ಜಗನ್ನಾಥ್ ಕಾಳೇನಹಳ್ಳಿತುಮಕೂರು:ಸದನಶೂರ, ನಿಷ್ಠುರ ನಡೆ ಗುಣದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿ ಚುನಾವಣಾ ಕಣ ರಂಗೇರಿದೆ. ಶಕ್ತಿಸೌಧದಲ್ಲಿ ಆರ್ಭಟಿಸುವ ಸದನಶೂರನನ್ನು ಈ ಬಾರಿ ಅಖಾಡದಲ್ಲಿ ಚಿತ್ ಮಾಡಲು ಶತ್ರು ಪಡೆ ಕಸರತ್ತು ನಡೆಸಿದೆ. ಕೈಗೆ ಭದ್ರ ನೆಲೆ ಇಲ್ಲದಿದ್ದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸ್ಪರ್ಧೆಗಿಳಿಸಲು ಜಿಲ್ಲಾ ಕಾಂಗ್ರೆಸ್ಸಿಗರು ಆಹ್ವಾನ ನೀಡಿರುವುದು ವಿಶೇಷ ಎನಿಸಿದೆ.
1985ರ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸ ಇಲ್ಲ. ಪ್ರತೀ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆ, ಸಮರ್ಥ ಅಭ್ಯರ್ಥಿ ಸಿಗದಿರುವುದರಿಂದ ಅಸ್ತಿತ್ವ ಕಳೆದುಕೊಳ್ಳುತ್ತಾ ಬಂದಿದೆ. ಹಾಗಾಗಿ ಕ್ಷೇತ್ರವು ಮಾಧುಸ್ವಾಮಿ-ಜೆಡಿಎಸ್​ನ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ನಡುವಿನ ಹಣಾಹಣಿ ಕಣವಾಗಿದೆ.
ಮಾಧುಸ್ವಾಮಿಗೆ ಈ ಬಾರಿ ಗೆಲುವಿನ ಹಾದಿಯಲ್ಲಿ ಸಾಕಷ್ಟು ಹರ್ಡಲ್ಸ್​ಗಳು ಎದುರಾಗಿವೆ. ವಿರೋಧ ಪಕ್ಷಗಳಲ್ಲದೆ, ಸ್ವಪಕ್ಷದಲ್ಲೂ ರಾಜಕೀಯ ಶತ್ರುಗಳ ಕಾಟ ವಿಪರೀತ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸೋಲುಣಿಸಲು ‘ಹೇಮೆ’ ಬ್ರಹ್ಮಾಸ್ತ್ರ ಬಳಸಿದ್ದ ಮಾಧುಸ್ವಾಮಿಗೆ ಈ ಬಾರಿ ಹೇಮೆ ನೀರು ಕುಡಿಸಲು ಎಚ್.ಡಿ.ಕುಮಾರಸ್ವಾಮಿ ಟೊಂಕಕಟ್ಟಿ ನಿಂತಿದ್ದಾರೆ. ಕಾಂಗ್ರೆಸ್​ನಲ್ಲೂ ಜೆಸಿಎಂ ಹಣಿಯಲು ಒಳಗೊಳಗೆ ರಾಜಕೀಯ, ಜಾತಿ ಲೆಕ್ಕಾಚಾರ ನಡೆದಿವೆ.
ಕೆಎಸ್​ಕೆ ತೊಡರುಗಾಲು: ಕ್ಷೇತ್ರ ಮರುವಿಂಗಡಣೆ ಬಳಿಕ ಕಳ್ಳಂಬೆಳ್ಳ ಕ್ಷೇತ್ರ ಪ್ರತಿನಿಧಿಸಿದ್ದ ಕೆ.ಎಸ್. ಕಿರಣ್​ಕುಮಾರ್ ಮತ್ತೆ ಚಿಕ್ಕನಾಯಕನಹಳ್ಳಿ ಕ್ಷೇತ್ರದತ್ತ ಮುಖ ಮಾಡಿದರು. 2008, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡ ಕೆಎಸ್​ಕೆ ಬದಲಿಗೆ 2018ರಲ್ಲಿ ಬಿಎಸ್​ವೈ ಕೃಪಾಕಟಾಕ್ಷದಿಂದ ಮಾಧುಸ್ವಾಮಿ ಟಿಕೆಟ್ ಗಿಟ್ಟಿಸಿಕೊಂಡರು. ಅಲ್ಲಿಂದ ಬಿಜೆಪಿಯಲ್ಲಿ ಮೂಲ-ವಲಸಿಗ ಒಡಕು ಚಿಗುರೊಡೆದು ಈಗ ಹೆಮ್ಮರವಾಗಿದೆ. ಈ ಬಾರಿ ಬಿಜೆಪಿ ಟಿಕೆಟ್​ಗೆ ಪಟ್ಟು ಹಿಡಿದಿರುವ ಕಿರಣ್ ಕುಮಾರ್ ಪಕ್ಷಕ್ಕೂ, ಜೆಸಿಎಂಗೂ ತಲೆನೋವಾಗಿದ್ದಾರೆ. ಟಿಕೆಟ್ ತಪ್ಪಿದ್ದೇ ಆದಲ್ಲಿ ‘ಕೈ’ ಹಿಡಿಯುವ ಸಾಧ್ಯತೆಗಳಿದ್ದು, ಮಾಧುಸ್ವಾಮಿ ಓಟಕ್ಕೆ ಲಗಾಮು ಹಾಕುವುದು ನಿಶ್ಚಿತ.
ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಪಡೆದ 45 ಸಾವಿರ ಮತಗಳು ಕಾಂಗ್ರೆಸ್ಸಿಗೆ ದೊಡ್ಡ ಶಕ್ತಿ ತುಂಬಿತ್ತು. ಜೆಡಿಎಸ್ ಮತಬುಟ್ಟಿಗೆ ಕೈಹಾಕಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟು ಸುರೇಶ್​ಬಾಬು ‘ಹ್ಯಾಟ್ರಿಕ್’ ಗೆಲುವಿನ ಕನಸು ಕೈಗೂಡಿರಲಿಲ್ಲ. ಕೈ ಪ್ರದರ್ಶನವು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿತ್ತಾದರೂ ಚುನಾವಣೆ ಬಳಿಕ ಕ್ಷೇತ್ರದತ್ತ ಸಂತೋಷ್ ಮುಖಮಾಡದ ಕಾರಣ ಪಕ್ಷ ಮತ್ತೆ ಅನಾಥವಾಗಿದೆ. ಈ ಬಾರಿ ಮತ್ತೆ ಹೊಸಮುಖಕ್ಕೆ ಕಾಂಗ್ರೆಸ್ ಶೋಧ ನಡೆಸುವಂತಾಗಿದೆ.
2008ರಲ್ಲಿ ಸ್ಪರ್ಧಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಾಸಲು ಸತೀಶ್ ಟಿಕೆಟ್ ಕೈತಪ್ಪಿದ್ದರಿಂದ ರಾಜಕೀಯ ಭವಿಷ್ಯಕ್ಕೆ ನೆರೆಯ ಶಿರಾ ಕ್ಷೇತ್ರಕ್ಕೆ ವಲಸೆ ಹೋಗಿದ್ದಾರಲ್ಲದೆ, ಟಿಕೆಟ್ ಕೈತಪ್ಪಿಸಿದ್ದ ಟಿಬಿಜೆ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಕ್ಷೇತ್ರದಲ್ಲಿ ಹಾದು ಹೋಗಿದ್ದು, ಸ್ಪರ್ಧಾಕಾಂಕ್ಷಿಗಳು ಹೆಚ್ಚಲು ಕಾರಣವಾಗಿದೆ. ಮಾಜಿ ಶಾಸಕ ಬಿ.ಲಕ್ಕಪ್ಪ, ಡಾ.ಪರಮೇಶ್ವರಪ್ಪ, ಡಾ.ವಿಜಯ ರಾಘವೇಂದ್ರ, ಸಿ.ಎಂ.ಧನಂಜಯ್, ವೈ.ಸಿ.ಸಿದ್ದರಾಮಯ್ಯ, ಜಗದೀಶ್ ‘ಕೈ’ ಟಿಕೆಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದೆಯಾದರೂ ಆ ಸಮುದಾಯದ ಜೆಸಿಎಂಗೆ ಗೆಲುವಿನ ದಡ ಮುಟ್ಟಲು ಸಣ್ಣ-ಪುಟ್ಟ ಸಮುದಾಯಗಳ ಮತಗಳ ಜತೆಗೆ ಜೆಡಿಎಸ್ ಮತಬುಟ್ಟಿಗೆ ಕೈಹಾಕಬಲ್ಲ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಮುಖ್ಯವಾಗುತ್ತದೆ. ಅಹಿಂದ ಮತಗಳನ್ನು ನೆಚ್ಚಿಕೊಂಡಿರುವ ಕುರುಬ ಸಮುದಾಯದ ಸುರೇಶ್​ಬಾಬುಗೆ ಕ್ಷೇತ್ರದ ಜನರ ಜತೆಗಿನ ಆತ್ಮೀಯತೆ ಪ್ಲಸ್ ಪಾಯಿಂಟ್.

ಹೆಗಡೆ ಗರಡಿಯ ಜೆಸಿಎಂ
ರಾಮಕೃಷ್ಣ ಹೆಗಡೆ ಗರಡಿಯಲ್ಲಿ ಪಳಗಿ 1989ರಲ್ಲಿ ಜನತಾದಳ ಮೂಲಕ ಶಕ್ತಿಸೌಧ ಪ್ರವೇಶಿಸಿದ್ದ ಮಾಧುಸ್ವಾಮಿ, 1997ರ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ರಾಜಕೀಯ ಪ್ರಭಾವ ಹೆಚ್ಚಿಸಿಕೊಂಡಿದ್ದರು. 2004ರಲ್ಲಿ ಸಂಯುಕ್ತ ಜನತಾದಳದ ಮೂಲಕ 3ನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2013ರಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜತೆ ಕೆಜೆಪಿ ಸೇರಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಮೈತ್ರಿ ಸರ್ಕಾರದ ಪತನ, ಬಿಎಸ್​ವೈ ನೇತೃತ್ವದ ಸರ್ಕಾರ ಅಸ್ತಿತ್ವದ ಬಳಿಕ ಜೆಸಿಎಂ ‘ಸದನಶೂರ’ನೆಂಬುದನ್ನು ನಿರೂಪಿಸಿದರಲ್ಲದೆ, ಪ್ರಭಾವಿ ನಾಯಕನೆನಿಸಿದ್ದಾರೆ.
+ ಉತ್ತಮ ನಾಯಕತ್ವ, ಕ್ಷೇತ್ರಕ್ಕೆ ಅನುದಾನದ ಹೊಳೆ
+ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗುವ ವಿಶ್ವಾಸ
+ ಚುನಾವಣೆಗೆ ಸಕಲ ಸಂಪನ್ಮೂಲದ ಬಲ
– ಸಾಮಾನ್ಯ ಕಾರ್ಯಕರ್ತರ ಕೆಲಸವಾಗಿಲ್ಲ
– ಜನರೊಂದಿಗೆ ಬೆರೆಯದ ವರ್ತನೆ
– ಕ್ಷೇತ್ರದಲ್ಲಿ ಸಂಘಟನೆ
+ ಅಹಿಂದ ಕ್ಷೇತ್ರದಲ್ಲಿ ಒಕ್ಕಲಿಗರ ಬಲ
+ ಸಾಮಾನ್ಯರ ಜತೆ ಬೆರೆಯುವ ಗುಣ
+ ಕ್ಷೇತ್ರದಲಿನ ಕಾರ್ಯಕರ್ತರ ದೊಡ್ಡಪಡೆ
– ಮಾಧುಸ್ವಾಮಿ ಮುಂದೆ ಮುಂಕಾದ ನಾಯಕತ್ವ ಗುಣ
– ಚುನಾವಣೆಗೆ ಸಂಪನ್ಮೂಲದ ಕೊರತೆ
– ಚುನಾವಣೆ ಸಮಯಕ್ಕೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು

ಜೆಸಿ ಪುರದಲ್ಲೇ ವಾಸಬಿಎಸ್​ವೈ ಹಾಗೂ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿ ಖಾತೆಗಳನ್ನು ಪಡೆದ ಮಾಧುಸ್ವಾಮಿ ಎಂದೂ ರಾಜಧಾನಿಯಲ್ಲಿ ಬೀಡುಬಿಟ್ಟವರಲ್ಲ. ಅನಿವಾರ್ಯ ಸಂದರ್ಭದಲ್ಲಷ್ಟೇ ವಾಸ್ತವ್ಯ ಮಾಡುವ ಜೆಸಿಎಂ ಸಂಜೆ ಆಗುತ್ತಿದ್ದಂತೆ ಹುಟ್ಟೂರು ಜಯಚಾಮರಾಜೇಂದ್ರ ಪುರ (ಜೆ.ಸಿ.ಪುರ)ದ ಕಡೆ ಮುಖ ಮಾಡುತ್ತಾರೆ. ಪಟ್ಟು ಹಿಡಿದು ಸಣ್ಣನೀರಾವರಿ ಖಾತೆ ಪಡೆದು ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸರಳತನ, ಕೈ-ಬಾಯಿ ಶುದ್ಧ ಇಟ್ಟುಕೊಂಡಿದ್ದರೂ ನೇರ-ನಿಷ್ಠುರತನ, ಒರಟುತನದಿಂದ ಹೊಗಳು ಭಟ್ಟರಿಂದ ಅಂತರ ಕಾಯ್ದುಕೊಂಡಿರುವ ಮಾಧುಸ್ವಾಮಿಗೆ ಅಭಿವೃದ್ಧಿ ಪರ್ವ ಎಷ್ಟರಮಟ್ಟಿಗೆ ಕೈಹಿಡಿಯುತ್ತದೆ ಎಂಬುದು ಕುತೂಹಲ.
ಕ್ಷೇತ್ರದ ಏಕೈಕ ದಳಪತಿ1972, 1978ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಎನ್.ಬಸವಯ್ಯ 1994ರಲ್ಲಿ ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಅಭ್ಯರ್ಥಿಯಾಗಿ, ಜನತಾದಳದಿಂದ ಸ್ಪರ್ಧಿಸಿದ್ದ ಮಾಧುಸ್ವಾಮಿ ವಿರುದ್ಧ ಜಯ ಗಳಿಸಿದ್ದರು. ಬಳಿಕ ಜನತಾದಳ ತೆಕ್ಕೆಗೆ ಬಂದಿದ್ದ ಬಸವಯ್ಯ ಅಧಿಕಾರದಲ್ಲಿದ್ದಾಗಲೇ ನಿಧನರಾದರು. ಈ ವೇಳೆ 1997ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಬಸವಯ್ಯ ಪುತ್ರ ಸಿ.ಬಿ.ಸುರೇಶ್​ಬಾಬುಗೆ ದಳದ ಟಿಕೆಟ್ ನೀಡಲಾಯಿತಾದರೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜೆಸಿಎಂ ವಿರುದ್ಧ ಗೆಲುವು ಸಾಧ್ಯವಾಗಲಿಲ್ಲ. ಅಪ್ಪನ ಹಾದಿಯಲ್ಲೇ ಹೆಜ್ಜೆ ಹಾಕಿದ ಸುರೇಶ್​ಬಾಬು ಜನತಾದಳ ಇಬ್ಭಾಗವಾದಾಗ ಎಚ್.ಡಿ.ದೇವೇಗೌಡರ ಪಾಳಯದಲ್ಲಿ ಗುರುತಿಸಿಕೊಂಡು 1999ರಲ್ಲಿ ಶಾಸನಸಭೆ ಪ್ರವೇಶಿಸಿದರು. ನಂತರ 2008, 2013ರಲ್ಲಿ ಜಯಗಳಿಸಿದಾಗಲೂ ಸುರೇಶ್​ಬಾಬುಗೆ ಜೆಸಿಎಂ ಪ್ರಬಲ ಎದುರಾಳಿಯಾಗಿದ್ದರು. 2ನೇ ಹಂತದ ನಾಯಕರ್ಯಾರೂ ಇಲ್ಲದ ಕಾರಣ ಬಾಬು ಕ್ಷೇತ್ರದ ದಳಪತಿ ಎನಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
