| ಸುಧೀರ್ ಅತ್ತಾವರ್, ನಾಟಕಕಾರ, ಚಿತ್ರ ನಿರ್ದೇಶಕ
ನಮ್ಮ ಮೈಸೂರಿನ ಮಣ್ಣಿನ ಮಗ ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ ಎಂ. ಎಸ್. ಸತ್ಯುಗೆ ಈಗ ತೊಂಬತ್ತು ವರ್ಷ. (ಜುಲೈ 6, 1930). ಬಿಳಿಗಡ್ಡದ ಈ ಚಿರ ಯುವಕನ ಇಂದಿಗೂ ಬತ್ತದ ಉತ್ಸಾಹ ಮತ್ತು ಕ್ರಿಯೆಟಿವಿಟಿ ಎಂತಹವರಿಗೂ ಪ್ರೇರಣೆ. ಆದರೆ ಇವರ ಸಿದ್ದಾಂತಗಳನ್ನು ಒಪ್ಪದವರಿಗೆ ಮಾತ್ರ ಪ್ರಶ್ನಾರ್ಹವಾಗಿಯೇ ಸತ್ಯು ಉಳಿದುಬಿಟ್ಟಿದ್ದಾರೆ. ಮೈಸೂರು ಮಹಾರಾಜರ ಕಾಲದಲ್ಲಿ , ಮಹಾರಾಜರ ಸುಪರ್ದಿಯಲ್ಲಿದ್ದ ಮಿಲ್ಲುಗಳು ಸತ್ಯು ಅವರ ತಂದೆ ಸತ್ಯನಾರಾಯಣ ಅವರ ಮೇಲ್ವಿಚಾರಿಕೆಯಲ್ಲಿ (ಜನರಲ್ ಮ್ಯಾನೇಜರ್) ಇತ್ತು. ಅಲ್ಲದೆ ಮಹಾರಾಜರು ಸ್ವತಃ ಕುದುರೆ ಏರಿ ಇವರ ಮೊಹಲ್ಲಾ ಕಡೆ ಬಂದಾಗ, ಸತ್ಯನಾರಾಯಣರನ್ನು ವಿಚಾರಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಘನಸ್ತಿಕೆ ಸತ್ಯುಅವರ ಕುಟುಂಬ ಪರಿವಾರಕ್ಕಿತ್ತು. ಹೀಗಿದ್ದೂ ಈ ರಾಜ ಭೋಗವನ್ನು ಬಿಟ್ಟು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಓದನ್ನು ಅರ್ಧಕ್ಕೇ ನಿಲ್ಲಿಸಿ, ಸಿನಿಮಾ ಮಾದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂಬಯಿ ಸೇರಿದವರು ಸತ್ಯು. ಹೊಟ್ಟೆಪಾಡಿಗಾಗಿ ಶುರು ಶುರುವಿಗೆ ಚರ್ಚ್ ಗೇಟ್‌ನಲ್ಲಿ ಸತ್ಯು ನ್ಯೂಸ್ ಪೇಪರ್ ಮಾರುತ್ತಿದ್ದರು ಎಂದರೆ ಒಮ್ಮೆಗೆ ನಮಗೆ ನಾವೇ ತಣ್ಣನೆಯ ನೀರನ್ನು ಹೊಯ್ದುಕೊಂಡ ಅನುಭವವಾಗುತ್ತದೆ …!
ಮುಂಬಯಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಸತ್ಯು ಒದ್ದಾಡುತ್ತಿದ್ದರು ಎನ್ನುವುದು ಬಹಳ ಜನರಿಗೆ ತಿಳಿದಿರದ ಸತ್ಯ. ಇಡೀ ಪ್ರಪಂಚವೇ ಒಮ್ಮೆ ತಿರುಗಿನೋಡುವಂತೆ ಮಾಡಿದ್ದ ಗರಂ ಹವಾದಂತಹ ಸಿನಿಮಾದ ನಿರ್ದೇಶಕ ಸತ್ಯು ಮುಂಬಯಿಯಲ್ಲಿ ಇರಲು ಸೂರು ಇಲ್ಲದೆ ಇದ್ದ ದಿನಗಳನ್ನೂ ಕಂಡಿದ್ದರು…!
ಉತ್ತರ ಪ್ರದೇಶದ ರಾಂಪುರ್ ನ ದಿವಾನ್ ಮತ್ತು ಆಲಿಘರ್ ಮುಸ್ಲಿಂ ಯುನಿವರ್ಸಿಟಿಯ ಉಪ ಕುಲಪತಿ ಆಗಿದ್ದ ಕರ್ನಲ್ ಝೈದಿ ಯವರ ಅಳಿಯನಾಗಿದ್ದರೂ, ದೇಶದ ಪ್ರ್ರಧಾನಿಯಾಗಿದ್ದ ರಾಜೀವ್ ಗಾಂಧಿ ಮತ್ತು ಸಹೋದರ ಸಂಜಯ್ ಗಾಂಧಿಗೆ ಕ್ರ್‌ಟಾ ಕಲಿಸುತ್ತಿದ್ದರೂ, ಸತ್ಯು ತಮ್ಮ ‘ಗರಂ ಹವಾ’ ಸಿನಿಮಾವನ್ನು ಇಂದಿರಾ ಗಾಂಧಿಯವರ ಆಳ್ವಿಕೆಯ ಕಾಲದಲ್ಲೇ ಭಾರತದಲ್ಲಿ ತೆರೆಕಾಣಿಸಲು ಹರಸಾಹಸ ಪಟ್ಟಿದ್ದು ಚರಿತ್ರೆಯ ಮುಸುಕಿನೊಳಗೆ ಸೇರಿ ಹೋದ ಸತ್ಯ. ಜವಾಹರ್ ಲಾಲ್ ನೆಹರೂ ಅವರ ಕ್ಯಾಬಿನೆಟ್‌ನಲ್ಲಿ ಎರಡನೆಯ ಅತ್ಯಂತ ಪವರ್‌ಫುಲ್ ವ್ಯಕ್ತಿಯಾಗಿದ್ದ ರಕ್ಷಣಾ ಸಚಿವ ವಿ. ಕೆ. ಕೃಷ್ಣ ಮೆನನ್ ಜೊತೆ ನಿಕಟ ಸಂಬಂಧವಿರಿಸಿಕೊಂಡಿದ್ದ ಇಂದಿರಾ ಗಾಂಧಿ, ತಾವಿಬ್ಬರು ಏಕಾಂತವಾಗಿರುವ ಸಮಯದಲ್ಲಿ ರಾಜೀವ್ ಮತ್ತು ಸಂಜಯ್ ಅವರನ್ನು ಸತ್ಯು ಜತೆ ಬಿಟ್ಟು ಹೋಗುತ್ತಿದ್ದರಂತೆ. ಆದರೆ ದೇಶ ವಿಭಜನೆ ಆಧಾರಿತ ಗರಂ ಹವಾ ಚಿತ್ರವನ್ನು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಾಧ್ಯವೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿತ್ತು. ಅತ್ಯಂತ ಪ್ರಯಾಸಪಟ್ಟು ಮೊದಲು ದಕ್ಷಿಣ ಭಾರತದಲ್ಲಿ ಬಿಡುಗಡೆಗೊಳಿಸಲು ಅನುಮತಿ ಪಡೆಯಬೇಕಾಯಿತು. ಇದರಿಂದ ಗರಂ ಹವಾ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಯಿತು. ನಿರ್ಮಾಪಕರಾಗಿ ಆ ಸಿನಿಮಾಗೆ ಮಾಡಿರುವ ಸಾಲವನ್ನು ತೀರಿಸಲು ಸತ್ಯು ಹಲವು ವರ್ಷಗಳ ತನಕ ಒದ್ದಾಡಿದ್ದರು…!
ಈ ತೊಂಭತ್ತು ವರ್ಷದ ಸುಧೀರ್ಘ ಜೀವನದಲ್ಲಿ ಗಟ್ಟಿ ಮುಟ್ಟಾಗಿಯೇ ಇದ್ದಾರೆ ಸತ್ಯು. ಸ್ವಲ್ಪವೂ ಮರೆವು ಎನ್ನುವ ಕಾಯಿಲೆ ಬಾಧಿಸಿಲ್ಲ. ಬೆನ್ನು ಬಾಗಿಲ್ಲ. ದೃಷ್ಟಿ ಮಂದವಾಗಿಲ್ಲ…! ಅರವತ್ತು ಎಪ್ಪತ್ತು ವರ್ಷಗಳ ಹಿಂದಿನ ಘಟನೆಗಳನ್ನು, ಹಳೇ ಕಾಲದ ಹಾಲಿವುಡ್ ಸಿನಿಮಾಗಳ, ಇಂಗ್ಲಿಷ್ ನಾಟಕಗಳ ಹೆಸರುಗಳನ್ನು, ನಟ- ಕಲಾವಿದ -ನಿರ್ದೇಶಕರುಗಳ ಬಗ್ಗೆ ಥಟ್ಟಂತ ಹೇಳುವಷ್ಟು ಮೊನಚಾದ ಜ್ಞಾಪಕ ಶಕ್ತಿ….! ಸೌಂದರ್ಯಾರಾಧಕರೆನಿಸಿರುವ ಇವರು, ಖ್ಯಾತ ನಟಿ ಶಬಾನಾ ಆಜ್ಮಿ ಸತ್ಯು ಕುರಿತು ಹೇಳುವಂತೆ -ಸತ್ಯು ಹುಡುಗಿಯರೊಂದಿಗೆ ಫ್ಲರ್ಟ್ ಮಾಡುವುದು ಹೆಚ್ಚು. ಬಹುಶಃ ಇದು ಎವರ್ ಗ್ರೀನ್ ಎಂದೆನಿಸಿಕೊಳ್ಳುವ ಗುಟ್ಟು ಆಗಿರಲೂ ಬಹುದು!’ಸತ್ಯು ಜೀವನದ ಈ ದೀರ್ಘ ಕಾಲದ ಪ್ರಯಾಣದಲ್ಲಿ ಮೂರು ಬಾರಿ ಸಾವಿನ ಕದ ತಟ್ಟಿ ಬಂದಿದ್ದರು. ಹೌದು, ಸತ್ಯು ಅವರ ಕಲಾನಿರ್ದೇಶನವಿದ್ದ ಸುನಿಲ್ ದತ್ ನಟನೆಯ ‘ಹಿಮಾಲಯ್ ಸೆ ಊಂಚ’ ಸಿನಿಮಾದ ಚಿತ್ರೀಕರಣದ ಸಂದರ್ಭ. ಆಗ ಕಲಾನಿರ್ದೇಶನದ ಜೊತೆಗೆ ಸೆಕೆಂಡ್ ಯುನಿಟ್ ಕ್ಯಾಮರಾಮನ್ ಆಗಿ ಕೂಡಾ ಸತ್ಯು ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ನಡೆದ ಘಟನೆ ಎಂತಹವರಿಗೂ ಮೈ ಝುಂ ಎನಿಸುತ್ತದೆ. ಚಿತ್ರದ ಸನ್ನಿವೇಶವೊಂದಕ್ಕೆ ಹಿಮಾಲಯ ಪರ್ವತದ ತುತ್ತ ತುದಿಗಳನ್ನು ಸತ್ಯು ಮೈ ಮರೆತು ಹೆಲಿಕಾಪ್ಟರ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಹಿಮಾಚ್ಚಾದಿತ ಆ ವಿಹಂಗಮ ನೋಟವನ್ನು ಯಾವುದೇ ಆಸರೆ ಇಲ್ಲದೆ ಕ್ಯಾಮರಾವನ್ನು ಕೈಯಲ್ಲೇ ಆಪರೇಟ್ ಮಾಡುತ್ತಾ, ಹೆಲಿಕಾಫ್ಟರ್‌ನಲ್ಲೇ ಕುಳಿತು ಸೆರೆಹಿಡಿಯುವುದರಲ್ಲಿ ಮಗ್ನರಾಗಿದ್ದರು. ಒಂದು ನಿರ್ದಿಷ್ಟ ಸ್ಥಳದಲ್ಲಿ ಹೆಲಿಕಾಫ್ಟರ್ ಟರ್ನ್ ಆಗುವಾಗ ಸಹಜವಾಗಿಯೇ ಎಂಬಂತೆ ಅದು ವಾಲಿಕೊಂಡಿತು. ಅಷ್ಟೇ…! ಸತ್ಯು ತಾವು ಹಿಡಿದುಕೊಂಡಿದ್ದ ಕ್ಯಾಮರಾ ಸಮೇತ ಹೆಲಿಕಾಫ್ಟರ್‌ನಿಂದ ಹೊರದಬ್ಬಲ್ಪಟ್ಟರು. ಅಂದು ಪವಾಡವೇನಾದರೂ ನಡೆದಿರದಿದ್ದರೆ, ಸತ್ಯು ಹಿಮದ ರಾಶಿಯಲ್ಲಿ ನೆನಪಾಗಿ ಉಳಿದುಬಿಡುತ್ತಿದ್ದರು….! ಕ್ಷಣಾರ್ಧದಲ್ಲಿ ಪೈಲೆಟ್ ಕೈ ಹೊರಚಾಚಿ, ಹೆಲಿಕಾಫ್ಟರ್‌ನಿಂದ ಆಯತಪ್ಪಿ ಕೆಳಗೆ ಬೀಳುತ್ತಿದ್ದ ಸತ್ಯುವನ್ನು ಹಿಡಿಯಲೆತ್ನಿಸಿದಾಗ, ಸಿಕ್ಕಿದ್ದು ಕ್ಯಾಮರಾವನ್ನು ಎದೆಗೆ ಕಟ್ಟಿಕೊಂಡಿದ್ದ ಬೆಲ್ಟ್. ಪೈಲೆಟ್‌ನ ಕೈಯಲ್ಲಿ ಕ್ಯಾಮರಾ ಬೆಲ್ಟ್, ಸತ್ಯು ಕೈಯಲ್ಲಿ ಕ್ಯಾಮರಾ! ಸತ್ಯು ಹಾಗೇ ಕ್ಯಾಮರಾ ಬೆಲ್ಟ್ ನ ಸಹಾಯದಿಂದ ಹೆಲಿಕಾಫ್ಟರ್ ಹೊರಗೆ ನೇತಾಡುತ್ತಿದ್ದರು….!!! ಈ ಘಟನೆ ನೆನಪಿಸಿಕೊಳ್ಳುವ ಸತ್ಯು ‘ಆದರೂ ನಾನು ಕ್ಯಾಮರಾವನ್ನು ಕೆಳಗೆ ಬೀಳಲು ಬಿಡಲಿಲ್ಲ’ ಎಂದು ಸಾಹಸಿಯಂತೆ ಹೇಳುತ್ತಾರೆ.
ಇನ್ನೊಂದು ಪ್ರಸಂಗ:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಬ್ಬನ್ ರಸ್ತೆಯಲ್ಲಿರುವ ಈಗಿನ ಮಿಲಿಟರಿ ಕ್ಯಾಂಟಿನ್‌ನಲ್ಲಿ ನಡೆದ ಘಟನೆ. ಹಿಂದೆ ಈ ಸ್ಥಳ ನಾಟಕ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿದ್ದ, ಎತ್ತರದ ಸ್ಟೇಜ್ ಒಳಗೊಂಡಿದ್ದ ಸಭಾಭವನವಾಗಿತ್ತು. ಸತ್ಯು ನಾಟಕವೊಂದಕ್ಕೆ ಸೆಟ್ ಡಿಸೈನ್ ಮಾಡಿ, ಸೆಟ್ ನಿರ್ಮಾಣ ಸಮಯದಲ್ಲೂ ಸ್ವತಃ ತನ್ನನ್ನು ತೊಡಗಿಸಿಕೊಂಡಿದ್ದರು. ಸ್ಟೇಜ್ನ ಕೆಳಭಾಗದಲ್ಲಿ ಸಂಜೆಯ ನಾಟಕಕ್ಕೆ ಬೇಕಾದ ರಂಗ ಸಜ್ಜಿಕೆಗೆ ಪೂರಕವಾದ ಕಬ್ಬಿಣದ ಸರಳು, ಮರದ ತುಂಡುಗಳನ್ನು ಪೋಣಿಸಿ, ಸ್ಟೇಜ್ ನ ಮೇಲ್ಛಾವಣಿಯಲ್ಲಿ ಕುಳಿತು ಸೆಟ್ ಕೆಲಸವನ್ನು ಮುಂದುವರಿಸುತ್ತಿದ್ದರು. ಕೆಲಸವಿನ್ನೂ ಪೂರ್ತಿಯಾಗಿರಲಿಲ್ಲ. ಅದ್ಯಾವುದೋ ಹುಕ್ ಒಂದನ್ನು ಸತ್ಯು ಸಿಕ್ಕಿಸಲು ಯತ್ನಿಸಿದಾಗ ಆಯತಪ್ಪಿ ಸುಮಾರು ಇಪ್ಪತ್ತು-ಇಪ್ಪತೈದು ಅಡಿಗಳ ಎತ್ತರದಿಂದ ತಲೆ ಕೆಳಗಾಗಿ ಬಿದ್ದರು. ಹತ್ತಿರದಲ್ಲೇ ಕಬ್ಬಿಣದ ಸಲಾಕೆಗಳು….! ಎಲ್ಲರೂ ನೋಡುತ್ತಿದ್ದಂತೆಯೇ ಸತ್ಯು ರಕ್ತದ ಮಡುವಿನಲ್ಲಿ ಅವುಗಳ ಮೇಲೆ ಬಿದ್ದಿದ್ದರು….!
ಇನ್ನೊಂದು ಪ್ರಸಂಗ:ತೀರಾ ಇತ್ತೀಚೆಗೆ, ಸುಮಾರು ಐದಾರು ವರ್ಷಗಳ ಹಿಂದೆಯೂ ಒಮ್ಮೆ ಸತ್ಯು ಬಹಳ ಗಂಭೀರ ಪರಿಸ್ಥಿತಿಯನ್ನು ಎದುರಿಸಿ, ನಮ್ಮೆಲ್ಲರ ಕಣ್ಣುಗಳನ್ನು ತೇವಗೊಳಿಸಿದ್ದರು. ಅದು ಹಾರ್ಟ್ ಮತ್ತು ಕಿಡ್ನಿಆಪರೇಷನ್‌ಗೆ ಏಕಕಾಲದಲ್ಲಿ ಒಳಗಾದ ಸಂದರ್ಭ. ಎರಡು ಗಂಭೀರ ಸ್ವರೂಪದ ಶಸ್ತ್ರ ಚಿಕಿತ್ಸೆಗಳನ್ನು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ನಡೆಸುವ ಅನಿವಾರ್ಯತೆ ಎದುರಾದಾಗ ಅವರ ವಯಸ್ಸಿನ ಮಿತಿಯನ್ನು ಅರಿತು ವೈದ್ಯರು ಕೂಡ ಅವರು ಮತ್ತೆ ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳುವ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ. ಆವರ ಆರೋಗ್ಯ- ಆಯುಷ್ಯಕ್ಕಾಗಿ ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸುವುದಷ್ಟೇ ಉಳಿದಿದ್ದ ಮಾರ್ಗ . ಆದರೆ ವೈದ್ಯಲೋಕವೇ ಚಕಿತಗೊಳ್ಳುವಂತೆ, ಆ ಅಪಾಯಕಾರಿ ಗಳಿಗೆಯನ್ನು ದಾಟಿ ಸತ್ಯು ಮತ್ತೆ ಲವಲವಿಕೆಯ ಬುಗ್ಗೆ ಯಂತಾದರು. ಅವರ ಆಸ್ಪತ್ರೆಯ ಖರ್ಚು-ವೆಚ್ಚವನ್ನು ಮುಖ್ಯಮಂತ್ರಿಗಳ ನಿಧಿಯಿಂದ ಭರಿಸಲಾಗುವುದು ಎಂದಾಗಲೂ, ಅದನ್ನು ಬಡವರಿಗೆ ನೀಡುವಂತೆ ಹೇಳಿ, ಆಸ್ಪತ್ರೆಯ ಎಲ್ಲ ಖರ್ಚು ವೆಚ್ಚವನ್ನು ಸ್ವತಃ ತಾವೇ ನೀಡಿದರು. ಕೆಲ ತಿಂಗಳಲ್ಲೇ ಮತ್ತೆ ಪುಟಿದೆದ್ದ ಸತ್ಯು ನೂರಾರು ವರ್ಷಗಳ ಇತಿಹಾಸವಿರುವ ಎಡಿಎ ಪ್ರೊಡಕ್ಷನ್‌ನಲ್ಲಿ ಬಕಾವಲಿಯ ಹೂ (ರಚನೆ : ಸುಧೀರ್ ಅತ್ತಾವರ್) ನಾಟಕವನ್ನು ನಿರ್ದೇಶಿಸಿ, ಬೆಂಗಳೂರು ಸೇರಿದಂತೆ ದೆಹಲಿ, ಮುಂಬಯಿ, ಗೌಹಾಟಿ, ಶಿಲ್ಲಾಂಗ್ ಮೊದಲಾದ ಕಡೆ ಪ್ರದರ್ಶಿಸಿದರು. ಶಿಲ್ಲಾಂಗ್‌ನಲ್ಲಿ ಗುಲೇ ಬಕಾವಲಿಯ ಪ್ರದರ್ಶನದ ಕೆಲ ಕ್ಷಣಗಳ ಮೊದಲು, ಸುಮಾರು ನಲವತ್ತು ವರ್ಷ ಆಪ್ತ ಗೆಳೆಯ ಡಿ. ಎಸ್. ಜೈನ್ ದೆಹಲಿಯಲ್ಲಿ ಮರಣ ಹೊಂದಿರುವ ವಿಷಯ ತಿಳಿದಾಗಲೂ, ವಿಚಲಿತಗೊಳ್ಳದೆ ಪ್ರದರ್ಶನದಲ್ಲಿ ಭಾಗವಹಿಸಿ, ನಾಟಕದ ಕುರಿತು, ಪ್ರಸ್ತುತ ರಂಗಭೂಮಿಯ ಕುರಿತು ಮಾರ್ಮಿಕ ಮಾತುಗಳನ್ನಾಡಿ, ಕನ್ನಡ ಬಾರದ ಪೂರ್ವೊತ್ತರ ರಾಜ್ಯದ ರಂಗಾಸಕ್ತರ ಮನ ಗೆದ್ದರು.
ಎನ್‌ಎಸ್‌ಡಿ ಯ ಮೂಲ ರೂಪ ಹಿಂದುಸ್ತಾನಿ ಥಿಯೇಟರ್ ಉಗಮ ಕಾಲದಿಂದ; ಆಗ್ರಾ ಬಜಾರ್ ನಾಟಕದಿಂದ ಹಿಡಿದು, ಇಪ್ಟಾ ಸೇರಿದಂತೆ ದೇಶ ವಿದೇಶಗಳ ಹಲವಾರು ಸಂಸ್ಥೆಗಳಿಗೆ ನೂರಾರು ನಾಟಕಗಳನ್ನು ನಿರ್ದೇಶಿಸುತ್ತಾ ,ರಂಗ ವಿನ್ಯಾಸ ಗೊಳಿಸುತ್ತಿದ್ದ ಈ ಸ್ಫುರದ್ರೂಪಿ ಅಜ್ಜ ಇದೀಗ ಓಟಿಟಿ ಫಾರ್ಮಗೆ ವೆಬ್ ಸೀರೀಸ್ ಮಾಡುವ ಸಿದ್ಧತೆಯಲ್ಲಿದ್ದಾರೆ.
ಜರ್ಮನಿಯ ವಿಶ್ವ ವಿಖ್ಯಾತ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ನ ಎರಡನೆಯ ಪತ್ನಿ ಹೆಲೆನ್ ವೀಝಲ್ ಜತೆ ರಂಗಭೂಮಿಗೆ ಸಂಬಂಧ ಪಟ್ಟಹಾಗೆ ಒಡನಾಟದಲ್ಲಿದ್ದ ಸತ್ಯು ದೇಶ ವಿದೇಶಗಳಲ್ಲಿ ಬ್ಯಾಲೇ, ನಾಟಕಗಳನ್ನು ರಂಗಕ್ಕಳವಡಿಸಿರುವವರು. ಲಂಡನಿನ ಶೇಕ್ಸ್ ಪಿಯರ್ ಮ್ಯೂಸಿಯಂನಲ್ಲಿ ಸತ್ಯು ವಿನ್ಯಾಸದ ನಾಟಕವೊಂದರ ಡಿಸೈನ್ ವಿರಾಜಮಾನವಾಗಿದೆ. ಇತ್ತೀಚೆಗೆ ದೇಶದ ಖ್ಯಾತ ನಟಿ ಮಾಧುರೀ ದೀಕ್ಷಿತ್ ಎಂ, ಎ್. ಹುಸೇನ್ ರ ಗಜಗಾಮಿನಿ ಸಿನಿಮಾದಲ್ಲಿ ನಟಿಸಿದ್ದ ಬಗ್ಗೆ ನನ್ನ ಜೊತೆ ಮಾತನಾಡುತ್ತಿದ್ದಾಗ ಸತ್ಯು ಅವರ ಗರಂ ಹವಾ ಪ್ರಸ್ತಾಪವಾಯಿತು. ನಾನು ಸತ್ಯು ಅವರ ಒಡನಾಟದಲ್ಲಿರುವುದನ್ನು ತಿಳಿಯುತ್ತಿದ್ದಂತೆಯೇ ಆ ಸುರ ಸುಂದರಿ, ತಕ್ಷಣ ಕ್ಯಾರಾವಾನ್‌ನಲ್ಲಿ ನನ್ನ ಪಕ್ಕದಲ್ಲಿ ಬಂದು ಕುಳಿತು, ಸತ್ಯುವಿನ ಸಿನಿಮಾದಲ್ಲಿ ನಟಿಸುವುದು ನನ್ನ ಕನಸು ಎಂಬ ಮಾತನ್ನು ಮುಗ್ಧವಾಗಿ ಹೇಳಿದಾಗ, ಅದು ಮಾಧುರಿ ದೀಕ್ಷಿತ್‌ಳಂತಹ ದೇಶದ ಅಪ್ಪಟ ಪ್ರತಿಭೆಯ ಮಹತ್ವಾಕಾಂಕ್ಷೆ ಎನ್ನುವುದನ್ನು ಕಂಡುಕೊಂಡೆ.ಸತ್ಯುಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
(ಪೂರಕ ಮಾಹಿತಿ: ವಿದ್ಯಾಧರ ಶೆಟ್ಟಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 1 =
Remember me
