| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಗೆದ್ದು ಅಧಿಕಾರಕ್ಕೆ ಬರಲು ರಣನೀತಿ ಏನಿರಬೇಕು ಎಂಬ ಬಗ್ಗೆ ಬಿಜೆಪಿ ಮುಖಂಡರು ಸೋಮವಾರ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿ ನಿರ್ಧಾರ ಮಾಡಲಿದ್ದಾರೆ.
ರಾಜ್ಯದಲ್ಲಿ ಎರಡು ಬಾರಿಯೂ ಆಪರೇಷನ್ ಕಮಲದ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, 2023ರಲ್ಲಿ ಪಕ್ಷ ಸ್ವತಂತ್ರವಾಗಿ ಕನಿಷ್ಠ 130 ಸ್ಥಾನಗಳನ್ನು ಗೆಲ್ಲಲೇಬೇಕೆಂಬುದು ವರಿಷ್ಠರ ಆಶಯ. ಅದಕ್ಕೆ ಬೇಕಾದ ತಂತ್ರಗಳನ್ನು ಕಾಲಕಾಲಕ್ಕೆ ರೂಪಿಸುತ್ತಿದ್ದಾರೆ. ಆದರೆ, ಇದುವರೆಗಿನ ತಂತ್ರಗಳು ಅಂದುಕೊಂಡಷ್ಟು ಬಿಜೆಪಿಪರ ವಾತಾವರಣ ನಿರ್ವಿುಸಿಲ್ಲದ ಕಾರಣಕ್ಕೆ ರಣತಂತ್ರವನ್ನೇ ರೂಪಿಸಲು ಸಜ್ಜಾಗಿದ್ದಾರೆ.
ಯಾವುದೇ ರಾಜ್ಯದ ಚುನಾವಣೆ ಪೂರ್ವದಲ್ಲಿ ದೆಹಲಿಯಲ್ಲಿ ಇಂಥ ಸಭೆ ನಡೆಸುವುದು ಬಿಜೆಪಿಯಲ್ಲಿ ನಡೆದು ಬಂದಿರುವ ಸಂಪ್ರದಾಯ. ಅದರಂತೆ, ಮುಂದಿನ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಕರ್ನಾಟಕ ಬಿಜೆಪಿಯ ಪಾಲಿಗೆ ಅತ್ಯಂತ ಪ್ರಮುಖವಾಗಿದೆ. ಕರ್ನಾಟಕದಲ್ಲಿ ಗೆಲ್ಲಲಾಗದಿದ್ದರೆ ದಕ್ಷಿಣದ ಉಳಿದ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವುದು ಸುಲಭವಲ್ಲ. ಆದ್ದರಿಂದಲೇ ಬಿಜೆಪಿ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ.
ರಣತಂತ್ರದ ಸ್ವರೂಪ:ರಾಜ್ಯದಲ್ಲಿ ಈಗ ಬಿಜೆಪಿಯಿಂದ ಮನೆ ಮನೆ ಪ್ರಚಾರ, ಶಕ್ತಿಕೇಂದ್ರಗಳ ಸಮಾವೇಶ, ವಿಸ್ತಾರಕರ ನೇಮಕ ಹೀಗೆ ವಿವಿಧ ಹಂತದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದರ ಜತೆಗೆ ಇನ್ನಷ್ಟು ಚಟುವಟಿಕೆ ನಡೆಸಲು, ಪ್ರಮುಖವಾಗಿ ಜನರಿಗೆ ಪಕ್ಷದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಕಡೆ ಚರ್ಚೆಯಾಗಲಿದೆ.
ಯಾರು ಭಾಗಿ?:ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಪಕ್ಷದ ರಾಜ್ಯಾಧ್ಯಕ್ಷ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಲು ಸಿಎಂ ಬೊಮ್ಮಾಯಿ ಸೋಮವಾರ ಬೆಳಗಾವಿಯಿಂದಲೇ ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಲಿದ್ದಾರೆ.
ಏನೇನು ಚರ್ಚೆ?:ಇದುವರೆಗೆ ರಾಜ್ಯದಲ್ಲಿ ಏನೇನು ಕೆಲಸ ನಡೆದಿದೆ? ಪಕ್ಷ ನಡೆಸಿರುವ ಸಮೀಕ್ಷೆಗಳಲ್ಲಿ ಬಿಜೆಪಿಯ ಸ್ಥಾನ ಎಷ್ಟರಲ್ಲಿದೆ? ಅದನ್ನು ಇನ್ನಷ್ಟು ವೃದ್ಧಿಸುವುದು ಹೇಗೆ? ಪಕ್ಷದ ರಾಜ್ಯ ಘಟಕ ಏನೇನು ಕೆಲಸ ಮಾಡುತ್ತಿದೆ? ಜನರ ದೃಷ್ಟಿಯಲ್ಲಿ ಸರ್ಕಾರದ ಇಮೇಜ್ ಹೇಗಿದೆ? ಬೇರೆ ಪಕ್ಷದಿಂದ ಬರುವವರು ಯಾರಿದ್ದಾರೆ? ಎಂಬುದು ದೆಹಲಿಯಲ್ಲಿ ನಡೆಯಲಿರುವ ವಿಶೇಷ ಸಭೆಯಲ್ಲಿ ಚರ್ಚೆಯಾಗಲಿದೆ. ಇದಲ್ಲದೆ, ಮತದಾರರ ಮನಸ್ಸಿನಲ್ಲಿ ಪಕ್ಷ ಹಾಗೂ ಸರ್ಕಾರದ ಬಗ್ಗೆ ಇರುವ ನಕಾರಾತ್ಮಕ ಧೋರಣೆಯನ್ನು ಹೋಗಲಾಡಿಸುವುದು ಹೇಗೆ? ಕಾಂಗ್ರೆಸ್ ಹಾಗೂ ಜೆಡಿಎಸ್​ನ ಚುನಾವಣಾ ಕಾರ್ಯತಂತ್ರಗಳೇನು? ಅದಕ್ಕೆ ಪಕ್ಷ ಹೇಗೆ ಉತ್ತರ ನೀಡುತ್ತಿದೆ ಇತ್ಯಾದಿ ಸಂಗತಿಗಳೂ ಚರ್ಚೆಗೆ ಬರಲಿವೆ.
ಹೆಚ್ಚುವರಿ ಉಸ್ತುವಾರಿ ನೇಮಕ:ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ದುರ್ಬಲರೆಂಬುದು ಪಕ್ಷದ ವರಿಷ್ಠರಿಗೆ ಮನವರಿಕೆಯಾಗಿದೆ. ಚುನಾವಣೆಗೆ ಅಗತ್ಯ ರಣತಂತ್ರಗಳನ್ನು ಇದುವರೆಗೂ ಪರಿಣಾಮಕಾರಿಯಾಗಿ ರೂಪಿಸಿಲ್ಲ ಎಂಬುದು ಷಾ ಸೇರಿದಂತೆ ಪಕ್ಷದ ವರಿಷ್ಠರಿಗಿರುವ ಸಿಟ್ಟು. ಹೀಗಾಗಿ ಚುನಾವಣೆ ಕಾರ್ಯಕ್ಕಾಗಿಯೇ ಹೆಚ್ಚುವರಿಯಾಗಿ ಒಬ್ಬರನ್ನು ಉಸ್ತುವಾರಿಯಾಗಿ ನೇಮಿಸುವ ವಿಚಾರವೂ ಚರ್ಚೆಗೆ ಬರಲಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ, ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್ ಅಥವಾ ಧಮೇಂದ್ರ ಪ್ರಧಾನ್ ಪೈಕಿ ಒಬ್ಬರು ನಿಯೋಜಿತರಾಗುವ ಸಾಧ್ಯತೆಗಳಿವೆ. ಹೆಚ್ಚುವರಿಯಾಗಿ ನೇಮಕವಾಗುವವರು ಚುನಾವಣೆ ಪ್ರಕ್ರಿಯೆ ಮುಗಿಯುವ ತನಕ ರಾಜ್ಯದಲ್ಲಿಯೇ ಇದ್ದು ಕಾಲಕಾಲಕ್ಕೆ ಎದುರಾಳಿಗಳ ನಡೆ ಗಮನಿಸಿ ತಂತ್ರಗಳನ್ನು ರೂಪಿಸಲಿದ್ದಾರೆ.
ಮೀಸಲಾತಿ ಬಗ್ಗೆಯೂ ಚರ್ಚೆ:ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಲಾಭ ಪಡೆಯಲು ಉದ್ದೇಶಿಸಿದೆ. ಆದರೆ, ಆ ವಿಚಾರ ಈಗ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಎಡವಟ್ಟಾಗಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಮೀಸಲಾತಿ ವಿಚಾರ ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.
ಸಂಪುಟ ವಿಸ್ತರಣೆ ಇಲ್ಲ?:ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ವರಿಷ್ಠರ ಜತೆ ಚರ್ಚೆ ಮಾಡುವ ಸಾಧ್ಯತೆ ಅತ್ಯಂತ ವಿರಳವೆಂದೇ ಹಿರಿಯ ಸಚಿವರೊಬ್ಬರು ಹಾಗೂ ಪಕ್ಷದ ಹಿರಿಯ ಮುಖಂಡರು ಸ್ಪಷ್ಟಪಡಿಸಿದರು. ‘ಸಂಪುಟ ವಿಸ್ತರಣೆಯ ಚರ್ಚೆಗೆ ನಾವೇ ಕರೆ ಕಳುಹಿಸುತ್ತೇವೆ ಎಂದು ಅಮಿತ್ ಷಾ ಹಾಗೂ ನಡ್ಡಾ ಅವರು ಹಿಂದೆಯೇ ಬೊಮ್ಮಾಯಿಯವರಿಗೆ ಸೂಚ್ಯವಾಗಿ ಹೇಳಿದ್ದಾರೆ. ಆದ್ದರಿಂದ ಬೊಮ್ಮಾಯಿ ಇತ್ತೀಚಿನ ದೆಹಲಿ ಭೇಟಿಗಳ ಸಂದರ್ಭದಲ್ಲಿ ಸಂಪುಟದ ಬಗ್ಗೆ ವರಿಷ್ಠರೊಂದಿಗೆ ಚರ್ಚೆಯನ್ನೇ ನಡೆಸಿಲ್ಲ’ ಎಂದು ಸಚಿವರು ಖಚಿತಪಡಿಸಿದರು.

ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
