| ರಾಜಗುರು ಬಿ.ಎಸ್. ದ್ವಾರಕಾನಾಥ್
ತನಗಾಗಿ ಹೆಣ್ಣು ಏನನ್ನೂ ಬೇಡುವುದಿಲ್ಲ, ಇತರರ ಸುಖಕ್ಕಾಗಿ ತನ್ನ ಜೀವನ ಸವೆಸುತ್ತಾಳೆ. ಆಕೆ ತನ್ನ ಸೌಮಾಂಗಲ್ಯಕ್ಕಾಗಿ ಮಾಡುವ ವಿವಿಧ ಪೂಜೆ- ವ್ರತಗಳಲ್ಲಿ ಸ್ವರ್ಣಗೌರಿ ವ್ರತ ಪ್ರಮುಖವಾದದ್ದು.
ಭಾದ್ರಪದ ಮಾಸದ ತದಿಗೆಯಂದು ಸ್ವರ್ಣಗೌರಿ ವ್ರತವನ್ನು ಆಚರಿಸಲಾಗುತ್ತದೆ. ಆಷಾಢಮಾಸದ ಮಧ್ಯದಲ್ಲಿ ಉತ್ತರಾಯಣ ಕಾಲ ಮುಗಿದು ದಕ್ಷಿಣಾಯನ ಆರಂಭವಾಗುತ್ತಿದ್ದಂತೆ ವ್ರತಗಳು ಆರಂಭವಾಗುತ್ತವೆ. ಜ್ಯೋತಿರ್ಭೀಮೇಶ್ವರ ವ್ರತದಿಂದ ಆರಂಭವಾಗಿ ಶ್ರಾವಣಮಾಸದಲ್ಲಿ ಮಂಗಳಗೌರಿ, ವರಮಹಾಲಕ್ಷ್ಮಿ ವ್ರತಗಳ ನಂತರ ಬರುವುದೇ ಭಾದ್ರಪದ ಮಾಸದ ತದಿಗೆ. ಮಹಾಗೌರಿಯನ್ನು ಪೂಜಿಸುವ ಸ್ವರ್ಣಗೌರಿ ವ್ರತವು ಸುಮಂಗಲಿಯರ ಪ್ರಮುಖ ಹಬ್ಬ.
ಸ್ವರ್ಣಗೌರಿಯನ್ನು ವ್ರತನಿಯಮದಂತೆ ಪೂಜಿಸುವ ಮುತೆôದೆಯರಿಗೆ ದೀರ್ಘ ಸೌಮಾಂಗಲ್ಯ ಪ್ರಾಪ್ತಿಯಾಗಿ ಸಕಲ ಭೋಗ-ಭಾಗ್ಯಗಳು ದೊರೆಯುತ್ತವೆ ಎಂದು ಶಾಸ್ತ್ರಗ್ರಂಥಗಳು ಉಲ್ಲೇಖಿಸಿವೆ. ಶಿವ-ಪಾರ್ವತಿಯರ ಪುತ್ರಶ್ರೇಷ್ಠನಾದ ಷಣ್ಮುಖನು ಜಗದೀಶ್ವರನಲ್ಲಿ ಭೂಲೋಕದ ಮಾನವರ ಸಕಲ ಇಷ್ಟಾರ್ಥಗಳೆಲ್ಲವನ್ನೂ ಪೂರೈಸುವ ಶ್ರೇಷ್ಠ ವ್ರತ ಯಾವುದು ಎಂದು ಕೇಳಿದಾಗ ಸಾಕ್ಷಾತ್ ಶಿವನೇ ಹೇಳಿದ ಶ್ರೇಷ್ಠ ವ್ರತವೇ ಸ್ವರ್ಣಗೌರಿ ವ್ರತ.
ಬಾಗಿನ ಅರ್ಪಣೆ:ಗೌರಿ ಹಬ್ಬದ ಪ್ರಮುಖವಾದ ಭಾಗ ಸುಮಂಗಲಿಯರಿಗೆ ಬಾಗಿನ ನೀಡುವುದು. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಎಂಬ ಮಾತಿನಂತೆ ಪ್ರತಿಯೋರ್ವ ಸ್ತ್ರೀ ಕೂಡಾ ಶಕ್ತಿಯ ಪ್ರತಿರೂಪ ಎಂಬುದರ ಪ್ರತೀಕವಾಗಿ ಸ್ವರ್ಣಗೌರಿ ವ್ರತದಲ್ಲಿ 16 ಜನ ಮುತೆôದೆಯರಿಗೆ ಬಾಗಿನ ಸಮರ್ಪಿಸಬೇಕು. ಬಾಗಿನ ಸಮರ್ಪಣೆಯ ಹೊರತು ವ್ರತ ಸಂಪೂರ್ಣವಾಗುವುದಿಲ್ಲ.
ಬಾಗಿನವನ್ನು ಬಿದಿರಿನಿಂದ ಮಾಡಿರುವ ಮೊರದಲ್ಲಿಯೇ ನೀಡಬೇಕೆಂಬ ನಿಯಮವಿದೆ. ಬಾಗಿನವನ್ನು ತೆರೆದು ನೀಡಬಾರದು, ಮುಚ್ಚಿ ಕೊಡುವುದು ಪದ್ಧತಿ. ಮುಚ್ಚಿದ ಬಾಗಿನ ಕೊಟ್ಟು ಮುತೆôದೆಯಾಗಿರು ಎಂದು ಬಾಗಿನ ಪಡೆದವರು ಹರಸುತ್ತಾರೆ. ಒಂದು ಮೊರದಲ್ಲಿ ಅಕ್ಕಿ, ಬೆಲ್ಲ, ಬೇಳೆ, ಕುಪ್ಪಸ, ಬಳೆ, ಕನ್ನಡಿ, ಕಾಲುಂಗುರ ಇತ್ಯಾದಿ ಶುಭಕಾರಕ ವಸ್ತುಗಳನ್ನು ಇಟ್ಟು ಮತ್ತೊಂದು ಮೊರವನ್ನು ಮುಚ್ಚಿ ಮುತೆôದೆಯರ ಉಡಿ ತುಂಬಿ ಆರತಿ ಬೆಳಗಿ ಅವರ ಮನಸ್ಸಂತೋಷ ಪಡಿಸಬೇಕು. ಮುತೆôದೆಯರು ಸಂತೋಷಪಟ್ಟರೆ ಬಾಗಿನ ನೀಡಿದವರು ಅಖಂಡ ಸೌಭಾಗ್ಯವತಿಯಾಗುತ್ತಾರೆ. ಆ ಮೂಲಕ ವ್ರತದ ಫಲ ಸಂಪೂರ್ಣವಾಗಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ವ್ರತದ ಪೌರಾಣಿಕ ಹಿನ್ನೆಲೆ:ಪ್ರತಿಯೊಂದು ವ್ರತ, ಪೂಜೆಗೆ ತನ್ನದೇ ಆದ ಹಿನ್ನೆಲೆ ಇರುತ್ತದೆ. ಅಂತೆಯೇ ಸ್ವರ್ಣಗೌರಿ ವ್ರತದ ಬಗ್ಗೆಯೂ ಪುರಾಣಗಳಲ್ಲಿ ಒಂದು ಕತೆ ಇದೆ. ಹಿಂದೆ ಚಂದ್ರಸೇನನೆಂಬ ರಾಜನು ರಾಜ್ಯಭಾರ ಮಾಡುತ್ತಿದ್ದನು. ಆತನಿಗೆ ಇಬ್ಬರು ಪತ್ನಿಯರು. ಒಮ್ಮೆ ಚಂದ್ರಸೇನ ಮಹಾರಾಜನು ಬೇಟೆಗಾಗಿ ಕಾಡಿಗೆ ಹೋಗಿದ್ದಾಗ ದಾರಿ ತಪ್ಪಿ ಬಹುದೂರ ಹೋಗುತ್ತಾನೆ. ಅಂದು ಭಾದ್ರಪದ ತದಿಗೆಯಾಗಿರುತ್ತದೆ. ಆ ಕಾಡಿನ ಮಧ್ಯದಲ್ಲಿ ಅಪ್ಸರ ಕುಂಡ ಎಂಬ ಒಂದು ಸರೋವರ ಇರುತ್ತದೆ. ಆ ಸರೋವರದಲ್ಲಿ ಮಿಂದ ಅಪ್ಸರೆಯರು ದಂಡೆಯ ಮೇಲೆ ಸ್ವರ್ಣಗೌರಿಯ ವ್ರತವನ್ನು ಮಾಡುತ್ತಿರುತ್ತಾರೆ. ಇದನ್ನು ಕಂಡ ಚಂದ್ರಸೇನ ಕುತೂಹಲದಿಂದ ಅವರನ್ನು ತಾವು ಯಾರು, ಯಾವ ಪೂಜೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಾನೆ. ಆಗ ಅಪ್ಸರೆಯರು ಸ್ವರ್ಣಗೌರಿ ವ್ರತವನ್ನು ವಿವರಿಸಿ ಆತನ ಕೈಗೆ 16 ಗಂಟುಗಳುಳ್ಳ ಕಂಕಣ ದಾರವನ್ನು ಕಟ್ಟುತ್ತಾರೆ. ಆ ದಾರವನ್ನು ಕಟ್ಟಿಕೊಂಡು ಅರಮನೆಗೆ ಬರುತ್ತಾನೆ.
ರಾಜನ ಕೈಯಲ್ಲಿ ಕಟ್ಟಿದ್ದ ದಾರವನ್ನು ಕಂಡು ಮೊದಲ ಹೆಂಡತಿ ಅನುಮಾನದಿಂದ ಯಾವುದೋ ವಶೀಕರಣಕ್ಕೆ ಕಟ್ಟಿದ ದಾರ ಎಂಬ ಅನುಮಾನದಿಂದ ಅದನ್ನು ಗಂಡನ ಕೈಯಿಂದ ಕಿತ್ತು ಎಸೆಯುತ್ತಾಳೆ. ಆ ದಾರ ಒಂದು ಒಣಗಿದ ಮರದ ಮೇಲೆ ಹೋಗಿ ಬೀಳುತ್ತದೆ. ಆಗ ಆ ಮರ ಚಿಗುರುತ್ತದೆ. ಇದನ್ನು ಕಂಡು ಆಕೆ ಗಾಬರಿಯಿಂದ ತನ್ನಿಂದಾದ ಅಚಾತುರ್ಯಕ್ಕೆ ಪಶ್ಚಾತ್ತಾಪ ಪಟ್ಟು ತಲೆ ಕೆಟ್ಟು ದೇಶಾಂತರ ಹೋಗುತ್ತಾಳೆ. ಆದರೆ ಎರಡನೇ ಪತ್ನಿಯು ಗಂಡನಿಂದ ಸ್ವರ್ಣಗೌರಿ ವ್ರತದ ವಿವರಗಳನ್ನು ಕೇಳಿಕೊಂಡು ಅದರಂತೆ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಮಹಾಗೌರಿಯ ಕೃಪೆಗೆ ಪಾತ್ರಳಾಗಿ ಸಕಲ ಭೋಗ-ಭಾಗ್ಯಗಳನ್ನು ಪಡೆದುಕೊಳ್ಳುತ್ತಾಳೆ.
ವ್ರತಾಚರಣೆಯ ನಿಯಮಗಳು:ಜಗದೀಶ್ವರಿಯಾದ ಮಹಾಗೌರಿಯನ್ನು ಪೂಜಿಸುವ ಸ್ವರ್ಣಗೌರಿ ವ್ರತವನ್ನು ಆಚರಿಸಲು ವ್ರತಕತೆಯಲ್ಲಿಯೇ ಕೆಲ ನಿಯಮಗಳನ್ನು ಹೇಳಲಾಗಿದೆ. ವ್ರತವನ್ನು ಕೈಗೊಳ್ಳುವವರು ಮೊದಲಿಗೆ ಅರಿಶಿಣ ಬೆರೆಸಿದ ಎಣ್ಣೆಯನ್ನು ಲೇಪಿಸಿಕೊಂಡು ಮಂಗಲ ಸ್ನಾನವನ್ನು ಮಾಡಿ ಪತಿಯ ಕಾಲಿಗೆ ನಮಸ್ಕರಿಸಿ, 16 ಗಂಟುಗಳಿಂದ ಕೂಡಿದ ಕಂಕಣವನ್ನು ಹಿರಿಯರಿಂದ ಕಟ್ಟಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಮೊದಲಿಗೆ ಗಣಪತಿಯನ್ನು ಪೂಜಿಸಿ ಅವರವರ ಮನೆಯ ಪದ್ಧತಿಯಂತೆ ಕಲಶವನ್ನು ಸ್ಥಾಪಿಸಿ ಅಥವಾ ಗೌರಿ ವಿಗ್ರಹವನ್ನು ಪ್ರತಿಷ್ಠಾಪಿಸಿ ದೇವಿಯನ್ನು ಆಹ್ವಾನಿಸಬೇಕು. ಪಂಚಾಮೃತ, ಮಂಗಲದ್ರವ್ಯಗಳಿಂದ ಅಭಿಷೇಕ ಮಾಡಿ, ಅರಿಶಿಣ-ಕುಂಕುಮ, ಹೂವಿನಿಂದ ಸಕಲಾಂಗ ಪೂಜೆಯನ್ನು ಮಾಡಬೇಕು. ನಂತರ ವ್ರತಕತೆ, ಗೌರಿಯ ಅಷ್ಟೋತ್ತರವನ್ನು ಪಠಣ ಮಾಡಿ ನೈವೇದ್ಯವನ್ನು ಅರ್ಪಿಸಿ ಮಹಾ ಮಂಗಳಾರತಿ ಮಾಡಬೇಕು.
ಗೌರಿಯ ಧ್ಯಾನ :ಹರಾನ್ವಿತಾಮಿಂದುಮುಖೀಂ ಸರ್ವಾಭರಣಭೂಷಿತಾಂ |ವಿಮಲಾಂಗೀಂ ವಿಶಾಲಾಕ್ಷೀಂ ಚಿಂತಯಾಮಿ ಸತೀಂ ಶಿವಾಂ ||
(ಶಿವನೊಂದಿಗೇ ಇರುವವವವಳೂ, ಎಲ್ಲ ರೀತಿಯ ಆಭರಣಗಳನ್ನು ತೊಟ್ಟು ಕಂಗೊಳಿಸುತ್ತಿರುವವಳು, ಶುದ್ಧವಾದ ಅವಯವಳಿಂದ ಕೂಡಿರುವವಳೂ, ವಿಶಾಲವಾದ ಕಣ್ಣುಗಳುಳ್ಳವಳೂ ಆದ ಶಿವಪತ್ನಿಯಾದ ಸತೀದೇವಿ ಯನ್ನು ಧ್ಯಾನಿಸ್ತುತೇನೆ.)
Paris Paralympics : ಜೂಡೋ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 18 =
Remember me
