ಆಷಾಢ ಕೃಷ್ಣ ಪಂಚಮಿ ಶುಕ್ರವಾರ ಶ್ರೀ ಜಯತೀರ್ಥರು ಬೃಂದಾವನಸ್ಥರಾದ ದಿನ. ಈ ಹಿನ್ನೆಲೆಯಲ್ಲಿ ಜಯತೀರ್ಥರ ಮೂಲ ಬೃಂದಾವನಕ್ಷೇತ್ರ ಮಳಖೇಡದಲ್ಲಿಂದು ಮಧ್ಯಾರಾಧನೆ ನಡೆಯಲಿದ್ದು, ತನ್ನಿಮಿತ್ತ ಯತಿಶ್ರೇಷ್ಠರ ಜೀವನ, ಸಂದೇಶ ಕುರಿತ ಕಿರುಬರಹ.
|ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ತತ್ತ್ವಜ್ಞಾನ ಪ್ರಪಂಚವೆಂಬುವುದು ಮಹಾಸಾಗರ. ಶ್ರೀವೇದವ್ಯಾಸರ, ಶ್ರೀಮಧ್ವಾಚಾರ್ಯರ ವಾಕ್ಯಗಳು ಮಂದರ ಪರ್ವತದಂತೆ. ಈ ಬೌದ್ಧಿಕ ಪ್ರಪಂಚದ ಸಮುದ್ರಮಥನವನ್ನು ಮಾಡಿ ಜಗತ್ತಿಗೆ ಜ್ಞಾನಾಮೃತದ ಧಾರೆ ಎರೆಯಲು ಶ್ರೀ ಜಯತೀರ್ಥರು ಅವತರಿಸಿದರು ಹಾಗೂ ದೇವೇಂದ್ರನೇ ಈ ಮುನೀಂದ್ರನಾಗಿ ಧರೆಗವತರಿಸಿದರು ಎಂಬ ನಂಬಿಕೆ ಇದೆ. ಶ್ರೀವ್ಯಾಸಮಧ್ವರ ಮೂಲಭೂತ ವಿಚಾರಗಳನ್ನು ತತ್ತ್ವಜ್ಞಾನ ಪ್ರಪಂಚಕ್ಕೆ ಶ್ರೀಮನ್ನಾ್ಯಯಸುಧಾ ಎಂಬ ಅಮೃತದಿಂದ ಧಾರೆಯೆರೆದರು. ಯುಗಯುಗಗಳಿಂದ ಹರಿದು ಬಂದ ವೇದ, ಬ್ರಹ್ಮಸೂತ್ರ, ಇತಿಹಾಸ ಪುರಾಣಗಳ ಉಪಾಸನಾ ಪರಂಪರೆಯನ್ನು, ಸನಾತನ ಸಿದ್ಧಾಂತವನ್ನು ಪುನರುತ್ಥಾನಗೊಳಿಸಿದರು. ವಿಶ್ವದ ದರ್ಶನ ಪ್ರಪಂಚದಲ್ಲಿ ತ್ರಿವಿಕ್ರಮನಂತೆ ವಿರಾಟ್ ರೂಪತಾಳಿ ಜ್ಞಾನಗಂಗೆಯನ್ನು ಹರಿಸಿದರು.
ಜಯತೀರ್ಥರು ಆಚಾರ್ಯ ಮಧ್ವರ ಸಿದ್ಧಾಂತಕ್ಕೆ ಹೊಸ ಹುಮ್ಮಸ್ಸು ತುಂಬಿ ಯುಕ್ತಿ ಪ್ರಪಂಚವನ್ನು ಭೂಗಗನಗಳಂತೆ ವಿಸ್ತರಿಸಿದರು. ಜಯತೀರ್ಥರು ಹಾಕಿದ ಈ ತಳಪಾಯದ ಪರಿಣಾಮವಾಗಿ ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಘೂತ್ತಮರು, ಶ್ರೀವಿದ್ಯಾಧೀಶರು, ಶ್ರೀರಾಘವೇಂದ್ರ ಸ್ವಾಮಿಗಳಂತಹ ಮಹಾ ಮಹಾ ಜ್ಞಾನಿಗಳ ತಂಡವೇ ನಿರ್ವಣವಾಯಿತು. ಜಯತೀರ್ಥರು ಪ್ರಮಾಣ ಪ್ರಮೇಯ ಅನುಭವ ಚಿಂತನೆಗಳ ಗಟ್ಟಿ ನೆಲದ ಮೇಲೆ ಮಧ್ವ ಸಿದ್ಧಾಂತವನ್ನು ಪ್ರತಿಪಾದಿಸಿದರು. ಅವನು ವಿಷ್ಣು. ನಾವು ಅವನ ದಾಸರು. ಈ ವಿಷ್ಣುಭಕ್ತಿಯ ಚಿಂತನೆಯೇ ಅಂತಿಮ ಸತ್ಯವೆಂದು ಸಾಧಿಸಿ ತೋರಿಸಿದರು. ಜಯತೀರ್ಥರು ರಚಿಸಿದ ಒಟ್ಟು 21 ಗ್ರಂಥಗಳಲ್ಲಿ 18 ಶ್ರೀ ಮಧ್ವಾಚಾರ್ಯರ ಗ್ರಂಥಗಳ ವ್ಯಾಖ್ಯಾನಗಳಾಗಿವೆ. ಶ್ರೀಮಧ್ವರ ಅನುವ್ಯಾಖ್ಯಾನದ ವ್ಯಾಖ್ಯಾನ ರೂಪವೇ ಶ್ರೀಮನ್ನಾ್ಯಯಸುಧಾ. ಇಂದು ಸಕಲ ಮಾಧ್ವ ಸಮಾಜದ ಆರಾಧಕ ಗ್ರಂಥವಾಗಿದೆ. ‘ಪ್ರಮಾಣ ಪದ್ಧತಿ’, ‘ವಾದಾವಲೀ’, ‘ಪದ್ಯಮಾಲಾ’ ಇವು 3 ಸ್ವತಂತ್ರ ಗ್ರಂಥಗಳು.
ಮಹಾರಾಷ್ಟ್ರದ ಮಂಗಳವೇಢೆಯಲ್ಲಿ ದೇಶಪಾಂಡೆ ಎಂಬ ಘನರಾವುತರಲ್ಲಿ ಧೋಂಡೋ ರಘುನಾಥರಾಗಿ ಅವತರಿಸಿದರು. ಬ್ರಾಹ್ಮಣರಾದರೂ ಮಹಾಕ್ಷತ್ರಿಯ ವೀರತ್ವ. ಇಪ್ಪತ್ತನೇ ವಯಸ್ಸಿನಲ್ಲಿ ಭೀಮೆಯ ದಡದಲ್ಲಿ ಮಹಾತಪಸ್ವಿಗಳಾದ ಅಕ್ಷೋಭ್ಯತೀರ್ಥರನ್ನು ಕಂಡರು. ಅಕ್ಷೋಭ್ಯರ ಮಾತು ವಾಕ್ ವಜ್ರವಾಯಿತು. ಜನ್ಮಾಂತರದ ಸುರುಳಿ ಬಿಚ್ಚಲು ಕಾರಣವಾಯಿತು. ಗುರುಶಿಷ್ಯರಿಬ್ಬರು ಒಬ್ಬರನೊಬ್ಬರು ಬಿಂಬಪ್ರತಿಬಿಂಬದಂತೆ ಕಂಡು ಧೋಂಡೋ ರಘುನಾಥರು ಪೂರ್ವ ಜೀವನದಿಂದ ಹೊರಬಂದು ಶ್ರೀಅಕ್ಷೋಭ್ಯರ ತನಯರಾಗಿ ಶ್ರೀಜಯತೀರ್ಥರಾದರು. ಸಂಧ್ಯಾವಳಿಯ ತಪ್ಪಲಿನಲ್ಲಿ ಮಹಾ ತಪಸ್ಸುಗೈದು ಸಕಲ ವಾಜ್ಞ್ಮೋನಿಯಾಮಕಳಾದ ದುರ್ಗಾದೇವಿಯ ಅನುಗ್ರಹಕ್ಕೆ ಪಾತ್ರರಾದರು.
ಹನುಮ ಭೀಮರಾದ ವಿಷ್ಣುಸೇವಕ ವಾಯುದೇವರು ನಂತರ ಮಧ್ವರಾದರು. ಶ್ರೀಮಧ್ವಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ ಹೇಳುವಾಗ ದೇವೇಂದ್ರ ಎತ್ತಿನ ರೂಪದಿಂದ ಮಧ್ವರ ಅಮೃತ ವಾಣಿಗಳನ್ನು ಶ್ರವಣ ಮಾಡಿದ್ದರು. ‘ಈ ಎತ್ತೇ ಮುಂದೆ ನನ್ನ ಗ್ರಂಥಗಳಿಗೆ ಟೀಕೆಯನ್ನು ರಚಿಸಿ ಜಗತ್ತಿಗೆ ಉಪಕಾರಗೈಯುವುದು’ ಎಂದು ಮಧ್ವರ ಭವಿಷ್ಯವಾಗಿತ್ತು. ಋಗ್ವೇದದಲ್ಲಿ ವೃಷಾಯಮಾನ್ ಎಂಬ ಮಾತು ಇಂದ್ರನಿಗಿದೆ. ಅಂದರೆ ದೇವೇಂದ್ರನಿಗೆ ಎತ್ತಿನ ರೂಪವೂ ಇದೆ. ಅಂತೆಯೇ ಆ ವೃಷಭೇಂದ್ರ ತಮ್ಮ ಅವತಾರ ಕಾರ್ಯ ಪೂರ್ಣಗೊಳಿಸಲು ಮಳಖೇಡದ ಸಮೀಪದ ಯರಗೋಳಕ್ಕೆ ಬಂದರು. ಅಲ್ಲಿ ಪ್ರಾಣದೇವರ ಸ್ಥಾಪನೆ ಮಾಡಿದರು. ಅಲ್ಲಿಯೇ ಪ್ರಾಣದೇವರ ಸಮ್ಮುಖದಲ್ಲಿ ಯರಗೋಳದ ಗುಹೆಯಲ್ಲಿ 18 ಟೀಕೆಗಳನ್ನು, 3 ಸ್ವತಂತ್ರ ಗ್ರಂಥಗಳನ್ನು ರಚಿಸಿ ವ್ಯಾಸಮಧ್ವರಿಗೆ ಅರ್ಪಣೆಗೈದರು. ಶ್ರೀಮಧ್ವರ ಮಿತಮಾತಿನ ರಹಸ್ಯ ಸ್ವಾರಸ್ಯಗಳನ್ನು ಹೊರತಂದ ಜಯತೀರ್ಥರ ಚಾತುರ್ಯ ಪರಮಾದ್ಭುತ.
ಎಲ್ಲವನ್ನೂ ಬೌದ್ಧಿಕವಾಗಿ ಅಳೆದು ತಿಳಿಯಲು, ತಿಳಿದು ನಂಬಲು, ನಂಬಿ ಬಾಳಲು ಕಲಿಸಿದರು. ಶ್ರೀಜಯತೀರ್ಥರ ವಿಚಾರಗಳು ದೇಶ ಕಾಲ ಮತ ಜಾತಿ ವ್ಯಕ್ತಿಗಳ ಇತಿ ಮಿತಿಗೆ ಮೀರಿದ್ದು. ವಿಶ್ವದ ಸಾರ್ವಕಾಲಿಕ ಸತ್ಯವನ್ನು ಎಲ್ಲರಿಗೂ ದಕ್ಕುವ ವಿಶ್ವಧರ್ಮವನ್ನಾಗಿ ಮಾಡಿದರು. ಮನಸ್ಸಿನ ಮಬ್ಬು ಕಳೆದು ಬುದ್ಧಿಗೆ ಹಬ್ಬವನ್ನು ಕೊಟ್ಟರು.
ಜಯತೀರ್ಥರು ಅವತರಿಸಿ ಒಟ್ಟು 42 ವರ್ಷ ಎಲ್ಲರಿಗೆ ಗೋಚರವಾಗಿದ್ದರು. 21 ವರ್ಷ ವೀರಯೋಧರಾದರು. ಇನ್ನುಳಿದ 21 ವರ್ಷ ಯತಿರಾಜರಾದರು. ತಮ್ಮ ತಪೋಭೂಮಿಯಾದ ಯರಗೋಳದಿಂದ ಹತ್ತಿರದಲ್ಲಿಯೇ ಇದ್ದ ಮಳಖೇಡಕ್ಕೆ ಬಂದರು. ಮಾನ್ಯಖೇಟವು ರಾಷ್ಟಕೂಟರ ರಾಜಧಾನಿ. ಪ್ರಸಿದ್ಧ ಹಾಗೂ ಪವಿತ್ರ ಸ್ಥಳ. ಕಾಗಿನಾ ತೀರ. ಗುರು ಅಕ್ಷೋಭ್ಯ ತೀರ್ಥರ ಸನ್ನಿಧಾನ.
ವಿಭವ ಸಂವತ್ಸರದ (1388) ಆಷಾಢಮಾಸ ಕೃಷ್ಣ ಪಕ್ಷದ ಪಂಚಮಿಯ ದಿನ ಕಾಗಿಣಿಯಲ್ಲಿ ಮಿಂದು ಸಂಸ್ಥಾನ ಪೂಜೆ ಮಾಡಿದರು. ಸಜೀವರಾಗಿ ಗುಹೆಯನ್ನು ಪ್ರವೇಶಿಸಿದರು. ಜಯತೀರ್ಥರ ಸಾಕ್ಷಾತ್ ಶಿಷ್ಯರು ಅನೇಕ ಜನ. ಆದರೆ, ಪೀಠದ ಉತ್ತರಾಧಿಕಾರಿಗಳನ್ನಾಗಿ ಶ್ರೀವಿದ್ಯಾಧಿರಾಜರನ್ನು ಆಯ್ದರು. ಅವರು ಮಳಖೇಡದಲ್ಲಿಯೇ ಗುರು ಅಕ್ಷೋಭ್ಯ ತೀರ್ಥರ ಸನ್ನಿಧಿಯಲ್ಲಿಯೇ ಜಯತೀರ್ಥರ ಮೂಲ ವೃಂದಾವನವನ್ನು ನಿರ್ವಿುಸಿದರು. ಜಯತೀರ್ಥರ ತತ್ವಗಳಂತೆ ಅವರ ಜೀವನವೂ ಅಜರ ಅಮರವಾಗಿದೆ.
ವಿಶ್ವಕ್ಕೆ ನೀಡಿದ ಸಂದೇಶ
ಕುಪಿತಾಹಿ ಫಣಚ್ಛಾಯಾ ಸಮೀಕೃತ್ಯ ಅಪರಂ ಸುಖಂ | ಸೇವಂತೇ ಯತ್ಪದಂ ಧೀರಾಃ ತಂ ಭಜೇ ವಲ್ಲಭಂ ಶ್ರೀಯಃ| ದಣಿದ ವ್ಯಕ್ತಿಯೋರ್ವ ಸತ್ಯಾಸತ್ಯತೆಯನ್ನು ಅರಿಯದೇ ತಂಪಾದ ನೆರಳೆಂದು ತಿಳಿದು ಕೋಪಗೊಂಡ ಸರ್ಪದ ನೆರಳಿನಡಿಯಲ್ಲಿ ಬಂದು ಆನಂದದಿಂದ ವಿಶ್ರಮಿಸುತ್ತಿರುವ. ಹಾಗೆಯೇ ಈ ಸಂಸಾರವು ಕೋಪಗೊಂಡ ಸರ್ಪದಂತೆ ಅನಿಶ್ಚಿತ. ಯಾವಾಗ ಕಚ್ಚುವುದೋ ಗೊತ್ತಿಲ್ಲ. ಆದ್ದರಿಂದ ಇದರ ವಿಮೋಚನೆಗೆ ಆ ಲಕ್ಷ್ಮೀಪತಿ ಶ್ರೀಹರಿಯನ್ನು ಭಜಿಸಿ.
ಜಯತೀರ್ಥರ ಗ್ರಂಥಗಳಿಗೆ ಜ್ಞಾನಿಗಳ ವ್ಯಾಖ್ಯಾನ ಸೇವೆ
1. ಶ್ರೀವ್ಯಾಸರಾಜರು – ತಾತ್ಪರ್ಯ ಚಂದ್ರಿಕಾ.
2. ಶ್ರೀವಾದಿರಾಜರು – ಗುರ್ವರ್ಥ ದೀಪಿಕಾ.
3. ಶ್ರೀರಾಘವೇಂದ್ರ ಸ್ವಾಮಿಗಳು- ಪರಿಮಳ. ಭಾವದೀಪ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 11 =
Remember me
