ಹೈದರಾಬಾದಿನ ಸಮೀಪದ ಗ್ರಾಮವೊಂದರ ನಿವಾಸಿಯಾಗಿದ್ದ ಇಂದಿರಾ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದಳು. ತಮ್ಮ ಏಕೈಕ ಪುತ್ರಿಯೆಂದು ಅವಳ ಮಾತಾಪಿತರು ಅವಳನ್ನು ಅಕ್ಕರೆಯಿಂದಲೇ ಬೆಳೆಸಿದ್ದರು. ಇಂದಿರಾ ಇದ್ದ ಗ್ರಾಮದಲ್ಲಿಯೇ ಅವಳ ಸೋದರತ್ತೆಯ ಮನೆಯೂ ಇತ್ತು. ಸೋದರತ್ತೆಯ ಮಗ ಶೇಖರ್ ಇಂದಿರಾಗಿಂತ ಕೇವಲ ಎರಡು ವರ್ಷ ದೊಡ್ಡವನು. ಪ್ರೈಮರಿ ಶಾಲೆಯಿಂದ ಹಿಡಿದು ಹೈಸ್ಕೂಲಿನವರೆಗೂ ಅವರಿಬ್ಬರೂ ಒಂದೇ ಶಾಲೆಯಲ್ಲಿಯೇ ಬೇರೆ ಬೇರೆ ತರಗತಿಗಳಲ್ಲಿ ಕಲಿಯುತ್ತಿದ್ದರು. ಚಿಕ್ಕಂದಿನಿಂದಲೇ ಅವರಿಬ್ಬರ ಕುಟುಂಬಗಳೂ ಮುಂದೆ ಅವರಿಬ್ಬರೂ ಲಗ್ನ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದು ಅದೇ ರೀತಿಯಲ್ಲಿಯೇ ಅವರೊಡನೆ ವ್ಯವಹರಿಸುತ್ತಿದ್ದರು.
ಇಂದಿರಾ ಚಂಚಲಚಿತ್ತೆಯಾಗಿದ್ದು ಅವಳಿಗೆ ಪಾಠಗಳಲ್ಲಿ ಆಸಕ್ತಿಯಿರಲಿಲ್ಲ. ಸಿನಿಮಾ, ಫ್ಯಾಷನ್, ನೃತ್ಯ ಪ್ರಿಯವಾಗಿದ್ದವು. ಆಕೆ ಹತ್ತನೆಯ ತರಗತಿಯಲ್ಲಿದ್ದಾಗ ಒಂದು ದಿನ ಅವಳ ಮಾತಾಪಿತರು ಅವಳನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಸಮಾರಂಭವೊಂದಕ್ಕಾಗಿ ಬೇರೆ ಊರಿಗೆ ಹೋದರು. ಆ ಸಮಯದಲ್ಲಿ ಅವಳ ಮನೆಗೆ ಅಕಸ್ಮಾತ್ತಾಗಿ ಶೇಖರ್ ಬಂದಾಗ ಆಕೆ ತನ್ನ ಮೊಬೈಲಿನಲ್ಲಿ ಶೇಖರಿಸಿದ್ದ ಕೆಲವು ಬ್ಲೂಫಿಲ್ಮ್ ತುಣುಕುಗಳನ್ನು ಅವನಿಗೆ ತೋರಿಸಿದಳು. ತಾವಿಬ್ಬರೂ ಅದರಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂದು ಪ್ರಚೋದಿಸಿದಳು. ಆರಂಭದಲ್ಲಿ ಶೇಖರ್ ಹಿಂಜರಿದ. ‘ಹೇಗಿದ್ದರೂ ನಾವು ಪತಿಪತ್ನಿಯರಾಗಬೇಕಲ್ಲ, ಅಂದಾಗುವುದು ಇಂದೇ ಆಗಲಿ’ ಎಂದಳು ಇಂದಿರಾ. ಶೇಖರ್ ಎಷ್ಟೇ ಬೇಡವೆಂದರೂ ಆಕೆಯೇ ಬಲವಂತ ಮಾಡಿದಳು. ಲೈಂಗಿಕ ಕ್ರಿಯೆ ನಡೆದೇ ಹೋಯಿತು.
ಇದಾದ ಕೆಲವೇ ವಾರಗಳ ನಂತರ ಶೇಖರ್ ಬೇರೆ ಊರಿಗೆ ಪದವಿ ಕಲಿಯಲು ಹೋದ. ಇಂದಿರಾ ತನ್ನ ವಿದ್ಯಾಭ್ಯಾಸ ಮೊಟಕುಗೊಳಿಸಿ ಹೈದರಾಬಾದಿನ ಒಂದು ಮಾಲ್​ನಲ್ಲಿದ್ದ ಅಂಗಡಿಗೆ ಸೇಲ್ಸ್​ಗರ್ಲ್ ಎಂದು ಕೆಲಸಕ್ಕೆ ಸೇರಿದಳು. ಮೂರು ವರ್ಷಗಳ ನಂತರ ಪದವಿ ಪಡೆದ ಶೇಖರ್ ತನ್ನ ಗ್ರಾಮಕ್ಕೆ ವಾಪಸ್ ಆದ. ಅವನಿಗೂ ಹೈದರಾಬಾದಿನ ಖಾಸಗಿ ಕಚೇರಿಯೊಂದರಲ್ಲಿ ಕಾರಕೂನನ ನೌಕರಿ ದೊರೆಯಿತು. ಆಗ ಶೇಖರ್​ನ ಮಾತಾಪಿತರು ಶೇಖರ್ ಮತ್ತು ಇಂದಿರಾರ ವಿವಾಹವನ್ನು ನಡೆಸಬೇಕೆಂದು ಇಂದಿರಾಳ ಕುಟುಂಬವನ್ನು ಕೋರಿದಾಗ ಇಂದಿರಾಳ ತಂದೆ ಇದಕ್ಕೊಪ್ಪದೆ, ‘ನಿಮ್ಮ ಕುಟುಂಬವು ಅಂತಸ್ತಿನಲ್ಲಿ ನಮಗಿಂತ ಕೀಳಾಗಿದ್ದು ನಾನು ನನ್ನ ಮಗಳನ್ನು ಶೇಖರ್​ನಿಗೆ ಕೊಡುವುದಿಲ್ಲ. ಅವಳಿಗೆ ಶ್ರೀಮಂತ ಕುಟುಂಬವೊಂದರಿಂದಲೇ ವರನನ್ನು ತರುತ್ತೇನೆ’ ಎಂದ. ಈ ತೀರ್ವನದಿಂದ ಎರಡೂ ಕುಟುಂಬಗಳ ನಡುವೆ ಮನಸ್ತಾಪವುಂಟಾಯಿತು. ಈ ಪರಿಸ್ಥಿತಿಯ ಕಾರಣ ಶೇಖರ್ ಮತ್ತು ಇಂದಿರಾ ವಿಚಲಿತರಾದರು. ಮುಂದೇನಾಗುವುದೆಂದು ಕಾದು ನೋಡಲು ನಿರ್ಧರಿಸಿ ತಮ್ಮ ಸಂಬಂಧವನ್ನು ಗುಟ್ಟಾಗಿಯೇ ಮುಂದುವರೆಸಿದರು.
ಇಂದಿರಾಗೆ 24 ವರ್ಷ ವಯಸ್ಸಾದಾಗ ಅವಳ ಲಗ್ನವನ್ನು ಸಿರಿವಂತ ಕುಟುಂಬವೊಂದಕ್ಕೆ ಸೇರಿದ್ದ ಪ್ರಕಾಶ್ ಎನ್ನುವವನೊಡನೆ ಮಾಡಲು ಅವಳ ತಂದೆ ನಿರ್ಧರಿಸಿದ. ತನ್ನ ಮಾತಾಪಿತರಿಗೆ ಏಕೈಕ ಪುತ್ರನಾಗಿದ್ದ ಪ್ರಕಾಶ್ ಸರ್ಕಾರಿ ಕಛೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದುರದೃಷ್ಟವೆಂದರೆ ಪ್ರಕಾಶನ ಮಾತಾಪಿತರಿಬ್ಬರೂ 6 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಅವನ ಮನೆಯಲ್ಲಿ 72 ವರ್ಷ ವಯಸ್ಸಿನ ವೃದ್ಧ ಅಜ್ಜಿ ಮಾತ್ರ ಇದ್ದು ಅವಳೇ ಪ್ರಕಾಶನಿಗೆ ಅಡುಗೆ ಮಾಡಿ ಹಾಕುತ್ತಿದ್ದಳು. ಸಾಧು ಸ್ವಭಾವದವನಾಗಿದ್ದ ಪ್ರಕಾಶ್ ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನಿರುತ್ತಿದ್ದ.
ಅದ್ಧೂರಿಯಾಗಿ ಇಂದಿರಾಳ ಮದುವೆ ನಡೆಯಿತು. ಮದುವೆಯಾದ ರಾತ್ರಿ ತನಗೆ ತೀವ್ರ ತಲೆನೋವೆಂದು ಹೇಳಿ ಪ್ರಕಾಶ್​ನೊಡನೆ ಲೈಂಗಿಕ ಕ್ರಿಯೆಗೆ ಇಂದಿರಾ ಒಪ್ಪಲಿಲ್ಲ. ತನಗೆ ಬೇಸರವಾದರೂ ಅದನ್ನು ತೋರಗೊಡದ ಪ್ರಕಾಶ್ ಅವಳ ಕೋರಿಕೆಗೆ ಸಮ್ಮತಿಸಿದ. ಮುಂದಿನ ಕೆಲವು ದಿನಗಳ ನಂತರವೂ ಯಾವುದಾದರೊಂದು ಸಬೂಬನ್ನು ಹೇಳುತ್ತಾ ಇಂದಿರಾ ತನ್ನ ಪತಿಯಿಂದ ದೂರವೇ ಇದ್ದಳು. ಅವಳ ಈ ವರ್ತನೆ ಪ್ರಕಾಶ್​ಗೆ ಅಚ್ಚರಿಯನ್ನು ತರಿಸಿತು. ಆತ ಕಾರಣಕೇಳಲು ಆರಂಭಿಸಿದಾಗ ಇಂದಿರಾ ಕ್ಷುಲ್ಲಕ ಕಾರಣವನ್ನಿತ್ತು ತನ್ನ ತವರಿಗೆ ಬಂದುಬಿಟ್ಟಳು. ಅವಳ ಭಯವೇನಿತ್ತೆಂದರೆ ತನ್ನ ಪತಿಗೆ ತಾನು ಕುಮಾರಿಯಲ್ಲ ಎಂದು ಗೊತ್ತಾದರೆ ಆತ ವಿವಾಹ ವಿಚ್ಛೇದನಕ್ಕೆ ಮುಂದಾಗಬಹುದು ಎನ್ನುವುದು.
ಮುಂದಿನ ಆರೇಳು ತಿಂಗಳ ಕಾಲ ಇಂದಿರಾ ಒಂದಲ್ಲ ಒಂದು ಕಾರಣವನ್ನು ಹೇಳಿಕೊಂಡು ಗಂಡನ ಮನೆಗೆ ಹೋಗಲೇ ಇಲ್ಲ. ಏತನ್ಮಧ್ಯೆ ಆಕೆ ಗುಟ್ಟಾಗಿ ಶೇಖರ್ ಜತೆಗೆ ತನ್ನ ಲೈಂಗಿಕ ಸಂಬಂಧವನ್ನು ಮುಂದುವರೆಸಿಯೇ ಇದ್ದಳು. ಹೇಗಾದರೂ ಮಾಡಿ ಪ್ರಕಾಶ್​ನನ್ನು ಕೊಂದು ತಾವಿಬ್ಬರೂ ಲಗ್ನವಾಗಬೇಕೆಂಬ ಯೋಜನೆಯೊಂದನ್ನು ಅವರಿಬ್ಬರೂ ಹಾಕಲಾರಂಭಿಸಿದರು.
ಇಷ್ಟರಲ್ಲೊಂದು ದಿನ ಪ್ರಕಾಶ್​ನ 31ನೇ ವರ್ಷದ ಹುಟ್ಟುಹಬ್ಬ ಬಂದಿತು. ಇದನ್ನು ತನ್ನ ಮಡದಿಯೊಡನೆ ಆಚರಿಸಬೇಕೆಂದು ಇಚ್ಛಿಸಿದ ಆತ ಇಂದಿರಾಳ ಮನೆಗೆ ಬಂದು ತನ್ನ ಮನೆಗೆ ಇಂದಾದರೂ ಮರಳಲೇಬೇಕು ಎಂದು ಒತ್ತಾಯಿಸಿದ. ಇಂದಿರಾಳ ಮಾತಾಪಿತರೂ ಅವಳನ್ನು ತನ್ನ ಗಂಡನ ಮನೆಗೆ ಮರಳಲು ಬಲವಂತ ಮಾಡಿದರು. ಅನಿವಾರ್ಯವಾಗಿ ಇಂದಿರಾ ಗಂಡನ ಮನೆಗೆ ಹೋದಳು. ಆ ರಾತ್ರಿ ಹೈದರಾಬಾದಿನ ಹೆಸರಾಂತ ಹೊಟೇಲ್ ಒಂದರಲ್ಲಿ ಅದ್ಧೂರಿಯಾಗಿ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಡನೆ ಪ್ರಕಾಶ್ ಆಚರಿಸಿದ. ಪಾರ್ಟಿಯಲ್ಲಿ ಎಲ್ಲರೂ ಮನಬಂದಂತೆ ಮದ್ಯಪಾನ ಮಾಡಿದರು.
ರಾತ್ರಿ ಒಂದು ಗಂಟೆಗೆ ಗಂಡ ಹೆಂಡಿರಿಬ್ಬರೂ ಮನೆಗೆ ಮರಳಿದಾಗ ತಾನು ಮುಟ್ಟಾಗಿರುವೆನೆಂದು ಹೇಳಿದ ಇಂದಿರಾ ಗಂಡನ ಬೆಡ್​ರೂಮಿಗೆ ಹೋಗದೆ ಅಜ್ಜಿಯ ರೂಮಿನಲ್ಲಿ ಮಲಗಿದಳು. ಪ್ರಕಾಶ್ ಚೆನ್ನಾಗಿ ಮದ್ಯಪಾನ ಮಾಡಿದ್ದರಿಂದ ಅವಳೊಂದಿಗೆ ತಕರಾರು ತೆಗೆಯದೆ ತನ್ನ ರೂಮಿಗೆ ಹೋಗಿ ಮಂಚದ ಮೇಲೆ ಉಟ್ಟ ಬಟ್ಟೆಯಲ್ಲೇ ಮಲಗಿ ಬೇಗನೇ ನಿದ್ದೆಗೆ ಜಾರಿದ. ಅವನ ಅಜ್ಜಿಯೂ ನಿದ್ರೆಗೆ ಜಾರಿದ ನಂತರ ಇಂದಿರಾ ಮನೆಯ ಹೊರಗೆ ಹೋಗಿ ಶೇಖರ್​ಗೆ ಫೋನ್ ಮಾಡಿದಳು. ತನ್ನ ಗಂಡನನ್ನು ಕೊಲ್ಲಲು ಪ್ರಶಸ್ತ ಸಮಯ ಬಂದಿದ್ದು ಕೂಡಲೇ ಬರಲು ತಿಳಿಸಿದಳು. ಆನಂತರ ಮನೆಯ ಮುಂಬಾಗಿಲ ಚಿಲಕವನ್ನು ತೆಗೆದು ತಾನು ಪ್ರಕಾಶ್​ನ ಅಜ್ಜಿಯ ಪಕ್ಕ ಬಂದು ಮಲಗಿಬಿಟ್ಟಳು.
ರಾತ್ರಿ ಸುಮಾರು ಮೂರು ಗಂಟೆಗೆ ಶೇಖರ್ ತನ್ನ ತಮ್ಮ ಸುಂದರ್ ಮತ್ತು ಇತರ ನಾಲ್ಕು ಜನರೊಡನೆ ಕಾರಿನಲ್ಲಿ ಪ್ರಕಾಶ್​ನ ಮನೆಗೆ ಬಂದ. ಅವರೆಲ್ಲರೂ ತೆರೆದಿದ್ದ ಮುಂಬಾಗಿಲಿನ ಮೂಲಕ ಮನೆಯೊಳಗೆ ಬಂದು ಪ್ರಕಾಶ್​ನ ಬೆಡ್​ರೂಮಿಗೆ ಹೋದರು. ಗಾಢನಿದ್ರೆಯಲ್ಲಿದ್ದ ಪ್ರಕಾಶ್​ನನ್ನು ಅನಾಮತ್ತಾಗಿ ಎತ್ತಿಕೊಂಡು ತಮ್ಮ ಕಾರಿನಲ್ಲಿ ಹಾಕಿಕೊಂಡರು. ಹೈದರಾಬಾದಿನ ಹೊರವಲಯದ ಒಂದು ಗ್ರಾಮದ ಬಳಿಗೆ ಬಂದು ಅಲ್ಲಿದ್ದ ಕೆರೆಯೊಂದರ ಬಳಿ ಕಾರನ್ನು ನಿಲ್ಲಿಸಿದರು. ಪ್ರಕಾಶ್​ನ ಪ್ಯಾಂಟಿನ ಜೇಬಿನಲ್ಲಿ 100 ಗ್ರಾಂ ತೂಕದ ಗಾಂಜಾವನ್ನಿಟ್ಟು ಅವನನ್ನು ಕೆರೆಗೆ ಎಸೆದುಬಿಟ್ಟರು. ಈಜು ಬಾರದ ಪ್ರಕಾಶ್ ಕೆಲನಿಮಿಷ ವಿಲವಿಲ ಒದ್ದಾಡಿ ನೀರಿನಲ್ಲಿ ಮುಳುಗಿ ಸತ್ತು ಹೋದ.
ಮಾರನೆಯ ಬೆಳಗ್ಗೆ ಎದ್ದ ಇಂದಿರಾ ತನ್ನ ಗಂಡ ಮನೆಯಲ್ಲಿ ಕಾಣುತ್ತಿಲ್ಲ ಎಂದು ಎಲ್ಲೆಡೆ ಹುಡುಕಾಡಿದಳು. ಅಕ್ಕಪಕ್ಕದವರಿಗೆ ಸುದ್ದಿ ಮುಟ್ಟಿಸಿದಳು. ಅವರೆಲ್ಲರೆದುರಿಗೇ ಪ್ರಕಾಶ್​ನ ಮೊಬೈಲ್ ಫೋನ್​ಗೆ ಕರೆ ಮಾಡಿದಳು. ಅದು ಅವನ ಹಾಸಿಗೆಯ ಮೇಲೆಯೇ ಬಿದ್ದಿತ್ತು. ನಂತರ ನೆರೆಹೊರೆಯವರೊಡನೆ ಪೊಲೀಸ್ ಠಾಣೆಗೆ ಹೋಗಿ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ದೂರಿದಳು. ಪ್ರಕಾಶ್​ನ ಹುಟ್ಟು ಹಬ್ಬದ ಆಚರಣೆ ಮಾಡಿಕೊಂಡು ನಾವಿಬ್ಬರೂ ರಾತ್ರಿ ಒಂದು ಗಂಟೆಗೆ ಮನೆಗೆ ಬಂದೆವು. ನಾನು ಕಾರಣಾಂತರದಿಂದ ಬೆಡ್ ರೂಂನಲ್ಲಿ ಮಲಗದೇ ಅಜ್ಜಿಯ ಪಕ್ಕದಲ್ಲಿಯೇ ಮಲಗಿದ್ದೆ. ಬೆಳಗ್ಗೆ ಎದ್ದಾಗ ಮನೆಯ ಮುಂಬಾಗಿಲು ತೆರೆದಿತ್ತು. ಪ್ರಕಾಶ್ ಎಲ್ಲಿಯೋ ಹೋಗಿರಬಹುದೆಂದು ಊಹಿಸಿದೆ. ಅವನಿಗಾಗಿ ಕಾದು ಅವನು ವಾಪಸಾಗದಿದ್ದಾಗ ಇಲ್ಲಿಗೆ ಬಂದು ದೂರನ್ನು ನೀಡುತ್ತಿರುವೆ ಎಂದಳು. ಹೈದರಾಬಾದಿನ ಭವಾನಿನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಯಿತು. ಎರಡು ದಿನಗಳ ನಂತರ ಪ್ರಕಾಶ್​ನ ಶವವು ಕೆರೆಯ ಮೇಲಕ್ಕೆ ತೇಲಿ ಬಂದಿತು. ಸ್ಥಳೀಯ ಪೊಲೀಸರಿಗೆ ಸುದ್ದಿ ಹೋಯಿತು. ಶವವನ್ನು ಅವರು ನೀರಿನಿಂದ ಹೊರಕ್ಕೆ ತೆಗೆಸಿ ಪಂಚನಾಮೆ ಮಾಡಿದರು. ಶವದ ಎರಡೂ ಕೈಗಳನ್ನು ಕರವಸ್ತ್ರದಿಂದ ಕಟ್ಟಲಾಗಿತ್ತು. ಆಗಲೇ ಪೊಲೀಸರಿಗೆ ಇದು ಕೊಲೆ ಕೇಸೆಂದು ಅನುಮಾನ ಬಂತು. ಪ್ಯಾಂಟಿನ ಜೇಬಿನಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ಇತ್ತು. ಶವದ ಫೋಟೋಗಳನ್ನು ವಾಟ್ಸಾಪ್ ಗುಂಪುಗಳ ಮೂಲಕ ಹೈದರಾಬಾದ್ ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ರವಾನಿಸಲಾಯಿತು. ಶವವು ಪ್ರಕಾಶ್​ನದ್ದು ಎಂದು ಗುರುತಿಸಿದ ನಂತರ ಭವಾನಿನಗರ ಪೊಲೀಸ್ ಠಾಣೆಯಲ್ಲಿನ ನಾಪತ್ತೆ ಪ್ರಕರಣವು ಕೊಲೆ ಪ್ರಕರಣವಾಗಿ ಬದಲಾಯಿತು. ಮುಂದಿನ ತನಿಖೆಯಲ್ಲಿ ಪೊಲೀಸರು ಪ್ರಕಾಶ್​ನ ಮನೆಯ ಮುಂದಿದ್ದ ಸಿಸಿಟಿವಿ ಕ್ಯಾಮರಾ ಸೆರೆಹಿಡಿದಿದ್ದ ದೃಶ್ಯಗಳನ್ನು ಅವಲೋಕಿಸಿದರು. ಅದರಲ್ಲಿ ಕಾರಿನಲ್ಲಿ ಕೆಲವರು ಪ್ರಕಾಶ್​ನನ್ನು ಅನಾಮತ್ತಾಗಿ ಹೊತ್ತುಕೊಂಡ ಹೋದ ದೃಶ್ಯ ಕಂಡಿತು. ಕಾರಿನ ನಂಬರ್ ಪ್ಲೇಟ್ ಮೂಲಕ ಅದರ ಮಾಲೀಕನನ್ನು ಪತ್ತೆ ಮಾಡಿದಾಗ ನಡೆದ ಕುಕೃತ್ಯ ಬಯಲಾಯಿತು. ಎಲ್ಲಾ ಆರೋಪಿಗಳನ್ನು ಬಂಧಿಸಿದಾಗ ಇಂದಿರಾ ಹಾಗೂ ಶೇಖರ್ ನಡೆಸಿದ ಒಳಸಂಚು ಬಯಲಿಗೆ ಬಂತು. ಇಂದಿರಾ ಸೇರಿದಂತೆ ಎಲ್ಲ ಆರೋಪಿಗಳನ್ನೂ ಬಂಧಿಸಲಾಯಿತು. ಈ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ.
ತಾನು ಶೇಖರ್​ನನ್ನು ಪ್ರೀತಿಸಿ ಅವನೊಡನೆ ಲೈಂಗಿಕ ಸಂಬಂಧ ಬೆಳೆಸಿದ್ದಾಗ, ಇಂದಿರಾ ಪ್ರಕಾಶ್​ನ ಜತೆ ಮದುವೆಗೆ ಒಪ್ಪದೆ ತಾನು ಶೇಖರ್​ನನ್ನೇ ಮದುವೆ ಮಾಡಿಕೊಳ್ಳುವುದಾಗಿ ಹಠ ಹಿಡಿಯಬೇಕಾಗಿತ್ತು. ಒಂದು ವೇಳೆ ಪ್ರಕಾಶ್​ನ ಜತೆಗೆ ಲಗ್ನವಾಗಲು ತನ್ನ ಮಾತಾಪಿತರು ಬಲವಂತ ಮಾಡಿದ್ದರೆ ಆಕೆ ಲಗ್ನಕ್ಕೆ ಮುಂಚೆಯೇ ಪ್ರಕಾಶ್​ಗೆ ನಡೆದಿದ್ದ ವಿಷಯವನ್ನು ಮುಚ್ಚುಮರೆಯಿಲ್ಲದೆ ತಿಳಿಸಬೇಕಾಗಿತ್ತು. ಹೀಗೆ ಮಾಡದೆ ಅವನ ಆಸ್ತಿಯ ವಾರಸುದಾರಳಾಗುವ ದುರಾಸೆಯಿಂದ ಅವನ ಕೊಲೆಯ ಸಂಚು ಮಾಡಿದ ಇಂದಿರಾ ತೀವ್ರ ಶಿಕ್ಷೆಗೆ ಅರ್ಹಳಲ್ಲವೇ? ಇಂತಹ ಸ್ತ್ರೀಯರ ಬಗ್ಗೆ ಸರ್ವಜ್ಞ ಹೀಗೆಂದಿದ್ದಾನೆ- ಹೆಂಚು ಮಣ್ಣಲಿ ಹುಟ್ಟಿ, ವಂಚನೆಯಲಿಪ್ಪಂತೆ ಸಂಚು ಬೇರವಳ ಮನ ಬೇರೆ ಹೆಣ್ಣೆಂಬ ಹೆಂಚ ನಂಬದಿರು ಸರ್ವಜ್ಞ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ಅನಂತ್-ರಾಧಿಕಾ ಮದುವೆಯಲ್ಲಿ ಪ್ರಧಾನಿ ಭಾಗಿ; ನವದಂಪತಿಗೆ ಪ್ರಧಾನಿ ಮೋದಿ ಶುಭಾಶೀರ್ವಾದ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five + 5 =
Remember me
