|ಅಶೋಕ ದೊಮ್ಮಲೂರು
ಬಿಜ್ಜಳನ ಕೊಲೆಯಾದ ಸಂದರ್ಭವದು. ಬಸವಣ್ಣನವರೇ ಬಿಜ್ಜಳನ ಕೊಲೆ ಮಾಡಿಸಿದರೆಂದು ಮಂಚಣ್ಣ ಹಾಗೂ ಸೇನಾಧಿಪತಿ ಮಾಧವರಾಯ ಅಪಪ್ರಚಾರ ಮಾಡಿ ಕಲ್ಯಾಣದ ಕೋಟೆಯ ಹೆಬ್ಬಾಗಿಲನ್ನು ಮುಚ್ಚಿಸಿದರು. ‘ಬೆಳಗಾದ ತಕ್ಷಣ ಕಲ್ಯಾಣದಲ್ಲಿ ಕಾಣಬರುವ ಶರಣರನ್ನೂ ಕೊಲ್ಲತಕ್ಕದ್ದು’ ಎಂದು ಸೇನಾಧಿಪತಿ ತನ್ನ ಸೈನ್ಯಕ್ಕೆ ಆದೇಶಿಸಿದ. ಈ ವಿಷಯವನ್ನು ಆಪ್ತರಿಂದ ತಿಳಿದುಕೊಂಡ ಮಡಿವಾಳ ಮಾಚಿದೇವರು ಕಲ್ಯಾಣವನ್ನು ತೊರೆಯಬೇಕೆಂದು ತೀರ್ವನಿಸಿ, ಕೋಟೆಯ ಹೆಬ್ಬಾಗಿಲನ್ನು ಮುರಿದು ಶರಣರಿಗೆ ದಾರಿಮಾಡಿಕೊಟ್ಟರು. ವಚನಗಳ ತಾಡೋಲೆ ಕಟ್ಟುಗಳ ಗಂಟುಗಳೊಂದಿಗೆ ರಾತ್ರಿಯಲ್ಲಿಯೇ ಶರಣರು ಕಲ್ಯಾಣದ ರಸ್ತೆಮಾರ್ಗಗಳನ್ನು ಬಿಟ್ಟು, ಜನಸಂಚಾರವಿಲ್ಲದ ಕೇರಿಗಳಲ್ಲಿ ನಿಧಾನವಾಗಿ ಬಿಜ್ಜಳನ ಸೈನ್ಯದ ಹಾದಿತಪ್ಪಿಸಿ ಸಾಗತೊಡಗಿದರು. ಇತರ ರಾಜ್ಯದ ಸೈನಿಕರ ಸಹಾಯವನ್ನು ಈ ಮೊದಲೇ ಮಾಚಿದೇವರು ಏರ್ಪಾಡು ಮಾಡಿದ್ದರು. ಅವರೊಂದಿಗೆ ಚನ್ನಬಸವಣ್ಣನವರ ತಂಡ ಕಲ್ಯಾಣವನ್ನುತೊರೆಯಿತು.
ಬೆಳಗ್ಗೆ ಬಿಜ್ಜಳನ ಸೈನಿಕರು ಬಂದು ಅನುಭವ ಮಂಟಪ, ಮಹಾಮನೆಯೊಂದಿಗೆ ಶರಣರ ಮನೆಗಳನ್ನು ಕೆಡವಿದರು. ಶರಣರು ತಪ್ಪಿಸಿಕೊಂಡ ಸುದ್ದಿ ಸೇನಾಧಿಪತಿ ಮಾಧವರಾಯನಿಗೆ ತಲುಪಿತು. ಕೂಡಲೇ ಶರಣರ ಬೆನ್ನಟ್ಟಲು ಸೈನಿಕರಿಗೆ ಆದೇಶಿಸಿದ. ಈ ವಿಪತ್ತನ್ನು ಅರಿತ ಶರಣರು ಸೋಲ್ಲಾಪುರದ ಸಿದ್ಧರಾಮೇಶ್ವರರಿಗೆ ಸಹಾಯ ಕೋರಿ ಸಂದೇಶ ಕಳುಹಿಸಿದರು. ಅಷ್ಟರಲ್ಲೇ ಬಿಜ್ಜಳನ ಸೈನ್ಯ ಶರಣರಿಗೆ ಎದುರಾಯಿತು! ಮಡಿವಾಳ ಮಾಚಿದೇವರು ಮತ್ತು ಚನ್ನಬಸವಣ್ಣ ಆ ಸೈನ್ಯವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ಸಿದ್ಧರಾಮೇಶ್ವರರ ಸಹಾಯ ಬಂದಿತು. ಸೈನ್ಯವನ್ನು ಅವರು ತಡೆಯುತ್ತಿರುವಾಗ ಚನ್ನಬಸವಣ್ಣ, ಅಕ್ಕನಾಗಮ್ಮ ಮುಂತಾದವರು ವಚನಕಟ್ಟುಗಳೊಂದಿಗೆ ಮುಂದೆ ಸಾಗಿದರು.
ವಚನ ಕಟ್ಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು ದುರ್ಗಮವಾದ ಕಾಡಿನ ಮಾರ್ಗಮಧ್ಯದಲ್ಲಿ ಶರಣರ ಸೇನೆಯನ್ನು ಮುನ್ನಡೆಸಿದ ಮಾಚಿದೇವರು ಮುಂದೆ ಏನು ಬೇಕಾದರೂ ಘಟಿಸಬಹುದೆಂದು ಅಂದಾಜಿಸಿ, ಶಸ್ತ್ರಸುಸಜ್ಜಿತವಾದ ಸೈನ್ಯಪಡೆಯನ್ನು ತಯಾರು ಮಾಡಿದರು. ದಕ್ಷಿಣಾಭಿಮುಖವಾಗಿ ಕಲಚೂರ್ಯರ ರಾಜ್ಯಸೀಮೆ ದಾಟಲು ಒಂದಿಷ್ಟು ದೂರ ಕ್ರಮಿಸಿ, ಕೃಷ್ಣಾ ನದಿತೀರದ ತಂಗಡಗಿಯಲ್ಲಿ ಮಾಚಿದೇವರ ಸೈನ್ಯ ಬಿಡಾರ ಹೂಡಿತು. ಮುಂದೆ, ವಚನಕಟ್ಟುಗಳ ಗಂಟುಗಳೊಂದಿಗೆ ಕೃಷ್ಣೆಯನ್ನು ದಾಟಿ, ಗೊಡಚಿ ಸೇರಿದರು. ಗೊಡಚಿಯಿಂದ ರಣಬಾಜಿ, ಮುರಗೋಡ ಸೋಗಲದವರೆಗೆ ಬಿಜ್ಜಳನ ಸೇನೆ ಮತ್ತು ಮಾಚಿದೇವರ ಸೇನೆ ನಡುವೆ
ಯುದ್ಧ ಜರುಗಿತು. ರಣಬಾಜಿ ಎಂಬಲ್ಲಿ ಶರಣರ ಗುಂಪು ಕಡಿಮೆ ಇದ್ದರೂ ಧೈರ್ಯದಿಂದ ಹೋರಾಟ ಮಾಡಿದರು. ದಂಡನಾಯಕನಾಗಿದ್ದ ಮಾಚಿದೇವರು ಪರಾಕ್ರಮಿಯಂತೆ ಕಾದಾಡಿದರು. ಅನೇಕ ಶತ್ರುಸೈನಿಕರು ಶರಣಪಡೆಯ ಏಟಿಗೆ ಪ್ರಾಣ ಕಳೆದುಕೊಂಡರು. ಬಿಜ್ಜಳನ ಸೈನವು ಚದುರಿತು. ತೋರಗಲ್ಲ, ಮರುಗೋಡು, ಕಾದರವಳ್ಳಿ, ಹಳಿಯಾಳ ಮಾರ್ಗವಾಗಿ ಶರಣರು ನಡೆದರು. ಅಷ್ಟರಲ್ಲಿ ಮತ್ತೆ ಬಿಜ್ಜಳನ ಸೈನ್ಯ ಎದುರಾಯಿತು. ಈ ಯುದ್ಧದಲ್ಲಿ ಅನೇಕ ಶರಣರು ಮಡಿದರೂ, ಮಾಚಿದೇವರು ಬಿಜ್ಜಳನ ಸೈನ್ಯವನ್ನು ಸೋಲಿಸಿದರು. ಮುಂದಿನ ಒಂದು ಮಾಸದ ಅವಧಿಯಲ್ಲಿ ಶರಣರ ಸೇನೆ ನಿರಾಂತಕವಾಗಿ ಮುನ್ನಡೆದು ಗೊಡಚಿಯಲ್ಲಿ ವಿಶ್ರಮಿಸಿತು. ಅಷ್ಟರಲ್ಲಿ ಮತ್ತೆ ಕಲಚೂರ್ಯ ಸೇನೆ ದಾಳಿ ಮಾಡಿತು. ರಣಬಾಜಿ, ಮುರುಗೋಡು, ಸೋಗಲದವರೆಗೆ ಮತ್ತೆ ಘೊರ ಯುದ್ಧ ಜರುಗಿತು. ಸತತ ಒಂದು ವಾರ ನಡೆದ ಯುದ್ಧದಲ್ಲಿ ಶತ್ರುಪಡೆಯನ್ನು ಮಾಚಿದೇವರು ಹಿಮ್ಮೆಟ್ಟಿಸಿದರು. ಕಾದರೊಳ್ಳಿಯಲ್ಲಿ ಮತ್ತೆ ಕಲಚೂರ್ಯ ಸೈನ್ಯ ದಾಳಿ ನಡೆಸಿತು. ಶರಣಪಡೆ ವೀರಾವೇಶದಿಂದ ಹೋರಾಡಿ ವಿಜಯಮಾಲೆ ಧರಿಸಿತು. ಇನ್ನು ಶತ್ರುಗಳ ಭಯವಿಲ್ಲವೆಂದು ಅರಿತ ಮಾಚಿದೇವರು ಮಲಪ್ರಭೆ ದಾರಿಯಾಗಿ ಪಶ್ಚಿಮಘಟ್ಟದ ಕಡೆಗೆ ಸೈನ್ಯವನ್ನು ಮುನ್ನಡೆಸಿದರು. ಆ ಸೇನೆ ಮಲಪ್ರಭೆ ಬಲದಂಡೆಯ ಪಕ್ಕದಲ್ಲಿ ಸಾಗಿ ಬಿಜಗರ್ಣಿಯ ದಟ್ಟವಾದ ಅರಣ್ಯ ತಲುಪಿತು. ಅಲ್ಲಿನ ಬೆಟ್ಟದ ಕೋಟೆಯ ಮೇಲ್ಭಾಗದಿಂದ ಶತ್ರುಸೈನ್ಯದ ಆಗಮನ ಕಾಣಬಹುದಾಗಿತ್ತು, ಸುತ್ತಮುತ್ತಲಿನ ಹತ್ತಾರು ಮೈಲಿಗಳ ದೂರದಲ್ಲಿ ಬರುವ ಎಲ್ಲ ವೈರಿಗಳ ಬಗ್ಗೆ ಶರಣರ ಪಡೆಗಳಿಗೆ ಮೊದಲೇ ಸೂಚನೆ ಸಿಗುತ್ತಿತ್ತು. ಮತ್ತು ಬೆಟ್ಟದ ಮೇಲೆ ಸಿಹಿನೀರಿನ ಹೊಳೆ ಇದ್ದುದ್ದರಿಂದ ಇದು ಸುರಕ್ಷಿತ ಮತ್ತು ಯೋಗ್ಯ ಸ್ಥಳವೆಂದು ಮಾಚಿದೇವರು ತೀರ್ವನಿಸಿದ ಸ್ಥಳವೇ ಈಗಿನ ಬೆಳಗಾವಿ ಜಿಲ್ಲೆಯ ಖಾನಾಪುರದ ಮಾಚಿಗಡ.
ಶತ್ರುಗಳು ಬರಲು ಸಾಧ್ಯವಿದ್ದ ಮಾರ್ಗಗಳಾದ ಹಲಸಿ- ಬಿಜಗರ್ಣಿ-ನಂದಗಡ ಸಮೀಪ ಎತ್ತರದ ಬೆಟ್ಟದಲ್ಲಿ ತನ್ನ ಸೈನ್ಯವನ್ನು ಮಾಚಿದೇವರು ನಿಯೋಜಿಸಿದರು. ಕೊನೆಗೂ, ಶತ್ರುಗಳ ನಿರ್ನಾಮವಾಗಿತ್ತು. ಈ ಹೊತ್ತಿಗಾಗಲೇ ಕಲ್ಯಾಣ ಕ್ಷೀಣಗೊಂಡಿತ್ತು. ಆ ಬೆಟ್ಟದಿಂದ ಶರಣ-ಶರಣೆಯರೆಲ್ಲರು ನಿರ್ಭಯವಾಗಿ ಉಳವಿಯವರಿಗೂ ಹೋಗಿಬರತೊಡಗಿದರು.
ಶರಣರು ಉಳವಿಯಿಂದ ಜಂಗಮದ ಬದುಕಿನತ್ತ ದೂರ- ದೂರದ ಊರುಗಳಿಗೆ ಪ್ರಯಾಣ ಬೆಳೆಸಿದರು. ಮಾಚಿದೇವರ ಮನಸ್ಸು ಹಿಪ್ಪರಗಿಯ ಕಲ್ಲಿನಾಥನ ಸೇವೆಗಾಗಿ ಹಾತೊರೆಯುತ್ತಿತ್ತು. ಆ ಸೆಳತವೇ ಅವರನ್ನು ಹಿಪ್ಪರಗಿಗೆ ಕರೆದುಕೊಂಡು ಹೋಯಿತು ಮತ್ತು ಕಲ್ಲಿನಾಥನ ಸೇವೆಯಲ್ಲಿ ತೊಡಗುವಂತೆ ಮಾಡಿತು.
(ಲೇಖಕರು ಹವ್ಯಾಸಿ ಬರಹಗಾರರು)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − 2 =
Remember me
