ಪ್ರಶಾಂತ ರಿಪ್ಪನ್‌ಪೇಟೆ,ಬೆಂಗಳೂರು:ಸಮಾಜದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾದರೆ ದೇಶ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತದೆ ಎಂಬ ಮಾತಿದೆ.ಈ ಹಿನ್ನೆಲೆಯಲ್ಲಿ ಶಿಕ್ಷಣವೇ ಧರ್ಮ,ಶಿಕ್ಷಣವೇ ಆಚಾರ,ಶಿಕ್ಷಣವೇ ಸಮಾಜ ಸುಧಾರಣೆಯ ಬಹುಮುಖ್ಯ ಮಾರ್ಗ ಎಂಬುದನ್ನು ಅಕ್ಷರಶಃ ಅರಿತು ಆಚರಿಸಿದವರು ಸುತ್ತೂರು ಕ್ಷೇತ್ರದ ಲಿಂ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು.
ಜೆಎಸ್‌ಎಸ್ ಸಂಸ್ಥೆ ಕೇವಲ ರಾಜ್ಯ ಮಾತ್ರವಲ್ಲದೆ ದೇಶ–ವಿದೇಶಗಳಲ್ಲಿ ಪ್ರಸಿದ್ಧವಾದ ಸಂಸ್ಥೆ.ಇಂತಹ ಬೃಹತ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ರಾಜಗುರುತಿಲಕ ಡಾ.ಶಿವರಾತಿ ರಾಜೇಂದ್ರ ಮಹಾಸ್ವಾಮಿಗಳು.
ತಮ್ಮ12ನೇ ವಯಸ್ಸಿನಲ್ಲೇ ಸುತ್ತೂರು ವೀರಸಿಂಹಾಸನ ಮಠದ23ನೇ ಪೀಠಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ ಪೂಜ್ಯರು,ನಂತರ ತಮ್ಮ ಗುರುಗಳಾದ ಮಂತ್ರಮಹರ್ಷಿ ಪಟ್ಟದ ಶಿವರಾತ್ರಿ ಮಹಾಸ್ವಾಮೀಜಿಯವರ ನಿರ್ದೇಶನದಂತೆ ಮೈಸೂರಿನಲ್ಲಿ ಶಿಕ್ಷಣವನ್ನು ಮುಂದುವರೆಸಿದರು.
ಮೈಸೂರಿನಲ್ಲಿದ್ದ ನಮಃ ಶಿವಾಯ ಮಠದಲ್ಲಿದ್ದು,ಕ್ಯಾತನಹಳ್ಳಿ ಪೂಜ್ಯರ ಒಡನಾಡಿಯಾಗಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಸುತ್ತಮುತ್ತಲಿನ ಹಳ್ಳಿಯಿಂದ ಆಗಮಿಸುತ್ತಿದ್ದ ನೂರಾರು ಸಹಪಾಠಿಗಳು ಊಟ,ವಸತಿಯ ಅನಾನುಕೂಲದಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದದ್ದನ್ನು ಕಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಊಟ,ವಸತಿ,ಶಿಕ್ಷಣವನ್ನು ನೀಡುವ ಬಗ್ಗೆ ಕಿರಿಯ ವಯಸ್ಸಿನಲ್ಲೇ ವಿಚಾರ ಒಡಮೂಡುತ್ತದೆ.ಅದರ ಪರಿಣಾಮವೇ ಜೆಎಸ್‌ಎಸ್ ಸಂಸ್ಥೆಯ ಸ್ಥಾಪನೆ.
ಜೆಎಸ್‌ಎಸ್ ಮಹಾವಿದ್ಯಾಪೀಠ ಸ್ಥಾಪನೆ
1941ರಲ್ಲಿ ಮಠದ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಂಡ ಶ್ರೀಗಳು ಮೊಟ್ಟ ಮೊದಲು ಅನಾಥ ಮಕ್ಕಳ ಶಾಲೆ ತೆರೆದರು.ನಂತರ1950ರಲ್ಲಿ ಕಾಲೇಜನ್ನು ತೆರೆದು ಗ್ರಾಮೀಣ ಪ್ರದೇಶದ ವಂಚಿತ ಸಮುದಾಯಕ್ಕೆ ಶಿಕ್ಷಣವನ್ನು ನೀಡಿದರು.ಹೀಗೆ ಆರಂಭವಾದ ಶಿಕ್ಷಣ ಸಂಸ್ಥೆಯ ಪ್ರಧಾನ ಕಛೇರಿಯಾಗಿ1954ರಲ್ಲಿ ಜೆಎಸ್‌ಎಸ್ ವಿದ್ಯಾಪೀಠವನ್ನು ಸ್ಥಾಪಿಸಿದರು.
ತಮಗಾಗಿ ಏನನ್ನು ಬಯಸದೆ,ಸಮಾಜದ ಸರ್ವರ ಯೋಗಕ್ಷೇಮಕ್ಕಾಗಿ ದುಡಿಯಲು ಆರಂಭಿಸಿದ ರಾಜೇಂದ್ರ ಶ್ರೀಗಳು ಏಕಕಾಲದಲ್ಲಿ ಧಾರ್ಮಿಕ,ಸಾಮಾಜಿಕ,ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಚಕ್ರವರ್ತಿಗಳಾಗಿ ಮೆರೆದ ಏಕಮಾತ್ರ ವ್ಯಕ್ತಿ.ಅವರ ಸ್ವಾರ್ಥ,ಅಸೂಯೆಗಳಿಲ್ಲದ ಸೇವಾಪರ ಚಿಂತನೆಯ ಪ್ರತೀಕವೇ ಜಗತ್ತಿನಾದ್ಯದಂತ ಇಂದು ಹೆಮ್ಮರವಾಗಿ ಬೆಳೆದಿರುವ ಜೆಎಸ್‌ಎಸ್ ಸಂಸ್ಥೆ.
ಶಿಕ್ಷಣಸಂಸ್ಥೆ ಆರಂಭಿಸಿದ ದಿನಗಳಲ್ಲಿ;ಒಮ್ಮೆ ವಸತಿನಿಲಯದ ಮಕ್ಕಳಿಗೆ ಪ್ರಸಾದ ಮಾಡಲು ಹಣವಿಲ್ಲದೆ,ತಮ್ಮ ಬಂಗಾರದ ಕರಡಿಗೆಯನ್ನು(ಇಷ್ಟಲಿಂಗ ಇಡುವ ಪೆಟ್ಟಿಗೆ)ಮಾರಾಟ ಮಾಡಿ,ಆ ಹಣದಲ್ಲಿ ದಾಸೋಹ ನಡೆಸಿದ ಮಹಾನ್ ವ್ಯಕ್ತಿ ರಾಜೇಂದ್ರ ಶ್ರೀಗಳು.ಅವರಿಗಿದ್ದ ಸಾಮಾಜಿಕ ಕಳಕಳಿಗೆ ಇದೊಂದು ಉತ್ತಮ ಉದಾಹರಣೆ.
ಸಾಮಾಜಿಕ,ಸಾಹಿತ್ಯಿಕ ಸಾರಥಿ ಶಿವಯೋಗಿ
ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಲ್ಲದೆ,ಕಲೆ,ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರದ ಮಹಾ ಪೋಷಕರಾಗಿಯೂ ಸ್ವಾಮೀಜಿಯ ಕೊಡುಗೆ ಅಪಾರ.ಸಾಮಾಜದಲ್ಲಿ ನೊಂದು ಬೆಂದವರಿಗೆ ಸಾಮಾಜಿಕ ಭದ್ರತೆ ನೀಡಲು ಅವರು ಸ್ಥಾಪಿಸಿದ ಅನಾಥಾಲಯ,ವೃದ್ಧಾಶ್ರಮಗಳು ಸುತ್ತೂರಿನಲ್ಲಿ ಇಂದಿಗೂ ಕೂಡಾ ಉತ್ತಮ ಸೇವೆ ನೀಡುತ್ತಿವೆ.
ರಾಜೇಂದ್ರ ಶ್ರೀಗಳ ಸಾಹಿತ್ಯಿಕ ಆಸಕ್ತಿ ಮತ್ತು ದೂರದೃಷ್ಠಿತ್ವದ ಫಲವಾಗಿ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇಂದು ಸಾಹಿತ್ಯ ಕ್ಷೇತ್ರದ ಕ್ರಿಯಾಶೀಲ ಚಟುವಟಿಕೆಯ ಕೇಂದ್ರವಾಗಿ ಮುನ್ನಡೆಯುತ್ತಿದೆ.ಸಾಹಿತ್ಯ ಸಮ್ಮೇಳನ,ವಿಚಾರ ಸಂಕಿರಣ,ಪುಸ್ತಕಗಳ ಪ್ರಕಟಣೆ,ದತ್ತಿ ಪ್ರಶಸ್ತಿ ಪ್ರಧಾನ ಹೀಗೆ ಪರಿಷತ್ತಿನಿಂದ ಇಂದು ನಿರಂತರ ಸಾಹಿತ್ಯ ಕೃಷಿ ನಡೆಯುತ್ತಿದೆ.
ಹಾಗೂ ಶ್ರೀಶಿವರಾತ್ರೀಶ್ವರ ಗ್ರಂಥಮಾಲೆ ಪ್ರಕಾಶನದ ಮೂಲಕ ಪ್ರಕಟಗೊಳ್ಳುವ ಮೌಲಿಕ ಗ್ರಂಥಗಳಿಂದ ನಿರಂತರ ಸಾಹಿತ್ಯ ಜ್ಯೋತಿ ಬೆಳಗುತ್ತಿರುವುದಕ್ಕೆ ಪ್ರೇರಕ ಶಕ್ತಿ ಕೂಡಾ ಶ್ರೀರಾಜೇಂದ್ರ ಸ್ವಾಮಿಗಳು.
ಆ.25ಕ್ಕೆ ಶತಮಾನದ ಶಿವಯೋಗಿ ಜಯಂತಿ
1916ರ ಆ.29ರಂದು ಮಲ್ಲಿಕಾರ್ಜುನಸ್ವಾಮಿ,ಮರಮ್ಮಣ್ಣಿ ದಂಪತಿಗಳ ಪುಣ್ಯ ಸಂಜಾತರಾಗಿ ಜನಿಸಿದ ಪೂಜ್ಯ ಶ್ರೀಗಳ ಜಯಂತಿಯನ್ನು ಪ್ರತಿವರ್ಷ ಸುತ್ತೂರು ಸಂಸ್ಥಾನದಲ್ಲಿ ಆಚರಿಸಲಾಗುತ್ತದೆ.
ಸಮಾಜಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡ ಶಿವರಾತ್ರಿ ರಾಜೇಂದ್ರ ಶ್ರೀಗಳು1986ರ ಡಿ.6ರಂದು ಲಿಂಗೈಕ್ಯರಾದ ನಂತರ ಅವರ ಉತ್ತರಾಧಿಕಾರಿಗಳಾದ ಪ್ರಸ್ತುತ ಸುತ್ತೂರು ಜಗದ್ಗುರು ಶ್ರೀಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಹಿರಿಯ ಶ್ರೀಗಳ ಆಶಯವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದ್ದಾರೆ.ಅವರು ಸ್ಥಾಪಿಸಿದ ಜೆಎಸ್‌ಎಸ್ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿರುವ ಪೂಜ್ಯರು ಜಗತ್ತಿನಾದ್ಯಂತ ಸಂಸ್ಥೆಯ ಶಾಖೆಗಳನ್ನು ತೆರೆದು ಎಲ್ಲೆಡೆ ಶಿಕ್ಷಣ ಸೇವೆ ಸಲ್ಲಿಸುತ್ತಿದ್ದಾರೆ.
ಸುತ್ತೂರು ಹಾಗೂ ಸಿದ್ಧಗಂಗೆ ಶ್ರೀಗಳ ಸಾನ್ನಿಧ್ಯದಲ್ಲಿ ಆ.25ರಂದು ನಂಜನಗೂಡು ತಾಲೂಕಿನ ಸುತ್ತೂರು ಮೂಲ ಕ್ಷೇತ್ರದಲ್ಲಿ ಶ್ರೀರಾಜೇಂದ್ರ ಸ್ವಾಮಿಗಳ ಜಯಂತಿ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ನಾದ ನಮನ,ಶ್ರೀಗಳ ಪುತ್ಥಳಿಗೆ ಪುಷ್ಪಾಂಜಲಿ,ಮೆರವಣಿಗೆ ಹಾಗೂ ಇನ್ನಿತರ ಸಾಮಾಜಿಕ,ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು,ಕಾರ್ಯಕ್ರಮದಲ್ಲಿ ಶ್ರೀ ಮಧುಸೂಧನ್ ಸಾಯಿ ಹಾಗೂ ವಿವಿಧ ಮಠಾಧೀಶರು,ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + 10 =
Remember me
