|ಎಂ.ಎ. ಸುಬ್ರಹ್ಮಣ್ಯ
ಹೌದು, ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಅಸ್ತಂಗತರಾಗಿ ಇಂದಿಗೆ (ನ. 26) ಸರಿಯಾಗಿ ಒಂದು ವರ್ಷ. 1933ರಲ್ಲಿ ಬೆಂಗಳೂರು ಬಳಿಯ ಕನಕಪುರದಲ್ಲಿ ಅವರ ಜನನ. ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್​ಸಿ, ಬಿಎ ಆನರ್ಸ್ ಮತ್ತು ಇಂಗ್ಲಿಷ್ ಎಂಎ ಪದವಿಗಳನ್ನು ಪಡೆದು, ‘ಡಬ್ಲ್ಯೂಬಿ ಯೇಟ್ಸ್ ಮತ್ತು ಟಿ.ಎಸ್. ಎಲಿಯೇಟ್​ರ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರದ ಪ್ರಭಾವ’ ಪಿಎಚ್​ಡಿ ನಿಬಂಧ ರಚಿಸಿದರು. ಪ್ರೊ. ಸಿ.ಡಿ.ಎನ್. ಅವರ ಮಾರ್ಗದರ್ಶನದಲ್ಲಿ ಶಿಷ್ಯರಾಗಿ ಮಾರ್ಗದರ್ಶಕರಿಗಿಂತ ಪ್ರಬುದ್ಧವಾದ ನಿಬಂಧ ರಚನೆ ಮಾಡಿದಾಗ ಗುರುಗಳಾದ ಸಿಡಿಎನ್ ಅವರಿಗೆ ಕೋಪ. ಡಾಕ್ಟರೇಟ್ ಪದಕ ಬಿಡುತ್ತೇನೆಯೇ ಹೊರತು, ನನ್ನ ವಿಷಯದ ಸಾರವನ್ನು ಬದಲಾಯಿಸಲಾರೆ ಎಂಬ ನಿಲುವು ನಾರಾಯಣಾಚಾರ್ಯ ಅವರದ್ದು. ಇದಾದ ಎಷ್ಟೋ ದಶಕಗಳ ನಂತರ ಆ ಪ್ರೊ. ಸಿ.ಡಿ.ಎನ್. ಅವರೇ ಈ ಕುರಿತು ತಮ್ಮ ಪಶ್ಚಾತ್ತಾಪವನ್ನು ಆಚಾರ್ಯರಲ್ಲಿ ತೋಡಿಕೊಂಡ ವಿಷಯವೇ ಬೇರೆ. ಆದರೆ, ನಾರಾಯಣಾಚಾರ್ಯರು ತಮ್ಮಆಳ ಅಧ್ಯಯನದ ತಪಸ್ಸಿನ ಫಲವಾಗಿ ಗಳಿಸಿದ್ದ ‘ಜ್ಞಾನವನ್ನು’ ಎಂದೂ ಬಿಟ್ಟುಕೊಡಲಿಲ್ಲ.
ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿಗೆ 1961ರಲ್ಲಿ ಅಧ್ಯಾಪಕರಾಗಿ ಸೇರಿದ ಅವರು, ಆ ಕಾಲೇಜಿನ ಐತಿಹಾಸಿಕ ಮತ್ತು ಅಮೋಘವಾದ ವಿದ್ವತ್ ಪರಂಪರೆಯನ್ನು ಅದೆಷ್ಟು ಎತ್ತರಕ್ಕೆ ಹಾರಿಸಿದರಲ್ಲ? ಇಂಗ್ಲಿಷ್ ಪ್ರವಾಚಕ, ಪ್ರಾಧ್ಯಾಪಕರಾಗಿ ಪ್ರಾಚಾರ್ಯರೂ ಆದರು. ಇದೇನು ದೊಡ್ಡ ವಿಷಯವಲ್ಲ. ಆದರೆ, ಅವರ ಪಾಂಡಿತ್ಯವೂ ಸಂಸ್ಕೃತ, ಕನ್ನಡ ಮತ್ತು ತಮಿಳುಗಳಲ್ಲೂ ಅಪಾರವಾಗಿತ್ತಲ್ಲ? ಹಾಗೆಂದೇ ಇಂದಿಗೂ ದೇಶದಾದ್ಯಂತ ಸಾವಿರಾರು ಗಣ್ಯವ್ಯಕ್ತಿಗಳು ‘ನಾನು ಕೆ.ಎಸ್. ನಾರಾಯಣಾಚಾರ್ಯರ ವಿದ್ಯಾರ್ಥಿಯಾದವನು. ಅವರ ಬಳಿ ಮೂರು ವರ್ಷ, ಐದು ವರ್ಷ ಇಂಗ್ಲಿಷ್ ಕಲಿತವನು’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಮಾತ್ರವಲ್ಲ; ಅವರು ಮಾಡಿದ ಪಾಠಗಳನ್ನು ಇಂದಿಗೂ ಉರುವು ಹೊಡೆಯುತ್ತಾರೆ.
ಈಶ್ವರ ದೈತೋಟ ಅವರು ಕೆ.ಎಸ್. ನಾರಾಯಣಾಚಾರ್ಯ ದಂಪತಿಗಳ ಟಿವಿ ಸಂದರ್ಶನ ಮಾಡಿದ್ದರು. ಮೂರು ದಿನ/ಮೂರು ಕಂತುಗಳಲ್ಲಿ ಬಂದಿದ್ದ ಆ ಸಂದರ್ಶನದಲ್ಲಿ ಆಚಾರ್ಯರು ಹೇಳುತ್ತಿದ್ದರು: ‘ಕಾಲೇಜಿನಲ್ಲಿ ನನ್ನ ಕ್ಲಾಸ್​ನಲ್ಲಿ ಒಂದು ದಿನವೂ ನಾನು ಅಟೆಂಡೆನ್ಸ್ ತಗೋಳ್ಳಲಿಲ್ಲ. ಯಾಕೆಂದರೆ, ಮೂರು ಜೋಡಿ ಮಹಾದ್ವಾರಗಳ ಆ ಕ್ಲಾಸ್​ರೂಮು ಭರ್ತಿಯಾಗಿಯೇ ಇರುತ್ತಿತ್ತು’ ಎಂದು.
ಆದರೆ, ವಿಷಯ ಬೇರೆಯೇ. ಆಚಾರ್ಯರ ಕ್ಲಾಸ್ ಇದೆಯೆಂದು ತಿಳಿದರೆ ಸಾಕು, ಅಕ್ಕಪಕ್ಕದ ಕ್ಲಾಸ್​ಗಳಿಂದ ಮಾತ್ರವಲ್ಲ, ಬೇರೆ ಬೇರೆ ಕಾಲೇಜುಗಳಿಂದ ವಿದ್ಯಾರ್ಥಿಗಳು ತುಂಬಿಬಿಡುತ್ತಿದ್ದರಂತೆ. ಮೂವರು ಕೂಡುವ ಡೆಸ್ಕ್​ನಲ್ಲಿ ನಾಲ್ವರು-ಐವರು ಒತ್ತೊತ್ತಿ ಕುಳಿತುಕೊಳ್ಳುವುದಷ್ಟೇ ಅಲ್ಲ, ನಡುವಿನ ನೆಲದ ಮೇಲೆಯೂ, ಆಚಾರ್ಯರ ಕುರ್ಚಿ ಮತ್ತು ಪ್ಲಾಟ್​ಫಾಮ್ರ್ ಮೇಲೆಯೂ ಕುಳಿತಿರುತ್ತಿದ್ದರಂತೆ. ಇಂಥ ಭಾಗ್ಯ ಅವರಿಗೆ ಒಲಿದಿದ್ದುದು ಆಕಸ್ಮಿಕವಲ್ಲ. ಅದು ಅವರ ಓದು, ಅಧ್ಯಯನ, ಶಿಕ್ಷಕ ವೃತ್ತಿಯ ತಾದಾತ್ಮ್ಯಳ ಫಲ ಮಾತ್ರ.
ಕೆ.ಎಸ್. ನಾರಾಯಣಾಚಾರ್ಯರು ತಮ್ಮ ಜೀವನವನ್ನು ಅವಲೋಕಿಸಿಕೊಂಡು ಬರೆದ ಒಂದು ಪುಟ್ಟ ಲೇಖನದಲ್ಲಿ ಹೀಗೆ ಬರೆದುಕೊಂಡಿದ್ದಾರೆ: ನನ್ನ ಆಯುಷ್ಯ ಹೆಚ್ಚು ಕಡಿಮೆ 1961-62ರಲ್ಲಿ ಮುಗಿದಿತ್ತೆಂದು ನಾನು ಭಾವಿಸಿದ್ದ ಕಾಲ. ಹೇಗಾದರಾಗಲಿ, ಅಧ್ಯಯನ ಮುಗಿಸಿಯೇ ಜೀವನ ನಿರ್ಗಮನ ಎಂದುಕೊಂಡು, ಧಾರವಾಡದ ಶಂಕರಾಚಾರ್ಯ ಪಾಠಶಾಲಾಧ್ಯಕ್ಷರಾದ ಬ್ರ. ಶ್ರೀ ಭಾಲಚಂದ್ರ ಶಾಸ್ತ್ರಿಗಳನ್ನು ಸಮೀಪಿಸಿ, ದಂಡವತ್ ಪ್ರಣಾಮಗೈದು, ವಿನಂತಿಸಿಕೊಂಡೆ. ಅವರು ವಿಸ್ಮಿತರಾಗಿ, ‘ಈ ವಯಸ್ಸಿನಲ್ಲಿ ನಿಮಗೆ ವೇದ ಹತ್ತುವುದು ಕಷ್ಟವೆನಿಸುತ್ತದೆ. ಇಲ್ಲಿ ಬರೀ ಋಗ್ವೇದಿಗಳು, ನಿಮ್ಮ ಜಿಜ್ಞಾಸೆಗೆ ಉಪಯೋಗವಾಗುವ ಒಬ್ಬ ಕೃಷ್ಣ ಯಜುರ್ವೆದಿಯೇನೋ ಇದ್ದಾರೆ. ಸೋಮಯಾಜಿ, ದಂಡಾವತಿ, ಶಿವದೀಕ್ಷಿತರು. ಆದರೆ, ತುಂಬ ವೃದ್ಧರು. ಅವರ ಸಹನೆ, ಆರೋಗ್ಯ, ಶಿಷ್ಯಾಂಗೀಕಾರದ ಇಚ್ಛೆ ಹೇಗಿದೆಯೋ ಕಾಣೆ. ನಿಮ್ಮ ಅದೃಷ್ಟ’ ಎನ್ನುತ್ತ ಒಬ್ಬರನ್ನು ಜೊತೆಗೆ ಕಳುಹಿಸಿ, ಗುರುಗಳಲ್ಲಿ ಪರಿಚಯಿಸಿ, ವಿಜ್ಞಾಪಿಸಿದರು. ಗುರುಗಳ ಪ್ರೇಮಕಟಾಕ್ಷ ಬಿದ್ದ ಅಮೃತಗಳಿಗೆ. ಅವರೂ ಸಾಕಷ್ಟು ಪರೀಕ್ಷಿಸಿದರು. ಸ್ವರಗಳು ದೃಢವಾಗಿ ನಿಲ್ಲುವ ಬಗ್ಗೆ ಅವರಿಗೂ ಸಂದೇಹ. ಆಗಿದ್ದನ್ನು ಉಚ್ಛರಿಸುವಂತೆ ಅಪ್ಪಣೆ. ಆಜ್ಞಾಪಾಲನೆಯಾದೊಡನೆ ಆನಂದ! ಪಂಚಾಂಗ ತೆಗೆದು ನೋಡಿ: ‘ನಾಳೆಯಿಂದಲೇ ಬನ್ನಿ. ಬೆಳಗ್ಗೆ, ಮಧ್ಯಾಹ್ನ ಎರಡೂ ಹೊತ್ತು ಬರಿಗಾಲಲ್ಲಿ ಬರಬೇಕು. ಸೂರ್ಯಾಸ್ತದ ನಂತರ ಪಾಠವಿಲ್ಲ. ಅಧ್ಯಯನದ ದಿನ ನೀವು ಬ್ರಹ್ಮಯಜ್ಞ ಮಾಡಬಹುದು. ಇಗೋ ವೈಶ್ವದೇವ ಮಂತ್ರ ಉಪದೇಶ ಮಾಡುತ್ತೇನೆ. ತಪ್ಪದೇ ಬರಬೇಕು. ಅಧ್ಯಯನದ ರಾಶಿ ಅಪಾರವಾಗಿದೆ’ ಎಂದು ಆಜ್ಞಾಪಿಸಿದರು. ಹೀಗೆ ವೇದಪುರುಷ ಬಾಗಿಲು ತೆರೆದ. ಸುಮಾರು ಮೂರು, ನಾಲ್ಕು ವರ್ಷ ಸತತಾಭ್ಯಾಸ ನಡೆಯಿತು. ನಡುನಡುವೆ ಬೆಂಗಳೂರಿನ ನನ್ನ ಮಾವಂದಿರು ಬ್ರ. ಶ್ರೀ ಶೇಟ್ಲೂರು ಶ್ರೀನಿವಾಸಾಚಾರ್ಯರಲ್ಲೂ, ಗುರುಗಳಿಗೆ ಅನನುಕೂಲಕಾಲದಲ್ಲಿ ಬ್ರ. ಶ್ರೀ ದತ್ತೂಶಾಸ್ತ್ರಿ ಜಂತಲಿಯವರಲ್ಲೂ ಅಧ್ಯಯನ ನಡೆದು, ಈ ಮಹನೀಯರು ನನ್ನ ಜೀವನದ ಪರಮೋದ್ದೇಶ್ಯವನ್ನು ನೆರವೇರಿಸಿ, ಜನ್ಮಸಾರ್ಥಕ ಮಾಡಿದರು.
ನಡುನಡುವೆ ಕಲಿತಿದ್ದ ಸಂಸ್ಕೃತವನ್ನು ಬೆಳೆಸಿಕೊಳ್ಳುತ್ತ ಕಾಲೇಜಿನ ಅಪೂರ್ವ ಗ್ರಂಥಭಂಡಾರದಲ್ಲಿನ ಸಾಯಣ, ಸ್ಕಂದಸ್ವಾಮಿ, ಮಹೀಧರ, ಭಟ್ಟಭಾಸ್ಕರರ ಭಾಷ್ಯಗಳನ್ನೂ, ಋಗ್ವೇದದ ವೆಂಕಟಮಾಧವ, ಉಪ್ಪಟ, ಇನ್ನಿತರ ಭಾಷ್ಯಗಳನ್ನೂ, ಯಾಸ್ಕರ ನಿರುಕ್ತವನ್ನೂ, ಶೌನಕರ ಬೃಹದ್ದೇವತೆ, ಋಗ್ವಿಧಾನಗಳನ್ನೂ, ದುರ್ಗಾಚಾರ್ಯರ ಭಾಷ್ಯವನ್ನೂ, ವೇದಾಂತ ಸೂತ್ರಗಳನ್ನೂ, ಮತತ್ರಯಾಚಾರ್ಯರ ಭಾಷ್ಯಗಳನ್ನೂ ನೋಡುತ್ತ ಅರ್ಥಾಭ್ಯಾಸ ಮಾಡುತ್ತ ಬಂದಾಗ, ಶ್ರೀ ಅರವಿಂದರ ‘ಆನ್ ದಿ ವೇದಾ’, ‘ಹಿಮ್ನ್​ಸ್ ಟು ಅಗ್ನಿ’ ಮತ್ತಿತರ ಗ್ರಂಥಗಳನ್ನೂ, ಎಂ.ಪಿ. ಪಂಡಿತ್, ಶ್ರೀ ಕಪಾಲಿಶಾಸ್ತ್ರಿ ಮುಂತಾದ ವೇದೋಪಾಸಕರ ವಿವರಣೆಗಳನ್ನೂ ನೋಡುತ್ತಾ, ಆರೋಗ್ಯವೂ ಸುಧಾರಿಸುತ್ತಾ, ಇತ್ತ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಇಲ್ಲದೆಯೂ, ಈ ಎಲ್ಲಕ್ಕೂ ಕಾಲೇಜಿನ ದಿನಚರಿ ಅಡ್ಡಬರದೆ, ಸಹಕರಿಸಿದ್ದು ಗುರುಕೃಪೆ, ದೈವಾನುಗ್ರಹ ಎಂದೇ ಭಾವಿಸುತ್ತೇನೆ. ಈ ಎಲ್ಲ ಮಾರ್ಗದರ್ಶನದ ಹೊಣೆ ನನ್ನ ಬಾಲ್ಯದ ಆಧ್ಯಾತ್ಮ ಗುರುಗಳದ್ದೇ ಆಗಿದ್ದು, ಸ್ವಪ್ನದೃಷ್ಟಾಂತದಲ್ಲಿ ಸೂಚನೆಗಳಿಂದ ಆಧ್ಯಾತ್ಮವಿದ್ಯೆಯ ಪ್ರಗತಿ ತೃಪ್ತಿಕರವಾಗಿ ಸಾಗಿತ್ತು. ಅಧ್ಯಯನ, ತಕ್ಕಮಟ್ಟಿಗೆ ಅರ್ಥಾನುಸಂಧಾನ, ಸ್ವಾನುಭವದಲ್ಲಿ ಅಗೋಚರಗಳು ಗೋಚರವಾಗುತ್ತ, ನನ್ನ ಆತ್ಮವು ಅಮೃತಸೇಚನ ಪಡೆಯುತ್ತ ಹೋದದ್ದು ವಿಸ್ಮಯ. ಕಾಲೇಜಿನಲ್ಲೂ ವೃತ್ತಿತೃಪ್ತಿ, ಶಿಷ್ಯರ ಮೆಚ್ಚುಗೆ, ಜನಪ್ರಿಯತೆ, ಸಹೋದ್ಯೋಗಿಗಳ ಗೌರವ, ಇಲಾಖೆಯಲ್ಲಿ ಬಡ್ತಿ, ಊರಲ್ಲಿ ಪ್ರವಚನಗಳಿಂದ ಪಂಡಿತ ಪಾಮರರ ಅಭಿಮಾನಗಳೂ ಬೆಳೆಯುತ್ತ, ಧಾರವಾಡವು ನನ್ನ ಜನ್ಮಭೂಮಿಯ ವಿಸ್ತರಣೆಯಂತೆ ಆಗಿ, ಕಾಲೇಜು ಮೇಲಾಧಿಕಾರಿಗಳ ತೊಂದರೆ ಕಡಿಮೆಯಾಗುತ್ತ, ಅವರೇ ನನಗೆ ಅಂಜುವಂತೆ ಆದ ಅನುಕೂಲಕರ ಪರಿಣಾಮವೂ, ನನ್ನ ಅಧ್ಯಯನ-ಅಭ್ಯಾಸಗಳಿಗೆ ಪೂರಕವಾಯಿತು. ಕರ್ನಾಟಕ ಕಲಾ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಗ್ರಂಥಭಂಡಾರಕ್ಕೆ ಪುಣೆಯ ಡೆಕ್ಕನ್ ಕಾಲೇಜಿನ ಭಂಡಾರವೂ (ಅದು ಬ್ರಿಟಿಷರ ಕುತಂತ್ರದಿಂದ ಮುಚ್ಚಿದಾಗ) ಸೇರಿ ಬೆಳೆದು, ಅತ್ಯಂತ ಸಮೃದ್ಧವಾಗಿ, ನನಗೆ ಬೇಕಾದುದೆಲ್ಲ ಅಲ್ಲಿದ್ದು, ಕಲ್ಪವೃಕ್ಷದ ತೋಟದಂತೆ ಇತ್ತು. ಎಷ್ಟು ಪುಸ್ತಕಗಳನ್ನಾದರೂ ಏಕಕಾಲಕ್ಕೆ ಒಯ್ಯುವ ವಿಶೇಷ ಸೌಲಭ್ಯವನ್ನು ನನಗೆ ವಿನಾಯ್ತಿಯಂತೆ ಅಧಿಕಾರಿಗಳು ಇತ್ತಿದ್ದು, ಭಂಡಾರದ ಸೇವಕರೂ ಮನೆಗೂ ತಂದು ಮುಟ್ಟಿಸುತ್ತಿದ್ದ ನೆನಪುಗಳು ಮರೆಯಲಾರದವು. ಕಾಲೇಜು ಅಧ್ಯಾಪನದ ವೇಳೆ, ನಿಯಮಗಳಿಗೆ ಭಂಗಬಾರದಂತೆ ಉಳಿದ ವೇಳೆಯಲ್ಲಿ ಈ ಅಧ್ಯಯನ ಮುಂದುವರೆಯಲು, ರಾತ್ರಿ ಉಪಯೋಗಿಸುತ್ತ, ನಿದ್ರೆಗೆ ಕತ್ತರಿ ಬೀಳುತ್ತಿದ್ದರೂ ಆರೋಗ್ಯ ಸುಧಾರಿಸಿತ್ತು. ಚಳಿಗಾಲ, ಬೇಸಿಗೆಯ ರಜೆಗಳಲ್ಲಿ ‘ಲಾಭ’ದಾಯಕವಾಗಿದ್ದ ಪರೀಕ್ಷಾ ಮೇಲ್ವಿಚಾರಣೆ, ಊರೂರು ತಿರುಗುತ್ತ ಪರೀಕ್ಷಾ ಚಾಲನೆ, ಊರಲ್ಲಿದ್ದಾಗ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನಾದಿ ಕಾರ್ಯಗಳನ್ನೂ ಆದಷ್ಟು ಬೇರೆಯವರಿಗೆ ಬಿಟ್ಟು, (ಇಲ್ಲಿ ಇವನ್ನು ಪಡೆದುಕೊಳ್ಳಲು ತುಂಬ ಸ್ಪರ್ಧೆ ಇದ್ದ ಪ್ರಯುಕ್ತ) ನನ್ನ ಪ್ರವಚನ ಕಾರ್ಯಗಳಿಗೆ ಅಲ್ಲಲ್ಲಿ ಆಹ್ವಾನ ಬಂದೆಡೆಗಳಲ್ಲಿ ಸಂಚರಿಸುತ್ತ, ಈ ನೆಪದಲ್ಲಿ ಶ್ರೀ ಮದ್ರಾಮಾಯಣ, ಭಾಗವತ, ಗೀತೆ, ಮಹಾಭಾರತಗಳನ್ನು ವ್ಯಾಖ್ಯಾನದೊಡನೆ ಅಧ್ಯಯನ ಮಾಡಿ ಪ್ರವಚನಿಸುತ್ತ ಬಂದದ್ದೂ, ವೇದದ ಆಳ ತಿಳಿವಳಿಕೆಗೆ ಪೋಷಕ-ಸಹಾಯಕವಾಯ್ತು ಎನ್ನಬೇಕು. ಇದು 1961ರಿಂದ ಸುಮಾರು ಹತ್ತು ವರ್ಷ ನಡೆಯಿತು.’
ಕೆ.ಎಸ್. ನಾರಾಯಣಾಚಾರ್ಯರ ಭಾರತ-ರಾಮಾಯಣ ಕಾದಂಬರೀಕರಣಗಳ ಶೈಲಿಯೇ ಅಪೂರ್ವವಾದದ್ದು. ಕಾಲೇಜಿನಿಂದ ವಿಮುಕ್ತಿ ಪಡೆದ ಅವಧಿಯಲ್ಲಿ ಅವರು ರಚಿಸಿದ ‘ಕೃಷ್ಣಾವತಾರದ ಕೊನೆಯ ಗಳಿಗೆಗಳು’ ಮತ್ತು ಅದೇ ಸಮಯದಲ್ಲಿ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಬಂದ ‘ಮಹಾಭಾರತ ಪಾತ್ರ ಪ್ರಪಂಚ’ ಮತ್ತು ‘ರಾಮಾಯಣ ಪಾತ್ರ ಪ್ರಪಂಚ’ಗಳು ಓದುಗರನ್ನು ಚುಂಬಕದಂತೆ ಸೆಳೆದುಬಿಟ್ಟವು. ಅದುವರೆಗೆ ವೇದ ಮತ್ತು ಅಧ್ಯಾತ್ಮದ ವಿದ್ವಾಂಸರಿಂದ ವ್ಯಾಸ, ವಾಲ್ಮೀಕಿಗಳ ಮೂಲ ದರ್ಶನದ ಕಾದಂಬರಿಗಳೇ ಎದುರು ನಿಂತಂತಾಯಿತು. ಬಹಳಷ್ಟು ಪತ್ರಿಕೆಗಳಿಗೆ ಆಚಾರ್ಯರು ಅನಿವಾರ್ಯ ಅಂಕಣಕಾರರಾದರು. ರಾಜ್ಯಾದ್ಯಂತ ಜನಪ್ರಿಯ ಪ್ರವಚನಕಾರರಾದವರು ಲೇಖಕರೂ ಆಗಿ ಬೇರೊಂದು ಉತ್ಕ ೃ್ಟ ಅಭಿರುಚಿ ಬೆಳೆಸಿದ ಜನಪ್ರಿಯ ಬರಹಗಾರರೂ ಆದರು. ರಾಜಕೀಯ-ರಾಜನೀತಿಗಳನ್ನು ವಿಶ್ಲೇಷಿಸಿ ಬರೆದ ಅತ್ಯಂತ ಗಂಭೀರ ಮತ್ತು ಜನಮೆಚ್ಚಿದ ಪತ್ರಿಕಾ ಅಂಕಣಕಾರರಾದರು!
ಅವರಂತೆ ಭಾರತ -ರಾಮಾಯಣ, ಭಾಗವತ-ಗೀತೆ-ವೇದಗಳ ಮೂಲ ದರ್ಶನವನ್ನು ಆಕರ್ಷಕವಾಗಿಯೂ, ರೋಚಕವಾಗಿಯೂ ಹೇಳುವ ಲೇಖಕರೇ ಇಲ್ಲವಲ್ಲ ಎಂಬ ಖೇದ ಈಗ ನಮ್ಮೆಲ್ಲರದ್ದು.
ಕೆ.ಎಸ್. ನಾರಾಯಣಚಾರ್ಯರ ನೂರಕ್ಕೂ ಹೆಚ್ಚು ಅಮೂಲ್ಯ ಕೃತಿಗಳಿವೆ. ನೂರಾರು ತಾಸುಗಳ ಪ್ರವಚನ ಮಾಲಿಕೆ ಇದೆ. ಅವೇ ಈಗ ನಮ್ಮ ನಿಧಿ!
ಇಂದು ಅವರಿಗೆ ನಮ್ಮ ಒಂದು ಸ್ಮರಣ! ಒಂದು ಹಿಡಿ ಗುರುಋಣ! ಒಂದು ಹನಿ ಕಂಬನಿ.
(ಲೇಖಕರು ಸಾಹಿತಿ ಹಾಗೂ ಪ್ರಕಾಶಕರು)
ಚಿತ್ರ ವಿಮರ್ಶೆ: ಹಾಡಿನ ಹಕ್ಕಿ ಸೇಡಿನ ಹಕ್ಕಿಯಾಗುವ ಕಥೆ

ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋಚಾಲಕನ ಮದ್ವೆ; 3 ವರ್ಷದ ಹಿಂದೆ ಗೈಡ್​ಗೆ ಫಿದಾ ಆಗಿದ್ದ ವಿದೇಶಿ ಯುವತಿ, ಇಂದು ಲಗ್ನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eight =
Remember me
