ನವದೆಹಲಿ:ಮಹದಾಯಿ ನದಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಿದ್ದರೂ ಸಕ್ಷಮ ಪ್ರಾಧಿಕಾರಗಳಿಂದ ಪೂರಕ ಸಮ್ಮತಿ ಪಡೆದುಕೊಳ್ಳಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
ಕೇಂದ್ರ ಸರ್ಕಾರ ಮಹದಾಯಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸಿದ್ದರೂ ಕರ್ನಾಟಕ ಸರ್ಕಾರ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ವಿಚಾರಣೆಗೆ ಕೈಗೆತ್ತಿಕೊಂಡಿತು. ಈ ವೇಳೆ ಗೋವಾ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟಗಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಮಹದಾಯಿ ನೀರಿನ ಬಳಕೆಗೆ ಕಾಮಗಾರಿ ಆರಂಭಿಸಬಹುದು ಎಂದು ಕರ್ನಾಟಕ ಸಿಎಂ ಹೇಳಿಕೆ ನೀಡಿದ್ದಾರೆ. ಇದು ಅಕ್ಷಮ್ಯ.
ನ್ಯಾಯಾಧೀಕರಣ 2014ರಲ್ಲಿ ನೀಡಿದ್ದ ಮಧ್ಯಂತರ ಆದೇಶ ಮತ್ತು 2018ರಲ್ಲಿ ಪ್ರಕಟಿಸಿದ್ದ ಐತೀರ್ಪಿನ ಪ್ರಕಾರ ಎಲ್ಲ ರೀತಿಯ ಸಮ್ಮತಿಗಳನ್ನು ಮೊದಲು ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ. ಅದಲ್ಲದೆ ಯೋಜನಾ ಪ್ರದೇಶದಲ್ಲಿ ಅಪಾರ ಅರಣ್ಯ ಹಾಗೂ ವನ್ಯಜೀವಿ ಸಂಪತ್ತುಗಳಿಗೆ ಎಂದರು. ಇದಕ್ಕೆ ನ್ಯಾ. ಚಂದ್ರಚೂಡ್ ಪ್ರತಿಕ್ರಿಯಿಸಿ, ಮಾಧ್ಯಮದಲ್ಲಿ ನೀಡುವ ಹೇಳಿಕೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಅಂತಾರಾಜ್ಯ ಜಲ ವಿವಾದ ಕಾಯ್ದೆ, ನ್ಯಾಯಾಧೀಕರಣದ ತೀರ್ಪಗಳ ಅನುಸಾರವೇ ಕರ್ನಾಟಕ ಸರ್ಕಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ರಾಜ್ಯದ ಪರ ವಾದಿಸಿದ ಶ್ಯಾಮ್ ದಿವಾನ್, ನಾವು ಕೂಡ ಅದನ್ನೇ ಹೇಳುತ್ತಿದ್ದೇವೆ. ನ್ಯಾಯಾಧಿಕರಣದ ಷರತ್ತು, ನಿಯಮಗಳ ಪ್ರಕಾರವೇ ಎಲ್ಲ್ಲ ಅನುಮತಿಗಳನ್ನು ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಗೋವಾ ವಾದವನ್ನು ಭಾಗಶಃ ಒಪ್ಪಿದ ಸುಪ್ರೀಂಕೋರ್ಟ್, ಮಹದಾಯಿ ಯೋಜನೆ ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಪರಿಸರ ಮತ್ತು ಅರಣ್ಯ ಇಲಾಖೆ, ವನ್ಯಜೀವಿ ಸಂರಕ್ಷಣಾ ಮಂಡಳಿ, ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಸೇರಿ ವಿವಿಧ ಇಲಾಖೆ ಗಳಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿತು. ರಾಜ್ಯ ಸರ್ಕಾರ ಕೂಡ ಇದನ್ನೇ ಪ್ರತಿಪಾದಿಸುತ್ತಾ ಬಂದಿರುವುದರಿಂದ ಕರ್ನಾಟಕದ ಮಟ್ಟಿಗೆ ಸುಪ್ರೀಂಕೋರ್ಟ್ನಲ್ಲಿ ಯಾವುದೇ ಹಿನ್ನಡೆಯಾಗಿಲ್ಲ.
ಯೋಜನೆಗಳ ಕುರಿತ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಮತ್ತು ತ್ವರಿತಗತಿಯಲ್ಲಿ ಸಮ್ಮತಿ ಪಡೆದುಕೊಳ್ಳಲು ಯತ್ನಿಸಬೇಕು ಎಂದು ರಾಜ್ಯದ ವಕೀಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮಹದಾಯಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆಗೆ ಗೋವಾ ಸರ್ಕಾರ ಸಮ್ಮತಿ ನೀಡಿದ್ದರಿಂದ ಗೋವಾ ಕಾಂಗ್ರೆಸ್ ಮುಂದೆ ಬಿಜೆಪಿ ತೀವ್ರ ಇಕ್ಕಟ್ಟಿಗೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ ಸಾರ್ವಜನಿಕ ಆಕ್ರೋಶ ತಣಿಸುವ ಯತ್ನ ಮಾಡಿತ್ತು.
ರಾಜ್ಯಕ್ಕೆ ‘ಮಹಾ’ ಸಂತಸ
ಮಹದಾಯಿ ನೀರು ಬಳಕೆಗೆ ಇದ್ದ ಅಡೆತಡೆಗಳೆಲ್ಲ ಮಂಜಿನಂತೆ ಕರಗಿರುವುದು ರಾಜ್ಯ ಸರ್ಕಾರಕ್ಕೆ ನಿರಾಳತೆ ಉಂಟುಮಾಡಿದೆ. ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿಯ ನ್ಯಾಯಾಲಯದ ಬೆಳವಣಿಗೆ ಮೇಲೆ ಕಣ್ಣಿಟ್ಟು ಇಂಚಿಂಚೂ ಮಾಹಿತಿ ತರಿಸಿಕೊಳ್ಳುತ್ತಿದ್ದರು. ಅಂತಿಮವಾಗಿ ಅಡ್ವೋಕೇಟ್ ಜನರಲ್ ಅವರು ರಾಜ್ಯದ ಪರ ತೀರ್ಪು ಬಂದಿರುವುದನ್ನು ಖಚಿತ ಮಾಡುತ್ತಿದ್ದಂತೆ ಬಿಎಸ್​ವೈ ಮೊಗದಲ್ಲಿ ಮಂದಹಾಸ ಮೂಡಿತು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಹದಾಯಿ ನ್ಯಾಯಮಂಡಳಿ ನೀಡಿದ್ದ ತೀರ್ಪು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಇದರಿಂದ ನೀರು ಬಳಕೆಗೆ ಸಂಬಂಧಿಸಿದಂತೆ ಯಾವುದೇ ಕಾನೂನಾತ್ಮಕ ಅಡೆತಡೆಗಳಿಗೆ ಹಿಂಜರಿಯದೇ ಮುಂದಿನ ಹೆಜ್ಜೆ ಇಡಲು ಸಹಕಾರಿಯಾಗಿದೆ ಎಂದರು.
ಸುಪ್ರೀಂಕೋರ್ಟ್ ಸಹ ತನ್ನ ಆದೇಶದಲ್ಲಿ ನ್ಯಾಯಮಂಡಳಿ ಆದೇಶವನ್ನು ಪುನರುಚ್ಚರಿಸಿದೆ, ಇದರಿಂದ ನಮಗೆ ಸಮಾಧಾನವಾಗಿದೆ ಎಂದರು. ಜತೆಗೆ, ಸರ್ವೋಚ್ಚ ನ್ಯಾಯಾಲಯ ನಮ್ಮ ಸರ್ಕಾರಕ್ಕೆ ಮತ್ತು ಜನತೆಗೆ ಮಹದಾಯಿ ತೀರ್ಪನ್ನು ಅಧಿಸೂಚನೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಆದೇಶ ಮಾಡಿದ್ದು ದೊಡ್ಡ ಗೆಲುವಾಗಿದೆ. ಈ ಆದೇಶಗಳಿಗೆ ಅನುಗುಣವಾಗಿ ಮುಂದಿನ ಆಯವ್ಯಯದಲ್ಲಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳಲು ಹಣ ನಿಗದಿಪಡಿಸುತ್ತೇನೆ ಎಂದರು.
ಡಿಪಿಆರ್​ಗೆ ಸಿಎಂ ಯಡಿಯೂರಪ್ಪ ಸೂಚನೆ
ಮಹದಾಯಿ ಯೋಜನೆ ಬಗ್ಗೆ ಡಿಪಿಆರ್ ಮಾಡುವಂತೆ ಮುಖ್ಯಮಂತ್ರಿ ತಾಕೀತು ಮಾಡಿದ್ದು, ಜಲಸಂಪನ್ಮೂಲ ಇಲಾಖೆ ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಸಕ್ರೀಯಗೊಂಡಿರುವ ಜಲಸಂಪನ್ಮೂಲ ಇಲಾಖೆ ರಾಜ್ಯದ ಪಾಲಿನ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ರೂಪುರೇಷ ಸಿದ್ಧಪಡಿಸುತ್ತಿದೆ. ಸಚಿವ ರಮೇಶ್ ಜಾರಕಿಹೊಳಿ, ಮಹದಾಯಿ ಬಗ್ಗೆ ವಾರದಲ್ಲಿಯೇ ಮತ್ತೊಂದು ಬಾರಿ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಪ್ರೀಂ ಆದೇಶ ಸ್ವಾಗತಾರ್ಹ
ಮಹದಾಯಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ 2014ರ ಮಧ್ಯಂತರ ತೀರ್ಪು ಪಾಲಿಸುವಂತೆ ಸೋಮವಾರ ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಪರಿಸರ ಇಲಾಖೆಯಿಂದ ಈಗಾಗಲೇ ಅನುಮತಿ ಪಡೆಯಲಾಗಿದೆ. ಕೇಂದ್ರ ಜಲ ಆಯೋಗ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆದು ಕಾಲಮಿತಿಯೊಳಗೆ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eighteen =
Remember me
