| ರಾಜಗುರು ಬಿ.ಎಸ್. ದ್ವಾರಕನಾಥಈ ಭೂಮಿಗೆ ನಾವು ಬರಲು ಕಾರಣೀಭೂತರಾದವರು ನಮ್ಮ ಮಾತಾಪಿತೃಗಳು. ಅವರ ಋಣವನ್ನು ಜನ್ಮದಾರಭ್ಯ ಪೂಜಿಸಿದರೂ ತೀರಿಸುವುದು ಅಸಾಧ್ಯ. ನಮ್ಮ ಹೃದಯ ಮಂದಿರದಲ್ಲಿ ಸದಾ ಅವರನ್ನು ಪೂಜಿಸಿ ಅವರನ್ನು ಸಂತೋಷವಾಗಿಡಬೇಕು. ಸಾಮಾನ್ಯವಾಗಿ ಮನುಷ್ಯ ಅಜ್ಞಾನತಾವಾಪಿ ಮಾಡಿದ ತಪು್ಪಗಳನ್ನು ತಿದ್ದಿಕೊಂಡು ಸಂಸಾರ ಸಾಗರವನ್ನು ದಾಟಬೇಕಾದರೆ ದೈವಕೃಪೆ ಹಾಗೂ ಪಿತೃಕರುಣೆ ಎರಡೂ ಮುಖ್ಯ. ಪ್ರತಿ ಸಂವತ್ಸರದಲ್ಲೂ 12 ಅಮಾವಾಸ್ಯೆಗಳು ಬರುವಂತೆ ಸಂಕ್ರಮಣ, ಅಷ್ಟಮಿ, ಚತುರ್ದಶಿಯಂತಹ ಸುಮುಹೂರ್ತಗಳಿದ್ದು, ದೇವತಾರಾಧನೆಗೆ ಇವು ಸೂಕ್ತ ಸಮಯ. ಅಮಾವಾಸ್ಯೆ ಮತ್ತು ಸಂಕ್ರಮಣದಂದು ಪಿತೃಗಳನ್ನು ಸ್ಮರಿಸಬೇಕೆಂದು ಶಾಸ್ತ್ರನಿಯಮವಿದೆ. ಆದರೆ, ಒತ್ತಡದ ಜೀವನದಲ್ಲಿ ಇದು ಸಾಧ್ಯವಾಗದೆ ಇರಬಹುದೆಂಬ ಕಾರಣಕ್ಕೆ ನಮ್ಮ ಹಿರಿಯರು, ಋಷಿಮುನಿಗಳು ವರ್ಷಋತುವಿನ ಭಾದ್ರಪದ ಮಾಸದ ಪಾಡ್ಯದಿಂದ ಹಿಡಿದು ಮಹಾಲಯ ಅಮಾವಾಸ್ಯೆವರೆಗೆ ಪಿತೃಗಳನ್ನು ಪೂಜಿಸುವ ಕಾಲವೆಂದು ನಿಗದಿ ಮಾಡಿದ್ದಾರೆ.
ಮನುಷ್ಯನ ಬಾಲ್ಯದಿಂದ ಅಂತ್ಯೇಷ್ಠಿವರೆಗೂ ಶೋಡಷ ಕರ್ಮಗಳನ್ನು ಬರೆದಿದ್ದಾರೆ. ಜನನ-ಮರಣಗಳು ಯಾರನ್ನೂ ಬಿಟ್ಟಿಲ್ಲ. ಜನನದಿಂದ ಸಂಸ್ಕಾರ ಆರಂಭವಾದರೆ; ಮರಣಾನಂತರ ಕರ್ಮಬಂಧನದಿಂದ ಬಿಡಿಸಿ ಶ್ರೀರಾಮನ ಅನುಜ್ಞೆಯಂತೆ ಬ್ರಹ್ಮದೇವರು ಎಲ್ಲ ಲೋಕಗಳಿಗಿಂತ ಎತ್ತರದಲ್ಲಿರುವ ಸಾಂತ್ವಾನ ಲೋಕದಲ್ಲಿ ಸ್ಥಾನ ನಿಗದಿಗೊಳಿಸಿದ್ದಾರೆ. ನಾವು ನಮ್ಮ ಮಾತಾಪಿತೃಗಳಿಗೆ ಅಲ್ಲಿ ಸ್ಥಾನ ದೊರಕಿಸಿಕೊಡಬೇಕಾದರೆ ಶಾಸ್ತ್ರ ನಿಯಮಗಳಂತೆ ಕಡ್ಡಾಯವಾಗಿ ಪಿತೃಕಾರ್ಯಗಳನ್ನು ಮಾಡಲೇಬೇಕು. ಈ ಪಿತೃಪಕ್ಷದಲ್ಲಿ ಕರ್ವಂಗದಲ್ಲಿ ಒದಗಿರುವಂತೆ ಪಿತೃತರ್ಪಣ, ಜಲತರ್ಪಣ, ಋಷಿತರ್ಪಣಾದಿಗಳನ್ನು ನೀಡಿ ಬಂಧು-ಮಿತ್ರರಿಗೆ ಸುಗ್ರಾಸ ಭೋಜನವನ್ನು ಅವರವರ ಪದ್ಧತಿಯಂತೆ ಮಾಡಬೇಕೆಂಬ ನಿಯಮವಿದೆ.
ಶಾಸ್ತ್ರಾದಾರದಂತೆ ದೇವತೆಗಳು ಕಾಮ್ಯಬಲವನ್ನು ಕೊಟ್ಟರೆ, ಮನುಷ್ಯನ ವಂಶವೃಕ್ಷ ಬೆಳೆಯಲು ಪಿತೃಗಳ ಕೃಪೆ ಕಡ್ಡಾಯವಾಗಿ ಬೇಕು. ಅಯೋಧ್ಯ, ಮಥುರ, ಮಾಯಾ, ಕಾಶೀ, ಕಾಂಚಿ, ಆವಂತಿಕಾ (ಉಜ್ಜೈನಿ), ಪುರೀ, ದ್ವಾರವತೀ ಕ್ಷೇತ್ರಗಳನ್ನು ಸಪ್ತ ಮೋಕ್ಷಸ್ಥಳ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಶ್ರೀರಾಮನು ಭಗವಂತನ ಅವತಾರವಾದರೂ ತನ್ನ ಜನ್ಮದಾತನಾದ ದಶರಥ ಮರಣವನ್ನಪ್ಪಿದ ಸುದ್ದಿ ತಿಳಿದು ವನವಾಸದಲ್ಲಿದ್ದರೂ ಗೆಡ್ಡೆಗೆಣಸುಗಳಿಂದ ಗೋಲಾಕಾರದ ಪಿಂಡಪ್ರದಾನ ಮಾಡಿ ತಿಲತರ್ಪಣ ನೀಡಿದ ಉಲ್ಲೇಖವಿದೆ. ದೇವರೇ ಪಿತೃತರ್ಪಣವನ್ನು ನೀಡಿದ ಮೇಲೆ ಸಾಮಾನ್ಯ ಮನುಷ್ಯರು ಮಾಡಲೇಬೇಕಾದ ಕರ್ತವ್ಯವಿದೆ.
‘ದೇವಪಿತೃ ಕಾರ್ಯಾಭ್ಯಾಂ ಸ್ವಾಧ್ಯಾಯ ಪ್ರವಚನೇಯಚ’ ಎಂಬ ಉಪನಿಷತ್ತಿನ ವಾಕ್ಯದಂತೆ; ಒಂದೊಮ್ಮೆ ದೇವತಾ ಪೂಜೆಯನ್ನು ಮಾಡದಿದ್ದರೂ ಕ್ಷಮೆ ಸಿಗಬಹುದು. ಆದರೆ ಪಿತೃಪಕ್ಷದಲ್ಲಿ ತಿಲತರ್ಪಣ ನೀಡದಿದ್ದರೆ ಅವನ ಜನ್ಮ ಶ್ವಾನಜನ್ಮಕ್ಕೆ ಸಮನೆಂದು ಬರೆದಿದ್ದಾರೆ. ತ್ರಯಮೂರ್ತಿ ಅವತಾರನಾದ ದತ್ತಾತ್ರೇಯರು ನರಸಿಂಹ ಸರಸ್ವತಿ ರೂಪದಲ್ಲಿ ಗಾಣಗಾಪುರದಲ್ಲಿ ಅವತರಿಸಿ ಭಕ್ತರ ಅಭೀಷ್ಠೆಗಳನ್ನು ಈಡೇರಿಸಿ ಅಂತ್ಯದಲ್ಲಿ ಶ್ರೀಶೈಲದ ಕದಳಿವನದಲ್ಲಿ ಗುಪ್ತರಾಗಿದ್ದಾರೆ. ದತ್ತ ಎಂದರೆ ಕೊಡುವವನು ಎಂದರ್ಥ. ನಿರ್ಗಣ ಪಾದುಕೆಗಳ ರೂಪದಲ್ಲಿರುವ ದತ್ತಾತ್ರೇಯ ನೆಲೆಸಿರುವ ಗಾಣಗಾಪುರದಲ್ಲಿ ಅಷ್ಟತೀರ್ಥಗಳಿದ್ದು, ಇಲ್ಲಿಯೂ ಪಿತೃಗಳಿಗೆ ತರ್ಪಣ ನೀಡುತ್ತಾರೆ.
ದೇವಲೋಕ ಮತ್ತು ಪಿತೃಲೋಕಗಳಲ್ಲಿ ಪಿತೃಲೋಕವೇ ಶ್ರೇಷ್ಠ ಎಂದು ಋಷಿಗಳು ಹೇಳಿದ್ದಾರೆ. ಆ ಲೋಕದಲ್ಲಿರುವ ಪಿತೃಗಳಿಗೆ, ಬಂಧು-ಮಿತ್ರರಿಗೆ, ಉಪಕಾರ ಮಾಡಿದವರಿಗೆ, ಆಶ್ರಯದಾತರಿಲ್ಲದವರಿಗೆ ಈ ಪಿತೃಪಕ್ಷದಲ್ಲಿ ಅಥವಾ ಅವರ ಮೃತ ತಿಥಿಯಂದು ಅಥವಾ ಮಹಾಲಯ ಅಮಾವಾಸ್ಯೆಯ ಶ್ರೇಷ್ಠ ಕಾಲದಲ್ಲಿ ತರ್ಪಣವನ್ನು ನೀಡಿ ಭೋಜನ ಹಾಕಿದರೆ ಪಿತೃಗಳು ಸಂತೃಪ್ತರಾಗಿ ಬೇಕಾದ ವರಗಳನ್ನು ಕೊಡುವುದರಲ್ಲಿ ಸಂದೇಹವಿಲ್ಲ.
ಅಮಾವಾಸ್ಯೆ ಎಂದರೆ ಕತ್ತಲು. ಲಯಕಾರನಾದ ಶಿವನಿಗೆ ಅಮಾವಾಸ್ಯೆಯ ಪೂಜೆಯೇ ಶ್ರೇಷ್ಠ. ಪ್ರತಿ ಅಮಾವಾಸ್ಯೆಯ ಮುನ್ನಾದಿನವಾದ ಚತುರ್ದಶಿಯನ್ನು ಮಾಸಶಿವರಾತ್ರಿ ಎಂದು ಕರೆಯುತ್ತಾರೆ. ಆಷಾಡ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರ ವ್ರತ ಮಾಡುತ್ತಾರೆ. ಅಲ್ಲಿಂದ ಆರಂಭವಾಗಿ ಮಾಘ ಮಾಸದ ಅಮಾವಾಸ್ಯೆಗೆ ಮಹಾಶಿವರಾತ್ರಿ ವ್ರತ ಆಚರಿಸುತ್ತಾರೆ. ಮೃತ್ಯುವಿಗೆ ಅಧಿಪತಿಯಾದ ಶಿವನನ್ನು ಪೂಜಿಸುವ ಮೂಲಕ ಪಿತೃಗಳಿಗೆ ಸದ್ಗತಿಯನ್ನು ನೀಡುವುದು ಶಾಸ್ತ್ರ.
ಮಹಾಲಯ ಅಮಾವಸ್ಯೆಯಂತೆಯೇ ಭರಣಿ ನಕ್ಷತ್ರವು ಶ್ರಾದ್ಧಾ ಕಾರ್ಯಕ್ಕೆ ಅತ್ಯಂತ ಪವಿತ್ರವಾದುದು. ಭಾದ್ರಪದ ನವಮಿಯನ್ನು ಅವಿಧವಾ ನವಮಿ (ಸುಮಂಗಲಿ ನವಮಿ) ಎಂದು ಕರೆಯುತ್ತಾರೆ. ಈ ದಿನ ಅವರವರ ಕುಲಾಚಾರದಂತೆ ಶ್ರಾದ್ಧ ಮಾಡಿದರೆ ತಾಯಿಯನ್ನು ಒಳಗೊಂಡು ಅವರ 42 ತಲೆಮಾರುಗಳ ಕುಲೋದ್ಧಾರವಾಗುತ್ತದೆ ಎಂಬ ವಚನವಿದೆ. ಭಾದ್ರಪದ ಬಹುಳ ದ್ವಾದಶಿಯನ್ನು ಯತಿ ಮಹಾಲಯವೆಂದು ಕರೆಯಲಾಗುತ್ತದೆ. ಈ ದಿನ ಬ್ರಹ್ಮಿಭೂತರಾದ ಗುರುಗಳ ಆರಾಧನೆ ಮಾಡುವುದರಿಂದ ಗುರುಗಳ ಅನುಗ್ರಹ ಪಡೆದುಕೊಳ್ಳಬಹುದು.
ಮಾನವ ಕಲ್ಯಾಣಕ್ಕಾಗಿ ಇರುವ ಹಿಂದೂ ಧರ್ಮದ ಆಚರಣೆಗಳು ಜಗತ್ತಿನಲ್ಲೇ ವಿಶಿಷ್ಟವಾಗಿವೆ. ಹಿಂದೂ ಧರ್ಮಶಾಸ್ತ್ರವನ್ನು ಜಗತ್ತಿನ ಇನ್ನಾವುದೇ ಧರ್ಮಗಳಲ್ಲೂ ಕಾಣಲು ಸಾಧ್ಯವಿಲ್ಲ. ಮನುಷ್ಯನ ಜನ್ಮ ಅಂತ್ಯವಾದ ನಂತರ ಆತನ ಕರ್ಮವನ್ನು ಹೇಗೆ ಮಾಡಬೇಕು? ಆತನ ಮಕ್ಕಳು ಮಾಡಬೇಕಾದ ಅಂತ್ಯಸಂಸ್ಕಾರಾದಿ ವಿಧಿಗಳ ಬಗ್ಗೆ ಹಿಂದೂ ಧರ್ಮಶಾಸ್ತ್ರದಲ್ಲಿ ಸ್ಪಷ್ಟವಾದ ಉಲ್ಲೇಖಗಳಿವೆ. ಬೇರೆಲ್ಲ ಧರ್ಮಗಳಲ್ಲಿ ಕೇವಲ ವ್ಯಕ್ತಿ ಜೀವಿಸಿರುವವರೆಗೆ ಬೇಕಾದ ನಿಯಮಗಳನ್ನು ಕಾಣುತ್ತೇವೆ. ಆದರೆ, ಜೀವಿತದ ನಂತರದ ನಿಯಮಗಳು ಕೂಡ ಹಿಂದೂ ಧರ್ಮದಲ್ಲಿವೆ. ಇಂತಹ ಧರ್ಮಶಾಸ್ತ್ರದ ನಿಯಮದಲ್ಲಿ ಪಿತೃಪಕ್ಷದ ಆಚರಣೆಯೂ ಒಂದು.
ಇತ್ತೀಚಿನ ದಿನಗಳಲ್ಲಿ ವಿದೇಶಿಯರು ಕೂಡ ಪಿತೃತರ್ಪಣ, ಶ್ರಾದ್ಧ ಕ್ರಿಯೆಯ ಬಗ್ಗೆ ಆಸಕ್ತರಾಗಿದ್ದು, ಗೋಕರ್ಣ ಇತ್ಯಾದಿ ಕ್ಷೇತ್ರಗಳಿಗೆ ಬಂದು ತಮ್ಮ ಹಿರಿಯರ ಹೆಸರಿನಲ್ಲಿ ಶ್ರಾದ್ಧಕಾರ್ಯ ಮಾಡುವುದನ್ನು ಕಾಣಬಹುದಾಗಿದೆ.
ಶ್ರಾವಣ ಮಾಸದಲ್ಲಿ ಆರಂಭವಾಗುವ ವಿವಿಧ ವ್ರತಗಳು ಪೂರ್ಣಗೊಂಡ ನಂತರ ಪಿತೃಪಕ್ಷ ಬರುತ್ತದೆ. ಮಹಾಲಯ ಅಮಾವಾಸ್ಯೆ ಕಳೆದ ನಂತರ ಋತು ಬದಲಾವಣೆಯೊಂದಿಗೆ ಆಶ್ವೀಜ ಮಾಸ ಆರಂಭವಾಗುತ್ತದೆ. ಈ ಮೂಲಕ ಶಕ್ತಿ ಆರಾಧನೆಗೆ ಮೀಸಲಾದ ನವರಾತ್ರಿಗೆ ಚಾಲನೆ ದೊರೆಯುತ್ತದೆ. ಅ. 14 ಅಮಾವಾಸ್ಯೆಯಂದು ನಾಡದೇವತೆ ಚಾಮುಂಡೇಶ್ವರಿ ದೇವಿ ಸೇರಿದಂತೆ ಭಗಳಾಮುಖಿ, ಕಾಮಾಕ್ಯ, ಶಾರದಾ ಪರಮೇಶ್ವರಿ ಹೀಗೆ ನಾಡಿನ ಎಲ್ಲ ಶಕ್ತಿ ದೇವತೆಗಳಿಗೆ ಬಾಣಂತಿ ಅಲಂಕಾರ ಮಾಡಲಾಗುತ್ತದೆ. ಜಗತ್ತಿನ ಸೃಷ್ಟಿಕರ್ತೆ ಎಂಬುದರ ಸಂಕೇತವಾಗಿ ಮಾಡುವ ಬಾಣಂತಿ ಅಲಂಕಾರದಲ್ಲಿ ದೇವಿಯ ದರ್ಶನ ಪಡೆಯುವುದು ಬಹಳ ಶ್ರೇಯಸ್ಕರವಾದುದು. ನವರಾತ್ರಿಯಲ್ಲಿ ಬರುವ ಪಂಚಮಿಯನ್ನು ಲಲಿತಾ ಪಂಚಮಿಯೆಂದು ಕರೆಯುತ್ತಾರೆ. ಅಂದು ಲಕ್ಷ್ಮೀಯನ್ನೂ , ಸಪ್ತಮಿಯ ಮೂಲ ನಕ್ಷತ್ರದಂದು ಸರಸ್ವತಿಯನ್ನು, ಅಷ್ಟಮಿಯಂದು ದುರ್ಗೆಯನ್ನು ಪೂಜಿಸಬೇಕು. ಮಹಾನವಮಿಯಂದು ಖಡ್ಗಾದಿ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ಪೂಜಿಸಬೇಕೆಂಬ ಉಲ್ಲೇಖವಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + six =
Remember me
