ಬೆಂಗಳೂರು: ಅಡುಗೆ ಅನಿಲ ದರ ತಗ್ಗಿಸಿರುವ ಕೇಂದ್ರ ಸರ್ಕಾರದ ನಿಲುವನ್ನು ಅಣಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊನೆಗೂ ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ರೂ.200 ಕಡಿಮೆ ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು ತಿಳಿಸುವುದಾಗಿ ಹಾಸ್ಯ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಜನಪರವಾದ ಯೋಜನೆಗಳಿಂದ ಪ್ರೇರಿತರಾಗಿ ಜಾರಿಗೆ ತರುವ ಎಲ್ಲ ಯೋಜನೆಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಆದರೆ, ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ನೇತೃತ್ವದ ಕೆಂದ್ರ ಸರ್ಕಾರವು ಬಹಳಷ್ಟು ಮೀನಮೇಷ ಎಣಿಸಿದ ನಂತರ ಅಂತಿಮವಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ರೂ.200 ಕಡಿಮೆ ಮಾಡಿ ಘೋಷಣೆ ಮಾಡಿದೆ. ಆದರೆ, ಮೇಲುನೋಟಕ್ಕೆ ಇದರಲ್ಲಿ ಕೇಂದ್ರದ ಪಾಲು ಏನೂ ಇಲ್ಲ ಎನ್ನುವುದು ನಿಚ್ಚಳಗೊಂಡಿದೆ ಎಂದು ಕುಟುಕಿದರು.
ಅಡುಗೆ ಅನಿಲ ದರ ನಿಗದಿಗೆ ಆಧಾರವಾದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಸೌದಿ ಸಿಪಿ ದರ ಪ್ರತಿ ಟನ್‌ಗೆ ಈ ಆರ್ಥಿಕ ವರ್ಷಾರಂಭದಲ್ಲಿ 732 ಡಾಲರ್ ಇದ್ದದ್ದು, ಈಗ 385 ಡಾಲರ್‌ಗೆ ಕುಸಿದಿದೆ. ಅಂದರೆ ಶೇ.48ರಷ್ಟು ಇಳಿಕೆಯಾಗಿದೆ. ಸಿಲಿಂಡರ್ ದರವೂ ಹೆಚ್ಚು ಕಡಿಮೆ ಅರ್ಧದಷ್ಟು ಇಳಿಕೆ ಮಾಡಬೇಕಿತ್ತಲ್ಲವೇ? ಆದರೆ, ಕೇಂದ್ರ ಸರ್ಕಾರ ಇಳಿಕೆ ಮಾಡಿರುವುದು ಪ್ರತಿ ಸಿಲಿಂಡರ್‌ಗೆ ರೂ. 200 ಮಾತ್ರ, ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಜನರ ಮೇಲಿನ ಬೆಲೆ ಏರಿಕೆಯ ಹೊರೆ ಇಳಿಸುವ ಪ್ರಾಮಾಣಿಕ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದರೆ ಪ್ರತಿ ಅನಿಲ ಸಿಲಿಂಡರ್‌ನ ಬೆಲೆಯನ್ನು ಕನಿಷ್ಠ ರೂ.500-600ರಷ್ಟು ಇಳಿಸಬೇಕಾಗಿದೆ. ಇದೇ ರೀತಿ ಡೀಸೆಲ್-ಪೆಟ್ರೋಲ್ ಬೆಲೆಯನ್ನು ರೂ.60-70ಕ್ಕೆ ಇಳಿಸಬೇಕಾಗುತ್ತದೆ. ಇದನ್ನು ಮಾಡದೆ ಇದ್ದರೆ ಇದೊಂದು ಕಣ್ಣೊರೆಸುವ ತಂತ್ರ, ಚುನಾವಣಾ ಗಿಮಿಕ್, ಬಾಯಿ ಬಡಾಯಿ ಎಂದು ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜಾಗತಿಕವಾಗಿ ಅನಿಲ ಬೆಲೆಯಲ್ಲಿ ಅಪಾರ ಇಳಿಕೆಯಾದಾಗಲೂ ಜನರ ಹಿತಾಸಕ್ತಿಯನ್ನು ರಕ್ಷಿಸದ ಕೇಂದ್ರ ಸರ್ಕಾರ ಬದಲಿಗೆ ತೈಲೋತ್ಪನ್ನ ಕಂಪೆನಿಗಳಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಈಗಲೂ ಸಹ ಅನಿಲ ಬೆಲೆಯನ್ನು ಕೇವಲ ರೂ. 200 ಮಾತ್ರವೇ ಇಳಿಕೆ ಮಾಡಿ ತೈಲೋತ್ಪನ್ನ ಕಂಪೆನಿಗಳಿಗೆ ಯಥಾವಕಾಶ ಲಾಭ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದರಲ್ಲಿ, ಜನರ ಹಿತಾಸಕ್ತಿ ಎಲ್ಲಿ ಅಡಗಿದೆ ಪ್ರಧಾನಿಯವರೇ? ಎಂದು ಪ್ರಶ್ನಿಸಿದ್ದಾರೆ.
ಜನತೆಯನ್ನು ಬೆಲೆ ಏರಿಕೆಯಿಂದ ರಕ್ಷಿಸುವ, ಸ್ವಾವಲಂಬಿಗಳಾಗಿಸಿರುವ ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅವರ ಪಕ್ಷದಲ್ಲಿ ಅವುಗಳಿಂದ ಭಯಭೀತರಾಗಿ ತೋರಿಕೆಗೆ ಮಾತ್ರ ಇಂತಹ ಕ್ರಮಕ್ಕೆ ಮುಂದಾಗಿರುವುದು ಸ್ಪಷ್ಟ. ಆದರೆ, ದೇಶದ ಜನತೆ ಕೆಲಸ ಮಾಡದೆ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ, ಬಣ್ಣದ ಮಾತುಗಳಿಂದಲೇ ಜನರ ಹೊಟ್ಟೆ ತುಂಬಿಸುವ ಬಿಜೆಪಿಯ ಪೊಳ್ಳು ಆಡಳಿತವನ್ನು ಅರಿತಿದ್ದಾರೆ. ಇಂತಹ ಕಣ್ಕಟ್ಟಿನ ತಂತ್ರಗಳನ್ನು ಇನ್ನು ಮುಂದುವರಿಸಲಾಗದು ಎಂದಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + 6 =
Remember me
