ಕಾರವಾರ: ಮಾಜಾಳಿಯಿಂದ ಕುಂದಾಪುರವರೆಗೆ ರಾಷ್ಟ್ರೀಯ ಹೆದ್ದಾರಿ 66ನ್ನು ಚತುಷ್ಪಥವಾಗಿ ಮಾರ್ಪಡಿಸುತ್ತಿರುವ ಐಆರ್​ಬಿ ಕಂಪನಿ ಈಗ ಟೋಲ್ ಶುಲ್ಕ ವಸೂಲಿಗೆ ಮುಂದಾಗಿದ್ದು, ಪ್ರಯಾಣಿಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಫೆ.9ರ ರಾತ್ರಿ 9ಗಂಟೆಯಿಂದ ಜಿಲ್ಲೆಯ ಅಂಕೋಲಾದ ಬೇಲೆಕೇರಿ, ಹೊನ್ನಾವರದ ಹೊಳೆಗದ್ದೆ ಹಾಗೂ ಭಟ್ಕಳದ ಶಿರೂರು ಬಳಿ ಗೇಟ್​ಗಳಲ್ಲಿ ಶುಲ್ಕ ವಸೂಲಾತಿ ಪ್ರಾರಂಭವಾಗಲಿದೆ ಎಂದು ಐಆರ್​ಬಿ ಸಾರ್ವಜನಿಕ ಪ್ರಕಟಣೆ ತಿಳಿಸಿದೆ. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಐಆರ್​ಬಿ ಅಧಿಕಾರಿಗಳನ್ನು ಶುಕ್ರವಾರ ಕರೆದು ಈ ಸಂಬಂಧ ಸಭೆ ನಡೆಸಿದ್ದಾರೆ.
ಪ್ರಕಟಣೆಯಲ್ಲೇನಿದೆ..?: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್​ಬಿ ಟೋಲ್​ವೇ ಪ್ರೖೆವೇಟ್ ಲಿಮಿಟೆಡ್ ನಡುವೆ 2013ರಲ್ಲಿ ಆದ ಒಪ್ಪಂದದಂತೆ ರಾಷ್ಟ್ರೀಯ ಹೆದ್ದಾರಿ 66ರ ಮಾಜಾಳಿ (93.700ಕಿಮೀ)ನಿಂದ ಕುಂದಾಪುರ (283.300 ಕಿಮೀ) ವರೆಗೆ 141 ಕಿಮೀ ವ್ಯಾಪ್ತಿಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು 2042ನೇ ಇಸವಿಯವರೆಗೂ ನಡೆಯಲಿದೆ. ಬಳಿಕ ಶೇ. 40ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಐಆರ್​ಬಿ ತಿಳಿಸಿದೆ.
ವಾಣಿಜ್ಯಿಕವಲ್ಲದ ವಾಹನಗಳು ಟೋಲ್ ಪ್ಲ್ಲಾಜಾದಲ್ಲಿ 20 ಕಿಮೀ ಸಂಚರಿಸಲು ಮಾಸಿಕ 265 ರೂ. ಪಾಸ್ ನೀಡಲಾಗುತ್ತದೆ. 24 ಗಂಟೆಯೊಳಗೆ ವಾಪಸ್ ಬರುವ ಎಲ್ಲ ವಾಹನಗಳಿಗೆ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತದೆ. ತಿಂಗಳಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ಬಾರಿ ಏಕ ಮುಖವಾಗಿ ಸಂಚರಿಸುವ ವಾಹನಗಳಿಗೆ ಶೇ. 33ರಷ್ಟು ರಿಯಾಯಿತಿ ನೀಡಲಾಗುತ್ತದೆ. ರಾಷ್ಟ್ರೀಯ ಪರವಾನಗಿ ಹೊರತುಪಡಿಸಿ ಜಿಲ್ಲೆಯಲ್ಲಿ ನೋಂದಣಿಯಾದ ವಾಣಿಜ್ಯಿವಾಹನಗಳಿಗೆ ಶೇ. 33ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಶುಲ್ಕದ ವಿವರ:ಕಾರು, ಜೀಪು, ವ್ಯಾನ್ ಹಾಗೂ ಸಣ್ಣ ಮೋಟಾರ್ ವಾಹನಕ್ಕೆ ಒಂದು ದಿಕ್ಕಿನ ಸಂಚಾರಕ್ಕೆ ಬೇಲೆಕೇರಿ, ಶಿರೂರಿನಲ್ಲಿ ತಲಾ 75 ರೂ., ಹೊಳೆಗದ್ದೆಯಲ್ಲಿ 70 ರೂ., ಹೋಗಿ ಬರಲು ಬೇಲೆಕೇರಿಯಲ್ಲಿ 115 ರೂ., ಶಿರೂರು, ಹೊಳೆಗದ್ದೆಯಲ್ಲಿ ತಲಾ 110 ರೂ. ಮತ್ತು ಮಾಸಿಕ 50 ಬಾರಿ ಸಂಚರಿಸಲು ಬೇಲೆಕೇರಿಯಲ್ಲಿ 2535 ರೂ., ಹೊಳೆಗದ್ದೆಯಲ್ಲಿ 2390, ಶಿರೂರಿನಲ್ಲಿ 2440 ರೂ. ನಿಗದಿ ಮಾಡಲಾಗಿದೆ.
ಸಣ್ಣ ವಾಣಿಜ್ಯಿಕ ವಾಹನ, ಮಿನಿ ಬಸ್​ಗಳಿಗೆ ಒಮ್ಮೆಗೆ ಬೇಲೆಕೇರಿ, ಶಿರೂರಿನಲ್ಲಿ 120ರೂ., ಹೋಗಿ ಬರಲು ಬೇಲೆಕೇರಿಯಲ್ಲಿ 180, ಹೊಳೆಗದ್ದೆಯಲ್ಲಿ 170, ಶಿರೂರಿನಲ್ಲಿ 175 ರೂ. ಮತ್ತು ಮಾಸಿಕವಾಗಿ ಬೇಲೆಕೇರಿಯಲ್ಲಿ 3960, ಹೊಳೆಗದ್ದೆಯಲ್ಲಿ 3770, ಶಿರೂರಿನಲ್ಲಿ 3940 ರೂ. ನಿಗದಿ ಮಾಡಲಾಗಿದೆ.
ಎರಡು ಎಕ್ಸೆಲ್ ಬಸ್ ಅಥವಾ ಟ್ರಕ್​ಗೆ ಒಮ್ಮೆಗೆ ಬೇಲೆಕೇರಿಯಲ್ಲಿ 245, ಹೊಳೆಗದ್ದೆ 235, ಶಿರೂರಿನಲ್ಲಿ 250 ರೂ., ಹೋಗಿ ಬರಲು ಬೇಲೆಕೇರಿ 365, ಹೊಳೆಗದ್ದೆ 350, ಶಿರೂರಿನಲ್ಲಿ 370 ರೂ. ಮತ್ತು ಮಾಸಿಕ ಬೇಲೆಕೇರಿ 8130, ಹೊಳೆಗದ್ದೆ 7775, ಶಿರೂರು 8260 ರೂ. ನಿಗದಿ ಮಾಡಲಾಗಿದೆ.
ಮೂರು ಎಕ್ಸೆಲ್ ವಾಹನಗಳಿಗೆ ಒಮ್ಮೆಗೆ ಬೇಲೆಕೇರಿಯಲ್ಲಿ 265, ಹೊಳೆಗದ್ದೆಯಲ್ಲಿ 255, ಶಿರೂರಿನಲ್ಲಿ 270 ರೂ., ಹೋಗಿ ಬರಲು ಕ್ರಮವಾಗಿ ಬೇಲೆಕೇರಿಯಲ್ಲಿ 400, ಹೊಳೆಗದ್ದೆಯಲ್ಲಿ 385, ಶಿರೂರಿನಲ್ಲಿ 405 ರೂ. ಮತ್ತು ಮಾಸಿಕ ಕ್ರಮವಾಗಿ 8905, 8505, 9010 ರೂ. ನಿಗದಿ ಮಾಡಲಾಗಿದೆ.
ಅತಿ ಭಾರದ 4 ಅಥವಾ 6 ಎಕ್ಸೆಲ್ ವಾಹನಗಳಿಗೆ ಒಂದು ಕಡೆಗೆ ಬೇಲೆಕೇರಿಯಲ್ಲಿ 375, ಹೊಳೆಗದ್ದೆ 360, ಶಿರೂರಿನಲ್ಲಿ 390 ರೂ., ಹೋಗಿ ಬರಲು ಕ್ರಮವಾಗಿ 560, 540 ಹಾಗೂ 585 ರೂ. ಮತ್ತು ಮಾಸಿಕ ಕ್ರಮವಾಗಿ 12480, 11995, 12955 ರೂ. ದರ ನಿಗದಿ ಮಾಡಲಾಗಿದೆ.
ಬೃಹದಾಕಾರದ ವಾಹನಗಳಿಗೆ ಒಮ್ಮೆಗೆ ಬೇಲೆಕೇರಿ, ಶಿರೂರಿನಲ್ಲಿ ತಲಾ 475, ಹೊಳೆಗದ್ದೆಯಲ್ಲಿ 450 ರೂ., ಹೋಗಿ ಬರಲು ಬೇಲೆಕೇರಿಯಲ್ಲಿ 715, ಹೊಳೆಗದ್ದೆಯಲ್ಲಿ 680, ಶಿರೂರಿನಲ್ಲಿ 710 ರೂ. ಮತ್ತು ಮಾಸಿಕವಾಗಿ ಬೇಲೆಕೇರಿಯಲ್ಲಿ 15845, ಹೊಳೆಗದ್ದೆಯಲ್ಲಿ 15070 ಹಾಗೂ ಶಿರೂರಿನಲ್ಲಿ 15770 ರೂ. ದರ ನಿಗದಿ ಮಾಡಲಾಗಿದೆ.
ದಿಕ್ಕು ತಪ್ಪಿಸುವ ಐಆರ್​ಬಿ: ಶುಲ್ಕ ವಸೂಲಿ ಬಗ್ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಸಂಪೂರ್ಣ ಕಾಮಗಾರಿ ಮುಗಿಸದೇ ಟೋಲ್ ಸಂಗ್ರಹ ಪ್ರಾರಂಭಿಸಬಾರದು ಎಂದು ಬಿಜೆಪಿ ಸೇರಿ ಹಲವು ಸಂಘಟನೆಗಳು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ಐಆರ್​ಬಿ ಅಧಿಕಾರಿಗಳು ಜನರ, ಮಾಧ್ಯಮದವರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಜಯವಾಣಿ ಜತೆ ಮಾತನಾಡಿದ ಐಆರ್​ಬಿ ಮುಖ್ಯ ಮಹಾ ಪ್ರಬಂಧಕ ಮೋಹನದಾಸ್, ಎನ್​ಎಚ್​ಎಐದಿಂದ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಇದು ಪ್ರಾಯೋಗಿಕವಷ್ಟೇ’ ಎಂದಿದ್ದರು. ಆದರೆ, ಎನ್​ಎಚ್​ಎಐ ಮಂಗಳೂರು ಕಚೇರಿಯ ಅಧಿಕಾರಿಗಳು ಕಾಯಂ ಶುಲ್ಕ ವಸೂಲಾತಿ ಪ್ರಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟು 187 ಕಿಮೀ ರಸ್ತೆ ನಿರ್ಮಾಣ ಮಾಡಬೇಕಿದೆ. ಅದರಲ್ಲಿ 141 ಕಿಮೀ ಮಾತ್ರ ನಿರ್ವಣವಾಗಿದೆ. ಅದಕ್ಕೆ ಮಾತ್ರ ಶುಲ್ಕ ವಿಧಿಸಲಾಗುತ್ತಿದೆ. ಸಂಪೂರ್ಣ ಕಾಮಗಾರಿ ಮುಗಿದ ನಂತರ ಶುಲ್ಕ ಪರಿಷ್ಕರಣೆ ಮಾಡಲಾಗುವುದು ಎಂದಿದ್ದಾರೆ.
ಕಾರವಾರ, ಕುಮಟಾ ಸೇರಿ ಹಲವೆಡೆ ಕಾಮಗಾರಿ ಮುಗಿದಿಲ್ಲ. ಎಲ್ಲಿ ಕಾಮಗಾರಿ ಮುಗಿದಿದೆ ಎಂಬುದನ್ನು ಐಆರ್​ಬಿ ಸ್ಪಷ್ಟ ಮಾಡಬೇಕು. ಈಗಲೇ ಶುಲ್ಕ ವಸೂಲಿಗೆ ಬಿಜೆಪಿ ವಿರೋಧವಿದೆ. ಈ ಕುರಿತು ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಫೆ.8ರಂದು ಸಿಎಂ ಬರಲಿದ್ದು, ಅಲ್ಲಿ ರ್ಚಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ರಾಜೇಶ ನಾಯಕ, ಬಿಜೆಪಿ ಜಿಲ್ಲಾ ವಕ್ತಾರ
ಎನ್​ಎಚ್​ಎಐ ಹಾಗೂ ಐಆರ್​ಬಿ ನಡುವೆ ಆದ ಒಪ್ಪಂದದಲ್ಲಿ ಚತುಷ್ಪಥದ ಶೇ. 75 ರಷ್ಟು ಕಾಮಗಾರಿ ಮುಕ್ತಾಯವಾದ ನಂತರ ಟೋಲ್ ಸಂಗ್ರಹಕ್ಕೆ ಅವಕಾಶವಿದೆ.
ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twenty =
Remember me
