಂಘಟಿಸಿತ್ತು. ಕೆಎಎಸ್ ಅಧಿಕಾರಿ ಸುಧಾ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಕಳೆದ ವರ್ಷ ಜೂನ್​ನಲ್ಲಿ ರಾಜ್ಯದ 80 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 13 ಕೆ.ಜಿ. ಚಿನ್ನಾಭರಣ, 1.92 ಕೋಟಿ ನಗದು ವಶಪಡಿಸಿಕೊಂಡಿದ್ದರು. ಮಾರ್ಚ್​ನಲ್ಲಿ ರಾಜ್ಯದ 75 ಕಡೆ ನಡೆಸಿದ್ದರು. ಆದರೀಗ ಲೋಕಾಯುಕ್ತ ಅಧಿಕಾರಿಗಳು, ಬೆಸ್ಕಾಂ, ಬಿಬಿಎಂಪಿಯಲ್ಲಿ ಐದರಿಂದ ಹತ್ತು ಸಾವಿರದವರೆಗೆ ಲಂಚ ಪಡೆದವರನ್ನು ಸೆರೆ ಹಿಡಿಯಲು ಸೀಮಿತವಾದಂತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
ಲೋಕಾ ಮುಂದಿದೆ ಮಹತ್ವದ ಪ್ರಕರಣಗಳು: ಲೋಕಾಯುಕ್ತ ಮುಂದೆ ಹಲವು ಮಹತ್ವದ ಪ್ರಕರಣಗಳಿವೆ. ಬೆಂಗಳೂರು ನಗರ ಮಾಜಿ ಡಿಸಿ ಮಂಜುನಾಥ್ ವಿರುದ್ದ ಲಂಚ ಸ್ವೀಕಾರ ಪ್ರಕರಣ, ಬಿಡಿಎ ಇಂಜಿನಿಯರ್​ಗಳು, ಕೆಐಎಡಿಬಿ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು, ಆರ್​ಟಿಒ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣ, ವಿಧಾನಸೌಧದಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಪ್ರಕರಣ, ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನ ಹಂಚಿಕೆ ಮಾಡಿದ್ದ ಬೃಹತ್ ಹಗರಣ, ರಾಜಕಾರಣಿಗಳ ವಿರುದ್ದದ ಸರ್ಕಾರಿ ಜಮೀನು ಡಿ ನೋಟಿಫಿಕೇಷನ್ ಪ್ರಕರಣಗಳಂಥ ಕೇಸ್​ಗಳು ಲೋಕಾಯುಕ್ತದಲ್ಲಿವೆ. ಈ ಪ್ರಕರಣಗಳನ್ನು ಮರುತನಿಖೆ ನಡೆಸಿದರೆ ಹಲವು ಭ್ರಷ್ಟರಿಗೆ ಶಿಕ್ಷೆಯಾಗುವುದು ಖಚಿತ. ಆದರೆ, ಲೋಕಾಯುಕ್ತ ಮನಸ್ಸು ಮಾಡಬೇಕಿದೆ ಎಂದು ಹೇಳಲಾಗುತ್ತಿದೆ.
ಲೋಕಾ ಕಾಯ್ದೆ ಉಲ್ಲಂಘನೆ ಆದರೂ ಕ್ರಮವಿಲ್ಲ:2021-22 ಸಾಲಿಗೆ ಸಂಬಂಧಿಸಿದಂತೆ ಲೋಕಾ ಯುಕ್ತಕ್ಕೆ ಆಸ್ತಿ ಮತ್ತು ದಾಯಿತ್ವದ ಪಟ್ಟಿಯನ್ನು 34 ಶಾಸಕರು ಮತ್ತು 24 ವಿಧಾನಪರಿಷತ್ ಸದಸ್ಯರು ಸಲ್ಲಿಸಿಲ್ಲ. ಚರ ಮತ್ತು ಸ್ಥಿರ ಆಸ್ತಿಯನ್ನು ಜೂ.30ರ ಗಡುವು ಮುಗಿದು 7 ತಿಂಗಳಾದರೂ ಮಾಹಿತಿ ನೀಡಿಲ್ಲ. ಐಪಿಸಿ ಸೆಕ್ಷನ್ 176 ಪ್ರಕಾರ ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಅವಕಾಶವಿದ್ದರೂ, ಲೋಕಾಯುಕ್ತ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಈ ಹಿಂದೆ ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಚರ-ಸ್ಥಿರ ಆಸ್ತಿಯ ಪಟ್ಟಿಯನ್ನು ಸಲ್ಲಿಸದ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.
ಭ್ರಷ್ಟಾಚಾರ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಾವುದೇ ಭಯವಿಲ್ಲದೇ ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇವತ್ತಿನ ದಿನಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾದರೆ ಅದು ಮೇಲ್ಮಟ್ಟದ ಅಧಿಕಾರಿಗಳು, ರಾಜಕಾರಣಿಗಳನ್ನು ಹೆಡೆಮುರಿಗೆ ಕಟ್ಟಬೇಕು. ಆಗ ಮಾತ್ರ ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಲು ಸಾಧ್ಯ.
|ನ್ಯಾ.ಸಂತೋಷ್ ಹೆಗ್ಡೆನಿವೃತ್ತ ಲೋಕಾಯುಕ್ತ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + twenty =
Remember me
