ಎಚ್.ಕೆ. ಪಾಟೀಲಇಂದಿನ ಆಂಧ್ರಪ್ರದೇಶದ ಭಾಗವಾಗಿರುವ ರಾಯಲಸೀಮೆ 14-15ನೇ ಶತಮಾನದಲ್ಲಿ ರಡ್ಡಿ ರಾಜವಂಶಜರ ಆಡಳಿತಕ್ಕೊಳಪಟ್ಟಿತ್ತು. ರಾಜವಂಶ ಸಂಜಾತರಾದ ಮಹಾಯೋಗಿ ವೇಮನ ಕವಿಯಾಗಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾಜ ಸುಧಾರಕರಾಗಿ, ಜನರಾಡುವ ಭಾಷೆಯಲ್ಲಿ ಬೋಧನೆ ಮಾಡಿದ ಜನಪರ ನಿಲುವಿನ ರಾಜಯೋಗಿ. ಅಲ್ಲದೆ, ಸಿದ್ಧ ಸಾಧಕರು ಸತ್ಯದ ಸಾಕ್ಷಾತ್ಕಾರ ಹೊಂದಿ ಲೋಕಕ್ಕೆ ಬೆಳಕಾದವರು ಅವರು. ಅದಕ್ಕಾಗಿಯೇ ಲೋಕದ ಪುಣ್ಯಪುರುಷರಲ್ಲಿ ಗಣ್ಯರು. ವೇಮನ ಕಾಲದ ಬಗ್ಗೆ ಪಂಡಿತರಲ್ಲಿ ಒಮ್ಮತವಿಲ್ಲ. ಕಾಪು (ರಡ್ಡಿ) ಕುಲದಲ್ಲಿ ಹುಟ್ಟಿದ್ದನ್ನು ಅವರೇ ತಮ್ಮ ಕವನದಲ್ಲಿ ಹೇಳಿಕೊಂಡಿರುವುದರಿಂದ ಅವರ ಜೀವನದ ಬಗ್ಗೆ ಅಸ್ಪಷ್ಟತೆ ಇಲ್ಲವಾಗಿದೆ. ವೇಮನ ಅದ್ಭುತ ಜನಪರ ಕವಿ. ತಮಿಳರಿಗೆ ತಿರುವಳ್ಳುವರ, ಕನ್ನಡಗರಿಗೆ ಸರ್ವಜ್ಞ, ಮರಾಠಿಗರಿಗೆ ನಾಮದೇವ, ಹಿಂದಿ ಭಾಷಿಕರಿಗೆ ಕಬೀರ ಇದ್ದಂತೆ ತೆಲುಗು ಭಾಷಿಕರಿಗೆ ವೇಮನ. ವೇಮನ ತೆಲಗು ಭಾಷಿಕರ ಆರಾಧ್ಯದೈವರಾಗಿ, ದೈತ್ಯಪ್ರತಿಭೆಯ ಚಿಂತಕರಾಗಿ, ಸಮಾಜ ಸುಧಾರಕರಾಗಿ, ಕ್ರಾಂತಿಕಾರಿಯಾಗಿ ನೀಡಿದ ಕೊಡುಗೆ ಅಸಾಧಾರಣ.
ಕೊಂಡುವೀಡು ರಾಜವಂಶಸ್ಥರಾದ ಕುಮಾರಗಿರಿರಡ್ಡಿ ತನ್ನ ದೌರ್ಬಲ್ಯದಿಂದಾಗಿ ದೊರೆತನ ಕಳೆದುಕೊಂಡ ನಂತರ ಮೂಗಬೆಂತಪಲ್ಲೆ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ನೆಲೆಸಿದ್ದರು. ಕುಮಾರಗಿರಿರಡ್ಡಿ ಹಾಗೂ ಕುಂತರ ಮಲ್ಲಮ್ಮ ದಂಪತಿಯ ಮೂರನೇ ಸಂತಾನವೇ ವೇಮನ. ವೇಮನ ಬಾಲ್ಯಕಾಲವನ್ನು ಕೊಂಡುವೀಡುವಿನಲ್ಲಿಯೇ ಕಳೆದರು. ಇವರು ಸೋಮಶೇಖರ ಗುರುಗಳಲ್ಲಿ ವಿದ್ಯಾರ್ಜನೆ ಮಾಡಿದರು. ಯುವಕ ವೇಮನರ ಬಾಳಿನ ಆಗುಹೋಗುಗಳನ್ನು ಸಹೃದಯದಿಂದ ಅರಿಯುವ ಶಕ್ತಿ ಅತ್ತೆ ನರಸಾಂಬೆಗೆ ಮಾತ್ರವಿತ್ತು. ನರಸಾಂಬೆ ವೇಮನರನ್ನು ರಾಜಮಹೇಂದ್ರಿಗೆ ಕರೆಯಿಸಿಕೊಂಡು ಶಿಲ್ಪಗಾರದ ನೇತೃತ್ವ ನೀಡಿದಳು. ಶ್ರೀಶೈಲದಲ್ಲಿ ನೆಲೆಸಿದ ತಾಯಿ ಕುಂತರ ಮಲ್ಲಮ್ಮನ ಆಶೀರ್ವಾದ ದೊರೆಯಿತು. ರಾಜ್ಯದ ಶಿಲ್ಪ ಕಾರ್ಯಾಗಾರದ ವರಿಷ್ಠನಾದ ಬಳಿಕ ಅಲ್ಲಿಯೇ ಕಾರ್ವಿುಕರಾಗಿ, ಅಧ್ಯಾತ್ಮಿಯಾಗಿದ್ದ ಅಭಿರಾಮಜ್ಜನ ಸ್ನೇಹ ಇಬ್ಬರಲ್ಲಿ ಗಾಢವಾದ ವಿಶ್ವಾಸ ಬೆಳೆಸಿತು. ಶ್ರೀಗುರು ಲಿಂಬಿಕಾ ಶಿವಯೋಗಿ ಅವರ ವಿಶೇಷ ಅನುಗ್ರಹಕ್ಕೆ ವೇಮನರು ಪಾತ್ರರಾದರು. ಲಿಂಬಿಕಾ ಶಿವಯೋಗಿ ಗುರುಗಳು ವಾಸವಾಗಿದ್ದ ಗವಿಯೊಳಗೆ ವೇಮನರು ಕೆಲ ವರ್ಷ ನೆಲೆಸಿದರು.
ಯೋಗಿ ವೇಮನ ಕೊಂಡುವೀಡು ಗಡಿಯಾಚೆ ನಡೆದರು. ಹೋದ ಕಡೆಗಳಲ್ಲಿ ಪವಾಡಗಳನ್ನು ಮೆರೆದರು. ಅವರಿಂದ ಸುಂದರಕಾವ್ಯ ಸೃಷ್ಟಿಯಾಯಿತು. ಸ್ನೇಹಿತ ಅಭಿರಾಮಯ್ಯ ಜೊತೆಗಾರನಾಗಿ ವೇಮನ ಕಾವ್ಯ ಆನಂದಿಸಿದ ರಾಮರಡ್ಡಿ ಹಾಗೂ ನೀಲಕಂಠರು ಸಾಹಿತ್ಯ ಸಂಗ್ರಹ ಮಾಡಿದರು.
ಬೇಕು ಎನಲು ಬರದು, ಬೇಡವೆನಲು ಬಿಡದು ಪೂರ್ವ ಕರ್ಮಕಂಟಿ ಫಲವು ಮಿಂಚು ಹೃದಯದಲ್ಲಿ ದುಃಖ ಪಡದಿರುವುದೇ ಧರ್ಮ ಎಂದು ಸಾರಿದ ವೇಮನ ದೇಹದೊಳಗಿರುವ ದೇವರನ್ನು ಕಂಡುಕೊಂಡವರೇ ಬುದ್ಧಿವಂತರೆಂದರು. ಸಂಚಾರದಲ್ಲಿ ವೇಮನ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದು ಹೀಗೆ- ‘ಊರು ಕೊಂಡುವೀಡು. ವಾಸ ಪಶ್ಚಿಮಬೀದಿ ಮಾರ್ಗ, ಚಿಂತಪಲ್ಲೆ ಮೊದಲ ಮನೆ’ ಎಂದರು. ತಮ್ಮ ದಿಗಂಬರತ್ವವನ್ನು ಸಮರ್ಥಿಸಿಕೊಳ್ಳುತ್ತ ತಾಯಿಯುದರದಿಂದ ತಾನು ಜನಿಸಿದಾಗ ಅಡಿಗಿಲ್ಲ ಬಟ್ಟೆ ಅಂತ್ಯಕ್ಕಿಲ್ಲ. ನಡುವೆ ಬಟ್ಟೆಯುಡಲು ನಗೆಪಾಟಲವೇ? ಎಂದು ಪ್ರಶ್ನಿಸಿ ಉತ್ತರಿಸಿದ್ದಾರೆ.
ವೇಮನರು ಕೊಂಡು ವೀಡುವಿನಿಂದ ಬಹುದೂರ ಹೋಗಬಯಸಿದರು. ಅವರು ತಂಜಾವೂರವರೆಗೆ ಸಂಚರಿಸಿದರು. ಈ ಸಂಚಾರ ಕಾಲದಲ್ಲಿ ಹಲವಾರು ಗ್ರಾಮಗಳಲ್ಲಿ ನೆಲೆಸಿದರು. ಸಾಮಾನ್ಯವಾಗಿ ಧರ್ಮಶಾಲೆಗಳಲ್ಲಿ ಇರುತ್ತಿದ್ದರು. ಅಲ್ಲಿಗೆ ಬರುವ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.
ಯೋಗಿ ವೇಮನರು ಗಹನವಾದ ತತ್ತ ್ವ್ಞಾನವನ್ನು ಸರಳವಾದ ರೀತಿಯಲ್ಲಿ ಜನತೆಗೆ ತಿಳಿಸಿದರು. ವೇಮನ ರಚಿಸಿದ್ದು ಬರೀ ಕಾವ್ಯವಲ್ಲ. ತೆಲುಗು ಭಾಷೆಯಲ್ಲಿ ಕಾವ್ಯಕ್ಕೆ ಬಳಸಿದ್ದು ಆಟವೇಂದಿ ಕಂದ, ತೇಟ, ಸೀಸ, ಛಂದಸ್ಸುಗಳನ್ನು. ಆಟವೇಂದಿ ಅಂದರೆ ನೃತ್ಯಗಾರ್ತಿ. ನೃತ್ಯಗಾರ್ತಿಯ ಸೌಂದರ್ಯ, ನೃತ್ಯದಲ್ಲಿನ ಲಯ, ತಾಳ, ನಿನಾದಿಸುತ್ತದೆ. ಅದೇ ರೀತಿ ವೇಮನರ ಸಾಹಿತ್ಯ. ಇವರ ಸಾಹಿತ್ಯದಲ್ಲಿ ಸಂಗೀತವಿದೆ. ಎಲ್ಲವೂ ಲಯಬದ್ಧ, ತಾಳಬದ್ಧವಾಗಿದೆ.
ಕೆಲವು ಆಲೋಚಕರು ವೇಮನರನ್ನು ನಾಸ್ತಿಕರೆಂದರೆ, ಕೆಲವರು ಆಸ್ತಿಕರೆಂದು ಬಣ್ಣಿಸುತ್ತಾರೆ. ಆದರೆ ವೇಮನ ಆಂತರ್ಯದೊಳಗಿರುವ ಪರಮಾತ್ಮನನ್ನು ನೋಡಲು ತಮ್ಮ ಕಾವ್ಯದ ಮೂಲಕ ಸದಾ ಪ್ರೇರಣೆ ನೀಡುತ್ತ ಜನಜಾಗೃತಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ವೇಮನರ ಕಾವ್ಯವು ನಿರಂತರ ಚಿಮ್ಮುವ ಕಾರಂಜಿಯೇ ಹೌದು. ಅಲ್ಲಿ ದೊರೆಯುವುದು ಆನಂದ ಹಾಗೂ ಜ್ಞಾನ.
ಪಂಚಭೂತಗಳು, ಪರಮ ಇಂದ್ರಿಯಗಳು ಸಂಚರಿಸುತಿರಲು ಜಗತ್ ಉಂಟು, ಸಂಚರಿಸದಿರಲು ಜಗವಂತಾಗುವುದು ವಿಶ್ವದಾಭಿರಾಮ ಕೇಳು ವೇಮ ‘ಪಂಚಮಹಾಭೂತಗಳಿಂದ ನಮ್ಮ ಶರೀರವಾಗಿದೆ. ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶ ಇವೇ ಪಂಚಮಹಾಭೂತಗಳು. ಪಂಚಜ್ಞಾನೇಂದ್ರಿಗಳೆಂದರೆ ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ಸ್ಪರ್ಶ. ಗಂಧರಸ, ರೂಪ, ಸ್ಪರ್ಶ ಹಾಗೂ ಶಬ್ದಗಳಿಂದನೇ ನಮ್ಮ ವ್ಯವಹಾರ ಜೊತೆಗೆ ಪಂಚ ಕಮೇಂದ್ರಿಯಗಳು ಬುದ್ಧಿ, ಮನಸ್ಸು ಇವೆಲ್ಲ ಜೊತೆಗೂಡಿ ಕೆಲಸ ನಿರ್ವಹಿಸುತ್ತವೆ ಈ ಸಂಕಲ್ಪ ವಿಕಲ್ಪಗಳೇ ಹೋಗಿಬರುವ ಜಗತ್ತು. ಈ ಜಗದ ಅನುಭವವೇ ಲೋಕಾನುಭವ. ಮಾನವ ಮನವೇ ಒಂದು ಅದ್ಭುತ. ಅದರಲ್ಲಿ ಸಂಕಲ್ಪ ವಿಕಲ್ಪಗಳು ಏಳದಂತೆ ನೋಡಿಕೊಂಡರೆ ಮನಸ್ಸು ಶಾಂತವಾಗಿರುತ್ತದೆ. ಶಾಂತಮನಸ್ಸಿನಲ್ಲಿ ಸತ್ಯ ಪ್ರತಿಬಿಂಬಸಬಹುದು’ ಎಂಬುದು ಯೋಗಿಗಳ ಸಿದ್ಧ ಅನುಭವ.
ಜನವರಿ 19 ರಂದು ವೇಮನರ ಜಯಂತಿ. ವೇಮನ ಸಾಹಿತ್ಯವನ್ನು ಕನ್ನಡಿಗರಿಗೆ ಮನೆ-ಮನೆಗೆ ಮುಟ್ಟಿಸುವ ಶ್ರದ್ಧಾಪೂರ್ವಕ ಪ್ರಯತ್ನ ಮಾಡಿದವರು ವೇಮನಪ್ರಿಯ ಸೋಮ ಹುಲಕೋಟಿಯ ದಿ. ಎಸ್.ಆರ್. ಪಾಟೀಲರು. ಅವರು ವೇಮನರ ಸುಮಾರು 4000 ವಚನಗಳನ್ನು ಹುಡುಕಿ ಕನ್ನಡಕ್ಕೆ ಭಾಷಾಂತರಿಸಿ, ಅವುಗಳಿಗೆ ಟಿಪ್ಪಣಿ, ವಿಮರ್ಶೆಗಳನ್ನೆಲ್ಲ ನೀಡಿ, ವೇಮನ ಸಾಹಿತ್ಯ ಕನ್ನಡಿಗರಿಗೆ ದೊರಕುವಲ್ಲಿ ಅಪಾರವಾದ ಕೊಡುಗೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ವೇಮನ ಪೀಠ ವೇಮನ ಸಾಹಿತ್ಯ ಪ್ರಕಟಣೆಯಲ್ಲಿ, ಸಂಶೋಧನೆಯಲ್ಲಿ ವಿಶೇಷವಾದ ಕಾರ್ಯ ಮಾಡುತ್ತಿದೆ. ಜನವರಿ 19ರಂದು ಕರ್ನಾಟಕ ಸರ್ಕಾರ ಅಧಿಕೃತವಾಗಿ ವೇಮನ ಜಯಂತಿ ಆಚರಿಸುವ ಮೂಲಕ, ತತ್ತ ್ವ್ಞಾನಿಗೆ ಗೌರವ ಸಲ್ಲಿಸುತ್ತಿದೆ. ಅವರ ಸಂದೇಶಗಳನ್ನು ಮೆಲುಕು ಹಾಕುತ್ತಿದೆ.
(ಲೇಖಕರು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + sixteen =
Remember me
