|ರಮೇಶ ದೊಡ್ಡಪುರಬೆಂಗಳೂರು/ರವಿ ಗೋಸಾವಿಬೆಳಗಾವಿ
ರಾಜ್ಯದಲ್ಲಿ ಕರೊನಾ ಪ್ರಕರಣ ತಗ್ಗುತ್ತಿರುವ ಕಾರಣಕ್ಕೆ ರಾತ್ರಿ ಕರ್ಫ್ಯೂ ಸೇರಿ ಅನೇಕ ನಿರ್ಬಂಧಗಳನ್ನು ಸಡಿಲಿಸಿರುವ ರಾಜ್ಯ ಸರ್ಕಾರ, ಗಡಿ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರ ಜೀವನವನ್ನು ಮಾತ್ರ ನರಕವನ್ನಾಗಿಸಿದೆ. ಯಾವುದೇ ರ್ತಾಕ ಆಧಾರವಿಲ್ಲದೆ ಅವೈಜ್ಞಾನಿಕವಾಗಿ ವಿಧಿಸಿರುವ ನಿರ್ಬಂಧಗಳಿಂದ ಆರ್​ಟಿಪಿಸಿಆರ್ ಕಡ್ಡಾಯ ಪ್ರಮಾಣ ಪತ್ರವನ್ನೇ ನೆಪವಾಗಿಸಿಕೊಂಡು ವಾಹನ ಸವಾರರಿಂದ ರಾಜಾರೋಷವಾಗಿ ಹಣ ಸುಲಿಗೆ ಮಾಡಲಾಗುತ್ತಿದೆ. ಚೆಕ್​ಪೋಸ್ಟ್ ಸಿಬ್ಬಂದಿಗೆ ಲಂಚ ನೀಡುವುದರಿಂದ ತಪ್ಪಿಸಿಕೊಳ್ಳಲು ಅನೇಕರು ನಕಲಿ ಆರ್​ಟಿಪಿಸಿಆರ್ ವರದಿಗಳ ಮೊರೆ ಹೋಗಿದ್ದಾರೆ. ಇದರಿಂದ ಕರೊನಾ ನಿರ್ಬಂಧ ಮತ್ತಷ್ಟು ಗೊಂದಲ, ಭ್ರಷ್ಟಾಚಾರ, ಕಿರಿಕಿರಿಗೆ ಎಡೆಮಾಡಿಕೊಟ್ಟಿದೆ.
ವಿಶ್ವಾದ್ಯಂತ ಮಾನ್ಯತೆ ಪಡೆದಿರುವ ಕೋವಿಡ್ ಲಸಿಕೆಗೂ ಮಾನ್ಯತೆ ನೀಡದ ಈ ನಿರ್ಬಂಧಗಳಿಂದ ಅನೇಕ ವಿದ್ಯಾರ್ಥಿಗಳು, ಪ್ರವಾಸಿಗರು, ವ್ಯಾಪಾರಿಗಳು, ಕೂಲಿಕಾರ್ವಿುಕರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ವಿಚಾರ ಗಡಿ ಪ್ರದೇಶಗಳಲ್ಲಿ ಭಾನುವಾರ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಿಂದ ಬಯಲಾಗಿದೆ. 2022ರ ಜನವರಿ ಮೊದಲ ವಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಗಳ ಅನ್ವಯ, ಮಹಾರಾಷ್ಟ್ರ, ಕೇರಳ ಗೋವಾದಿಂದ ಆಗಮಿಸುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ಆರ್​ಟಿಪಿಸಿಆರ್ ಪ್ರಮಾಣಪತ್ರ ಹೊಂದಬೇಕು.
ಈ ಆದೇಶ ಹೊರಬಿದ್ದ ದಿನದಿಂದಲೇ ಗಡಿಯಲ್ಲಿ ಗೊಂದಲ ಹಾಗೂ ಭ್ರಷ್ಟಾಚಾರ ಆರಂಭವಾಗಿದೆ. ಆರ್​ಟಿಟಿಪಿಸಿಆರ್ ವರದಿ ಹೊಂದಿರಬೇಕೆಂಬ ಅವೈಜ್ಞಾನಿಕ ನಿಯಮದಿಂದಾಗಿ ಚೆಕ್​ಪೋಸ್ಟ್​ಗಳಲ್ಲಿ ನಿತ್ಯ ಪ್ರಯಾಣಿಕರು ಹಾಗೂ ಪೊಲೀಸರ ವಾಗ್ವಾದ ಸಾಮಾನ್ಯವಾಗಿದೆ.
ನಕಲಿ ದಂಧೆ:ಗಡಿಯಲ್ಲಿ ಚೆಕ್​ಪೋಸ್ಟ್ ಸಿಬ್ಬಂದಿ ಆರ್​ಟಿಪಿಸಿಆರ್ ವರದಿ ಕೇಳುತ್ತಾರೆ, ವರದಿ ಇಲ್ಲದಿದ್ದರೆ ಲಂಚ ನೀಡಬೇಕಾಗುತ್ತದೆ. ಹೀಗಾಗಿ ಅನೇಕರು ನಕಲಿ ಆರ್​ಟಿಪಿಸಿಆರ್ ವರದಿ ಮೊರೆ ಹೋಗುತ್ತಿರುವ ಪ್ರಕರಣ ಮಹಾರಾಷ್ಟ್ರದ ಕೊಗನೊಳ್ಳಿ, ಕೇರಳ ಗಡಿಯಲ್ಲಿರುವ ಮೂಲೆಹೊಳೆ ಚೆಕ್​ಪೋಸ್ಟ್​ಗಳಲ್ಲಿ ಕಂಡುಬಂದಿದೆ. ಗಡಿಯಲ್ಲಿ ಪ್ರಯಾಣಿಕ ವಾಹನಗಳು ಹೆಚ್ಚಾಗಿ ರಾತ್ರಿ ವೇಳೆ ಹಾಗೂ ಬೆಳಗಿನ ಜಾವ ಸಂಚರಿಸುತ್ತವೆ. ಈ ಸಮಯದಲ್ಲಿ ಹೆಚ್ಚಿನ ಸಂದಣಿ ನಿಭಾಯಿಸಲು ಮೇಲ್ನೋಟಕ್ಕೆ ಪ್ರಮಾಣಪತ್ರ ನೋಡಿ ಒಳಬಿಡಲಾಗುತ್ತದೆ. ಬೇರೆಯವರ ಹೆಸರಿನ ಆರ್​ಟಿಪಿಸಿಆರ್ ವರದಿ ತಿದ್ದುಪಡಿ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಂಡು ಅನೇಕರು ಒಳಬರುತ್ತಿದ್ದಾರೆ. ನಕಲಿ ವರದಿ ಪತ್ತೆಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆರೋಗ್ಯಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಇಷ್ಟು ದೊಡ್ಡ ಸಂಖ್ಯೆಯ ಪ್ರಮಾಣಪತ್ರ ಪರಿಶೀಲಿಸಲು ಪೊಲೀಸರಿಂದಲೂ ಸಾಧ್ಯವಾಗುತ್ತಿಲ್ಲ.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಕೊಗನಹಳ್ಳಿ ಚೆಕ್​ಪೋಸ್ಟ್​ನಲ್ಲಿ ಪ್ರತಿನಿತ್ಯ 1500-2000 ವಾಹನ ರಾಜ್ಯ ಪ್ರವೇಶಿಸಲು ಬಯಸುತ್ತವೆ. ಹಿಂದೆಲ್ಲ ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚಿತ್ತು, ಈಗ ಕರ್ನಾಟಕದಲ್ಲೆ ಒಮಿಕ್ರಾನ್ ಏರಿಕೆ ಹಂತದಲ್ಲಿದೆ. ಆದರೂ ಮಹಾರಾಷ್ಟ್ರದಿಂದ ಬರುವವರಿಗೆ ಕಡ್ಡಾಯ ಪರೀಕ್ಷೆ ವರದಿ ಕೇಳುತ್ತೀರಿ? ಎರಡು ಡೋಸ್ ಲಸಿಕೆ ಪಡೆದವರಿಗೂ ವರದಿ ಏಕೆ ಕೇಳಬೇಕು? ಎಂದು ಚೆಕ್​ಪೋಸ್ಟ್ ಸಿಬ್ಬಂದಿಯೊಂದಿಗೆ ಪ್ರಯಾಣಿಕರು ವಾಗ್ವಾದಕ್ಕಿಳಿಯುತ್ತಿದ್ದಾರೆ. ಇಂತಹ ಸಮಸ್ಯೆಯಿಂದಾಗಿ ಪ್ರತಿನಿತ್ಯ 400-500 ವಾಹನಗಳು ರಾಜ್ಯ ಪ್ರವೇಶಿಸದೆ ಹಿಂದಿರುಗುತ್ತಿವೆ. ಸಂದರ್ಶನ, ಪರೀಕ್ಷೆ ಅನೇಕ ಕೆಲಸಕ್ಕೆ ಆಗಮಿಸುವವರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೆಲವರು ಮುಖ್ಯ ರಸ್ತೆ ಬದಲಿಗೆ, ಚೆಕ್​ಪೋಸ್ಟ್ ಇಲ್ಲದ ಹಿಂಡಲಗಾ, ಅಂಬೋಲಿ, ಸಾವಂತವಾಡಿ ಮಾರ್ಗದ ಮೂಲಕ ಆಗಮಿಸುತ್ತಿದ್ದು, ಅಲ್ಲಿ ಸಂಚಾರದಟ್ಟಣೆ ಹಾಗೂ ಅಪಘಾತಗಳು ಹೆಚ್ಚಾಗುತ್ತಿವೆ. ಯಲ್ಲಮ್ಮನ ಗುಡ್ಡ, ಖಾನಾಪುರ ಮಹಾಲಕ್ಷ್ಮಿ, ಸೂಳಿಬಾವಿ ಮಹಾಲಕ್ಷ್ಮಿ, ಗೊಡಜಿ ಚೀರಭದ್ರೇಶ್ವರ ಸೇರಿ ಅನೇಕ ಪ್ರವಾಸಿ ತಾಣಗಳಿಗೆ ಆಗಮಿಸುವ ಭಕ್ತರಿಗೂ ಕಿರಿಕಿರಿಯಾಗುತ್ತಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಉದ್ದೇಶಿತ ಪರೀಕ್ಷಾ ವಿಧಾನವನ್ನು ರೂಪಿಸಿ ಜ.10ರಂದು ಆದೇಶಿಸಿದೆ. ಅದರನ್ವಯ, ಕೋವಿಡ್ ಗುಣಲಕ್ಷಣ ಉಳ್ಳವರು, ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರು, ಅಂತಾರಾಷ್ಟ್ರೀಯ ಪ್ರಯಾಣ ಕೈಗೊಳ್ಳುತ್ತಿರುವವರು, ವಿದೇಶದಿಂದ ಭಾರತಕ್ಕೆ ಆಗಮಿಸುವವರು ಪರೀಕ್ಷೆಗೆ ಒಳಪಡಬೇಕು ಎಂದು ತಿಳಿಸಿದೆ. ಅಂತಾರಾಜ್ಯ ಪ್ರಯಾಣಿಕರು ಪರೀಕ್ಷೆಗೊಳಪಡಬೇಕು ಎಂದು ಎಲ್ಲಿಯೂ ತಿಳಿಸಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ತನ್ನಷ್ಟಕ್ಕೆ ನಿಯಮಗಳನ್ನು ಹೇರಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಆಕ್ಷೇಪ ಏಕೆ?:ಎರಡು ಡೋಸ್ ಲಸಿಕೆ ಪಡೆದಲ್ಲಿ ವಿಮಾನದಲ್ಲೇ ಪ್ರಯಾಣಕ್ಕೇ ಅನೇಕ ರಾಜ್ಯಗಳಲ್ಲಿ ಅವಕಾಶ ನೀಡಲಾಗಿದೆ. ಕೋವಿಡ್ ಸೋಂಕು ತೀವ್ರ ವಾಗಿರುವ ಬೆಂಗಳೂರು ಸೇರಿ ಅನೇಕ ನಗರಗಳಲ್ಲಿ ಲಸಿಕೆ ಪ್ರಮಾಣ ಪತ್ರ ಇದ್ದರೆ ಸಾಕು ಮಾಲ್, ಸಿನಿಮಾ ಮಂದಿರ, ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ವಿದೆ. ಅಂಥದ್ದರಲ್ಲಿ, ಗಡಿಯಲ್ಲಿ ಮಾತ್ರ ಲಸಿಕೆ ಪ್ರಮಾಣಪತ್ರದ ಜತೆಗೆ ಆರ್​ಟಿಪಿಸಿಆರ್ ವರ ದಿಯೂ ಏಕೆ ಬೇಕೆಂಬುದು ಪ್ರಯಾಣಿಕರ ವಾದ.
ಅವೈಜ್ಞಾನಿಕ ನಿಯಮ:ತಮಿಳುನಾಡು, ಆಂಧ್ರಕ್ಕಿಲ್ಲದ ನಿರ್ಬಂಧ ನಮಗೇಕೆ ಎನ್ನುವುದು ಕೇರಳ, ಮಹಾರಾಷ್ಟ್ರ ಹಾಗೂ ಗೋವಾದಿಂದ ಆಗಮಿಸುವವರ ವಾದ ಎಂದು ಚೆಕ್​ಪೋಸ್ಟ್ ಪೊಲೀಸರು ತಿಳಿಸಿದ್ದಾರೆ. ಲಸಿಕೆ ಪಡೆಯುವುದು ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಆದೇಶ, ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋಗಳನ್ನು ತೋರಿಸಿ ವಾಗ್ವಾದ ಮಾಡುತ್ತಾರೆ. ನಮ್ಮ ಮುಖ್ಯ ಕೆಲಸವಾದ ಅಪರಾಧ ಪತ್ತೆ, ತನಿಖೆ ಬದಲಿಗೆ ಚೆಕ್​ಪೋಸ್ಟ್​ನಲ್ಲಿ ಮೂರು ಪಾಳಿ ಕೆಲಸ ಮಾಡಬೇಕಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇವರ ಜತೆಗೆ ಆರೋಗ್ಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಬಹುತೇಕ ಸಮಯ ವನ್ನೂ ಇಲ್ಲೇ ಕಳೆಯುವಂತಾಗಿದೆ.
ಕಡ್ಡಾಯದ ಕಿರಿಕಿರಿ:ಕರ್ನಾಟಕ ಕೇರಳ, ಮಹಾರಾಷ್ಟ್ರ, ಗೋವಾ, ಆಂಧ್ರ ಹಾಗೂ ತಮಿಳುನಾಡು ಗಡಿ ಹಂಚಿಕೊಂಡಿದೆ. ಈ ಪೈಕಿ ಪ್ರಾರಂಭದಲ್ಲಿ ಮಹಾರಾಷ್ಟ್ರ, ಅದರಲ್ಲೂ ಮುಖ್ಯವಾಗಿ ಮುಂಬೈನಲ್ಲಿ ಕೋವಿಡ್ ಪ್ರಕರಣ ಏರುಗತಿಯಲ್ಲಿದ್ದವು ಎಂಬ ಕಾರಣಕ್ಕೆ 2021ರ ನ.8ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಅದರನ್ವಯ, ಮಹಾರಾಷ್ಟ್ರದಿಂದ ಆಗಮಿಸುವವರು ಯಾವುದೇ ಕೋವಿಡ್ ಗುಣಲಕ್ಷಣ ಹೊಂದಿರಬಾರದು, ಕೋವಿಡ್ ಸೋಂಕಿಲ್ಲ ಎಂದು ಸ್ವಯಂಘೋಷಣಾ ಪತ್ರ ನೀಡಬೇಕು, ತಾಪಮಾನ ಪರೀಕ್ಷೆಗೊಳಪಡಬೇಕು, ಕೋವಿಡ್ ಲಸಿಕೆ ಪ್ರಮಾಣಪತ್ರವಿರಬೇಕು, ಕೋವಿಡ್ ನಿಯಮಾವಳಿ ಪಾಲಿಸಬೇಕು, ಹಿಂದಿರುಗುವ ಟಿಕೆಟ್ ಹೊಂದಿರಬೇಕು ಎಂದು ತಿಳಿಸಲಾಗಿತ್ತು. ಲಸಿಕೆ ಪ್ರಮಾಣಪತ್ರ ಇದ್ದವರು ಆರ್​ಟಿಪಿಸಿಆರ್ ಪ್ರಮಾಣಪತ್ರ ಹೊಂದಬೇಕಿಲ್ಲ. ಆದರೆ ನಂತರದಲ್ಲಿ ಮಹಾರಾಷ್ಟ್ರ ಜತೆಗೆ ಕೇರಳ, ಗೋವಾವನ್ನೂ ಕರ್ನಾಟಕ ಸೇರ್ಪಡೆ ಮಾಡಿದೆ.
ಪೊಲೀಸ್​ ಕಾನ್​ಸ್ಟೆಬಲ್ ಹೆಂಡತಿ ಆತ್ಮಹತ್ಯೆ: ಪೊಲೀಸ್​ ವಸತಿಗೃಹದಲ್ಲೇ ನೇಣಿಗೆ ಶರಣು

ಬೀದಿನಾಯಿ ಮೇಲೆ ಶ್ರೀಮಂತಿಕೆಯ ದರ್ಪ?: ಮಲಗಿದ್ದ ನಾಯಿ ಮೇಲೆ ಆಡಿ ಕಾರು ಹತ್ತಿಸಿಕೊಂಡು ಹೋದ ಭೂಪ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
